ಅಷ್ಟೆಲ್ಲ ಪ್ರಾಯೋಗಿಕ ಸಮಸ್ಯೆಗಳ ನಡುವೆ ಕನ್ನಡಕ್ಕೆ ‘ಜಂಗಲ್ ಬುಕ್‍’ ಡಬ್ ಆಗುವುದು ಅಷ್ಟು ಸುಲಭವೆ?


sridharamurthyಎನ್.ಎಸ್.ಶ್ರೀಧರ ಮೂರ್ತಿ

‘ಕನ್ನಡಕ್ಕೆ ಜಂಗಲ್ ಬುಕ್ ಡಬ್ ಆಗಲಿ’ ಎಂದು ಹೇಳಿ ‘ಲೂಸಿಯಾ’ ಖ್ಯಾತಿಯ  ಪವನ್ ಕುಮಾರ್ ವಿವಾದದ ಕಾವನ್ನು ಹಚ್ಚಿದ್ದಾರೆ. ಬೇರೆ ಭಾಷೆಯ ಮಕ್ಕಳು ಅವರ ಭಾಷೆಯಲ್ಲೇ ‘ಜಂಗಲ್ ಬುಕ್’ ನೋಡಬಹುದಾದರೆ ಕನ್ನಡದ ಮಕ್ಕಳೇಕೆ ವಂಚಿತರಾಗಬೇಕು’ ಎನ್ನುವುದು ಇಲ್ಲಿನ ಒಂದು ಪ್ರಶ್ನೆಯಾದರೆ, ಕನ್ನಡ ಚಿತ್ರರಂಗ ಇಂತಹ ಅದ್ದೂರಿ ಸಿನಿಮಾ ನಿರ್ಮಿಸಬಲ್ಲದೆ, ಹಾಗಿಲ್ಲದಿದ್ದರೆ ಈ ಸಿನಿಮಾ ಕನ್ನಡಕ್ಕೆ ಡಬ್ಬಿಂಗ್ ಮೂಲಕ ಬರುವುದನ್ನು ಏಕೆ ತಡೆಯಬೇಕು ಎನ್ನುವುದು ಇನ್ನೊಂದು ಪ್ರಶ್ನೆ. ಇವೆರಡೂ ಮೇಲ್ನೋಟಕ್ಕೆ ನಿಜ ಎನ್ನಿಸುವುದರಿಂದ  ಏಕಾಗಬಾರದು ಎನ್ನುವ ಭಾವನೆ ಅನೇಕರ ಮನಸ್ಸಿನಲ್ಲಿ ಮೂಡಿದೆ. ಈಗ ಡಬ್ಬಿಂಗ್ ಕನ್ನಡ  ಚಿತ್ರರಂಗಕ್ಕೆ ಹಾನಿಕರ ಎನ್ನುವ  ವಾದವನ್ನು ಬದಿಗಿಟ್ಟು ಈ ಪ್ರಶ್ನೆಯನ್ನು ನೋಡಿದರೆ ಹಲವು ಕುತೂಹಲಕರ ಅಂಶಗಳು ಹೊರಗೆ ಬರುತ್ತವೆ. ಇದರಲ್ಲಿ ಜಾಗತಿಕ ಚಿತ್ರರಂಗದ ರಾಜಕೀಯದ ನೆಲೆ ಕೂಡ ಇದೆ.

ತಾಂತ್ರಿಕ ಚಮತ್ಕಾರ ಹಾಲಿವುಡ್‍ನ ಬಹುದೊಡ್ಡ ಶಕ್ತಿ. ಹೀಗಾಗಿ ಅಲ್ಲಿ ಹಣದ ಹರಿವು ಕೂಡ ಜಾಸ್ತಿ. ಬಂಡವಾಳದ ಶಕ್ತಿಯ ಮೂಲಕ ಇಡೀ ಜಗತ್ತನ್ನು ಆಕ್ರಮಿಸಲು ಹಾಲಿವುಡ್ ಕಳೆದ ಶತಮಾನದ ಅರವತ್ತರ ದಶಕದಲ್ಲೇ ತೊಡಗಿತು. ಲ್ಯಾಟಿನ್ ಅಮೆರಿಕಾದಲ್ಲಿ ಹಲವು ಪ್ರಯೋಗಶೀಲ ಚಿತ್ರಗಳು ಬರುತ್ತಿದ್ದವು. ಅದನ್ನು ಆಕ್ರಮಿಸುವಲ್ಲಿ ಹಾಲಿವುಡ್ ಯಶಸ್ವಿಯಾಯಿತು. ಯೂರೋಪ್‍ನಲ್ಲಿ ಕೂಡ ಅದರ ವಿಜಯಯಾತ್ರೆ ಮುಂದುವರೆಯಿತು. ಪರ್ಯಾಯವೇ ಇಲ್ಲದಂತೆ ಜಗತ್ತನ್ನು ಆಕ್ರಮಿಸಿಕೊಳ್ಳಬೇಕು ಎಂದು ನುಗ್ಗುತ್ತಿದ್ದ ಹಾಲಿವುಡ್‍ಗೆ ತಡೆಗೋಡೆಯಾಗಿ ನಿಂತಿದ್ದು ಭಾರತ ಮಾತ್ರವೇ! ಎಂದರೆ ನಿಮಗೆ ಆಶ್ಚರ್ಯವಾಗಬಹುದು. ಶತಕೋಟಿ ಕ್ಲಬ್‍ನಲ್ಲಿ ಜಾಗ ಪಡೆದಿರುವುದು ಕೇವಲ ಎರಡೇ ಹಾಲಿವುಡ್ ಚಿತ್ರಗಳು ಫಾಸ್ಟ್ ಅಂಡ್ ಫ್ಯೂರಿಯಸ್‍(ರು. 155 ಕೋಟಿ) ಜೂರಾಸಿಕ್ ಪಾರ್ಕ್‍ (105 ಕೋಟಿ). ಭಾರತೀಯರಿಗೆ ತಾಂತ್ರಿಕ ಚಮತ್ಕಾರಕ್ಕಿಂತ ಹಾಡು-ಕುಣಿತಗಳು ಬೇಕು, ಭಾವುಕತೆ ಬೇಕು, ಕಥೆ ಬೇಕು. ಹೀಗಾಗಿ ಭಾರತ  ಸರ್ಕಾರವೇ ವಿದೇಶಿ ಹಣ ಹರಿವಿನ ಬಾಗಿಲನ್ನು ತೆರೆದು  ಚಿತ್ರರಂಗದಲ್ಲಿ ಶೇ. 51 ರಷ್ಟು ವಿದೇಶಿ ಬಂಡವಾಳ ಹೂಡಿಕೆಗೆ ಅನುಮತಿ ನೀಡಿ ‘ಬನ್ನಿ ಬನ್ನಿ’ಎಂದು ಕರೆದರೂ ಕೂಡ ಹಾಲಿವುಡ್‍ಗೆ ಭಾರತೀಯ ಚಿತ್ರರಂಗವನ್ನು ಆಕ್ರಮಿಸುವುದು ಸಾಧ್ಯವಾಗಲಿಲ್ಲ. ಆಗ ಹಾಲಿವುಡ್‍ ಪ್ರವೇಶಕ್ಕೆ ದಾರಿ ಮಾಡಿ ಕೊಟ್ಟಿದ್ದು ಡಬ್ಬಿಂಗ್‍. ‘ಅವತಾರ್’ ಇಂತಹ ಸಾಧ್ಯತೆಯ ಬಾಗಿಲನ್ನು ತೆರೆದ ಚಿತ್ರ. ಅಲ್ಲಿಂದ ಮುಂದೆ ಡಬ್ಬಿಂಗ್ ಹಾಲಿವುಡ್ ಚಿತ್ರಗಳಿಗೆ ಚೇತರಿಕೆ ಸಂಗತಿಯಾಯಿತು. ಈಗಂತೂ ಹಾಲಿವುಡ್ ಸಿನಿಮಾಗಳ ಗಳಿಕೆಯಲ್ಲಿ ಶೇ. 55 ರಷ್ಟು ಭಾಗ ಡಬ್ ಆದ ಚಿತ್ರಗಳಿಂದಲೇ ಬರುತ್ತದೆ.

ಹೀಗೆಂದ ಕೂಡಲೇ ಎಲ್ಲಾ ಭಾರತೀಯ ಭಾಷೆಗಳಲ್ಲಿ ಕೂಡ ಹಾಲಿವುಡ್ ಸಿನಿಮಾಗಳು ಡಬ್ ಆಗುತ್ತಿವೆ ಎಂದು ಬಹಳ ಜನ ಭಾವಿಸಿದ್ದಾರೆ. ಅದು ನಿಜವಲ್ಲ. ಡಬ್ಬಿಂಗ್ ನಡೆಯುತ್ತಿರುವುದು ಹಿಂದಿ, ತೆಲುಗು, ತಮಿಳು ಮೂರೇ ಭಾಷೆಯಲ್ಲಿ. ಈ ಮೂರೂ ಭಾಷೆಯಲ್ಲಿ ಕೂಡ ಸಾವಿರಕ್ಕೂ ಹೆಚ್ಚು ಪ್ರಿಂಟ್ ತೆಗೆಯ ಬಲ್ಲ ಮಾರ್ಕೆಟ್‍ ಇದೆ. ಇಲ್ಲಿನ ಚಿತ್ರಗಳು ನೂರು ಕೋಟಿ ಕ್ಲಬ್‍ಗೆ ಸ್ವತಂತ್ರವಾಗಿಯೇ ಸೇರ್ಪಡೆಯಾಗುತ್ತವೆ. ಇಲ್ಲಿ ಡಬ್ಬಿಂಗ್‍ಗೆ ವ್ಯಯಿಸಿದ ಹಣ ಹಿಂದೆ ಬರಲು ಮಾರ್ಗವೂ ಇದೆ. ಇದನ್ನು ಹೊರತು ಪಡಿಸಿ ಬೇರೆ ಭಾರತೀಯ ಭಾಷೆಗಳಿಗೂ ಹಾಲಿವುಡ್‍ ಸಿನಿಮಾಗಳನ್ನು ಡಬ್ ಮಾಡುವ ಪ್ರಯತ್ನ ನಡೆದೇ ಇಲ್ಲ ಎಂದಲ್ಲ. ‘ಸೂಪರ್ ಮ್ಯಾನ್ ‘ ಚಿತ್ರವನ್ನು ಎಂಟು ಭಾರತೀಯ ಭಾಷೆಗಳಿಗೆ ಡಬ್‍ ಮಾಡಲಾಗಿತ್ತು. ಆದರೆ ಅದು ಯಶ ಕಾಣಲಿಲ್ಲ.

ಈಗ ಇನ್ನೊಂದು ಸಮೀಕರಣವನ್ನು ಯೋಚಿಸೋಣ. ‘ಜಂಗಲ್ ಬುಕ್‍’ ಚಿತ್ರದ ಘೋಷಿತ ನಿರ್ಮಾಣ ವೆಚ್ಚವೇ 175 ಮಿಲಿಯನ್‍ ಡಾಲರ್ ಗಳು. ಇಷ್ಟು ದೊಡ್ಡ ಪ್ರಮಾಣದಲ್ಲಿ ಬಂಡವಾಳ ಹೂಡಿರುವ ಚಿತ್ರವನ್ನು ಡಬ್ಬಿಂಗ್ ಮಾಡಿ ಕನ್ನಡದ್ದಾಗಿಸಿಕೊಳ್ಳಲು ಡಿಸ್ನಿ ಸಂಸ್ಥೆಯವರು ಬಿಟ್ಟು ಬಿಡುತ್ತಾರೆಯೆ? ಈಗ ಬೇರೆ ಭಾರತೀಯ ಭಾಷೆಗಳಿಗೆ ಅವರು ಡಬ್ ಮಾಡಿರುವಂತೆಯೇ ಕನ್ನಡಕ್ಕೂ ಮಾಡುತ್ತಾರೆ. ಅಂದರೆ ಡಬ್ ಆದ ಕೂಡಲೇ ಹಣ ಹೊರಗೆ ಹೋಗುವುದು ತಪ್ಪುತ್ತದೆ ಎನ್ನುವ ವಾದಕ್ಕೆ ಅರ್ಥವೇ ಇಲ್ಲ. ಇನ್ನು ಕನ್ನಡಕ್ಕೆ ಡಬ್ ಆದರೆ ಈ ಚಿತ್ರ ಗೆಲ್ಲಬಲ್ಲದೆ ಎನ್ನುವ ಸಮೀಕರಣವನ್ನು ನೋಡೋಣ. ಈಗ ಕರ್ನಾಟಕದಲ್ಲಿರುವ ಚಿತ್ರಮಂದಿರಗಳ ಸಂಖ್ಯೆ 380. ಅದರಲ್ಲಿ ಶೇ. 40 ರಷ್ಟು ಚಿತ್ರಮಂದಿರಗಳು ಕನ್ನಡ ಚಿತ್ರಗಳನ್ನೇ  ಪ್ರದರ್ಶಿಸುವುದಿಲ್ಲ.  ಈ ಲೆಕ್ಕ ಹಿಡಿದರೆ ವಾರಕ್ಕೆ ಒಂಭತ್ತು ಲಕ್ಷ ಮಂದಿ ಪ್ರೇಕ್ಷಕರು ಕನ್ನಡ ಚಿತ್ರಗಳನ್ನು ನೋಡುತ್ತಾರೆ. ಇದು ತಮಿಳಿಗೆ ಬಂದರೆ ಎಂಬತ್ತೆರಡು ಲಕ್ಷ ಎಂದು ಸಮೀಕ್ಷೆ ಹೇಳುತ್ತದೆ. ಇಷ್ಟು ಚಿಕ್ಕ ಸಂಖ್ಯೆಯ ಪ್ರೇಕ್ಷಕರಿರುವ ಭಾಷೆಗೆ ಬಿಗ್ ಬಜೆಟ್ ಸಿನಿಮಾ ಡಬ್ ಮಾಡುವುದು ಎಷ್ಟು ವ್ಯವಹಾರಿಕ ಎಂದು ನಿರ್ಮಾಪಕರು ಯೋಚಿಸುವುದಿಲ್ಲವೆ? ಅಷ್ಟೇ ಅಲ್ಲ, ಇಲ್ಲಿ ಗಮನಿಸಲೇ ಬೇಕಾದ ಇನ್ನೊಂದು ಅಂಶವಿದೆ. ‘ಜಂಗಲ್ ಬುಕ್‍’ ಥ್ರೀಡಿ ಚಿತ್ರ. ಇದನ್ನು ಮಲ್ಟಿಪ್ಲಕ್ಸ್‍ಗಳಲ್ಲಿ ನೋಡಿದರೆ ಮಾತ್ರವೇ ಮಕ್ಕಳು ಆನಂದಿಸುವುದು ಸಾಧ್ಯ. ಇವತ್ತು ಮಲ್ಟಿಪ್ಲಕ್ಸ್‍ಗಳಲ್ಲಿ ನಡೆಯುತ್ತಿರುವ ರಾಜಕೀಯ ಎಲ್ಲರಿಗೂ ಗೊತ್ತು. ಒರಿಜಿನಲ್ ಹಾಲಿವುಡ್ ಚಿತ್ರ, ಡಬ್ ಆದ ಹಿಂದಿ, ತಮಿಳು, ತೆಲುಗು ಅವತರಣಿಕೆಗಳು ಇಷ್ಟನ್ನೂ ಬಿಟ್ಟು ಕನ್ನಡದಲ್ಲಿ ಡಬ್ ಆದಂತಹ ‘ಜಂಗಲ್ ಬುಕ್‍’’ಗೆ ಮಲ್ಟಿಪ್ಲಕ್ಸ್‍ಗಳಲ್ಲಿ ಸಿಗುವ ಮಹತ್ವ ಹೇಗಿರಬಹುದು ಒಮ್ಮೆ ಊಹಿಸಿ ನೋಡಿ, ಆಗ ನಿಜವಾದ ಸಮಸ್ಯೆ ಏನು ಎನ್ನುವುದು ಅರ್ಥವಾಗುತ್ತದೆ.

ಪ್ರತಿಸಲವೂ ಡಬ್ಬಿಂಗ್ ಪ್ರಶ್ನೆ ಬಂದ ಕೂಡಲೇ ಕನ್ನಡಿಗರ ಸ್ವಾಭಿಮಾನ, ಕನ್ನಡ ಚಿತ್ರರಂಗದ ಅಸ್ತಿತ್ವ ಇಂತಹ ಭಾವನಾತ್ಮಕ ವಿಷಯಗಳು ಚರ್ಚೆಗೆ ಬರುತ್ತವೆ. ಇದರ ಬದಲು ಡಬ್ಬಿಂಗ್ ಮಾಡಿ ನೋಡೋಣ ಎನ್ನುವುದು ನನ್ನ ಮಟ್ಟಿಗೆ ಸರಿಯಾದ ಉತ್ತರ. ಆಗ ಪ್ರಾಯೋಗಿಕ ಸಮಸ್ಯೆಗಳು ಅರ್ಥವಾಗುತ್ತವೆ. ‘ತೋಳ ಬಂತು ತೋಳ’ ಕಥೆಗೆ ಕೊನೆ ಬೀಳುತ್ತದೆ.

Leave a Reply