ಐಸಿಐಸಿಐ ಸಿಇಒ ಚಂದಾ ಕೊಚ್ಚರ್ ತನ್ನ ಮಗಳಿಗೆ ಬರೆದ ಪತ್ರವನ್ನು ಎಲ್ಲರೂ ಓದಿಕೊಳ್ಳಬೇಕು, ಮಕ್ಕಳಂತೆ!

ಡಿಜಿಟಲ್ ಕನ್ನಡ ಟೀಮ್

ಐಸಿಐಸಿಐ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕಿ ಮತ್ತು ಸಿಇಒ ಚಂದಾ ಕೊಚ್ಚರ್ ತಮ್ಮ ಮಗಳಿಗೆ ಬರೆದ ಪತ್ರ, ಸ್ಫೂರ್ತಿದಾಯಕ ನೆಲೆಯಲ್ಲಿ ಪುಸ್ತಕವೊಂದರಲ್ಲಿ ಪ್ರಕಟವಾಯಿತು. ಅದೀಗ ಸಾಮಾಜಿಕ ಮಾಧ್ಯಮದಲ್ಲಿ ಭಾರೀ ಸುದ್ದಿ ಮಾಡುತ್ತಿದೆ.

ಖಂಡಿತ ಇದು ಅವರ ಮಗಳೊಬ್ಬಳೇ ಓದಿಕೊಳ್ಳಬೇಕಾದ ಪತ್ರವಲ್ಲ. ಮಗಳನ್ನು ನೆಪವಾಗಿರಿಸಿಕೊಂಡು, ವೃತ್ತಿ ಯಶಸ್ಸಿನ ಮಹಿಳೆ ಒತ್ತಡವನ್ನು ನಿಭಾಯಿಸುವುದರ ಕುರಿತು ಮನಮುಟ್ಟುವಂತೆ ಬರೆದಿದ್ದಾರೆ ಕೊಚ್ಚರ್. ಬದುಕಿನುದ್ಯಾನದ ತಂಗಾಳಿಯಂತೆ ಸೋಕುವ ಅವರ ಮಾತುಗಳು ಹೀಗಿವೆ:

ಪ್ರೀತಿಯ ಆರ್ತಿ,

ನಿನ್ನ ಜೀವನದ ಹಾದಿಯಲ್ಲಿ ಸಾಗಲು ಆತ್ಮಸ್ಥೈರ್ಯದಿಂದ ಸಿದ್ಧವಾಗಿ ನನ್ನ ಮುಂದೆ ನಿಂತಿರುವ ನಿನ್ನ ನೋಡಿ ನನಗೆ ಹೆಮ್ಮೆಯಾಗುತ್ತಿದೆ. ನಿನ್ನ ಮುಂದಿನ ಪಯಣದಲ್ಲಿ ಯಶಸ್ವಿಯಾಗಿ ಬೆಳೆಯುವುದನ್ನು ಎದುರುನೋಡುತ್ತಿದ್ದೇನೆ.

ಈ ಸಂದರ್ಭದಲ್ಲಿ ನನ್ನ ಜೀವನದ ಹಾದಿಯಲ್ಲಿನ ನೆನಪುಗಳು, ಕಲಿತ ಜೀವನ ಪಾಠ ಕಣ್ಮುಂದೆ ಬರುತ್ತಿವೆ. ಅದರ ಬಗ್ಗೆ ಗಮನಹರಿಸಿದಾಗ ಗೊತ್ತಾಗಿದ್ದು, ಜೀವನದ ಬಹುತೇಕ ಪಾಠವನ್ನು ಚಿಕ್ಕವಯಸ್ಸಿನಲ್ಲೇ ಕಲಿತಿದ್ದೆ. ಅದರಲ್ಲಿ ನನ್ನ ತಂದೆ ತಾಯಿಗಳು ನೀಡಿದ ಮಾರ್ಗದರ್ಶನ ಮಹತ್ವದ್ದಾಗಿವೆ.

ನಾವು ಮೂರು ಸೋದರ ಸೋದರಿಯರನ್ನು ನಮ್ಮ ಪೋಷಕರು ಸಮನಾಗಿ ನೋಡಿದರು. ಶಿಕ್ಷಣ, ಭವಿಷ್ಯ ರೂಪಿಸಿಕೊಳ್ಳುವ ಯೋಜನೆಗೆ ನೀಡಿದ ಮಾರ್ಗದರ್ಶನ ಸಮನಾಗಿದ್ದವು. ಇವು ಆರಂಭಿಕ ದಿನಗಳಲ್ಲೇ ನಾವು ಏಕಾಂಗಿಯಾಗಿ ನಿರ್ಧಾರ ತೆಗೆದುಕೊಳ್ಳುವ ಆತ್ಮವಿಶ್ವಾಸವನ್ನು ಹೆಚ್ಚಿಸಿತ್ತು. ನನ್ನ ಜೀವನದ ಪಯಣ ಕಂಡುಕೊಳ್ಳಲು ಮುನ್ನುಡಿ ಬರೆದಿತ್ತು.

ನಾನು 13 ವರ್ಷವಳಿದ್ದಾಗ ದಿಢೀರ್ ಹೃದಯಾಘಾತದಿಂದ ತಂದೆ ವಿಧಿವಶರಾದರು. ಅವರನ್ನು ಬಿಟ್ಟು ಬಾಳಲಾಗದ ಪರಿಸ್ಥಿತಿಯಲ್ಲಿದ್ದಾಗಲೇ ನಮ್ಮನ್ನು ಅಗಲಿದರು. ಯಾವುದೇ ಸೂಚನೆ ಇಲ್ಲದೆ ರಾತ್ರೋರಾತ್ರಿ ಎಲ್ಲವೂ ಬದಲಾಯಿತು. ಅಲ್ಲಿಯವರೆಗೂ ಕೇವಲ ಗೃಹಿಣಿಯಾಗಿದ್ದ ನನ್ನ ತಾಯಿ ಹೆಗಲಿಗೆ ಮೂರು ಮಕ್ಕಳನ್ನು ಬೆಳಸುವ ಜವಾಬ್ದಾರಿ ಬಿತ್ತು. ಆಕೆ ತನ್ನ ಕರ್ತವ್ಯಕ್ಕೆ ಎಷ್ಟರ ಮಟ್ಟಿಗೆ ಬದ್ಧಳಾಗಿದ್ದಳು, ಮಾನಸಿಕವಾಗಿ ಎಷ್ಟು ಪ್ರಬಲಳಾಗಿದ್ದಳು ಎಂಬುದು ನಮಗೆ ಅರಿವಾಯಿತು. ನಿಧಾನವಾಗಿ ಟೆಕ್ಸ್ ಟೈಲ್ ಮತ್ತು ವಿನ್ಯಾಸದ ಬಗ್ಗೆ ಒಲವು ಬೆಳೆಸಿಕೊಂಡಳು. ನಂತರ ಅದರಲ್ಲಿ ಪುಟ್ಟ ಕೆಲಸವನ್ನು ಗಿಟ್ಟಿಸಿಕೊಂಡಳು. ತನ್ನ ಕೆಲಸದಲ್ಲಿ ನಿಯಂತ್ರಣ ಸಾಧಿಸಿದಳು. ತನ್ನ ಕುಟುಂಬವನ್ನು ಏಕಾಂಗಿಯಾಗಿ ಮೇಲೆತ್ತುವ ಸವಾಲು ಕಷ್ಟವಾಗಿದ್ದರೂ ನಮಗೆ ಅದು ಅರಿವಾಗದಂತೆ ನೋಡಿಕೊಂಡಳು. ನಾವು ಕಾಲೇಜು ಸೇರಿ ಸ್ವಾವಲಂಬಿಗಳಾಗಿ ಬೆಳೆಯುವವರೆಗೂ ಕಠಿಣ ಪರಿಶ್ರಮ ಹಾಕಿದಳು.

ಪೂರ್ಣಪ್ರಮಾಣದ ಉದ್ಯೋಗಸ್ತ ಮಹಿಳೆ, ತನ್ನ ಕುಟುಂಬದ ಮೇಲೆ ಪರಿಣಾಮ ಬೀರದಂತೆ ನೋಡಿಕೊಳ್ಳಬೇಕು. ನೀನು ಅಮೆರಿಕದಲ್ಲಿ ಓದುತ್ತಿದ್ದಾಗ ಐಸಿಐಸಿಐ ಬ್ಯಾಂಕ್ ನ ಎಂಡಿ ಮತ್ತು ಸಿಇಒ ಆಗಿ ನಾನು ಆಯ್ಕೆಯಾಗಿದ್ದು ಪತ್ರಿಕೆಗಳಲ್ಲಿ ಪ್ರಕಟವಾದಾಗ ನೀನು ಬರೆದ ಮೇಲ್ ಈಗಲೂ ನೆನಪಿದೆ. ‘ವೃತ್ತಿಯಲ್ಲಿ ನೀನು ಇಷ್ಟರಮಟ್ಟಿಗೆ ಯಶಸ್ಸು ಸಾಧಿಸಿಕೊಂಡಿರುವೆ ಅಂತ ನಮಗೆ ಗೊತ್ತೇ ಆಗಲಿಲ್ಲ. ಏಕೆಂದರೆ ಮನೆಯಲ್ಲಿ ತಾಯಿಯಾಗಿ ನೀನು ಯಾವಾಗಲೂ ಲಭ್ಯವಿದ್ದೆ’ ಎಂದು ನೀನು ಅಚ್ಚರಿ ಪಟ್ಟಿದ್ದೆಯಲ್ಲವೇ? ನಿನ್ನ ಬದುಕನ್ನೂ ಇದೇ ರೀತಿ ಬದುಕಬೇಕು.

ಜೀವನದ ಸಂಕಷ್ಟದ ಪರಿಸ್ಥಿತಿಯನ್ನು ನಿಭಾಯಿಸುವ ಸಾಮರ್ಥ್ಯ ಬೆಳೆಸಿಕೊಂಡು ಮುಂದಿನ ಹಾದಿಯಲ್ಲಿ ಸಾಗುವುದು ಮುಖ್ಯ. ಸಂಕಷ್ಟದ ಸಮಯದಲ್ಲಿ ಪರಿಸ್ಥಿತಿ ನಿನ್ನನ್ನು ಆಕ್ರಮಿಸಿ ಕುಗ್ಗಿಸುವುದಕ್ಕೆ ಅವಕಾಶ ಮಾಡಿಕೊಡದೆ, ಅದನ್ನು ಸಮರ್ಥವಾಗಿ ನಿಭಾಯಿಸಿ ಪ್ರಬಲವಾಗಿ ಬೆಳೆಯಬೇಕು. 2008ರಲ್ಲಿ ಆರ್ಥಿಕ ಮುಗ್ಗಟ್ಟು ಎದುರಾದಾಗ ಗ್ರಾಹಕರನ್ನು ನಿಭಾಯಿಸಿದ್ದು ದೊಡ್ಡ ಸವಾಲಾಗಿತ್ತು. ನನ್ನ ತಾಯಿಯನ್ನು ನೋಡಿಯೇ ಇಂತಹ ಪರಿಸ್ಥಿತಿಯನ್ನು ನಿಭಾಯಿಸುವುದನ್ನು ಕಲಿತೆ. ನಾನು ವೃತ್ತಿಯಲ್ಲಿ ಕಠಿಣ ಪರಿಶ್ರಮ ಹಾಕುತ್ತಿರುವಾಗ ಅಗತ್ಯ ಬಿದ್ದಾಗ ತಾಯಿ ಹಾಗೂ ಅತ್ತೆ ಮಾವನ ಕಡೆಯೂ ಗಮನ ನೀಡಬೇಕಾಯಿತು. ಅವರೂ ಸಹ ನನಗೆ ಉತ್ತಮ ಬೆಂಬಲ ನೀಡಿದರು. ಸಂಬಂಧಗಳು ಬಹಳ ಪ್ರಮುಖ ಎಂಬುದು ನೆನಪಿರಲಿ. ಅದನ್ನು ಉತ್ತಮವಾಗಿ ಪೋಷಿಸಿ ಕಾಪಾಡಿಕೊಂಡು ಹೋಗಬೆಕು. ಸಂಬಂಧಗಳು ದ್ವಿಮುಖ ಮಾರ್ಗವಿದ್ದಂತೆ ನೀನು ಬೇರೆಯವರಿಂದ ಯಾವ ರೀತಿ ಪ್ರತಿಕ್ರಿಯೆ ಅಪೇಕ್ಷಿಸುತ್ತಿಯೋ ಅದೇ ಪ್ರತಿಕ್ರಿಯೆಯನ್ನು ನೀನು ಬೇರೆಯವರಿಗೂ ನೀಡಬೇಕು.

ನಿನ್ನ ತಂದೆ ಬೆಂಬಲವಿಲ್ಲದಿದ್ದರೆ ಈ ಸಾಧನೆ ಸಾಧ್ಯವಾಗುತ್ತಿರಲಿಲ್ಲ. ನಾನು ಮನೆಗೆ ಹೆಚ್ಚು ಸಮಯ ನೀಡದಿದ್ದಾಗ ನನ್ನನ್ನು ಪ್ರಶ್ನಿಸಲಿಲ್ಲ. ನಾವಿಬ್ಬರೂ ನಮ್ಮ ವೃತ್ತಿಗಳಲ್ಲಿ ಬಿಡುವಿಲ್ಲದಂತೆ ನಿರತರಾದರೂ ನಮ್ಮ ಸಂಬಂಧವನ್ನು ಉತ್ತಮ ರೀತಿಯಲ್ಲೇ ಕಾಪಾಡಿಕೊಂಡೆವು. ಇಲ್ಲಿ ಯಾವುದೇ ರೀತಿಯ ದೂರುಗಳಿಗೆ ಅವಕಾಶವಿರಬಾರದು.

ನಿನ್ನ ಬೋರ್ಡ್ ಎಕ್ಸಾಂ ದಿನ ನಿನ್ನನ್ನು ಪರೀಕ್ಷಾಕೇಂದ್ರಕ್ಕೆ ಕರೆದೊಯ್ಯಲು ಕೆಲಸಕ್ಕೆ ರಜೆ ಹಾಕಿದ್ದೆ. ಅಂದು ನೀನು ಅಷ್ಟು ವರ್ಷಗಳ ಕಾಲ ಪರೀಕ್ಷೆ ದಿನ ಪಡುತ್ತಿದ್ದ ಕಷ್ಟ ಅರಿವಾಗಿ ನೋವಾಯಿತು. ಮತ್ತೊಂದೆಡೆ, ನೀನು ಸ್ವಾವಲಂಬಿಯಾಗಿ ಬದುಕುವುದನ್ನು ಕಲಿತೆ. ನನ್ನ ಕೊರತೆ ಕಾಡದಂತೆ ನಿನ್ನ ತಮ್ಮನನ್ನು ನೋಡಿಕೊಂಡೆ ಎಂಬುದು ಅರ್ಥವಾಯಿತು. ಅದೃಷ್ಟದ ಮೇಲೆ ನನಗೆ ನಂಬಿಕೆ ಇದೆ. ಜತೆಗೆ ಪರಿಶ್ರಮವನ್ನೂ ನಂಬುತ್ತೇನೆ. ನಾವು ನಮ್ಮ ಗುರಿಯನ್ನು ಇಟ್ಟುಕೊಳ್ಳಬೇಕು. ಅದನ್ನು ಮುಟ್ಟುವ ಸಲುವಾಗಿ ನಮ್ಮ ಹಾದಿಯನ್ನು ಸೃಷ್ಟಿಸಿಕೊಳ್ಳಬೇಕು. ನೀನು ಮುಂದಿನ ಜೀವನದಲ್ಲಿ ಯಶಸ್ಸಿನ ಶಿಖರ ಏರುವುದನ್ನು ನೋಡಲು ಇಚ್ಛಿಸುತ್ತೇನೆ. ಆಕಾಶಕ್ಕೆ ಗುರಿ ಇಡು. ನಿಧಾನವಾಗಿ ಒಂದೊಂದೆ ಹೆಜ್ಜೆಯನ್ನು ಆನಂದಿಸುತ್ತಾ ಸಾಗು. ಆ ಸಣ್ಣ ಸಣ್ಣ ಹೆಜ್ಜೆಗಳು ಜೀವನವನ್ನು ಪರಿಪೂರ್ಣವಾಗುವಂತೆ ಮಾಡುತ್ತದೆ. ಜೀವನದಲ್ಲಿ ಸಾಗುತ್ತಿದ್ದಂತೆ ಕೆಲವೊಮ್ಮೆ ಕಠಿಣ ನಿರ್ಧಾರ ತೆಗೆದುಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಅಂತಹ ಸಂದರ್ಭದಲ್ಲಿ ನಿನ್ನ ನಿರ್ಧಾರಕ್ಕೆ ಬದ್ಧವಾಗಿರುವ ಧೈರ್ಯ ನಿನ್ನಲ್ಲಿರಬೇಕು. ಸರಿ ಎನಿಸಿದ್ದನ್ನು ಮಾಡುವ ಸಾಮರ್ಥ್ಯ ಬೆಳೆಸಿಕೊ.

ಆರ್ತಿ, ಜೀವನದಲ್ಲಿ ಗುರಿಮುಟ್ಟಲು ನಿಶ್ಚಯಿಸಿದರೆ ಸಾಧನೆಗೆ ಎಲ್ಲೆಯೇ ಇಲ್ಲ. ನಿನ್ನ ಗುರಿ ಮುಟ್ಟುವ ಹಾದಿಯಲ್ಲಿ ಮೌಲ್ಯ, ಪ್ರಾಮಾಣಿಕತೆ ಕಳೆದುಕೊಳ್ಳಬೇಡ. ನಿನ್ನ ಸುತ್ತಲಿನ ಜನರ ಭಾವನೆಯನ್ನು ಅರ್ಥ ಮಾಡಿಕೊಂಡು ಮುಂದೆ ಸಾಗು. ಒತ್ತಡ ನಿನ್ನನ್ನು ಆಕ್ರಮಿಸಿಕೊಳ್ಳಲು ಬಿಡಬೇಡ. ಜೀವನದಲ್ಲಿ ಉತ್ತಮ ಹಾಗೂ ಕೆಟ್ಟ ಪರಿಸ್ಥಿತಿಗಳು ಸಮನಾಗಿರುತ್ತವೆ. ಎರಡನ್ನು ಸಮಾನವಾಗಿ ಸ್ವೀಕರಿಸುವುದನ್ನು ಕಲಿಯಬೇಕು. ಪ್ರತಿ ಹಂತದಲ್ಲೂ ಕಲಿಯುತ್ತಾ ಸಾಗು. ಆ ಮೂಲಕ ಜೀವನದಲ್ಲಿನ ಸವಾಲನ್ನು ಎದುರಿಸು.

ಇಂತಿ ನಿನ್ನ ಪ್ರೀತಿಯ, ಅಮ್ಮ

1 COMMENT

  1. ಈ ಪತ್ರ ಓದಿದಾಗ ಜವಾಹರ್ ಲಾಲ್ ನೆಹರೂ ಅವರು ಮಗಳು ಇಂದಿರಾಗೆ ಬರೆದ ಪತ್ರಗಳ ನೆನಪಾಯಿತು.

Leave a Reply