ಸುದ್ದಿ ಸಂತೆ: ಯಡಿಯೂರಪ್ಪ ಅಧಿಕಾರ ಸ್ವೀಕಾರ, ವಿಶ್ವಸಂಸ್ಥೆಯಲ್ಲಿ ಅಂಬೇಡ್ಕರ್ ಜನ್ಮದಿನ, ನ್ಯಾಯಾಲಯದಲ್ಲಿ ಸಂವಿಧಾನ ಹೆಸರಲ್ಲಿ ಪ್ರಮಾಣಕ್ಕೆ ಅವಕಾಶ

ಹಾರಿಸಿಬಿಡಿ ಕೇಸರಿ ಬಾವುಟ… ಯಡಿಯೂರಪ್ಪ ಕೈಗೆ ಸೂತ್ರ

ಡಿಜಿಟಲ್ ಕನ್ನಡ ಟೀಮ್

ಕರ್ನಾಟಕವನ್ನು ಕಾಂಗ್ರೆಸ್ ಮುಕ್ತ ರಾಜ್ಯವನ್ನಾಗಿ ಮಾಡಿ ಬಿಜೆಪಿಯನ್ನು ಅಧಿಕಾರಕ್ಕೆ ತರುವ ಗುರಿಯೊಂದಿಗೆ ಗುರುವಾರ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನವನ್ನು ಅಲಂಕರಿಸಿದರು. ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಅಧ್ಯಕ್ಷ ಪ್ರಹ್ಲಾದ್ ಜೋಷಿ ಅವರಿಂದ ರಾಜ್ಯಾಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಯಡಿಯೂರಪ್ಪ ಅವರ ಹೇಳಿದ ಪ್ರಮುಖ ಅಂಶಗಳು ಹೀಗಿವೆ..

  • ಕಾಂಗ್ರೆಸ್ ಮುಳುಗುತ್ತಿರುವ ಹಡಗು. ಇದನ್ನು ಬೇರು ಸಮೇತ ಕಿತ್ತು ಹಾಕಿ 2018ರ ಚುನಾವಣೆಯಲ್ಲಿ ಪಕ್ಷದ ಬಾವುಟವನ್ನು ರಾಜ್ಯದಲ್ಲಿ ಮತ್ತೆ ಹಾರಿಸುವುದೇ ನನ್ನ ಗುರಿ.
  • ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ 150 ಸ್ಥಾನಗಳನ್ನು ಗೆಲ್ಲಿಸುವುದರ ಮೂಲಕ ದಕ್ಷಿಣ ಭಾರತದಲ್ಲಿ ಬಿಜೆಪಿ ಮತ್ತೆ ತನ್ನ ಬಾಗಿಲು ತೆರೆಯಲಿದೆ.
  • ರಾಜ್ಯದ 9 ಜಿಲ್ಲೆಗಳಲ್ಲಿ ಬಿಜೆಪಿ ಒಬ್ಬ ಶಾಸಕರೂ ಗೆದ್ದಿಲ್ಲ. ಇನ್ನು 13 ಜಿಲ್ಲೆಗಳಲ್ಲಿ ಗೆದ್ದಿರುವುದು ಒಬ್ಬರೇ, ಇಲ್ಲೆಲ್ಲಾ ಪಕ್ಷವನ್ನು ಬಲಪಡಿಸುತ್ತೇವೆ.
  • ನನ್ನೊಬ್ಬನಿಂದಲೇ ಇದೆಲ್ಲವೂ ಸಾಧ್ಯ ಎಂಬ ಭ್ರಮೆ ಇಲ್ಲ. ಎಲ್ಲರೂ ಒಗ್ಗಟ್ಟಾಗಿ ಸಂಘಟಿತರಾದರೆ ಪಕ್ಷದ ಗುರಿಯನ್ನು ಮುಟ್ಟಬಹುದು.
  • ನಮ್ಮ ತಪ್ಪಿನಿಂದಲೇ ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಅಧಿಕಾರ ಕಳೆದುಕೊಳ್ಳಬೇಕಾಯಿತು. ಇಂತಹ ತಪ್ಪು ಮುಂದೆ ಮರುಕಳಿಸುವುದಿಲ್ಲ.
  • ಈ ಹಿಂದೆ ರಾಜ್ಯದಲ್ಲಿ ನಮ್ಮ ಸರ್ಕಾರವಿದ್ದಾಗ ಜಾರಿಗೊಳಿಸಿದ ಭಾಗ್ಯಲಕ್ಷ್ಮಿ, ಸುವರ್ಣಗ್ರಾಮ, ಶೂನ್ಯ ಬಡ್ಡಿದರದಲ್ಲಿ ರೈತರಿಗೆ ಸಾಲ ನೀಡುವುದು ಸೇರಿದಂತೆ ವಿವಿಧ ಕಾರ್ಯಕ್ರಮಗಳು ಇಂದಿಗೂ ರಾಜ್ಯದ ಜನರ ಬಾಯಲ್ಲಿದೆ. ನಮ್ಮ ಕಾರ್ಯಕರ್ತರೇ ಈ ಬಗ್ಗೆ ಮಾತನಾಡುತ್ತಿಲ್ಲ.

ವಿಶ್ವಸಂಸ್ಥೆಯಲ್ಲಿ ಮೊದಲ ಬಾರಿಗೆ ಅಂಬೇಡ್ಕರ್ ಜನ್ಮದಿನ

ಮೊಟ್ಟಮೊದಲ ಬಾರಿಗೆ ವಿಶ್ವಸಂಸ್ಥೆಯಲ್ಲಿ ಭಾರತ ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ಅವರ ಜನ್ಮದಿನವನ್ನು ಆಚರಿಸಲಾಗಿದೆ. ಈ ಸಮಾರಂಭವನ್ನು ಸಿವಿಲ್ ಸೊಸೈಟಿ ಅಡ್ವೋಕಸಿ ಗ್ರೂಪ್ಸ್ ಕಲ್ಪನಾ ಸರೋಜಾ ಫೌಂಡೇಷನ್ ಮತ್ತು ಫೌಂಡೇಶನ್ ಆಫ್ ಹ್ಯೂಮನ್ ಹಾರಿಜಾನ್ ಆಯೋಜಿಸಿತ್ತು.

ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ, ಯುಎನ್ ಡಿಪಿ ಅಧಿಕಾರಿ ಹೆಲೆನ್ ಕ್ಲಾರ್ಕ್ ‘ಈ ಮಹತ್ವದ ಜನ್ಮದಿನವನ್ನು ವಿಶ್ವಸಂಸ್ಥೆಯಲ್ಲಿ ಆಚರಿಸುತ್ತಿರುವ ಭಾರತಕ್ಕೆ ವಿಶ್ವಸಂಸ್ಥೆ ಅಭಿವೃದ್ಧಿ ಕಾರ್ಯಕ್ರಮ (ಯುಎನ್ ಡಿಪಿ) ಪರವಾಗಿ ಶ್ಲಾಘಿಸುತ್ತೇನೆ. 2030ರ ವೇಳೆಗೆ ಅಂಬೇಡ್ಕರ್ ಅವರ ದೂರದೃಷ್ಠಿಯನ್ನು ಸಾಕಾರಗೊಳಿಸಿ ವಿಶ್ವದ ಎಲ್ಲಾ ಸ್ಥರಗಳಲ್ಲಿ ಅಲ್ಪಸಂಖ್ಯಾತ ಮತ್ತು ಬಡವರ ಪ್ರಗತಿಗಾಗಿ ಭಾರತದೊಡನೆ ಕೈಜೋಡಿಸುತ್ತೇವೆ. ಅಂಬೇಡ್ಕರ್ ಅವರು ಈ ಅಸಮಾನತೆಯನ್ನು ನಿವಾರಿಸುವ ಬಗ್ಗೆ ಸುದೀರ್ಘ ಅವಧಿಯ ಮಾರ್ಗೋಪಾಯಗಳನ್ನು ಹೊಂದಿದ್ದರು’ ಎಂದಿದ್ದಾರೆ.

ಸಂವಿಧಾನದ ಮೇಲೆ ಪ್ರಮಾಣಕ್ಕೆ ಹೈಕೋರ್ಟ್ ಅವಕಾಶ

ನ್ಯಾಯಾಲಯದ ವಿಚಾರಣೆ ವೇಳೆ ಸಾಕ್ಷಿದಾರರು ದೇವರ ಹೆಸರಿನಲ್ಲಿ ಪ್ರಮಾಣ ನೀಡಲು ಇಚ್ಛಿಸದ ನಾಸ್ತಿಕರು ಸಂವಿಧಾನದ ಮೇಲೆ ಪ್ರಮಾಣ ಮಾಡಲು ಅವಕಾಶ ನೀಡಲು ಬಾಂಬೆ ಹೈಕೋರ್ಟ್ ಮುಂದಾಗಿದೆ. ಪ್ರಸ್ತುತ ಪ್ರಮಾಣ ಕಾಯ್ದೆ 1969ರ ಪ್ರಕಾರ ಸಾಕ್ಷಿದಾರರು ದೇವರ ಹೆಸರಿನಲ್ಲಿ ಧರ್ಮದ ಪವಿತ್ರ ಗ್ರಂಥಗಳ ಮೇಲೆ ಕೈ ಇಟ್ಟು ದೇವರ ಹೆಸರಿನಲ್ಲಿ ಪ್ರಮಾಣ ನೀಡಬೇಕಿತ್ತು. ಈ ಬಗ್ಗೆ ಪುಣೆ ಮೂಲದ ಸುನೀಲ್ ಮಾನೆ ಮತ್ತು ಲಕ್ಷ್ಮಿಕಾಂತಾ ದಂಪತಿ ಸಾರ್ವಜನಿಕ ಇತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಅರ್ಜಿಯಲ್ಲಿ ಪ್ರಮಾಣ ಕಾಯ್ದೆಯನ್ನು ಸಂವಿಧಾನದ ಪರಿಚ್ಛೆದ 14, 19 ಮತ್ತು 21ರ ಅಡಿಯಲ್ಲಿ ಉಲ್ಲಂಘಿಸಬಹುದಾದ ಕಾಯ್ದೆ ಎಂದು ಪರಿಗಣಿಸಬೇಕು ಎಂದು ಮನವಿ ಮಾಡಲಾಗಿತ್ತು.

ಇನ್ನುಳಿದಂತೆ ತಿಳಿದಿರಬೇಕಾದ ಸುದ್ದಿಸಾಲುಗಳು..

  • ವಿಸಾ ನೀಡುವ ಶುಲ್ಕ ಹೆಚ್ಚಿಸುವ ಅಮೆರಿಕ ನಿರ್ಧಾರವನ್ನು ವಿತ್ತ ಸಚಿವ ಅರುಣ್ ಜೇಟ್ಲಿ ಖಂಡಿಸಿದ್ದಾರೆ. ಇದೊಂದು ಪಕ್ಷಪಾತದ ನಿರ್ಧಾರವಾಗಿದ್ದು, ಭಾರತ ಮೂಲದ ಐಟಿ ವೃತ್ತಿಪರರನ್ನು ಗುರಿಯಾಗಿಸಿ ತೆಗೆದುಕೊಂಡ ನಿರ್ಧಾರವಾಗಿದೆ ಎಂದು ಜೇಟ್ಲಿ ಅಮೆರಿಕ ರಾಯಭಾರಿ ಪ್ರತಿನಿಧಿ ಮೈಕಲ್ ಫ್ರೊಮನ್ ಜತೆಗಿನ ಭೇಟಿ ವೇಳೆ ತಿಳಿಸಿದ್ದಾರೆ.
  • ಕಾಶ್ಮೀರದ ಹಂದ್ವಾರಾ ಹಿಂಸಾಚಾರ ತೀವ್ರ ಸ್ವರೂಪ ಪಡೆಯದಂತೆ ಇಲ್ಲಿನ ಸರ್ಕಾರ ಇಂಟರ್ ನೆಟ್ ಸೇವೆಯನ್ನು 3 ದಿನಗಳ ಕಾಲ ಸ್ಥಗಿತಗೊಳಿಸಿದೆ.
  • ಭಾರತದ ಮೇಲೆ ‘ಗೆರಿಲ್ಲಾ ದಾಳಿ’ ನಡೆಸಲು ಇಸ್ಲಾಮಿಕ್ ಸ್ಟೇಟ್ (ಐಎಸ್) ಉಗ್ರ ಸಂಘಟನೆ ಯೋಜನೆ ರೂಪಿಸಿದ್ದು, ಇದಕ್ಕಾಗಿ ನೆರೆಯ ಬಾಗ್ಲಾದೇಶ ಮತ್ತು ಪಾಕಿಸ್ಥಾನದ ಸ್ಥಳೀಯ ಸಂಘಗಳೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಲಿದೆ ಎಂದು ಐಎಸ್ ನ ಬಾಂಗ್ಲಾದೇಶದ ಮುಖ್ಯ ಘಟಕ ತಿಳಿಸಿದೆ.
  • ಉಪನ್ಯಾಸಕರ ಮುಷ್ಕರದ ನಡುವೆಯೇ ಖಾಸಗಿ ಮತ್ತು ಪದವಿ ಕಾಲೇಜುಗಳ ಉಪನ್ಯಾಸಕರನ್ನು ಬಳಸಿಕೊಂಡು ಶುಕ್ರವಾರದಿಂದ ದ್ವಿತೀಯ ಪಿಯುಸಿ ಮೌಲ್ಯಮಾಪನ ನಡೆಸಲಾಗುವುದು. ಏಪ್ರಿಲ್ 30ರ ಒಳಗಾಗಿ ಮೌಲ್ಯಮಾಪನ ಮುಗಿಸಿ ಮೇ 2ರಂದು ಫಲಿತಾಂಶ ಪ್ರಕಟಿಸಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ತಿಳಿಸಿದ್ದಾರೆ.

Leave a Reply