ಬಹುರಾಷ್ಟ್ರೀಯ ಬ್ರಾಂಡ್ ಗಳನ್ನು ಹಿಂದೆ ತಳ್ತಿವೆ ದೇಶೀ ಉದ್ಯಮಗಳು!

ಡಿಜಿಟಲ್ ಕನ್ನಡ ಟೀಮ್

ಬಾಬಾ ರಾಮದೇವರ ಪತಂಜಲಿಯು ಟಿವಿ ಜಾಹೀರಾತು ವಲಯದ ನಂಬರ್ 1 ಬ್ರಾಂಡ್ ಆಗಿ ಬಹುರಾಷ್ಟ್ರೀಯ ಕಂಪನಿಗಳನ್ನೆಲ್ಲ ಹಿಂದಿಕ್ಕಿದ್ದರ ಕುರಿತು, ಅವರದ್ದೇ ಮಾದರಿಯಲ್ಲಿ ಇತರ ಸ್ವಾಮೀಜಿಗಳೂ ಮಾರುಕಟ್ಟೆ ಪ್ರವೇಶಿಸುತ್ತಿರುವುದರ ಬಗ್ಗೆ ನೀವು ಓದಿದ್ದಿರಿ.

ಬಾಬಾ- ಸ್ವಾಮೀಜಿಗಳ ಹೊರತಾಗಿಯೂ ಹಲವು ದೇಶಿ ಕಂಪನಿಗಳು ಬಹುರಾಷ್ಟ್ರೀಯ ಬ್ರಾಂಡುಗಳಿಗೆ ಹೆದರಿಕೆ ಹುಟ್ಟಿಸುವಂತೆ ಬೆಳೆಯುತ್ತಿವೆ. 2015ರಲ್ಲಿ ದೇಶದ ಮಾರುಕಟ್ಟೆಯಲ್ಲಿ ಪ್ಯಾಕ್ ಮಾಡಿದ ಆಹಾರ ಉತ್ಪನ್ನಗಳ ಮಾರಾಟದಲ್ಲಿ ಮೊದಲ 5 ಸ್ಥಾನಗಳನ್ನು ಭಾರತೀಯ ಕಂಪನಿಗಳೆ ಪಡೆದಿದ್ದು, ಸ್ವಿಜ್ಜರ್ ಲ್ಯಾಂಡ್ ಮೂಲದ ಚಿರಪರಿಚಿತ ನೆಸ್ಲೆ ಕಂಪನಿ 7 ನೇ ಸ್ಥಾನಕ್ಕೆ ದೂಡಲ್ಪಟ್ಟಿದೆ.

ಅಮುಲ್, ಮದರ್ ಡೈರಿ, ಬ್ರಿಟಾನಿಯ, ರುಚಿಸೋಯ ಮತ್ತು ಪಾರ್ಲೆ ಉತ್ಪನ್ನಗಳು ದೇಶಿ ಮಾರುಕಟ್ಟೆಯ ಮೊದಲ ಐದು ಸ್ಥಾನಗಳನ್ನು ಆಕ್ರಮಿಸಿಕೊಂಡಿದ್ದು, ಟಾಪ್ 10 ರಲ್ಲಿ ವಿದೇಶದ ಮೂರು ಕಂಪನಿಗಳು ಮಾತ್ರ ಸ್ಥಾನ ಪಡೆದಿವೆ. ಅದರಲ್ಲಿ ಮೊಂಡೆಲೆಜ್, ನೆಸ್ಲೆ ಮತ್ತು ಪೆಪ್ಸಿಕೋ ಮುಂಚೂಣಿಯಲ್ಲಿವೆ.

2015 ರಲ್ಲಿ ಪ್ಯಾಕ್ ಮಾಡಿದ ದೇಶಿಯ ಆಹಾರ ಪದಾರ್ಥಗಳು ಭಾರತೀಯ ಮಾರುಕಟ್ಟೆಯಲ್ಲಿ ಪ್ರಾಬಲ್ಯ ಸಾಧಿಸಿರುವುದು ಸ್ಪಷ್ಟ. ಇದು ಸಾಧ್ಯವಾಗಿದ್ದು ಹೇಗೆ? ಮೊದಲನೆಯದಾಗಿ, ಈ ವಿಭಾಗದಲ್ಲಿ ವಹಿವಾಟಿನ ಪ್ರಮಾಣ ಹೆಚ್ಚಾಗಿರುವುದಕ್ಕೆ ಸಣ್ಣ ಪಟ್ಟಣಗಳ ಗ್ರಾಹಕರು ದೊಡ್ಡ ಪ್ರಮಾಣದಲ್ಲಿ ಸೇರಿಕೊಂಡಿರುವುದು ಮುಖ್ಯ ಕಾರಣವಾಗಿದೆ. ದೊಡ್ಡ ನಗರಗಳಲ್ಲಿ ಬ್ರಾಂಡ್ ಬಿತ್ತುವುದರಲ್ಲಿ, ಪ್ರಚಾರ ಮಾಧ್ಯಮಗಳಲ್ಲಿ ದುಡ್ಡು ಸುರಿಯೋದರಲ್ಲಿ ಬಹುರಾಷ್ಟ್ರೀಯ ಕಂಪನಿಗಳನ್ನು ಮೀರಿಸುವವರು ಯಾರಿಲ್ಲ. ಆದರೆ ಸಣ್ಣ ಪಟ್ಟಣಗಳು, ಗ್ರಾಮೀಣ ಭಾಗದ ವಿಷಯ ಬಂದಾಗ ಇಲ್ಲಿ ಅಬ್ಬರ ಮಾಡಿದರಷ್ಟೆ ಸಾಲದು. ಈ ಮಾರುಕಟ್ಟೆಯ ನಾಡಿಮಿಡಿತವನ್ನು ದೇಶೀಯ ಕಂಪನಿಗಳು ಚೆನ್ನಾಗಿ ತಿಳಿದಿವೆ. ತೀರ ಅಬ್ಬರವಿಲ್ಲದೇ, ಸೆಲಿಬ್ರಿಟಿಗಳ ಜಾಹೀರಾತು ಪ್ರಚಾರಕ್ಕೆ ದುಡ್ಡು ಸುರಿಯದೇ ಜನರನ್ನು ಮುಟ್ಟುವ ಮಾರ್ಗ ಕಂಡುಕೊಂಡಿರುವುದೇ ದೇಶೀ ಉದ್ಯಮಗಳ ಯಶಸ್ಸಿಗೆ ಕಾರಣ.

ಅಮುಲ್ ಎಂಬ ಬ್ರಾಂಡ್ ಎಲ್ಲರಿಗೂ ಗೊತ್ತು. ಕಾರ್ಟೂನಿನ ಪುಟ್ಟಿಯ ಪಾತ್ರದ ಮೂಲಕವೇ ಅದು ಹೆಚ್ಚು ಮಂದಿಯನ್ನು ಮುಟ್ಟಿದೆಯಾದ್ದರಿಂದ ತಾರಾ ಮೆರುಗಿಗೆ ಜೋತು ಬೀಳಬೇಕಾದ ಪ್ರಮೇಯ ಬಂದಿಲ್ಲ. ಸೆಲೆಬ್ರಿಟಿ ರಾಯಭಾರಕ್ಕೆ, ಅತಿ ಪ್ರಚಾರದ ಜಾಹೀರಾತುಗಳಿಗೆ ತೀರ ಹಣ ಸುರಿಯದೇ ಆ ಸಂಪನ್ಮೂಲವನ್ನು ಇವು ಪ್ಯಾಕೇಜಿಂಗ್ ಕಾರ್ಯಕ್ಕೆ, ಜನರನ್ನು ತಲುಪುವ ಜಾಲದ ಅಭಿವೃದ್ಧಿಗೆ ವ್ಯಯಿಸಿದವು.ಅಲ್ಲದೇ ಪ್ರಾದೇಶಿಕ ಮಾರುಕಟ್ಟೆಯ ಜನರ ಅಭಿರುಚಿಗಳೇನು ಎಂಬುದರತ್ತ ಗಮನ ಕೇಂದ್ರೀಕರಿಸಿ, ಸಾಂಪ್ರದಾಯಿಕ- ನೈಸರ್ಗಿಕ ಎಂಬ ಪರಿಕಲ್ಪನೆಗೆ ಆದಷ್ಟೂ ಬೆಸೆದುಕೊಂಡು ತಮ್ಮ ಬ್ರಾಂಡ್ ಹೊಳಪಿಸಿಕೊಂಡಿವೆ ದೇಶಿ ಉದ್ದಿಮೆಗಳು.

ಈ ನಡುವೆ ಐದು ತಿಂಗಳ ಮ್ಯಾಗಿ ನಿಷೇಧದಿಂದ ನೆಸ್ಲೆಯ ಬ್ರಾಂಡ್ ಮೌಲ್ಯ ತುಸು ಮಂಕಾಗಿದ್ದೂ ಇದೇ ವಲಯದ ದೇಶೀ ಉದ್ಯಮಕ್ಕೆ ನೆರವಾಯಿತು.

ಅಂತೂ ಒಂದೊಂದೇ ವಲಯದಲ್ಲಿ ಭಾರತೀಯರು ತಮ್ಮ ಉದ್ಯಮಶೀಲತೆಯಲ್ಲಿ ಬಹುರಾಷ್ಟ್ರೀಯ ಬ್ರಾಂಡ್ ಗಳಿಗೆ ಸವಾಲಾಗುತ್ತಿರುವುದು ಆಶಾದಾಯಕ ಬೆಳವಣಿಗೆ.

Leave a Reply