ತಡವಾಗಿಯಾದರೂ ಎಲ್ಲರೂ ಅಂಬೇಡ್ಕರ್ ತಮ್ಮವರೆಂದರೆ ತಪ್ಪೇನಿಲ್ಲ, ಆದರೆ ಈ ಪೈಪೋಟಿ ಅಧ್ಯಯನಕ್ಕೆ ಹಚ್ಚದಿದ್ದರೆ ಲಾಭವಿಲ್ಲ

ಚೈತನ್ಯ ಹೆಗಡೆ

ಇಂದು ಡಾ. ಬಿ. ಆರ್. ಅಂಬೇಡ್ಕರ್ ಅವರ 125ನೇ ಜನ್ಮದಿನ. ಈ ಸಂದರ್ಭದಲ್ಲಿ ಹೊಸದೊಂದು ರಾಜಕೀಯ ಚರ್ಚೆ ಎದುರಾಗುತ್ತಿದೆ. ಅದೆಂದರೆ ಈಗ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಹಾಗೂ ಅದರ ಬೆಂಬಲಕ್ಕಿರುವ ಸಂಘಪರಿವಾರ ಅಂಬೇಡ್ಕರ್ ಅವರನ್ನು ಎಂದಿಗಿಂತ ತೀವ್ರವಾಗಿ ‘ತಮ್ಮವರನ್ನಾಗಿ’ ಮಾಡಿಕೊಳ್ಳುತ್ತಿದೆ ಅಂತ ರಾಜಕೀಯದ ಇತರ ಮಗ್ಗುಲುಗಳಲ್ಲಿರುವವರ ಆರೋಪ. ಹಾಗೆ ನೋಡಿದರೆ ಇದು ಆರೋಪವಲ್ಲ, ಬದಲಿಗೆ ದಿಗಿಲು. ಇನ್ನೊಂದೆಡೆ ಇದು ಬಿಜೆಪಿಯ ರಾಜಕೀಯ ಲಾಭದ ನಡೆ ಎನ್ನುವುದಾದರೆ ಅದೂ ಸರಿಯಿದ್ದಿರಬಹುದು.

ಆದರೆ…

ಅಂಬೇಡ್ಕರರ ಹೆಸರು ಬಳಸಿಕೊಳ್ಳುತ್ತಿರುವ ಯಾವ ರಾಜಕೀಯ ಪಕ್ಷ ತಾನೇ ತನ್ನ ಹಿತಾಸಕ್ತಿ ಇರಿಸಿಕೊಂಡಿಲ್ಲ? ಅಂಬೇಡ್ಕರರ ನಿಜವಾದ ವಾರಸುದಾರಿಕೆಯೇ ಗೆಲ್ಲುವುದಾಗಿದ್ದರೆ ಭಾರತದ ರಾಜಕಾರಣದಲ್ಲಿ ರಿಪಬ್ಲಿಕನ್ ಪಕ್ಷ ದೊಡ್ಡಮಟ್ಟದಲ್ಲಿ ಬೆಳೆದುಬಿಡಬೇಕಿತ್ತು. ಹಾಗಾಗದೇ ಕಾಂಗ್ರೆಸಿಗರು, ಕಮ್ಯುನಿಸ್ಟರು, ಸಮಾಜವಾದಿಗಳೆಲ್ಲ ತಮ್ಮ ಸಿದ್ಧಾಂತಗಳಿಗೆ ಅಂಬೇಡ್ಕರರನ್ನು ಬೆರೆಸಿಕೊಳ್ಳುತ್ತಿರುವುದು ಆಕ್ಷೇಪಾರ್ಹ ಅಲ್ಲ ಎನ್ನುವುದಾದರೆ ಅಂಥ ಆಕ್ಷೇಪವನ್ನು ಬಿಜೆಪಿ- ಆರೆಸ್ಸೆಸ್ ವಿಷಯದಲ್ಲಿ ಮಾತ್ರ ಏಕಿಟ್ಟುಕೊಳ್ಳಬೇಕು?

ಎಲ್ಲ ಸಿದ್ಧಾಂತ ಪ್ರತಿಪಾದಕರಿಂದ ಈ ಬಗೆಯ ಅಂಬೇಡ್ಕರ್ ಅವರನ್ನು ‘ತಮ್ಮವರಾಗಿಸಿಕೊಳ್ಳುವ’ ಪೈಪೋಟಿಯಿಂದ ಒಂದಿಷ್ಟು ಭಿನ್ನ ಆಯಾಮಗಳು ತೆರೆದುಕೊಳ್ಳುತ್ತಿವೆ. ಅದು ಒಳ್ಳೆಯದೇ. ನಿಷ್ಕರ್ಷೆ ಎಂಬುದು ಮಾಹಿತಿ ಯುಗದಲ್ಲಿ ಕುಳಿತಿರುವ ಓದುಗನಿಗೆ ಬಿಟ್ಟಿದ್ದು.

  • ತೀರ ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿಯವರು ಅಂಬೇಡ್ಕರ್ ಅವರನ್ನು ನೆನಪಿಸಿಕೊಳ್ಳುತ್ತ, ‘ಅವರು ಕೇವಲ ದಲಿತರ ಉದ್ದಾರಕ್ಕಷ್ಟೆ ಸೀಮಿತವಾಗಿರಲಿಲ್ಲ. ಹಿಂದು ಕೋಡ್ ಬಿಲ್ ಮೂಲಕ ಹಿಂದು ಸಮಾಜದ ಸ್ತ್ರೀಯರಿಗೆ ಸಮಾನ ಹಕ್ಕುಗಳನ್ನು ನೀಡುವ ಕಾಳಜಿ ಪ್ರತಿಪಾದಿಸಿದರು. ಆದರೆ ಅದನ್ನು ಪ್ರತಿರೋಧಿಸುವ ಮೂಲಕ ಅಂಬೇಡ್ಕರ್ ಆಶಯಕ್ಕೆ ಚ್ಯುತಿ ತಂದವರು ಯಾರು’ ಅಂತ ಪರೋಕ್ಷವಾಗಿ ಕಾಂಗ್ರೆಸ್ ನತ್ತ ಬೊಟ್ಟು ಮಾಡಿದ್ದರು.

ಆದರೆ.. ಅಂಬೇಡ್ಕರರ ಹಿಂದು ಕೋಡ್ ಬಿಲ್ ಗೆ ಕಾಂಗ್ರೆಸ್ಸಿನ ಅಧ್ಯಕ್ಷರಾಗಿದ್ದ ಪಟ್ಟಾಭಿ ಸೀತಾರಾಮಯ್ಯ, ಕಾಂಗ್ರೆಸ್ಸಿಗ ಮದನ ಮೋಹನ ಮಾಲವೀಯ ಮಾತ್ರವಲ್ಲದೇ ಆಗಿನ ಹಿಂದು ಮಹಾಸಭಾದ ಶ್ಯಾಮ ಪ್ರಸಾದ್ ಮುಖರ್ಜಿ ಸಹ ವಿರೋಧ ವ್ಯಕ್ತಪಡಿಸಿದ್ದರು ಎಂಬ ಸತ್ಯವನ್ನು ಪ್ರಧಾನಿ ಹೇಳಲಿಲ್ಲ.

  • ಅಸಹಿಷ್ಣುತೆ ಚರ್ಚೆಯಲ್ಲಿ ಗೃಹಮಂತ್ರಿ ರಾಜನಾಥ ಸಿಂಗರು ಅಂಬೇಡ್ಕರರನ್ನು ಉದಾಹರಿಸುತ್ತ, ‘ಅಂಬೇಡ್ಕರರಿಗೂ ಹಲವು ಅವಮಾನಗಳು ಎದುರಾಗಿದ್ದವು. ಆದರೆ ಅವರೆಂದೂ ದೇಶ ಬಿಟ್ಟು ಹೋಗುವ ಮಾತಾಡಿರಲಿಲ್ಲ’ ಎಂದಿದ್ದಕ್ಕೆ ಪ್ರತಿಯಾಗಿ ಚಪ್ಪಾಳೆ ಗಿಟ್ಟಿಸುವ ಉದ್ವೇಗ ಪ್ರದರ್ಶಿಸಿದ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆಯವರು, ‘ಅಂಬೇಡ್ಕರರೇಕೆ ಹೊರಹೋಗುವ ಯೋಚನೆ ಮಾಡಬೇಕು? ನಾವೆಲ್ಲ ಮೂಲ ನಿವಾಸಿಗಳು. ಹೊರಗಿನಿಂದ ಬಂದ ಆರ್ಯರು ನೀವು’ ಅಂತ ಬುಸುಗುಟ್ಟಿದರು.

ಆದರೆ… ಖುದ್ದು ಅಂಬೇಡ್ಕರ್ ಅವರು ಈ ಆರ್ಯ ಆಕ್ರಮಣ ಸಿದ್ಧಾಂತವನ್ನು ಅಲ್ಲಗಳೆದಿದ್ದಾರೆ. ಆದರೆ ಖರ್ಗೆಯವರಂತೆಯೇ ಆರ್ಯ ಆಕ್ರಮಣ ಸಿದ್ಧಾಂತವನ್ನು ಅಂಬೇಡ್ಕರರಿಗೆ ಆರೋಪಿಸಿ ಮಾತಾಡುವ ವೈಚಾರಿಕರ ದೊಡ್ಡ ವರ್ಗವಿದೆ. ಅಂಬೇಡ್ಕರ್ ಅವರು ‘ಹು ವರ್ ಶೂದ್ರಾಸ್’ ಕೃತಿಯಲ್ಲಿ ಇದಕ್ಕೆ ವ್ಯತಿರಿಕ್ತವಾದುದನ್ನೇ ಹೇಳಿರುವುದು ಗಮನಾರ್ಹ. ‘ಆರ್ಯರು ಆಕ್ರಮಣ ಮಾಡಿದ್ದರು ಎಂಬುದಕ್ಕೆ ವೇದಗಳಲ್ಲಿ ಎಲ್ಲೂ ಆಧಾರ ಸಿಗುವುದಿಲ್ಲ. ಇದು ಪಾಶ್ಚಾತ್ಯರು ರೂಪಿಸಿ ಬ್ರಾಹ್ಮಣರು ಒಪ್ಪಿಕೊಂಡ ವಾದವಷ್ಟೆ. ಆರ್ಯ ಎಂಬುದನ್ನು ಭಾಷಿಕವಾಗಿ, ಗೌರವ ಸೂಚಿಸುವ ಪದವಾಗಿ ಉಪಯೋಗಿಸಿದ್ದರ ಆಧಾರ ಸಿಗುತ್ತದೆಯೇ ಹೊರತು ಆಕ್ರಮಣವೆಂಬದು ಪೊಳ್ಳು’ ಎಂಬುದು ಅಂಬೇಡ್ಕರ್ ವಿಚಾರದ ಸಾರ.

  • ಅಂಬೇಡ್ಕರ್ ಅವರು ಬ್ರಾಹ್ಮಣರ ಬಗ್ಗೆ ಹೊಂದಿದ್ದ ಧೋರಣೆ ಏನಾಗಿತ್ತು ಎಂಬುದು ಭಾರಿ ಜಿಜ್ಞಾಸೆಯ ಅಂಶ. ಇಲ್ಲೂ ‘ಇದಮಿತ್ಥಂ’ ಎಂಬ ಉತ್ತರ ಪಡೆದುಬಿಡುವ ಪ್ರಯತ್ನ ಹಲವರಲ್ಲಿ. ದಲಿತ ಮತಬ್ಯಾಂಕನ್ನು ಗಮನದಲ್ಲಿಟ್ಟುಕೊಂಡವರು ‘ಬ್ರಾಹ್ಮಣರ ಶತಮಾನಗಳ ಶೋಷಣೆ ವಿರುದ್ಧ ದಲಿತರನ್ನು ಒಗ್ಗೂಡಿಸಿದವರು ಅಂಬೇಡ್ಕರರು…’ ಅಂತಲೇ ಶುರು ಮಾಡುತ್ತಾರೆ. ಇದನ್ನು ಕೇಳಿಸಿಕೊಂಡವರಿಗೆ ಅಂಬೇಡ್ಕರರು ಪಕ್ಕಾ ಬ್ರಾಹ್ಮಣ ವಿರೋಧಿಗಳಾಗಿದ್ದರು ಎಂದೆನಿಸುತ್ತದೆ. ಇಲ್ಲಲ್ಲ, ಬಾಬಾ ಸಾಹೇಬರಿಗೆ ಅಂಬೇಡ್ಕರ್ ಎಂಬ ಸರ್ ನೇಮ್ ಕೊಟ್ಟಿದ್ದೇ ಬ್ರಾಹ್ಮಣ ಶಿಕ್ಷಕ ಎನ್ನುವ ಮೂಲಕ, ಬ್ರಾಹ್ಮಣರು ಅಂಬೇಡ್ಕರರಿಗೆ ಪ್ರೋತ್ಸಾಹಕವಾಗಿ ನಡೆದುಕೊಂಡಿದ್ದರು ಎಂದು ಅತಿಯಾದ ಸಮೀಕರಣದ ಮೂಲಕ ಎಲ್ಲವನ್ನೂ ಮುಚ್ಚಿಬಿಡುವ ಧಾವಂತ ಇನ್ನೊಂದೆಡೆ. ಆದರೆ ವಾಸ್ತವ ಹಾಗೂ ಇತ್ತು, ಹೀಗೂ ಇತ್ತು ಎಂಬಂತಿದೆ. ಹೆಸರಿನ ವಿಷಯಕ್ಕೇ ಬರೋದಾದರೆ ಆಂಬವಡೆ ಎಂಬ ಗ್ರಾಮದಿಂದ ಬಂದಿದ್ದ ಬಾಬಾಸಾಹೇಬರು ಆಂಬವಡೇಕರ್ ಅಂತಲೇ ಕರೆದುಕೊಳ್ಳುತ್ತಿದ್ದರು. ಇವರಲ್ಲಿ ಪ್ರೀತಿ ಹೊಂದಿದ್ದ ಅಂಬೇಡ್ಕರ್ ಎಂಬ ಬ್ರಾಹ್ಮಣ ಶಿಕ್ಷಕರು ಆಂಬವಡೇಕರ್ ಅನ್ನು ಅಂಬೇಡ್ಕರ್ ಆಗಿ ತಿದ್ದಿದರು. ಪೇಂಡ್ಸೆ, ಕೃಷ್ಣಾಜಿ ಅರ್ಜುನ ಕೆಲುಸ್ಕರ ಹೀಗೆ ನಂತರದಲ್ಲೂ ಹಲವು ಬ್ರಾಹ್ಮಣ ಶಿಕ್ಷಕರ ಸಹಯೋಗ- ಸಹಕಾರಗಳು ದೊರೆತವು. ಜತೆ ಜತೆಯಲ್ಲೇ ತೀವ್ರ ಅವಮಾನವೂ ಕೇವಲ ಬ್ರಾಹ್ಮಣರಲ್ಲದೇ, ಮೇಲ್ವರ್ಗದಿಂದ ಎದುರಾಯಿತೆಂಬುದನ್ನೂ ಮರೆಯಬಾರದು. ಜಾತಿ ಹುಟ್ಟಿನಿಂದ ಬರುವುದಿಲ್ಲ, ಜ್ಞಾನ ಹೊಂದಿದವರೆಲ್ಲ ಬ್ರಾಹ್ಮಣರೇ ಅಂತೆಲ್ಲ ನಾವೇನೋ ಉದಾರ ಭಾಷಣ ಮಾಡಿಬಿಡುತ್ತೇವೆ. ಆದರೆ, ಆಗಿನ ಕಾಲಕ್ಕೆ ಕೊಲಂಬಿಯಾ ಮತ್ತು ಲಂಡನ್ ಸ್ಕೂಲ್ ಆಫ್ ಇಕನಾಮಿಕ್ಸ್ ನಲ್ಲಿ ಕಲಿತುಬಂದರೂ 1918ರಲ್ಲಿ ಸ್ವದೇಶಕ್ಕೆ ಹಿಂತಿರುಗಿದಾಗ ಅವರಿಗೆ ಅಸ್ಪೃಶ್ಯ ಎಂಬ ಕಾರಣಕ್ಕೆ ಉಳಿದುಕೊಳ್ಳೋಕೊಂದು ಜಾಗ ಸಿಗದಾಯಿತಲ್ಲ? ಇದಕ್ಕಿಂತ ದಾರುಣ ಇನ್ನೇನಿದೆ? ಅಂತೂ ಫಾರ್ಸಿಗಳ ಅತಿಥಿ ಗೃಹವೊಂದರಲ್ಲಿ ವ್ಯವಸ್ಥೆ ಮಾಡಿಕೊಂಡಾಗಲೂ, ಅಲ್ಲೂ ಗುರುತು ಗೊತ್ತಾದಾಗ ನಿಂದನೆ, ಹಲ್ಲೆಯನ್ನೇ ಎದುರಿಸಬೇಕಾಯಿತು.

ಸಾರ್ವಜನಿಕ ಕೆರೆಯಲ್ಲಿ ದಲಿತರು ನೀರು ಬಳಸುವ ಹಕ್ಕಿಗಾಗಿ ಆಗ್ರಹಿಸಿ ಮಹಾಡ್ ಸತ್ಯಾಗ್ರಹ ನಡೆಸಿದಾಗ, ಅದರಲ್ಲಿ ಬ್ರಾಹ್ಮಣರು ಯಾರೂ ಪಾಲ್ಗೊಳ್ಳದಂತೆ ಪ್ರತಿಬಂಧಿಸಿದರೆ ತಾವೂ ಬೆಂಬಲಿಸುವುದಾಗಿ ಕೆಲ ಬ್ರಾಹ್ಮಣೇತರ ನಾಯಕರು ಹೇಳಿದಾಗ ಅಂಬೇಡ್ಕರ್ ಅದನ್ನು ಸ್ಪಷ್ಟವಾಗಿ ತಿರಸ್ಕರಿಸಿದರು. ಅಸ್ಪೃಶ್ಯತೆ ಆಚರಿಸುವ ಬ್ರಾಹ್ಮಣರ ವಿರುದ್ಧ ಮಾತ್ರ ಪ್ರತಿರೋಧ ಎಂಬುದನ್ನು ಸ್ಪಷ್ಟಪಡಿಸಿದರು. ಅಲ್ಲದೇ, ದಲಿತರು ಚವದಾರ ಕೆರೆ ನೀರು ಕುಡಿದಿದ್ದರಿಂದ ಸವರ್ಣೀಯರು ಅದರ ಶುದ್ಧೀಕರಣಕ್ಕೆ ಮುಂದಾದರು. ಆಗ ಪಿ. ವಿ. ಜೋಶಿ ಎಂಬ ಸ್ಥಳೀಯ ಬ್ರಾಹ್ಮಣ ಪ್ರಮುಖ, ಶುದ್ಧೀಕರಣಕ್ಕೆ ಮೊದಲೇ ಕೆರೆಯಲ್ಲಿ ಸ್ನಾನ ಮಾಡಿ ಅಂಬೇಡ್ಕರರ ಹೋರಾಟಕ್ಕೆ ಬೆಂಬಲವಿತ್ತರು.

ಇದೀಗ ಬಿಜೆಪಿಯವರು, ಕಮ್ಯುನಿಸ್ಟರು, ಕಾಂಗ್ರೆಸಿಗರು ಎಲ್ಲರೂ ಅಂಬೇಡ್ಕರರನ್ನು ಅವರವರ ನೆಲೆಯಲ್ಲಿ ವ್ಯಾಖ್ಯಾನಿಸುವುದು ಬಹಳ ಒಳ್ಳೆಯದೇ. ಇದರಿಂದ ಹಲವು ಹೊಸ ವಿಚಾರಗಳು ಚರ್ಚೆಗೆ ಬರುವಂತಾಗುತ್ತದೆ. ಪರ- ವಿರೋಧಗಳಿಗಾಗಿ ಅಂಬೇಡ್ಕರರ ಓದಿಗೂ ತೆರೆದುಕೊಂಡಂತಾಗುತ್ತದೆ. ಅಂಬೇಡ್ಕರ್ ಕೇವಲ ದಲಿತರಷ್ಟೇ ಆದರದಿಂದ ಕಾಣಬೇಕಾದ ಸ್ವತ್ತಲ್ಲವಲ್ಲ… ಎಲ್ಲರೂ ಮಾತಾಡಲಿ ಬಿಡಿ. ಇಂತಿಂಥವರೇ ಅಂಬೇಡ್ಕರ್ ಬಗ್ಗೆ ಮಾತಾಡೋದಕ್ಕೆ ಯೋಗ್ಯರು ಎಂಬ ಏಕಸ್ವಾಮ್ಯವೇಕೆ? ಜಮ್ಮು-ಕಾಶ್ಮೀರಕ್ಕೆ 370ನೇ ವಿಶೇಷ ವಿಧಿ ನೀಡುವುದಕ್ಕೆ ಅಂಬೇಡ್ಕರ್ ಏಕೆ ವಿರೋಧಿಸಿದ್ದರು, ಅಖಂಡ ಭಾರತದ ರೊಮ್ಯಾಂಟಿಕ್ ಕಲ್ಪನೆಗೆ ವ್ಯತಿರಿಕ್ತವಾಗಿ, ಮುಸ್ಲಿಮರು ಪ್ರತ್ಯೇಕ ದೇಶದಲ್ಲಿ ಒಂದು ಕಡೆ ಇರಲಿ ಅಂತ ಅವರೇಕೆ ಬಯಸಿದ್ದರು, ಸಂಪತ್ತಿನ ಸೃಷ್ಟಿಯ ಬಗ್ಗೆ ಉತ್ಸುಕರಾಗುತ್ತಲೇ ಅದರ ನಿರ್ವಹಣೆ ಬಗ್ಗೆ ಅವರ ಯೋಚನೆ ಏನಿತ್ತು…. ಇಂಥ ಹಲವು ಅಂಶಗಳು ಅಂಬೇಡ್ಕರರ 125ನೇ ಜನ್ಮದಿನದಲ್ಲಿ ಚರ್ಚೆಯಾಗಬೇಕಿವೆ.

ಕೊನೆಯಲ್ಲಿ ಅಂಬೇಡ್ಕರ್ ಕಟ್ಟರ್ ಅನುಯಾಯಿಗಳೆಂದುಕೊಂಡ ಕೆಲವರು, ಯಾವ ಮಾನವ ಘನತೆಯನ್ನು ಅಂಬೇಡ್ಕರ್ ಪ್ರತಿಪಾದಿಸಿದ್ದರೋ ಅದಕ್ಕೆ ತಾವು ಬೆನ್ನು ತೋರಿಸಿದೆವೇ ಅಂತ ಪ್ರಶ್ನಿಸಿಕೊಳ್ಳುವ ಅಗತ್ಯವೂ ಇದೆ.

ಸವಿತಾ ಅಂಬೇಡ್ಕರ್. 1947ರಲ್ಲಿ ಬಾಬಾ ಸಾಹೇಬರು ಅಸ್ವಸ್ಥರಾಗಿದ್ದಾಗ ಅವರ ಶುಶ್ರೂಷೆಯಲ್ಲಿ ತೊಡಗಿಕೊಂಡ ವೈದ್ಯೆ. ಶಾರದಾ ಕಬಿರ್ ಎಂಬ ಪೂರ್ವನಾಮ ಹೊಂದಿದ್ದ ಚಿತ್ಪಾವನ ಬ್ರಾಹ್ಣಣ ಜಾತಿಯ ಅವರು, 1948ರಲ್ಲಿ ಅಂಬೇಡ್ಕರರನ್ನು ವರಿಸಿದರು. ಅಂಬೇಡ್ಕರರ ಕೊನೆದಿನಗಳಲ್ಲಿ ಸೇವೆ ಮಾಡಿದ, ಅವರ ಅತಿ ಮುಖ್ಯ ಗ್ರಂಥ ‘ದಿ ಬುದ್ಧ ಎಂಡ್ ಹಿಸ್ ಧಮ್ಮ’ ರಚನೆಯಲ್ಲಿ ಸಹಕಾರವಿತ್ತ ಸವಿತಾ ಅಂಬೇಡ್ಕರರನ್ನು ಅವರ ಅನುಯಾಯಿಗಳು ಕೆಟ್ಟದಾಗಿಯೇ ನಡೆಸಿಕೊಂಡರು. ಅವರೇನೋ ಅಂಬೇಡ್ಕರರಿಗೆ ಮೋಹಪಾಶ ಬೀರಿ ಬದಲಿಸಲು ಯತ್ನಿಸಿದರೆಂಬ ಮಟ್ಟಿಗೆ ಕುಹಕಗಳು ಇರಿದವು. ಅಂಬೇಡ್ಕರ್ ಸಾವಿಗೆ ಅವರೇ ಕಾರಣ ಎಂಬಷ್ಟರವರೆಗೂ ಅಮಾನುಷ ಪ್ರತಿಕ್ರಿಯೆಗಳು ಬಂದವು. ಅಂಬೇಡ್ಕರರ ಹೆಸರಲ್ಲಿ ಸಮಾನತೆ ಪ್ರತಿಪಾದಿಸುವವರು ಎಂಥ ಕ್ರೌರ್ಯ ಮೆರೆದುಬಿಟ್ಟರೆಂದರೆ, ‘ದಿ ಬುದ್ಧ ಎಂಡ್ ಹಿಸ್ ಧಮ್ಮ’ ಕೃತಿಗೆ ಅಂಬೇಡ್ಕರರೇ ಬರೆದಿದ್ದ ಮುನ್ನುಡಿಯನ್ನು ಕೈಬಿಡಲಾಯಿತು. ಏಕೆಂದರೆ ಅದರಲ್ಲಿ ಅಂಬೇಡ್ಕರರು ಸವಿತಾರ ಅನನ್ಯ ಸಹಕಾರದ ಬಗ್ಗೆ ಮನದುಂಬಿ ಬರೆದಿದ್ದರು. ಹೀಗೊಂದು ಮುನ್ನುಡಿ ಬೆಳಕಿಗೆ ಬಂದಿದ್ದೇ 1980ರಲ್ಲಿ. ಅಂಬೇಡ್ಕರ್ ಗತಿಸಿದ ನಂತರವಂತೂ ಸವಿತಾ ಅಂಬೇಡ್ಕರರ ಬಗ್ಗೆ ಅನುಯಾಯಿಗಳಿಗೆ ಒಂದಿನಿತೂ ಆದರವಿರಲಿಲ್ಲ. 2003 ರಲ್ಲಿ ಸವಿತಾ ತೀರಿಕೊಂಡರು.

ಇಂಥ ಹಲವಾರು ವಿಷಯಗಳ ಪ್ರವಾಹದಲ್ಲಿ ನಿಂತಾಗ ಅಂಬೇಡ್ಕರವಾದವನ್ನು ಅನುಸರಿಸುವುದು, ಅರ್ಥಮಾಡಿಕೊಳ್ಳುವುದು ಘೋಷಣೆ ಕೂಗಿದಷ್ಟು ಸುಲಭವಲ್ಲ ಎಂಬುದು ನಿಚ್ಚಳವಾಗುತ್ತದೆ. ಘೋಷಣೆಗಳ ಪರಾಕ್ರಮ ಪಕ್ಕಕ್ಕಿಟ್ಟು ಅಧ್ಯಯನದ ಕಣ್ಣುಗಳನ್ನು ಪಡೆಯುವುದೇ 125ನೇ ಜನ್ಮದಿನಾಚರಣೆ ಸಂದರ್ಭದಲ್ಲಿ ಬಾಬಾಸಾಹೇಬರಿಗೆ ನೀಡಬಹುದಾದ ಗೌರವ.

Leave a Reply