ಅಂತೂ ಸಿದ್ದರಾಮಯ್ಯ ಲೋಪಗಳ ‘ಫಿಲ್ಟರ್’ ದಿಗ್ವಿಜಯ್ ಬದಲಾವಣೆಗೆ ಮುಹೂರ್ತ ಫಿಕ್ಸ್ ಆದಂತಿದೆ!

ದಿಗ್ವಿಜಯ್ ಸಿಂಗ್- ಭಕ್ತ ಚರಣದಾಸ್- ಸಿದ್ದರಾಮಯ್ಯ

ಡಿಜಿಟಲ್ ಕನ್ನಡ ಟೀಮ್

ಮುಖ್ಯಮಂತ್ರಿ ಸಿದ್ದರಾಮಯ್ಯ ತಪ್ಪುಗಳು ದಿಲ್ಲಿ ತಲುಪದಂತೆ ‘ಫಿಲ್ಟರ್’ ಕೆಲಸ ಮಾಡುತ್ತಿದ್ದ ಕರ್ನಾಟಕದಲ್ಲಿ ಕಾಂಗ್ರೆಸ್ ಉಸ್ತುವಾರಿ ವಹಿಸಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್‍ಸಿಂಗ್‍ ಬದಲಾವಣೆಗೆ ಹೈಕಮಾಂಡ್ ನಿರ್ಧರಿಸಿದೆ. ಈ ಸ್ಥಾನಕ್ಕೆ ಒರಿಸ್ಸಾದ ಭಕ್ತ ಚರಣ್‍ದಾಸ್ ಅವರನ್ನು ನೇಮಕ ಮಾಡಲು ಚಿಂತನೆ ನಡೆಸಿದೆ.

ಕರ್ನಾಟಕದ ನಾನಾ ವಿಹಾರಧಾಮಗಳಲ್ಲಿ ಸಿದ್ದರಾಮಯ್ಯ ಕೃಪಾಪೋಷಿತ ಆತಿಥ್ಯಗಳನ್ನು ಅನುಭವಿಸುವುದರಲ್ಲೇ ಪಕ್ಷದ ಸಂಘಟನೆ ಕಾಣುತ್ತಿದ್ದ ದಿಗ್ವಿಜಯ್ ಸಿಂಗ್ ಅವರ ಬದಲಾವಣೆಗೆ ಮೂಲ ಕಾಂಗ್ರೆಸ್ಸಿಗರು ನೀಡಿದ್ದ ದೂರುಗಳೇ ಆಧಾರ. ದಿಗ್ವಿಜಯ್ ಸಿಂಗ್ ಮತ್ತು ಸಿದ್ದರಾಮಯ್ಯ ಕಾರ್ಯವೈಖರಿ ಬಗ್ಗೆ ಹಿರಿಯ ಮುಖಂಡ ಕ್ಯಾಪ್ಟನ್ ಸತೀಶ್ ಶರ್ಮಾ ಅವರಿಂದ ತರಿಸಿಕೊಂಡ ಆಂತರಿಕ ವರದಿ ಆಧರಿಸಿ ಹೈಕಮಾಂಡ್ ಈ ನಿಲುವಿಗೆ ಬಂದಿದೆ.

ದಿಗ್ವಿಜಯ್ ಸಿಂಗ್ ಮೊದಲಿಂದಲೂ ಸಿದ್ದರಾಮಯ್ಯನವರ ಆಪತ್ಬಾಂಧವರೆಂದೇ ಖ್ಯಾತರು. ಮುಖ್ಯಮಂತ್ರಿ ಆಗಿ ತಾವೊಬ್ಬರೇ ಪ್ರಮಾಣ ವಚನ ಸ್ವೀಕರಿಸಿದ ಸಂದರ್ಭದಲ್ಲಿ, ಆಗಿನ್ನೂ ಸಂಪುಟ ರಚನೆಯೇ ಆಗದಿರುವಾಗ ಮಾಡಿದ ಅನ್ನಭಾಗ್ಯ ಸೇರಿದಂತೆ ಹಲವು ಘೋಷಣೆಗಳಿಂದ ಹಿಡಿದು ಹೈಕಮಾಂಡ್ ಒಪ್ಪಿಗೆ ಇಲ್ಲದೆಯೇ ಹೆಬ್ಬಾಳದಲ್ಲಿ ಭೈರತಿ ಸುರೇಶ್ ಉಮೇದುವಾರಿಕೆಯನ್ನು ಪ್ರಕಟಿಸುವವರೆಗೂ ಸಿದ್ದರಾಮಯ್ಯನವರ ಎಲ್ಲ ಲೋಪದೋಷಗಳಿಗೂ ದಿಗ್ವಿಜಯ್ ಸಿಂಗ್ ಅವರೇ ಹೊದಿಕೆ ಆಗಿಬಿಟ್ಟಿದ್ದರು. ಮೂಲ ಕಾಂಗ್ರೆಸ್ಸಿಗರ ಕಡೆಗಣನೆ, ಆಮೆಗತಿಯ ಆಡಳಿತ ವ್ಯವಸ್ಥೆ, ಅರ್ಕಾವತಿ ರೀಡೂ ವಿವಾದ, ಹ್ಯೂಬ್ಲೊಟ್ ವಾಚ್ ಉಡುಗೊರೆ, ನಾನಾ ಚುನಾವಣೆಗಳಲ್ಲಿ ಕಳಪೆ ಪ್ರದರ್ಶನ, ಭ್ರಷ್ಟಚಾರ ನಿಗ್ರಹ ದಳ (ಎಸಿಬಿ) ರಚನೆ, ಇದೀಗ ಪುತ್ರ ಡಾ. ಯತೀಂದ್ರ ಅವರ ಲ್ಯಾಬ್ ಮತ್ತು ಭೂವಿವಾದದವರೆಗೂ ಸಿದ್ದರಾಮಯ್ಯನವರ ಮೇಲೆ ಬಂದ ಸರ್ವಾಧಿಕಾರಿ ಧೋರಣೆ, ಸ್ವಜನ ಪಕ್ಷಪಾತ, ಭ್ರಷ್ಟಾಚಾರ, ಅಧಿಕಾರ ದುರ್ಬಳಕೆ, ಅಸಡ್ಡೆ ಮನೋಭಾವದ ಆಪಾದನೆಗಳ ಬಗ್ಗೆ ದಿಗ್ವಿಜಯ್ ಸಿಂಗ್ ವರಿಷ್ಠರಿಗೆ ಸತ್ಯಮಾಹಿತಿ ಕೊಡುತ್ತಿರಲಿಲ್ಲ.

ಹಾಗೆಂದು ಇದು ಹೈಕಮಾಂಡ್ ಗೆ ಇದೇನು ಗೊತ್ತಿಲ್ಲದ ವಿಚಾರವೇನೂ ಆಗಿರಲಿಲ್ಲ. ಮಾದ್ಯಮಗಳ ಮೂಲಕ ತಲುಪುವ ವರದಿಗಳು ಒಂದು ಕಡೆಯಾದರೆ, ವಾಚ್ ಉಡುಗೊರೆಯಂತಹ ಪ್ರಕರಣದಲ್ಲಿ ಸಂಸತ್ ಕಲಾಪದಲ್ಲಿಯೇ ತೀವ್ರ ಮುಜುಗರ ಅನುಭವಿಸಬೇಕಾಗಿ ಬಂತು. ಪ್ರತಿಪಕ್ಷಗಳ ವಾಗ್ದಾಳಿಗೆ ಕಾಂಗ್ರೆಸ್ ನಾಯಕರಿಗೆ ನೆಲಛಾವಣಿ ನೋಡುವುದು ಬಿಟ್ಟು ಬೇರೇನೂ ಮಾಡುವಂತಿರಲಿಲ್ಲ. ಇದಲ್ಲದೆ, ರಾಜ್ಯದಿಂದ ದಿಲ್ಲಿ ಪ್ರತಿನಿಧಿಸುವ ಪಕ್ಷದ ಅನೇಕ ಮುಖಂಡರು ರಹಸ್ಯವಾಗಿ ಮಾಹಿತಿ ತಲುಪಿಸಿದ್ದರೆ, ಇತ್ತೀಚೆಗೆ ಅಸ್ತಿತ್ವಕ್ಕೆ ಬಂದಿರುವ ಸಮಾನ ಮನಸ್ಕರ ವೇದಿಕೆ ಪ್ರತಿನಿಧಿಗಳಿಂದ ಹಿಡಿದು ಮಾಜಿ ಸಂಸದ ಎಚ್. ವಿಶ್ವನಾಥ್ ಅವರಂಥ ಹಿರಿಯ ನಾಯಕರವರೆಗೆ ಅನೇಕರು ಬಹಿರಂಗವಾಗಿಯೇ ಮಾತಾಡಿದ್ದರು. ಇದಲ್ಲದೇ ಹೈಕಮಾಂಡ್ ಕೂಡ ದಿಗ್ವಿಜಯಸಿಂಗ್ ಮತ್ತು ಸಿದ್ದರಾಮಯ್ಯನವರ ರೀತಿ-ರಿವಾಜು, ಚಲನ-ವಲನಗಳ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ ಅವರನ್ನು ಆಗಾಗ್ಗೆ ದಿಲ್ಲಿಗೆ ಕರೆಯಿಸಿಕೊಂಡು ಮಾಹಿತಿ ಪಡೆದುಕೊಳ್ಳುತ್ತಿತ್ತು. ಇದಿಷ್ಟು ಸಾಲದು ಎಂಬಂತೆ ಇತ್ತೀಚೆಗೆ ಸಿದ್ದರಾಮಯ್ಯನವರ ವಿರುದ್ಧ ಆಗಾಗ್ಗೆ ಆರೋಪಗಳು ಕೇಳಿಬರಲು ಶುರುವಾದಾಗ ಸತೀಶ್ ಶರ್ಮಾ ಅವರಿಂದ ಆಂತರಿಕ ಸಮೀಕ್ಷೆ ವರದಿಯನ್ನೂ ತರಿಸಿಕೊಂಡಿದೆ. ಇದನ್ನು ಆಧರಿಸಿ ಮೊದಲಿಗೆ ದಿಗ್ವಿಜಯ್ ಸಿಂಗ್ ಬದಲಾವಣೆಗೆ ಅಣಿಯಾಗಿದೆ.

ಸಂಘಟನೆಗೆಂದು ಕರ್ನಾಟಕಕ್ಕೆ ಬಂದಾಗ ಪಕ್ಷದ ಕಚೇರಿಗೆ ಸರಿಯಾಗಿ ಭೇಟಿ ಕೊಡುತ್ತಿರಲಿಲ್ಲ.

ಕಾರ್ಯಕರ್ತರು, ಮುಖಂಡರಿಂದ ಆಹವಾಲು ಸ್ವೀಕರಿಸುತ್ತಿರಲಿಲ್ಲ. ಬೆಂಗಳೂರಿಗೆ ಬಂದು ಕಬಿನಿ ಹಿನ್ನೀರು ಜಲಧಾಮಕ್ಕೋ, ಬಳ್ಳಾರಿಯ ತೋರಣಗಲ್ ವಿಹಾರತಾಣಕ್ಕೋ ಮತ್ತೆಲ್ಲಿಗಾದರೂ ತೆರಳಿ ಬಿಡುತ್ತಿದ್ದರು. ಇನ್ನೂ ಕೆಲವು ಸಂದರ್ಭಗಳಲ್ಲಿ ದಿಲ್ಲಿಯಿಂದ ಗೋವಾ ಮೂಲಕ ದಾಂಡೇಲಿ-ಕಾರವಾರಕ್ಕೆ ಬಂದು ಮೋಜು ಮಾಡಿ ಹೋಗುತ್ತಿದ್ದರು. ಇವರನ್ನು ಕರ್ನಾಟಕದಲ್ಲಿ ಹೀಗೆಯೇ ಮುಂದುವರಿಸಿದರೆ ಪಕ್ಷ ಇನ್ನಷ್ಟು ಹಾಳಾಗಿ ಹೋಗಲಿದೆ ಎಂಬುದೂ ವರದಿಯಲ್ಲಿ ಸೇರಿದೆ.

ದಿಗ್ವಿಜಯ್ ಸಿಂಗ್ ಬದಲಾವಣೆ ಹಿಂದೆ ಬೇರೆಯದೇ ವಾಸನೆಯನ್ನು ಗ್ರಹಿಸಿರುವ ಕೇಂದ್ರದ ಮಾಜಿ ಸಚಿವ, ಹಿರಿಯ ಕಾಂಗ್ರೆಸ್ಸಿಗ ಕೆ.ಎಚ್.ಮುನಿಯಪ್ಪ ದಲಿತ ಮುಖ್ಯಮಂತ್ರಿ ಧ್ವನಿ ಎತ್ತಿದ್ದಾರೆ. ಮೊದಲಿಂದಲೂ ಇದನ್ನು ಹೇಳುತ್ತಲೇ ಬಂದಿರುವ, ಆ ಹೇಳಿಕೆಯಲ್ಲಿ ತಮ್ಮನ್ನು ಮುಖ್ಯಮಂತ್ರಿ ಸ್ಥಾನದಲ್ಲಿ ಕಲ್ಪಿಸಿಕೊಂಡಿರುವ ಪರಮೇಶ್ವರ್ ಕೂಡ ಮುನಿಯಪ್ಪ ಮಾತಿಗೆ ಧ್ವನಿಗೂಡಿಸಿದ್ದಾರೆ. ಇದು ಕುತೂಹಲಕ್ಕೆ ಕಾರಣವಾಗಿದೆ.

Leave a Reply