ಅಂಬೇಡ್ಕರ್ ನೆನಕೆಯಲ್ಲಿ ಜಗದೆದುರು ಕಡಲಮಾರ್ಗದ ಯೋಜನಾನಕ್ಷೆ ಹರವಿಟ್ಟು ಬಂಡವಾಳ ಕೇಳಿದ ಪ್ರಧಾನಿ ಮೋದಿ

ಡಿಜಿಟಲ್ ಕನ್ನಡ ಟೀಮ್

‘ಭಾರತದಲ್ಲಿ ಬಂಡವಾಳ ಹೂಡಲು ಬರುವುದಕ್ಕೆ ಇದು ಅತ್ಯಂತ ಪ್ರಶಸ್ತ ಸಮಯ. ಅದರಲ್ಲೂ ನೀವು ಸಾಗರಮಾರ್ಗದಲ್ಲಿ ಬರುತ್ತೀರಿ ಅಂತಾದರೆ ಅದುವೇ ಅತ್ಯುತ್ತಮ…’ ಹೀಗೆಂದು ಭಾರತದ ಪ್ರಪ್ರಥಮ ಕಡಲಮಾರ್ಗ ಸಮಾವೇಶದಲ್ಲಿ ವಿಶ್ವದ ಹೂಡಿಕೆದಾರರೆದುರು ಮಾತಾಡಿದ ಪ್ರಧಾನಿ ನರೇಂದ್ರ ಮೋದಿ, ದೇಶದ 7500 ಕಿ.ಮೀ.ಗಳ ಸಾಗರ ತೀರ ಸಂಚಾರ ಮಾರ್ಗದ ಅಭಿವೃದ್ಧಿ ಕನಸು ಹರವಿಟ್ಟು, ಆ ನಿಟ್ಟಿನಲ್ಲಿ ಅಗತ್ಯವಿರುವ 1 ಲಕ್ಷ ಕೋಟಿ ರುಪಾಯಿಗಳ ಪೂರೈಕೆಗೆ ಬಂಡವಾಳದಾರರನ್ನು ಉತ್ತೇಜಿಸಿದರು.

ಮಹತ್ವಾಕಾಂಕ್ಷೆಯ ಸಾಗರಮಾಲಾ ಯೋಜನೆಯ ಅಡಿಯಲ್ಲಿ ಹಸಿರು ಬಂದರು, ಹಡಗು ತಯಾರಿಕಾ ಘಟಕ, ಆಂತರಿಕ ಜಲ ಸಂಚಾರ, ಕಡಲ ವ್ಯಾಪಾರ, ಲೈಟ್ ಹೌಸ್ ಟೂರಿಸಂ ಮತ್ತು ಐಶಾರಾಮಿ ಹಡಗು ವಿಹಾರದಂತಹ ಕಾರ್ಯಕ್ರಮಗಳನ್ನು ಜಾರಿಗೆ ತರಲು ಬಂಡವಾಳ ಹೂಡಿಕೆದಾರರನ್ನು ಆಕರ್ಷಿಸುವ ವೇದಿಕೆ ಇದಾಗಿದೆ. ಗುರುವಾರ ಈ ಕಾರ್ಯಕ್ರಮ ಉದ್ಘಾಟಿಸಿದ ಮೋದಿ ಈ ಕಡಲಮಾರ್ಗ ದೇಶದ ಅಭಿವೃದ್ಧಿಗೆ ಯಾವ ರೀತಿ ಸಾಧನವಾಗ ಬಲ್ಲದು ಎಂದು ತಿಳಿಸಿದ್ದಾರೆ. ಸಭೆಯಲ್ಲಿ ಮೋದಿ ಹೇಳಿದ್ದೇನು? ಇಲ್ಲಿದೆ ನೋಡಿ..

‘ಇದೇ ಮೊದಲ ಬಾರಿಗೆ ಇಷ್ಟು ದೊಡ್ಡ ಪ್ರಮಾಣದಲ್ಲಿ ಜಾಗತಿಕ ಮಟ್ಟದ ಕಾರ್ಯಕ್ರಮವನ್ನು ಭಾರತ ಆಯೋಜಿಸುತ್ತಿದೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸಿರುವ ಎಲ್ಲ ಅತಿಥಿಗಳಿಗೂ ಆದರದ ಸ್ವಾಗತ. ಈ ಸಭೆಯಲ್ಲಿರುವ ವಿಚಾರ ಸಂಕಿರಣ, ವಸ್ತುಪ್ರದರ್ಶನ ಭಾರತೀಯ ಕಡಲತೀರದಲ್ಲಿ ಹೆಚ್ಚುತ್ತಿರುವ ಬೇಡಿಕೆ ಮತ್ತು ಅವಕಾಶಗಳ ಮೇಲೆ ಬೆಳಕು ಚೆಲ್ಲುವ ವಿಶ್ವಾಸವಿದೆ. ಭೂಮಿಯಲ್ಲಿ ಶೇ.70ಕ್ಕೂ ಹೆಚ್ಚುಭಾಗ ನೀರಿನಿಂದ ಆವರಿಸಿದೆ. ಇನ್ನು ಭೂಮಿಯಲ್ಲಿನ ಶೇ.97ರಷ್ಟು ನೀರನ್ನು ಸಮುದ್ರ ಹಿಡಿದಿಟ್ಟಿದೆ. ಹಾಗಾಗಿ ಕಡಲಮಾರ್ಗ, ಅತ್ಯುತ್ತಮ ಸಂಚಾರ ಮಾರ್ಗ.

ಇಂದು ಭಾರತದ ಹೆಮ್ಮೆಯ ಪುತ್ರ ಭೀಮ್ ರಾವ್ ಬಾಬಾಸಾಹೇಬ್ ಅಂಬೇಡ್ಕರ್ ಅವರ 125ನೇ ಜನ್ಮದಿನ. ಅವರು ನಮ್ಮ ಸಂವಿಧಾನದ ಶಿಲ್ಪಿಯಷ್ಟೇ ಅಲ್ಲ. ಭಾರತದ ಜಲ ಹಾಗೂ ನದಿ ಸಂಚಾರ ಮಾರ್ಗ ಯೋಜನೆಯ ಶಿಲ್ಪಿಯೂ ಹೌದು. ಈ ಸಂದರ್ಭದಲ್ಲಿ ಅವರಿಗೆ ನಮನ ಸಲ್ಲಿಸುತ್ತೇನೆ. ಅವರ ದೂರದೃಷ್ಠಿ, ಮುಂದಿನ ದಿನಗಳಲ್ಲೂ ದೇಶಕಟ್ಟುವ ಪ್ರಯತ್ನದಲ್ಲಿ ನಮಗೆ ಮಾರ್ಗದರ್ಶನವಾಗಿರಲಿ ಎಂದು ಆಶಿಸುತ್ತೇನೆ. ಅಂಬೇಡ್ಕರ್ ಅವರು ಜಲಮಾರ್ಗ ಮತ್ತು ಶಕ್ತಿಗೆ ಸಂಬಂಧಿಸಿದಂತೆ ಸೆಂಟ್ರಲ್ ವಾಟರ್ ವೇ ಇರಿಗೇಶನ್ ಅಂಡ್ ನೇವಿಗೇಷನ್, ಸೆಂಟ್ರಲ್ ಟೆಕ್ನಿಕಲ್ ಪವರ್ ಬೋರ್ಡ್ ಎಂಬ ಎರಡು ಸಂಸ್ಥೆಗಳನ್ನು ಕಟ್ಟಿದ್ದರು.

ಇಂದು ಶೇ.7ಕ್ಕೂ ಹೆಚ್ಚು ಜಿಡಿಪಿ ಬೆಳವಣಿಗೆ ಕಂಡಿದ್ದು, ಭಾರತದ ವೇಗದ ಆರ್ಥಿಕತೆಯಾಗಿದೆ. ಜಾಗತಿಕ ಕಡಲತೀರ ಉದ್ಯಮದಲ್ಲಿ ಭಾರತ ತನ್ನ ಅಸ್ತಿತ್ವ ಸ್ಥಾಪಿಸುವಂತೆ ಮಾಡುವುದು ನನ್ನ ಸರ್ಕಾರದ ಉದ್ದೇಶ. ಸರ್ಕಾರದ ಆರಂಭಿಕ ದಿನಗಳಲ್ಲಿ ಸಾಗರಮಾಲ ಎಂಬ ಯೋಜನೆ ಘೋಷಿಸಿದ್ದೆವು. ಆ ಮೂಲಕ ಎಸ್ ಇಜೆಡ್ (ಸ್ಪೆಷಲ್ ಎಕನಾಮಿಕ್ ಜೋನ್) ಮೂಲಕ ಬಂದರುಗಳ ಆಧುನೀಕರಣ, ಬಂದರು ಆಧಾರಿತ ಸ್ಮಾರ್ಟ್ ಸಿಟಿಗಳ ನಿರ್ಮಾಣ, ಕೈಗಾರಿಕ ಪಾರ್ಕ್ ಗಳು ದಾಸ್ತಾನು ಘಟಕಗಳ ನಿರ್ಮಾಣದ ಗುರಿ ಹೊಂದಿದ್ದೇವೆ. ಈ ಮೂಲಭೂತ ಸೌಕರ್ಯಗಳ ಮೂಲಕ ನಮ್ಮ ಕಡಲತೀರ ಉದ್ಯಮ ಅಭಿವೃದ್ಧಿ ಗುರಿ ಪೂರ್ಣವಾಗಲಿದೆ. ಭಾರತದ ಉದ್ದನೆಯ ವೈವಿಧ್ಯತೆಯ ಕಡಲತೀರ ಮತ್ತು ಅಲ್ಲಿನ ಶ್ರಮಜೀವಿಗಳು ಭಾರತದ ಅಭಿವೃದ್ಧಿಯ ಸಾಧನವಾಗಲಿದ್ದಾರೆ. ಕಳೆದ ಎರಡು ವರ್ಷದಲ್ಲಿ ನಮ್ಮ ಬಂದರುಗಳ ಕಾರ್ಯವೈಖರಿ ಗಮನಾರ್ಹವಾಗಿದೆ.

ಸದ್ಯ ನಮ್ಮ ಬಂದರುಗಳ ಸಾಮರ್ಥ್ಯವನ್ನು 1400 ಮಿಲಿಯನ್ ಟನ್ ನಿಂದ 3000 ಮಿಲಿಯನ್ ಟನ್ ಸಾಮರ್ಥ್ಯಕ್ಕೆ ಹೆಚ್ಚಿಸುವ ಗುರಿ ಇದೆ. ಈ ಎಲ್ಲ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಸುಮಾರು 1 ಲಕ್ಷ ಕೋಟಿ ಬಂಡವಾಳದ ಅಗತ್ಯವಿದೆ. ಈ ನಿಟ್ಟಿನಲ್ಲಿ ಐಎಂಎಫ್ ಮತ್ತು ವಿಶ್ವಬ್ಯಾಂಕ್ ಭಾರತಕ್ಕೆ ಉತ್ತಮ ದಿನಗಳ ಭರವಸೆ ನೀಡಿವೆ. ಬಂದರು ಕ್ಷೇತ್ರದಲ್ಲಿ ತಂತ್ರಜ್ಞಾನದ ಅಳವಡಿಕೆ ಪ್ರಮುಖವಾಗಿದೆ. ಈ ಕಾರ್ಯಕ್ರಮದಿಂದ ನಮ್ಮ ಯುವಕರಿಗೆ ಹೆಚ್ಚಿನ ಪ್ರಮಾಣದಲ್ಲಿ ಉದ್ಯೋಗಾವಕಾಶ ಸೃಷ್ಠಿಸಲಿದೆ.

ಕಡಲಮಾರ್ಗ ಅಭಿವೃದ್ಧಿಯಿದ ಕೇವಲ ಆರ್ಥಿಕ ಪ್ರಗತಿಯಷ್ಟೇ ಅಲ್ಲ, ದೇಶಗಳ ಹಾಗೂ ನಾಗರೀಕತೆ ನಡುವೆ ಸಂಪರ್ಕ ಸಾಧಿಸುತ್ತದೆ. ಭಾರತದಲ್ಲಿ ಬಂಡವಾಳ ಹೂಡಲು ಹಾಗೂ ಸಮುದ್ರಮಾರ್ಗವಾಗಿ ಆಗಮಿಸಲು ಇದೊಂದು ಉತ್ತಮ ಸಮಯ’  ಎಂದಿದ್ದಾರೆ ಮೋದಿ.

Leave a Reply