ಅವತ್ತು ರೇವಜಿತು ಹಗರಣ ಏನೆಲ್ಲ ಮಾಡಿತ್ತು ಅನ್ನೋದು ಹೆಗಡೆ ಸಂಪುಟದಲ್ಲಿದ್ದ ಸಿದ್ರಾಮಯ್ಯನವರಿಗೆ ಗೊತ್ತಿರಲಿಲ್ವೇ..?

ಪಿ. ತ್ಯಾಗರಾಜ್

ಯಾಕೋ, ಏನೋ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಹಣೆಬರಹ ಸರಿಯಿದ್ದಂಗಿಲ್ಲ ಅಂತ ಹೇಳಂಗಿಲ್ಲ. ಏಕೆಂದರೆ ಹಣೆಯೂ ಅವರದೇ, ಅದರ ಮೇಲೆ ಬರೆದುಕೊಳ್ಳುತ್ತಿರುವ ಕೈಯೂ ಅವರದೇ. ಹಿಂಗಾಗಿ ಒಂದಾದ ಮೇಲೆ ಮತ್ತೊಂದರಂತೆ ತಮ್ಮ ಮೇಲೆ ಬರುತ್ತಿರುವ ಹಗರಣಗಳ ವಾರಸುದಾರರು ಅವರೇ ಆಗಿದ್ದಾರೆ.

ವಿಕ್ಟೋರಿಯಾ ಆಸ್ಪತ್ರೆ ಆವರಣದಲ್ಲಿ ಡಯಾಗ್ನಾಸ್ಟಿಕ್ ಕೇಂದ್ರದ ಸ್ಥಾಪನೆ ಗುತ್ತಿಗೆ ತಮ್ಮ ಕಿರಿಯ ಪುತ್ರ ಡಾ. ಯತೀಂದ್ರ ಪಾಲುದಾರಿಕೆಯ ಮ್ಯಾಟ್ರಿಕ್ಸ್ ಇಮೇಜಿಂಗ್ ಸಲ್ಸೂಷನ್ಸ್ ಲ್ಯಾಬ್ ಸಂಸ್ಥೆಗೆ ಸಿಗುವಲ್ಲಿ ಅಧಿಕಾರ ದುರ್ಬಳಕೆ, ನೀತಿ ಸಂಹಿತೆ ಉಲ್ಲಂಘನೆ ಸಿದ್ದರಾಮಯ್ಯ ನೆತ್ತಿಯ ಮೇಲೆ ತೂಗುತ್ತಿರುವ ಹೊಸ ಆರೋಪ. ಹಿಂದೆ ಹ್ಯೂಬ್ಲೋಟ್ ವಾಚ್ ಉಡುಗೊರೆ, ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ರಚನೆ ಹಗರಣಗಳ ಮುಂದುವರಿದ ಭಾಗ.

ಮಂತ್ರಿಯಾಗಿ, ಉಪಮುಖ್ಯಮಂತ್ರಿಯಾಗಿ ಇದೀಗ ಮುಖ್ಯಮಂತ್ರಿ ಆಗಿರುವ ಸಿದ್ದರಾಮಯ್ಯನವರು ತಮ್ಮ ರಾಜಕೀಯ ಪಯಣದಲ್ಲಿ ಇಂಥ ಹಲವಾರು ನಿದರ್ಶನಗಳಿಗೆ ಸಾಕ್ಷಿಯಾಗಿದ್ದಾರೆ. ಅನೇಕ ವಿವಾದಗಳು ಅವರ ಕಣ್ಣೆದುರಿಗೇ ಸ್ಫೋಟಿಸಿವೆ, ಹಲವರು ಹಗರಣಗಳಿಗೆ ‘ಬಲಿಯಾಗಿದ್ದಾರೆ. ಹಿಂದೆ ರಾಮಕೃಷ್ಣ ಹೆಗಡೆ ಅವರು ಮುಖ್ಯಮಂತ್ರಿ ಆಗಿದ್ದಾಗ ರೇವಜಿತು ಭೂಹಗರಣ ಸರಕಾರದ ಬುಡವನ್ನು ಹೇಗೆ ಅಲ್ಲಾಡಿಸಿತ್ತು ಎಂಬುದು ಅವರ ಸಂಪುಟದಲ್ಲೇ ಇದ್ದ ಸಿದ್ದರಾಮಯ್ಯನವರಿಗೆ ಗೊತ್ತಿಲ್ಲದ ವಿಚಾರವೇನಲ್ಲ. ಹೆಗಡೆ ಅವರು ತಮ್ಮ ಅಳಿಯ ಮನು ನಿಚ್ಚಾನಿ ಸಹೋದರಿ ಶೋಭಾ ಮಖಿಜಾ ಅವರು ಪಾಲುದಾರರಾಗಿದ್ದ ರೇವಜಿತು ಬಿಲ್ಡರ್ಸ್ ಮತ್ತು ಡೆವಲಪರ್ಸ್ ಸಂಸ್ಥೆಗೆ ಬೆಂಗಳೂರು ಜಯನಗರ ಸೌತ್ ಎಂಡ್ ಸಮೀಪ ಬೆಲೆಬಾಳುವ ಭೂಮಿ ಮಂಜೂರು ಮಾಡಿದ್ದರಲ್ಲಿ ಇದೇ ರೀತಿ ಸ್ವಜನ ಪಕ್ಷಪಾತ, ಅಧಿಕಾರ ದುರ್ಬಳಕೆ, ನೀತಿ ಸಂಹಿತೆ ಉಲ್ಲಂಘನೆ ಆಪಾದನೆ ಕೇಳಿ ಬಂದಿತ್ತು. ವಿಧಾನ ಮಂಡದಲ ಒಳಗೆ ಮತ್ತು ಹೊರಗೆ ಪ್ರತಿಪಕ್ಷಗಳಿಂದ ಮಾತ್ರವಲ್ಲದೇ ಅವರದೇ ಪಕ್ಷದ ಮುಖಂಡರಿಂದಲೂ ತೀಕ್ಷ್ಣ ಟೀಕೆಗಳಿಗೆ ಒಳಗಾಗಿತ್ತು. ನಂತರ ಆ ಮಂಜೂರು ರದ್ದಾಯಿತು. ಅದೇ ರೀತಿ, ಹೆಗಡೆ ಸರಕಾರದಲ್ಲಿ ಬಂಡಾಯ ನಾಯಕರಾಗಿದ್ದ ದೇವೇಗೌಡರು ಸಂಬಂಧಿಕರಿಗೆ ನಿವೇಶನ ಮಂಜೂರು ಮಾಡಿಸಿದ್ದರಲ್ಲಿಯೂ ಅಧಿಕಾರ ದುರ್ಬಳಕೆ ಮತ್ತು ಸ್ವಜನಪಕ್ಷಪಾತದ ಆಪಾದನೆ ಕೇಳಿ ಬಂದಿತ್ತು. ಆಗೆಲ್ಲ ಸಿದ್ದರಾಮಯ್ಯನವರು ರೇಷ್ಮೆ ಮತ್ತು ಪಶುಸಂಗೋಪನೆ ಸಚಿವರಾಗಿ ಹೆಗಡೆ ಮತ್ತು ಗೌಡರ ಪಕ್ಕದಲ್ಲೇ ಇದ್ದರು.

ಹಿಂದಿನ ಯಡಿಯೂರಪ್ಪ ಸರಕಾರದಲ್ಲಿಯೂ ಭೂಮಂಜೂರು, ಡಿನೋಟಿಫಿಕೇಷನ್, ಗಣಿಗಾರಿಕೆ ಹಗರಣಗಳ ಸ್ವರೂಪ ಪಡೆಯುವುದರಲ್ಲಿಯೂ ಇದೇ ರೀತಿ ಸ್ವಜನಪಕ್ಷಪಾತ, ಅಧಿಕಾರ ದುರ್ಬಳಕೆ, ನೀತಿ ಸಂಹಿತೆ ಉಲ್ಲಂಘನೆ ತುಂಬಿ ತುಳುಕಾಡಿತ್ತು. ಆಗ ಪ್ರತಿಪಕ್ಷ ನಾಯಕರಾಗಿದ್ದ ಸಿದ್ದರಾಮಯ್ಯನವರು ಇದನ್ನೆಲ್ಲ ಖಂಡಿಸಿ ಬೆಂಗಳೂರಿಂದ ಬಳ್ಳಾರಿವರೆಗೂ ಪಾದಯಾತ್ರೆ ನಡೆಸಿದ್ದು ಸ್ಮೃತಿಪಟಲದಿಂದ ಮರೆಯಾಗುವಷ್ಟು ಕಾಲವೇನೂ ಸರಿದಿಲ್ಲ. ಇಷ್ಟೆಲ್ಲ ಆಗಿಯೂ ಇದೀಗ ಅದೇ ಸಿದ್ದರಾಮಯ್ಯನವರು ಮುಖ್ಯಮಂತ್ರಿ ಸ್ಥಾನಬಲದಿಂದ ತಮ್ಮ ಪುತ್ರನಿಗೆ ಲಾಭ ಮಾಡಿಕೊಡುತ್ತಾರೆಂದರೆ ಇದಕ್ಕೇನನ್ನಬೇಕು?

ನಾನೇನು ಯಾರ ಮೇಲೂ ಒತ್ತಡ ಹಾಕಿಲ್ಲ, ಪಾರದರ್ಶಕವಾಗಿ ಅದರಪಾಡಿಗೆ ಅದಾಗಿದೆ ಅಂತ ಸಿಎಂ ಏನೋ ಹೇಳ್ತಾರೆ. ಅವರು ಹೇಳೋ ಮಾತು ನಿಜಾ ಅಂತಾನೇ ಇಟ್ಟುಕೊಳ್ಳೋಣ. ಅವರು ಯಾರಿಗೂ ಫೋನ್ ಮಾಡಿಲ್ಲ, ಯಾರಿಂದರೂ ಮಾಡ್ಸಿಲ್ಲ ಅನ್ನೋದು ಸರಿ. ಆದರೆ ಅರ್ಜಿ ಹಾಕ್ಕೊಂಡಿರೋ ಒಂದು ಸಂಸ್ಥೆಯಲ್ಲಿ ಸಿಎಂ ಪುತ್ರ ಪಾಲುದಾರರಾಗಿದ್ದಾರೆ ಅನ್ನೋದಷ್ಟೇ ಸಾಕಲ್ವೇ ಪ್ರಭಾವ ಬೀರಲಿಕ್ಕೆ. ಸಿಎಂ ಮಗ ಇರೋ ಸಂಸ್ಥೆ ಬಿಟ್ಟು ಬೇರೆಯವರಿಗೆ ಟೆಂಡರ್ ಕೊಡೋದಿಕ್ಕೆ ಪ್ರಕ್ರಿಯೆ ನಿರ್ವಹಿಸುವವರಿಗೆ ಧೈರ್ಯನಾದರೂ ಹೇಗೆ ಬರುತ್ತೆ? ಅದೂ ಹೋಗಲಿ, ಲಾಭ-ನಷ್ಟದ ಪ್ರಶ್ನೆ ಪಕ್ಕಕ್ಕಿಡೋಣ. ಮುಖ್ಯಮಂತ್ರಿ, ಮಂತ್ರಿಗಳ ಕುಟುಂಬ ಸದಸ್ಯರು ಇಂಥ ಪ್ರಕ್ರಿಯೆಯಲ್ಲಿ ಭಾಗವಹಿಸಬಾರದು ಅನ್ನೋದು ನೀತಿ-ಸಂಹಿತೆ ಚೌಕಟ್ಟಿಗೆ ಬರುವುದರಿಂದಲೇ ಅಲ್ಲವೇ ಅವರದೇ ಪಕ್ಷದ ನಾಯಕ ಜನಾರ್ದನ ಪೂಜಾರಿ ಅವರು ಅಷ್ಟೆಲ್ಲ ತರಾಟೆಗೆ ತೆಗೆದುಕೊಂಡಿರೋದು. ಇದು ‘ಕಾಮನ್ ಸೆನ್ಸ್’ ವಿಚಾರ ಅಂತ ಪೂಜಾರಿ ಅವರು ಹೇಳಿರುವುದು ಸರಿಯಾಗಿಯೇ ಇದೆ. ಯತೀಂದ್ರ ಅವರು ಸಿಎಂ ಮಗ ಅಂತ ಗೊತ್ತಿರಲಿಲ್ಲ ಅಂತ ಆಸ್ಪತ್ರೆ ನಿರ್ದೇಶಕ ಡಾ. ಪಿ.ಜಿ. ಗಿರೀಶ್ ಹೇಳಿದ್ದಾರಲ್ಲ, ಯಾರನ್ನು ಬಕರಾ ಮಾಡೋಕೆ ಹೊರಟಿದ್ದಾರೆ ಇವರು. ಜನ ಮೂರ್ಖರು ಅಂತಾ ತಿಳಿದುಕೊಂಡಿದ್ದಾರೆಯೇ ಇವರು. ಟೆಂಡರ್ ಸಲ್ಲಿಸಿರೋ ಸಂಸ್ಥೆಯಲ್ಲಿ ಯಾರ್ಯಾರು ಇದ್ದಾರೆ? ಆ ಸಂಸ್ಥೆ ಮೂಲ ಏನು, ಉದ್ದೇಶ ಏನು? ಅಂತ ತಿಳಿದುಕೊಳ್ಳದೆ ಯಾರಾದರೂ ಒಡಂಬಡಿಕೆ ಮಾಡಿಕೊಳ್ಳುತ್ತಾರೆಯೇ? ಈ ಡಾಕ್ಟರ್ ವಿಚಾರಧಾರೆ ಕೂಡ ಪೂಜಾರಿ ಅವರು ಹೇಳಿರುವಂತೆ ‘ಕಾಮನ್ ಸೆನ್ಸ್’ ವ್ಯಾಪ್ತಿಗೆ ಬರುತ್ತದೆ!

ವಿಷಯ ವಿವಾದದ ಸ್ವರೂಪ ಪಡೆಯುತ್ತಿದ್ದಂತೆ ಯತೀಂದ್ರ ಅವರು ಇದೀಗ ನಿರ್ದೇಶಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಆ ಸಂಸ್ಥೆಯಿಂದಲೇ ಹೊರಬರುವುದಾಗಿ, ಮುಖ್ಯಮಂತ್ರಿ ಅವರಿಗೂ ನೀತಿ ಸಂಹಿತೆ ಅನ್ವಯಿಸುತ್ತದೆ ಅನ್ನೋದು ತಮಗೆ ಗೊತ್ತಿರಲಿಲ್ಲ ಅಂತಾ ಹೇಳಿದ್ದಾರೆ. ಪಾಪ, ಅವರೇನೋ ವೈದ್ಯರು, ಸರಕಾರ ಮತ್ತು ರಾಜಕೀಯದ ರೀತಿ-ರಿವಾಜು ಅರಿಯದ ಮುಗ್ಧರು, ಹಿಂಗಾಗಿ ಅವರಿಗೇನೂ ಗೊತ್ತಿರಲಿಲ್ಲ ಅಂತಾನೆ ಇಟ್ಟುಕೊಳ್ಳೋಣ. ಆದರೆ ಅವರಿಗೆ ಈ ಟೆಂಡರ್ ಕೊಡಮಾಡಿದ ಸರಕಾರದ ನೇತಾರ, ರಾಜಕೀಯ ಪಂಡಿತ ಸಿದ್ದರಾಮಯ್ಯ ಅವರಿಗೆ ಈ ವಿಚಾರ ಗೊತ್ತಿರಲಿಲ್ಲವೇ? ಅವರೇ ತಿಳಿಸಿ, ಹೇಳಬಹುದಿತ್ತಲ್ಲವೇ ಇದು ನೀತಿ ಸಂಹಿತೆ ವ್ಯಾಪ್ತಿಗೆ ಬರುತ್ತದೆ ಎಂದು. ಇಲ್ಲ ರಾಜಕೀಯ ಜಂಜಾಟದಲ್ಲಿ ಮುಳುಗಿ ಹೋಗಿರುವ ಅವರಿಗೂ ಡಾಕ್ಟರ್ ಗಿರೀಶ್ ಅವರಂತೆ ತಮ್ಮ ಮಗ ಮ್ಯಾಟ್ರಿಕ್ ಸಂಸ್ಥೆ ಪಾಲುದಾರ ಅನ್ನುವ ವಿಚಾರ ಗೊತ್ತಿರಲಿಲ್ಲವೇ?

ಸಿದ್ದರಾಮಯ್ಯ ಮತ್ತು ಅವರ ಮಗನ ಮೇಲೆ ಬಂದಿರೋ ಆಪಾದನೆಯಿಂದ ಸರಕಾರಕ್ಕೆ ಮುಜುಗರ ಆಗಿದೆ ಎಂದು ಪೂಜಾರಿ ಅವರು ಮಾತ್ರವಲ್ಲದೇ ಸಚಿವ ಶ್ರೀನಿವಾಸ ಪ್ರಸಾದ್ ಕೂಡ ಹೇಳಿದ್ದಾರೆ. ಸಿದ್ದರಾಮಯ್ಯನವರು ತಮ್ಮ ನಡವಳಿಕೆ ಬದಲಿಸಿಕೊಳ್ಳಬೇಕು ಅಂತ ಅವರು ಮೊದಲಿಂದಲೂ ಹೇಳುತ್ತಾ ಬಂದಿದ್ದಾರೆ. ಈಗ ಮತ್ತೊಮ್ಮೆ ಪುನರುಚ್ಚರಿಸಿದ್ದಾರೆ.

ಸಿದ್ದರಾಮಯ್ಯ ಅವರು ಏನು ಮಾಡಲು ಹೊರಟಿದ್ದಾರೆ ಎಂಬುದೇ ಗೊತ್ತಾಗುತ್ತಿಲ್ಲ. ಒಂದಾದ ಮೇಲೊಂದು ತಪ್ಪು ಆಗುತ್ತಲೇ ಇದೆ. ತಪ್ಪು ತಪ್ಪೇ ಆದರೂ, ಗೊತ್ತಿದ್ದು ಮಾಡೋ ತಪ್ಪಿಗೂ ಗೊತ್ತಿಲ್ಲದೇ ಮಾಡೋ ತಪ್ಪಿಗೂ ಸ್ವಲ್ಪ ವ್ಯತ್ಯಾಸ ಇರುತ್ತದೆ. ಗೊತ್ತಿಲ್ಲದೆ ಆಗೋ ಪ್ರಮಾದಕ್ಕೆ ಕೊಂಚ ರಿಯಾಯಿತಿ ಕೊಡಬಹುದೇನೋ. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಗೊತ್ತಿದ್ದೂ ಗೊತ್ತಿದ್ದೂ, ಮೇಲಿಂದ ಮೇಲೆ ಮಾಡುತ್ತಿರುವ ತಪ್ಪುಗಳು ಬರೀ ಅವರೊಬ್ಬರ ವರ್ಚಸ್ಸು ಕಳೆಯುವುದು ಮಾತ್ರವಲ್ಲ ಕಾಂಗ್ರೆಸ್ ಸರಕಾರದ ಚರಮಗೀತೆಗೆ ಮುನ್ನುಡಿ ಬರೆಯುತ್ತಿದೆ.

Leave a Reply