ಪ್ರವಾಸ ಕಾಲದಲ್ಲಿ ಸಿಗುವ ಪಿಚ್ಚೆನಿಸಿಬಿಡುವ ಬಿಂಬಗಳು

author-geethaಇತಿಹಾಸ ನನ್ನ ಆಸಕ್ತಿಯ ವಿಷಯಗಳಲ್ಲಿ ಒಂದು. ದೆಹಲಿಯಲ್ಲಿ ಓಡಾಡಿದರೆ, ಇಂದು ಅದು ಹೇಗೇ ಇರಲಿ.. ಹಳೆಯ ದೆಹಲಿ.. ಒಮ್ಮೆ ಇಂದ್ರಪ್ರಸ್ಥವೇ ಆಗಿತ್ತು ಎನ್ನಲಾದ ದೆಹಲಿ ನಮ್ಮನ್ನು ಹಾಗೇ ಆವರಿಕೊಂಡು ಬಿಡುತ್ತದೆ. ರಸ್ತೆ ಭರ್ತಿ ವಾಹನಗಳು, ಅಡಿ ಅಡಿಗೆ ಟ್ರಾಫಿಕ್ ಸಿಗ್ನಲ್ಲು, ಕಿವಿಗಡಚಿಕ್ಕುವಂತೆ ವಾಹನಗಳ ಹಾರ್ನು… ಇದೆಲ್ಲಾ ವಾಸ್ತವವಾಗಿ ಈಗ ಇದ್ದರೂ ನನಗೆ ಅದೇಕೋ ಹಳೆಯ ವಾಸನೆ.

ಮಲಗಿದೆಡೆಯೇ ಒಂದು ಗುಂಡಿ ಒತ್ತಿದರೆ ಕಿಟಕಿಯ ಪರದೆ ತೆರೆದುಕೊಳ್ಳುತ್ತದೆ.. ಮತ್ತೊಂದು ಗುಂಡಿಗೆ ಕೋಣೆಯ ಎಲ್ಲಾ ದೀಪಗಳು ಆರುತ್ತವೆ. ಆರು ಸೆಂಕೆಂಡುಗಳು ಇಪ್ಪತ್ತಾರನೇ ಮಹಡಿಗೆ ಕರೆದೊಯ್ಯುವ ಲಿಫ್ಟು!.. ಇದ್ಯಾವುದೂ ನನ್ನ ಕಣ್ಣರಳಿಸಲಿಲ್ಲ. ಆದರೆ ಏನೆಂದು ಅರ್ಥವಾಗದ ಜಂತರ್ ಮಂತರ್ ನನ್ನ ಕಣ್ಣರಳಿಸಿತು.. ನೂರು ವರ್ಷಕ್ಕೂ ಹಿಂದೆ astronomy ಯಲ್ಲಿ ಆಸಕ್ತಿ ಇದ್ದ ರಾಜ ಕಟ್ಟಿಸಿದ್ದು ಜಂತರ್ ಮಂತರ್… ನಾಲ್ಕು ದೊಡ್ಡ ದೊಡ್ಡ ಅರ್ಥವಾಗದ (ನನಗೆ) ಯಂತ್ರಗಳು..

ಸಂರಕ್ಷಣೆ ಮಾಡುವುದರ ಅರ್ಥವೇ ಗೊತ್ತಿಲ್ಲ ಹೊಣೆ ಹೊತ್ತವರಿಗೆ. pathway ಮಾಡಿ pathway ಗೆ ಅತ್ತಿತ್ತ ಕೆಂಪು, ಹಳದಿ, ಬಿಳಿ ಹೂಗಳು ಬಿಡುವ ಗಿಡಗಳನ್ನು ನೆಟ್ಟು, ಉದ್ದುದ್ದ lawn ಗಳನ್ನು ಮಾಡಿ ಅದಕ್ಕೆ ನೀರು ಹಾಯಿಸುತ್ತಿದ್ದರೆ ಸಂರಕ್ಷಣೆ ಮಾಡಿದಂತೆ, ಅಷ್ಟೇ! ಜನ ಆದಷ್ಟು ಅವುಗಳ ಸಮೀಪ ಹೋಗದಂತೆ ಅಡ್ಡಗೋಡೆಗಳನ್ನು ಇಟ್ಟುಬಿಟ್ಟರೆ ಸಂರಕ್ಷಣೆ ಮುಗಿಯಿತು. ನಮ್ಮ ಜನರೂ ಅಷ್ಟೇ. ಟೂರಿಸ್ಟ್ ಗಳಾದರೆ ನಾಲ್ಕು ಫೋಟೊ ಕ್ಲಿಕ್ಕಿಸಿ ಹೊರಡುತ್ತಾರೆ. ಸ್ಥಳೀಯರಾದರೆ ಹುಲ್ಲುಹಾಸಿನ ಮೇಲೆ ಮಲಗಿ ನಿದ್ದೆ ಮಾಡುತ್ತಾರೆ. ಭಾರತೀಯರಾದರೆ ಇಪ್ಪತ್ತು ರುಪಾಯಿ ಟಿಕೇಟು.. ಅಲ್ಲವಾದರೆ ಇನ್ನುರೈವತ್ತು ರುಪಾಯಿ ಟಿಕೇಟು.

ನಾನು ಚರ್ಚಿಸಲು ಇಷ್ಟಪಡುವ ವಿಷಯಗಳಲ್ಲಿ ಇದೂ ಒಂದು. ವಿದೇಶಿಯರಿಗೆ ಹೆಚ್ಚಿನ ದರ ಏಕೆ? ನಾವು ಬಡವರು ಅವರು ಶ್ರೀಮಂತರು ಎಂದೇ? ನಮ್ಮ ದೇಶಕ್ಕೆ ಬರುವ ವಿದೇಶಿಗರಿಗೆ (ಅತಿಥಿದೇವೋಭವ ಎಂಬುದು ನಮ್ಮ ಸಂಸ್ಕೃತಿ) ನಾವು ಕೊಡುವ ಸ್ವಾಗತ ಇದೆಯೇ?

ನಮಗೆ ಯಾಕೆ ಹೆಚ್ಚಿನ ದರ ಎಂದು ವಿದೇಶಿಗರ ಗುಂಪೊಂದು ಹಂಪಿಯಲ್ಲಿ ಟಿಕೆಟ್ ಕೌಂಟರಿನಲ್ಲಿ ವ್ಯರ್ಥವಾಗಿ ಜಗಳವಾಡುತ್ತಿದ್ದ ನೆನಪು ಇದೆ. ಟಿಕೆಟ್ ಕೊಡುವವನಿಗೆ ಏನು ಗೊತ್ತು? ‘ಗೊತ್ತಿಲ್ಲ’ ಎನ್ನುವಷ್ಟು ಇಂಗ್ಲೀಷು ಕೂಡ ಬರದು ಅವನಿಗೆ ಪಾಪಾ. ಬಾಯಿಗೆ ಬಂದದ್ದು ಬೈಯುತ್ತಾ ಹೊರಟ ಆ ವಿದೇಶಿಯರ ಕಣ್ತಪ್ಪಿಸಿ ನಾನು ಹಾದಿ ಬದಲಿಸಿದ್ದೆ. ನಾವು ಇನ್ನು developing country ! ಆದ್ದರಿಂದ ನಮಗೆ ಹೀಗೆ ದರ ನಿಗದಿಪಡಿಸುವ ಹಕ್ಕಿದೆಯೇನೋ.. ಆದರೆ, ನಮ್ಮಂತೆ ಕಾಣುವ ವಿದೇಶಿಯರನ್ನು (ಪಾಕಿಸ್ತಾನಿಗಳು, ಶ್ರೀಲಂಕನ್ನರು, ಸ್ವಲ್ಪಮಟ್ಟಿಗೆ ಇಟಾಲಿಯನ್ನರು, ಭಾರತೀಯರೇ ಆದರೂ ವಿದೇಶಿಗಳಾಗಿರುವವರು (NRI)) ಗುರುತಿಸುವುದು ಹೇಗೆ? ಅಲ್ಲಿಯ ಟಿಕೆಟ್ ಹರಿಯುವವನಿಗೆ ಕಾಣುವುದು ಬಿಳಿ ತೊಗಲಷ್ಟೇ.

ಬಿಳೀ ತೊಗಲಿನ ಬಗ್ಗೆ ನಮಗಿರುವ ಆದರದ ಬಗ್ಗೆ, ಗೌರವದ ಬಗ್ಗೆ ಹೇಳದೆ ಇರಲಾಗುತ್ತದೆಯೇ? We are just awestruck! ಬಿಳಿ ತೊಗಲಿನ ವಿದೇಶಿಗರನ್ನು ಕಂಡರೆ ಅತೀ ವಿನಯ ತೋರಿಸುವ ನಮ್ಮ ಜನರನ್ನು ಕಂಡು ಸಂಕಟವಾಗುತ್ತದೆ. ಅವರುಗಳು ನಮ್ಮ ದೇಶದ ಬಗ್ಗೆ, ನಮ್ಮ ಜನರ ಬಗ್ಗೆ ಏನು ಕೇಳಿಕೊಂಡು ಬಂದಿರುತ್ತಾರೊ ಗೊತ್ತಿಲ್ಲ.. ಹಿಂದೆ ಹಿಂದೆ ಬರುವ, ಹಲ್ಲು ಕಿರಿಯುವ, ಬಗ್ಗಿ ನಿಲ್ಲುವ ಭಾರತೀಯರೆಲ್ಲಾ (ನಾವು ಹಾಗೆ ಮಾಡುವುದಿಲ್ಲ.. ಆದರೆ ಈ ಟ್ಯಾಕ್ಸಿ ಡ್ರೈವರ್ ಗಳು, ಟೂರಿಸ್ಟ್ ಗೈಡ್ ಗಳು, ಹೊಟೇಲ್ ವೈಟರುಗಳು.. ಹಾಗೆ ವರ್ತಿಸುವುದನ್ನು ನಾನು ಸ್ವತಃ ನೋಡಿದ್ದೇನೆ. ಹಿಂದೆ ಆಡಿಕೊಳ್ಳುತ್ತಾರೆ. ಅದು ಬೇರೆ.. ಜೊತೆಗೆ ಅಸಹನೀಯ..) ಅವರನ್ನು ವಂಚಿಸಲೆಂದೇ ಕಾಯುತ್ತಿದ್ದಾರೆ ಎಂದು ಭಾವಿಸುತ್ತಾರೆ. ಅವರ ಬ್ಯಾಗು, ಕ್ಯಾಮೆರಾಗಳನ್ನು ಅವಚಿ ಹಿಡಿದುಕೊಳ್ಳುತ್ತಾರೆ. ಭಾರತದಲ್ಲಿ ಬಡತನ ಜಾಸ್ತಿ, ಕಳ್ಳರು ಜಾಸ್ತಿ.. ಎಂದು ಕೇಳಿ ಬಂದಿರುತ್ತಾರೇನೋ ಎಂಬ ಅನುಮಾನ ನನಗೆ.

ಈಗ ಮುಂಬೈ, ದೆಹಲಿಯ ಪ್ರವಾಸದಲ್ಲಿರುವ ಪ್ರಿನ್ಸ್ ವಿಲಿಯಮ್ಸ್ ಹಾಗೂ ಅವನ ಪತ್ನಿ ದೆಹಲಿಯಲ್ಲಿ ಗಾಂಧಿ ಮೆಮೊರಿಯಲ್ಲಿಗೆ ಹೋದಷ್ಟೇ ಆಸಕ್ತಿಯಿಂದ ಮುಂಬೈನ ಬಾಲಿವುಡ್ ಸ್ಟಾರ್ ಗಳನ್ನು ಭೇಟಿಯಾಗಲು ಹೋದರು. ಅಷ್ಟೇ ಅಥವಾ ಇನ್ನು ಹೆಚ್ಚಿನ ಆಸಕ್ತಿಯಿಂದ ಮುಂಬೈನ ಸ್ಲಂ ಒಂದಕ್ಕೆ ಭೇಟಿ ನೀಡಿದರು.

ಅವರು ಈ ಸ್ಲಂಗಳಿಗೆ ಏಕೆ ಭೇಟಿ ನಿಡುತ್ತಾರೆ? ಯಾವುದೇ NGO ದುಡ್ಡು ಸ್ಲಂ ಡೆವಲಪ್ ಮೆಂಟ್ ಗೆ ಹೋಗುತ್ತದೆ, ಅದಕ್ಕೆ ಇವರು ದುಡ್ಡು ಕೊಟ್ಟಿರುತ್ತಾರೆ.. ಅಥವಾ ಗೌರವಾನ್ವಿತ ಸದಸ್ಯರಾಗಿರುತ್ತಾರೆ.. ಇಲ್ಲಿ ಬಂದು ಸ್ಲಂಗಳಲ್ಲಿ ಓಡಾಡಿ, ಅಲ್ಲಿಯ ಜನ ಇವರನ್ನು ದೇವರಂತೆ ನೋಡುವುದು ಪತ್ರಿಕೆಗಳಲ್ಲಿ ಪ್ರಕಟವಾಗುತ್ತದೆ. ಇನ್ನೂ ಟಿ.ವಿ ಮಾಧ್ಯಮವಂತೂ ಬಿಡುವ ಹಾಗೇ ಇಲ್ಲ.. ಕೇಟ್ ವಿಲಿಯಮ್ಸ್ ಕೈಯಲ್ಲಿ ಭಾರತೀಯ ಮಗು.. ಅದು ಭಾರತದ ಸ್ಲಂ ಒಂದರ ಮಗು..! ಚೆಂದದ ಚಿತ್ರ. ನಮ್ಮ ಬಡತನವನ್ನು ಮಾರುತ್ತಿದ್ದೇವೆಯೇ?

ದೆಹಲಿಯಲ್ಲಿ ರಾಷ್ಟ್ರಪತಿ ಭವನದ ಎದುರು.. ಜನ್ ಪಥ್ ರಸ್ತೆಯಲ್ಲಿ ಲೋಧಿ ಗಾರ್ಡನ್ ಬಳಿ ಓಡಾಡಿದರೆ, ಅಲ್ಲಿರುವ ಮನೆ(ಅರಮನೆ)ಗಳನ್ನು ನೋಡಿ ಗಾಬರಿಯಾಗುತ್ತದೆ. ಅಲ್ಲಿ ವಾಸಿಸುವವರೆಲ್ಲಾ ಮಂತ್ರಿಗಳು, ಎಂಬಸಿಗಳಲ್ಲಿ ಕೆಲಸ ಮಾಡುವವರು, ಎಂಪಿಗಳು..

ಇತಿಹಾಸ ಅಭ್ಯಸಿಸಿದರೆ ಗೊತ್ತಾಗುತ್ತದೆ ಹಿಂದುಸ್ಥಾನಕ್ಕೆ ದಾಳಿಯಿಟ್ಟವರು ಮೂವರು.. ಇಲ್ಲಿ ಇದ್ದದ್ದು ಹಲವು ರಾಜ್ಯಗಳು.. ರಾಜರುಗಳು. ಒಗ್ಗಟ್ಟು ಎಂಬುದೇ ಇಲ್ಲದೆ ತಮ್ಮತಮ್ಮಲ್ಲಿಯೇ ಕಚ್ಚಾಡುತ್ತಿದ್ದವರು. ಜರ್ಮನ್ನರು ಹೆಚ್ಚು ಸದ್ದಿಲ್ಲದೆ ನಮ್ಮ ವಿಶ್ವವಿದ್ಯಾನಿಲಯಗಳಲ್ಲಿ ಇದ್ದ ಸಂಪತ್ತನ್ನು ಕೊಂಡೊಯ್ದರು. ತುರ್ಕಿಯಿಂದ  ಬಂದವರು ಇಲ್ಲಿಯ ಸಂಪತ್ತನ್ನು ಇಲ್ಲಿಯೇ ಅನುಭವಿಸಲು ನಿಂತರು… ನಾಶವನ್ನೂ ಮಾಡಿದರು. ವ್ಯಾಪಾರಕ್ಕೆ ಬಂದ ಇಂಗ್ಲೀಷರು ನಮ್ಮ ಸಂಪತ್ತನ್ನು ದೋಚಿ.. ಇಲ್ಲಿಯೇ ಆಳಲೂ ನಿಂತರು. ನಮ್ಮ ರಾಜರ ಅರಮನೆಗಳಿಂದ ಪ್ರೇರಿತರಾಗಿ… ಅವರುಗಳೂ ದೊಡ್ಡ ದೊಡ್ಡ ಅರಮನೆಗಳಂಥ ಮನೆಗಳನ್ನು ಕಟ್ಟಿಕೊಂಡರು. ರಾಜರಂತೆಯೇ ದರ್ಬಾರು ಮಾಡಿದರು, ವಾಸಿಸಿದರು. ರಾಜರನ್ನು ಒಪ್ಪಿಕೊಂಡಂತೆ ಅವರನ್ನೂ ಒಪ್ಪಿಕೊಂಡರು ನಮ್ಮ ಜನ.

ಸ್ವಾತಂತ್ರ್ಯ ಬಂತು, ನಾವೆಲ್ಲ ಒಂದೇ ಎಂದು ಪ್ರಜಾಪ್ರಭುತ್ವವನ್ನು ನಮ್ಮದಾಗಿಸಿಕೊಂಡೆವು. ಆದರೆ ಪ್ರಜಾಪ್ರಭುತ್ವದಲ್ಲಿ ಚುನಾಯಿತರಾದ ಪ್ರತಿನಿಧಿಗಳೆಲ್ಲಾ ರಾಜರಂತೆಯೇ ಇದ್ದಾರೆ. ಬ್ರಿಟಿಷರು ಹೋದರೂ ಅವರ ಕಟ್ಟಿಸಿಕೊಂಡಿದ್ದ ಅರಮನೆಗಳಂತಹ ಬಂಗಲೆಗಳಲ್ಲಿ ವಾಸ, ಪೊಲೀಸ್ ಕಾವಲು.. ಮನೆ ಭರ್ತಿ ಆಳು ಕಾಳುಗಳು.. ಮಂತ್ರಿಗಳಾದರಂತೂ ಕೇಳುವಂತೆಯೇ ಇಲ್ಲ.. ಪ್ರತಿಯೊಬ್ಬ ಮಂತ್ರಿಯೂ ರಾಜ ಈಗ! ಪ್ರತಿ ರಾಜ್ಯದಲ್ಲಿ ಇರುವ ಗವರ್ನರ್ ಮನೆ ಕೂಡ ಯಾವ ಅರಮನೆಗೂ ಕಡಿಮೆಯಿಲ್ಲ. ಆಳುವವರು ರಾಜರ ಗತ್ತಿನಲ್ಲಿ, ಅರಮನೆಯಂಥ ಮನೆಯಿಂದ ಆಚೆ ಬಂದರೆ ನಡು ಬಾಗುವುದು ಜನಸಾಮಾನ್ಯರಿಗೆ ಸಾಮಾನ್ಯ ಕ್ರಿಯೆ ಆಗಿಬಿಡುತ್ತದೆ.

Protocol ಎಂಬುದು ಬ್ರಿಟೀಷರು ರೂಪಿಸಿದ್ದು. ಅದನ್ನು ಬಿಡದೆ ಪಾಲಿಸಿಕೊಂಡು ಬರುತ್ತಿದ್ದೇವೆ.. ನಮ್ಮ ರಾಷ್ಟ್ರಪತಿ ಭವನದಲ್ಲಿ, ಸಂಸತ್ತಿನಲ್ಲಿ, ಸೈನ್ಯದಲ್ಲಿ, ಪೋಲೀಸಿನವರಲ್ಲಿ. Protocol ಎಂದು ರಾಜರಂತೆ ಮಧ್ಯೆ ನಿಂತು.. ಹಿಂದೆ ಮುಂದೆ ಗಾರ್ಡುಗಳನಿಟ್ಟುಕೊಂಡು ನಡೆದಾಡುವುದೇಕೆ? ಬ್ರಿಟಿಷರು ಎಲ್ಲಿಂದಲೋ ಬಂದು ನಮ್ಮನ್ನು ಆಳಿದವರು. ಈ ಭಾರತ ಅವರದಾಗಿರಲಿಲ್ಲ. ಪ್ರಾಣಭೀತಿ ಇತ್ತು. ಹಿಂದೆ ಮುಂದೆ ಗಾರ್ಡುಗಳನ್ನಿಟ್ಟುಕೊಂಡು ಓಡಾಡಿದರು. ಪ್ರಜೆಗಳಿಂದಲೇ ಆಯ್ಕೆಗೊಂಡು ಜನನಾಯಕರಾದ ಎಂಪಿಗಳಾದ, ಮಂತ್ರಿಗಳಾದ ನಮ್ಮ ನಾಯಕರುಗಳಿಗೇಕೆ ಕಾವಲು? ರಕ್ಷಣೆ?

ಸಾಮಾನ್ಯರಂತೆ ಇರದೆ, ಬಾಳದೆ ಇದ್ದರೆ ಸಾಮಾನ್ಯರ ಕಷ್ಟ ಅರಿವಾಗುವುದು ಕಷ್ಟ. ದೆಲ್ಲಿಯಲ್ಲಿ ಕುಳಿತರೆ ಹಳ್ಳಿಯವರ ಅಳಲು ಕೇಳಿಸುವುದಿಲ್ಲ, ಕಾಣಿಸುವುದು ಇಲ್ಲ. ದೆಹಲಿ ನನಗೆ ಹೇಳಿಕೊಟ್ಟದ್ದು ಇಷ್ಟೇ.

3 COMMENTS

  1. umesh @ ಈ ರಾಜಕೀಯ ಮುಖಂಡರಿಗೆ ಬುದ್ಧಿ ಬರೋಲ್ಲ, ಕಳಸಾ ಬಂಡೂರೀಲಿ ನೀರು ಹರಿಯೋಲ್ಲ.. ರೈತರ ಬವಣೆ ತಪ್ಪೋದಿಲ್ಲ..!

    http://www.digitalkannada.com/2016/04/02/%E0%B2%88-%E0%B2%B0%E0%B2%BE%E0%B2%9C%E0%B2%95%E0%B3%80%E0%B2%AF-%E0%B2%AE%E0%B3%81%E0%B2%96%E0%B2%82%E0%B2%A1%E0%B2%B0%E0%B2%BF%E0%B2%97%E0%B3%86-%E0%B2%AC%E0%B3%81%E0%B2%A6%E0%B3%8D%E0%B2%A7/

    ಈ ಲಿಂಕ್ ಕ್ಲಿಕ್ ಮಾಡಿ

  2. ಓಹ್, ನೀವು ಇಲ್ಲಿದೀರ ಮ್ಯಾಡಂ? 🙂
    ಇವತ್ತಷ್ಟೇ ನಿಮ್ಮ ‘ಕಾಲಂ’ ನೋಡಿದೆ. ಬಹುಶಃ ಐದಾರು ಬರಹಗಳನ್ನು ಒಂದೇಟಿಗೆ ಓದಿದೆ. ತುಂಬ ಚೆನ್ನಾಗಿ ಬಂದಿವೆ. ಖುಷಿ ಆಯಿತು. ನಿಮ್ಮ ಮುಂದಿನ ಬರಹದ ನಿರೀಕ್ಷೆಯಲ್ಲಿ,
    -Rj

Leave a Reply