ಸುದ್ದಿಸಂತೆ: ಸಿದ್ದರಾಮಯ್ಯ ಪಕ್ಷಪಾತ?, ಐಪಿಎಲ್ ಸ್ಥಳಾಂತರ, ಮಲ್ಯ ಮತ್ತಷ್ಟು ಟೈಟ್…

ಗುರುವಾರ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಯಡಿಯೂರಪ್ಪ ಅಧಿಕಾರ ಸ್ವೀಕರಿಸುವ ಸಮಾರಂಭಕ್ಕೆ ಬೆಂಗಳೂರಿನ ಅರಮನೆ ಮೈದಾನ ಸಿದ್ಧಗೊಂಡಿರೋದು ಹೀಗೆ..

ಮುಖ್ಯಮಂತ್ರಿ ಪುತ್ರ ಪಾಲುದಾರಿಕೆಯ ಕಂಪನಿಗೆ ಒಲಿದಿದ್ದ ಗುತ್ತಿಗೆ, ಸ್ವಜನಪಕ್ಷಪಾತದ ಆರೋಪ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ದ್ವಿತೀಯ ಪುತ್ರ ಡಾ.ಯತೀಂದ್ರ ಪಾಲುದಾರರಾಗಿರುವ ಉದ್ಯಮದ ಡಯಾಗ್ನೋಸ್ಟಿಕ್ ಕೇಂದ್ರವನ್ನು ನಗರದ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಪ್ರಾರಂಭಿಸಲು ಟೆಂಡರ್ ಪಡೆದಿರೋದು ಸ್ವಜನಪಕ್ಷಪಾತವಾಗುತ್ತದೆಯೇ ಎಂಬ ಪ್ರಶ್ನೆ ಬುಧವಾರ ರಾಜ್ಯವನ್ನು ಕಾಡಿತು.

‘ಮುಖ್ಯಮಂತ್ರಿ ಮಗನಾದ ಮಾತ್ರಕ್ಕೆ ಉದ್ಯಮ ಹೊಂದಬಾರದೆಂದಿಲ್ಲ, ನಿಯಮಗಳಿಗನುಸಾರವಾಗಿ ಟೆಂಡರ್ ಪಡೆದು ಲ್ಯಾಬೋರೆಟರಿ ಸ್ಥಾಪಿಸಿರುವುದರಲ್ಲಿ ತಪ್ಪೇನಿಲ್ಲ’ ಎಂಬುದು ಆಡಳಿತಾರೂಢ ಕಾಂಗ್ರೆಸ್ ವಾದ. ಈ ವಿಷಯದಲ್ಲಿ ತಂದೆ ಇಕ್ಕಟ್ಟಿಗೆ ಸಿಲುಕುವುದು ಬೇಡವೆಂದು ಡಾ. ಯತೀಂದ್ರ ಸಂಸ್ಥೆ ತೊರೆಯುವುದಾಗಿ ಹೇಳಿದ್ದೂ ಆಗಿದೆ.

ಆದರೆ, ಮುಖ್ಯಮಂತ್ರಿ ಮತ್ತು ಸಂಪುಟ ಸದಸ್ಯರ ಕುಟುಂಬವರ್ಗದವರೇ ಗುತ್ತಿಗೆಯಲ್ಲಿ ಭಾಗವಹಿಸುವುದು ನೀತಿ ಸಂಹಿತೆಗೆ ವಿರುದ್ಧ. ಹೀಗಾದಾಗ ಪಕ್ಷಪಾತವಿರುವುದಿಲ್ಲ ಎಂಬ ಮಾತು ಹೇಗೆ ಸಾಧ್ಯ ಎಂಬುದು ಹಲವರ ಪ್ರಶ್ನೆ.

ಡಾ. ಯತೀಂದ್ರರ ಜತೆ ಪಾಲುದಾರರಾಗಿರುವವರು ನೀಡುತ್ತಿರುವ ಸಮರ್ಥನೆ- ‘ನೀತಿ ಸಂಹಿತೆ ಹೇಳೋದೇನಂದ್ರೆ ತಂದೆಯ ಮೇಲೆಯೇ ಅವಲಂಬಿತರಾದವರು ಸರ್ಕಾರಿ ಬೆಂಬಲಿತ ಗುತ್ತಿಗೆಯಲ್ಲಿ ಭಾಗವಹಿಸಬಾರದು ಎಂದು. ಆದರೆ, ಯತೀಂದ್ರರು ತಮ್ಮ ಸ್ವಂತ ಸಾಮರ್ಥ್ಯದಲ್ಲಿ ಈ ಮೊದಲೇ ವೈದ್ಯಕೀಯ ಉದ್ದಿಮೆ ಹೊಂದಿದವರು. ಇಲ್ಲಿ ಯಾವುದೇ ನಿಯಮ ಉಲ್ಲಂಘನೆ ಆಗಿಲ್ಲ. ದಾಖಲೆಗಳನ್ನು ನೀಡುವಾಗಲೂ ಪಾಲುದಾರಿಕೆ ಅಂಶ ಮುಚ್ಚಿಟ್ಟಿಲ್ಲ’ ಎಂಬುದು.

‘ಇದು ಸ್ವಜನಪಕ್ಷಪಾತ, ಅಧಿಕಾರ ದುರುಪಯೋಗದ ಸ್ಪಷ್ಟ ನಿದರ್ಶನ. ಈ ಸಂಸ್ಥೆಗೆ ನೀಡಿದ ಅನುಮತಿಯನ್ನು ತಕ್ಷಣವೇ ರದ್ದುಪಡಿಸಬೇಕು. ಹಾಗೆಯೇ ಮೆಟ್ರಿಕ್ ಇಮೇಜಿಂಗ್ ಸಲ್ಯೂಷನ್ ಇಂಡಿಯಾ (ಪ್ರೈವೇಟ್) ಲಿಮಿಟೆಡ್ ಸಂಸ್ಥೆಗೆ ಡಯಾಗ್ನೋಸ್ಟಿಕ್ ಕೇಂದ್ರ ಆರಂಭಿಸಲು ಅನುಮತಿ ನೀಡಿದ್ದರ ಟೆಂಡರ್ ಪ್ರಕ್ರಿಯೆ ನಡೆದಿದ್ದು ಹೇಗೆ ಎಂಬ ಕುರಿತು ಮಾಹಿತಿ ನೀಡಬೇಕು’ ಅಂತ ಬಿಜೆಪಿ ನಾಯಕ ಜಗದೀಶ್ ಶೆಟ್ಟರ್ ಆಗ್ರಹಿಸಿದ್ದಾರೆ.

ವಿಕ್ಟೋರಿಯ ಆಸ್ಪತ್ರೆ ವಿಶೇಷಾಧಿಕಾರಿ ಡಾ. ಪಿ. ಜಿ. ಗಿರೀಶ್ ಅವರು ಈ ಹಂತದಲ್ಲಿ ಗುತ್ತಿಗೆ ರದ್ದುಗೊಳಿಸಿದರೆ ನಷ್ಟವಾಗುತ್ತದೆ ಎಂದು ಪ್ರತಿಪಾದಿಸಿದ್ದಾರೆ. ‘ಸಲ್ಲಿಕೆಯಾಗಿದ್ದ ಟೆಂಡರ್ ಗಳ ಪೈಕಿ ಅತಿ ಕಡಿಮೆ ವೆಚ್ಚದಲ್ಲಿ ಈ ಸೌಲಭ್ಯ ಕೊಡುವುದಾಗಿ ನಮೂದಿಸಿದ್ದರಿಂದ ಈ ಸಂಸ್ಥೆಗೆ ಗುತ್ತಿಗೆ ನೀಡಲಾಗಿದೆ. ಲಾಭ- ನಷ್ಟ ಏನೇ ಇದ್ದರೂ 3 ವರ್ಷಗಳವರೆಗೆ ಕಡ್ಡಾಯ ಸೇವೆ ನೀಡಲೇಬೇಕೆಂಬ ನಿಯಮದಂತೆ ಐದು ವರ್ಷಗಳ ಅವಧಿಗೆ ಗುತ್ತಿಗೆ ನೀಡಲಾಗಿದೆ. ಲಾಭದಲ್ಲಿ ಶೇ. 2ರಷ್ಟನ್ನು ಸರ್ಕಾರಕ್ಕೆ ನೀಡಬೇಕಿರುತ್ತದೆ.’ ಎಂದು ಅವರು ವಿವರಿಸಿದ್ದಾರೆ.

ಇನ್ನುಳಿದಂತೆ ನೀವು ತಿಳಿಯಬೇಕಿರುವ ಸುದ್ದಿಗಳು…

  • ಬರ ಪೀಡಿತ ಮಹಾರಾಷ್ಟ್ರದಲ್ಲಿ ಐಪಿಎಲ್ ಪಂದ್ಯ ನಡೆಯಬಾರದು ಎಂಬ ಅರ್ಜಿಯ ವಿಚಾರಣೆ ನಡೆಸಿದ ಬಾಂಬೆ ಹೈಕೋರ್ಟ್, ಏಪ್ರಿಲ್ 30ರ ನಂತರದ ಎಲ್ಲಾ ಪಂದ್ಯಗಳನ್ನು ಸ್ಥಳಾಂತರ ಮಾಡುವಂತೆ ಬಿಸಿಸಿಐಗೆ ಸೂಚನೆ ನೀಡಿದೆ. ಆ ಮೂಲಕ 3 ಪ್ಲೇ ಆಫ್ ಪಂದ್ಯಗಳೂ ಸೇರಿದಂತೆ 13 ಪಂದ್ಯಗಳು ಮಹಾರಾಷ್ಟ್ರದಿಂದ ಶಿಫ್ಟ್ ಆಗಲಿವೆ. ವಿಚಾರಣೆ ವೇಳೆ ಪುಣೆ ಮತ್ತು ಮುಂಬೈ ಪ್ರಾಂಚೈಸಿಗಳು 60 ಲಕ್ಷ ನೀರು ಪೂರೈಕೆ ಮಾಡಲು ಸಿದ್ಧವಿದೆ. ಅಲ್ಲದೇ ಮುಖ್ಯಮಂತ್ರಿ ಪರಿಹಾರ ನಿಧಿಗೆ 5 ಕೋಟಿ ನೀಡುವುದಾಗಿ ಬಿಸಿಸಿಐ ನ್ಯಾಯಾಲಯಕ್ಕೆ ತಿಳಿಸಿತ್ತು. ಅಂತಿಮವಾಗಿ ನ್ಯಾಯಾಲಯ ಪಂದ್ಯಗಳನ್ನು ಸ್ಥಳಾಂತರಿಸುವಂತೆ ಆದೇಶಿಸಿದೆ.
  • ಅಮೆರಿಕ ರಕ್ಷಣಾ ಕಾರ್ಯದರ್ಸಿ ಅಶ್ ಕಾರ್ಟರ್ ಅವರ ಭಾರತ ಭೇಟಿ ವೇಳೆ ಇಂಡೋ- ಅಮೆರಿಕ ನಡುವಣ ಮಿಲಿಟರಿ ಒಪ್ಪಂದ ಕುರಿತು ಎಚ್ಚರಿಕೆಯ ಹೆಜ್ಜೆ ಇಡುವುದಾಗಿ ಚೀನಾ ವಿದೇಶಾಂಗ ಸಚಿವಾಲಯ ವಕ್ತಾರ ಲು ಕಂಗ್ ತಿಳಿಸಿದ್ದಾರೆ. ‘ವಿಶ್ವದಲ್ಲಿ ಭಾರತ ಪ್ರಭಾವಶಾಲಿ ರಾಷ್ಟ್ರವಾಗಿದ್ದು, ಅದು ತನ್ನ ಹಿತಾಸಕ್ತಿಗೆ ತಕ್ಕಂತೆ ಸ್ವತಂತ್ರ ವಿದೇಶಾಂಗ ನೀತಿಯನ್ನು ರೂಪಿಸಿಕೊಳ್ಳುತ್ತಿದೆ’ ಎಂದಿದ್ದಾರೆ.
  • ಇತ್ತೀಚೆಗೆ ಹತ್ಯೆಗೊಳಗಾಗಿದ್ದ ಎನ್ಐಎ ಅಧಿಕಾರಿ ತಂಜಿಲ್ ಅಹ್ಮದ್ ಪತ್ನಿ ಫರ್ಜಾನಾ ಕತೂನ್ ಬುಧವಾರ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ. ಗುಂಡಿನ ದಾಳಿಯಲ್ಲಿ ಗಾಯಗೊಂಡಿದ್ದ ಫರ್ಜಾನಾ ಎಐಐಎಂಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಾ ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದರು.
  • ವಿವಿಧ ಬ್ಯಾಂಕ್ ಗಳಲ್ಲಿ ಸಾಲ ಮಾಡಿ ಸುಸ್ಥಿದಾರ ಪಟ್ಟ ಹೊತ್ತಿರುವ ವಿಜಯ್ ಮಲ್ಯ ಅವರ ಪಾಸ್ ಪೋರ್ಟ್ ರದ್ದುಗೊಳಿಸಬೇಕು ಎಂದು ಜಾರಿ ನಿರ್ದೇಶನಾಲಯ ಪಾಸ್ ಪೋರ್ಟ್ ಕಾರ್ಯಾಲಯಕ್ಕೆ ಸಂಪರ್ಕಿಸಿದೆ. ಆ ಮೂಲಕ ಮಲ್ಯಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಐಡಿಬಿಐ ಸಾಲ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂರು ಬಾರಿ ನೊಟೀಸ್ ನೀಡಿದ್ದರೂ ಜಾರಿ ನಿರ್ದೇಶನಾಲಯದ ಮುಂದೆ ಹಾಜರಾಗದ ಹಿನ್ನೆಲೆಯಲ್ಲಿ ಇಡಿ ಈ ನಿರ್ಧಾರಕ್ಕೆ ಬಂದಿದೆ.

Leave a Reply