‘ಬುದ್ಧ ಇನ್ ಅ ಟ್ರಾಫಿಕ್ ಜಾಮ್’ ಬೆಳ್ಳಿತೆರೆಯ ಬಲಪಂಥೀಯ ಚಳವಳಿಗೆ ಮುನ್ನುಡಿಯೇ?

ಚೈತನ್ಯ ಹೆಗಡೆ

ನಿರ್ದೇಶಕ ವಿವೇಕ್ ಅಗ್ನಿಹೋತ್ರಿಯವರ ಬಹುನಿರೀಕ್ಷಿತ ಚಿತ್ರ ‘ಬುದ್ಧ ಇನ್ ಅ ಟ್ರಾಫಿಕ್ ಜಾಮ್’ ಟ್ರೈಲರ್ ಯೂಟ್ಯೂಬಿನಲ್ಲಿ ಬಿಡುಗಡೆಗೊಂಡ ಮೂರು ದಿನಗಳಲ್ಲಿ 6 ಲಕ್ಷಕ್ಕಿಂತ ಹೆಚ್ಚು ವೀಕ್ಷಣೆಗಳು ಬಂದಿವೆ. ನಿಜ, ಸನ್ನಿ ಲಿಯೋನ್, ಇಮ್ರಾನ್ ಹಷ್ಮಿ ಚಿತ್ರದ ಟ್ರೈಲರ್ ಗಳಿಗೆ ಇದರ ಹತ್ತುಪಟ್ಟು ವೀಕ್ಷಣೆ ಸಿಗಬಹುದೇನೋ.

ಆದರೆ ಈ ಚಿತ್ರ ಎಲ್ಲ ವ್ಯವಹಾರಿಕ ಸಿನಿಮಾಗಳ ಸಾಲಿಗೆ ಸೇರುವುದಿಲ್ಲ. ಇದರ ಪ್ಯಾಕೇಜಿಂಗ್ ಶೈಲಿಯೇ ತಾನು ಸಿನಿಮಾ ಮೂಲಕ ಸಿದ್ಧಾಂತವೊಂದನ್ನು ಮುಟ್ಟಿಸಲು ಹೊರಟಿದ್ದೇನೆ ಎಂಬುದನ್ನು ನಿರ್ಭಿಡೆಯಿಂದ ಹೇಳುತ್ತಿದೆ.

ಮಾಧ್ಯಮದಿಂದ ಶುರುವಾಗಿ ಇನ್ಯಾವುದೇ ಅಭಿವ್ಯಕ್ತಿ ವೇದಿಕೆಗಳಲ್ಲಿ ಬಲಪಂಥೀಯ ಎಂದು ಗುರುತಿಸಿಕೊಳ್ಳುವ ವಿಚಾರಗಳು ಅಸ್ಪೃಶ್ಯವಾಗಿರುವ ದಿನಗಳಿದ್ದವು. ಈಗಲೂ ರೈಟ್- ಲೆಫ್ಟ್ ಸಂಘರ್ಷ ಮುಂದುವರಿದಿದೆಯಾಗಲಿ, ರೈಟಿಸ್ಟ್ ಗೆ ಜಾಗವಿಲ್ಲ ಎಂಬ ಸ್ಥಿತಿಯಿಂದ ಮಾಧ್ಯಮ ಮುಕ್ತವಾಗುತ್ತಿದೆ. ಸಾಮಾಜಿಕ ಮಾಧ್ಯಮದಲ್ಲಂತೂ ರೈಟಿಸ್ಟ್ ವರ್ಗದಲ್ಲಿ ಗುರುತಿಸಿಕೊಂಡವರ ಬಲವೇ ಹೆಚ್ಚಿದೆ.

ಆದರೆ ಸಿನಿಮಾ? ಅಲ್ಲಿ ಐಡಿಯಾಲಜಿ ಕತೆ ಏನ್ಬಂತು, ವ್ಯವಹಾರಿಕತೆ ಅಷ್ಟೆ ಎಂತನ್ನಿಸಬಹುದು. ಆ ನಡುವೆಯೂ ಅಲ್ಲಿ ಸಿದ್ಧಾಂತದ ಜತೆ ಗುರುತಿಸಿಕೊಳ್ಳುವುದು ಎಂಬ ಗುಪ್ತಗಾಮಿನಿ ಇದ್ದೇ ಇದೆ. ದೊಡ್ಡ ನಿರ್ದೇಶಕರು ಅಂತ ಮಾಸ್ ಜತೆ ಕ್ಲಾಸ್ ನಲ್ಲೂ ಗುರುತಿಸಿಕೊಂಡವರೆಲ್ಲ ಕಡ್ಡಾಯವಾಗಿ ತಾವು ಎಡಕ್ಕೆ ಹೊರಳಿದವರೆಂದೇ ತೋರಿಸಿಕೊಂಡಿರುತ್ತಾರೆ. ರಂಗಭೂಮಿ ಹಿನ್ನೆಲೆಯಿಂದ ಬಂದಿದ್ದೇವೆ ಎನ್ನುವ ಕಲಾವಿದರಂತೂ ಮಾರ್ಕ್ಸ್, ಎಂಜೆಲ್ ಅಂತೆಲ್ಲ ಮಾತಾಡಿಯೇ ಆಡುತ್ತಾರೆ. ಯುನಿಟ್ ನಲ್ಲಿರುವವರಿಗೆ ಹಣ ಕೊಡಿಸದ ಬುದ್ಧಿಜೀವಿ ನಿರ್ದೇಶಕನೂ ಸಮಾನತೆ, ಶ್ರಮ ಸಂಸ್ಕೃತಿ, ಸೆಕ್ಯುಲರ್ ದೃಷ್ಟಿಕೋನ ಅಂತೆಲ್ಲ ಪುಂಗಿ ಊದುವುದನ್ನು ಕಲಿತೇ ಇರುತ್ತಾನೆ/ಳೆ.

ಹಾಗೆಂದೇ ನಮ್ಮಲ್ಲಿ ಗುಜರಾತ್ ಗಲಭೆ ಫಿಲ್ಮ್ ಮಾಡಿದವರಿದ್ದಾರೆ, ತುರ್ತು ಪರಿಸ್ಥಿತಿ ಬಗ್ಗೆ ಯೋಚಿಸುವುದಕ್ಕೆ ಹೋಗಿಲ್ಲ. ಸಿಖ್ ವಿರೋಧಿ ದಂಗೆ ಬಗ್ಗೆ ಎಲ್ಲರ ಸ್ಮೃತಿಯಲ್ಲುಳಿಯಬಹುದಾದ ಚಿತ್ರ ಬಂದಿಲ್ಲ. ಹೈದರ್ ತೆಗೆದು ಭೇಷ್ ಎನಿಸಿಕೊಂಡವರು ಕಾಶ್ಮೀರಿ ಪಂಡಿತರ ಬದುಕಿನ ಮೇಲೆ ಚಿತ್ರ ತೆಗೆಯುವ ಗೋಜಿಗೆ ಹೋಗಿಲ್ಲ.

ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಬಹುಮತದಲ್ಲಿಅಧಿಕಾರ ಹಿಡಿಯುತ್ತಿದ್ದಂತೆ, ಸೃಜನಶೀಲ ಪರಿಧಿಗಳಲ್ಲೂ ಇಂಥದೊಂದು ರೈಟಿಸ್ಟ್ ಜಾಗ ವಿಸ್ತಾರಗೊಂಡಂತಿದೆ. ಇದೀಗ ಸುದ್ದಿಯಲ್ಲಿರುವ ವಿವೇಕ್ ಅಗ್ನಿಹೋತ್ರಿ ಅವರ ಬಹುನಿರೀಕ್ಷಿತ ಚಿತ್ರ ‘ಬುದ್ಧ ಇನ್ ಅ ಟ್ರಾಫಿಕ್ ಜಾಮ್’ ಇಂಥ ಬಲಪಂಥೀಯ ನೆಲೆಯ ಕಲಾತ್ಮಕ ಅಭಿವ್ಯಕ್ತಿಗೆ ವ್ಯಾಪಕವಾಗಿ ಪ್ರಯತ್ನಿಸುತ್ತಿರುವ ರೀತಿಯಲ್ಲಿ ತನ್ನನ್ನು ಬಿಂಬಿಸಿಕೊಳ್ಳುತ್ತಿದೆ.

ಅನುಪಮ್ ಖೇರ್, ವಿವೇಕ್ ಅಗ್ನಿಹೋತ್ರಿ, ಅಶೋಕ್ ಪಂಡಿತ್ ಇವರೆಲ್ಲರ ರಾಜಕೀಯ ನಿಲುವು ಗುಟ್ಟಾಗಿದ್ದೇನಲ್ಲ. ಎಡಕ್ಕೆ ವಾಲಿರುವ ಚಿಂತಕರೆಲ್ಲ ಅಸಹಿಷ್ಣುತೆ ಚರ್ಚೆ ಹುಟ್ಟುಹಾಕಿ, ಪ್ರಶಸ್ತಿ ವಾಪಾಸಿನ ಮೂಲಕ ಕೇಂದ್ರ ಸರ್ಕಾರವನ್ನು ಹಣಿಯಲು ಹೊರಟಾಗ, ಇವರೆಲ್ಲ ಸಹಿಷ್ಣುತೆ ನಡಿಗೆ ಮಾಡಿದರು. ‘ಕಳೆದ ಎಂಟು- ಹತ್ತು ತಿಂಗಳಲ್ಲಿ ಅಸಹಿಷ್ಣುತೆ ಪ್ರಮಾಣ ಹೆಚ್ಚಿರುವುದು ಹೌದು’ ಎಂದು ಸ್ಪಷ್ಟವಾಗಿ ಬಿಜೆಪಿ ಸರ್ಕಾರದ ವಿರುದ್ಧ ನಿಲುವು ತಾಳುವ ಸ್ವಾತಂತ್ರ್ಯ ಆಮೀರ್ ಖಾನ್ ಗೆ ಇರುವಾಗ, ಇನ್ನೊಂದು ಗುಂಪಿಗೆ ಸರ್ಕಾರ ಪರ ನಿಲುವು ತಾಳುವ ಸ್ವಾತಂತ್ರ್ಯ ಇದ್ದೇ ಇದೆ.

ಮೇ 13ಕ್ಕೆ ಬಿಡುಗಡೆ ಆಗಲಿರುವ ಬುದ್ಧ ಇನ್ ಅ ಟ್ರಾಫಿಕ್ ಜಾಮ್ ನಲ್ಲಿ ಹೀಗೆ ರೈಟ್ ಸ್ಪೇಸ್ ನಲ್ಲಿ ಗುರುತಿಸಿಕೊಂಡಿರುವ ಮುಖಗಳೇ ಹೆಚ್ಚಿವೆ. ಈ ಸಿನಿಮಾವನ್ನು ವ್ಯಾವಹಾರಿಕ ನೆಲೆಯಲ್ಲಿ ಮಾತ್ರವಲ್ಲದೇ, ಸಂವಾದವಾಗಿಯೂ ಬೆಳೆಸುವ ಉದ್ದೇಶ ಸ್ಪಷ್ಟವಾಗಿದೆ. ಹಾಗೆಂದೇ ಇದು ಬಿಡುಗಡೆಗೆ ಮುನ್ನ ಜೆ ಎನ್ ಯು ಸೇರಿದಂತೆ ಹಲವು ವಿವಿ, ಶಿಕ್ಷಣ ಸಂಸ್ಥೆಗಳಲ್ಲಿ ಪ್ರದರ್ಶನಗೊಳ್ಳುತ್ತಿದೆ. ಹಲವು ಅಂತಾರಾಷ್ಟ್ರೀಯ ಚಿತ್ರೋತ್ಸವಗಳಿಗೆ ಹೋಗಿ ಪ್ರಶಸ್ತಿಯನ್ನೂ ಬಾಚಿದೆ.

ನಕ್ಸಲಿಸಂ ಪಿಡುಗು ಹಾಗೂ ಬುದ್ಧಿಜೀವಿ ವರ್ಗ ಅದರೊಂದಿಗೆ ಹೊಂದಿರುವ ನಂಟು ಇಂಥ ಆಯಾಮಗಳನ್ನೆಲ್ಲ ಚಿತ್ರವು ವಿಮರ್ಶೆಗೆ ಒಳಪಡಿಸಿದೆ ಎಂಬ ಅಂಶಗಳು ಸಂವಾದಗಳಲ್ಲಿ ವ್ಯಕ್ತವಾಗಿವೆ. ಜೆ ಎನ್ ಯು ಪ್ರೀಮಿಯರ್ ಸಂದರ್ಭದಲ್ಲಿ ನಿರ್ದೇಶಕ ಅಗ್ನಿಹೋತ್ರಿ ಹೇಳಿರುವ ಮಾತುಗಳು ಗಮನಾರ್ಹ- ‘ನಮಗೆ ಆಜಾದಿ ಬೇಕಿರುವುದು ಬ್ರಾಹ್ಮಣವಾದ, ಮನುವಾದಗಳಿಂದ ಅಲ್ಲ. ಏಕೆಂದರೆ ಅವೆಲ್ಲ ಅದಾಗಲೇ ಅಪ್ರಸ್ತುತವಾಗಿಬಿಟ್ಟಿವೆ. ಇವತ್ತು ಆಜಾದಿ ಬೇಕಿರುವುದು ಅದಕ್ಷತೆ, ಅಸಾಮರ್ಥ್ಯ ಇಂಥವುಗಳಿಂದ. ಇಂಥವನ್ನು ಕಡಿಮೆಗೊಳಿಸಿ ಸಂಪತ್ತು ಸೃಷ್ಟಿ ಹೇಗೆ ಸಾಧ್ಯ, ಅನ್ವೇಷಣೆಗಳು ಹೇಗೆ ಸಾಧ್ಯ ಎಂಬ ಬಗ್ಗೆ ವಿದ್ಯಾರ್ಥಿಗಳು ತಲೆಕೆಡಿಸಿಕೊಳ್ಳಬೇಕೇ ಹೊರತು ಇನ್ಯಾವ ವಾದಗಳ ಬಗ್ಗೆ ಅಲ್ಲ..’

ಬುದ್ಧ ಇನ್ ಅ ಟ್ರಾಫಿಕ್ ಜಾಮ್ ಪ್ರದರ್ಶಿಸಿ ನಡೆಸಿದ ಸಂವಾದಗಳಲ್ಲಿ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಒಂದು ಮಾತನ್ನು ಪುನರುಚ್ಛರಿಸುತ್ತ ಬಂದಿದ್ದಾರೆ. ಅದೆಂದರೆ, ತಾವು ಈ ಬಗೆಯ ಭಿನ್ನ ವ್ಯಾಖ್ಯಾನವನ್ನು ಚಿತ್ರದಲ್ಲಿ ತಂದಿರುವುದನ್ನು ನೋಡುತ್ತಲೇ ಈ ಮೊದಲು ಇದರ ವಿತರಣೆಗೆ ಒಪ್ಪಿಕೊಂಡಿದ್ದ ಹಲವರು ಹಿಂದೆ ಸರಿದರು ಹಾಗೂ ಇದನ್ನು ನಿಲ್ಲಿಸುವುದಕ್ಕೆ ಹಲವು ಬಗೆಯಲ್ಲಿ ಯತ್ನಗಳು ಆದವು ಎಂಬುದನ್ನು ಒತ್ತಿ ಹೇಳಿದ್ದಾರೆ.

ವಿವೇಕ್ ಅಗ್ನಿಹೋತ್ರಿ ಆಗಲಿ, ಅನುಪಮ್ ಖೇರ್ ಹಾಗೂ ಅಶೋಕ್ ಪಂಡಿತರು ರಾಜಕೀಯ ಅಭಿಪ್ರಾಯ ವ್ಯಕ್ತಪಡಿಸುವುದಕ್ಕೆ ಮುಜುಗರ ಇಟ್ಟುಕೊಂಡವರಲ್ಲ. ಅದು ಇಂದಿನ ಮೋದಿ ಸರ್ಕಾರದ ನಿಲುವುಗಳಿಗೂ ಹೊಂದುವಂಥದ್ದು. ಬಹಳಷ್ಟು ವಿವಾದಗಳಿಗೆ ಪ್ರತಿಕ್ರಿಯಿಸುವುದರಿಂದ ದೂರವೇ ಉಳಿದಿರುವ ಪ್ರಧಾನಿ ನರೇಂದ್ರ ಮೋದಿ, ಬಂಡವಾಳ ಹೂಡಿಕೆಗಳ ಕ್ರೋಢೀಕರಣದಲ್ಲೇ ಹೆಚ್ಚು ವ್ಯಸ್ತರಾಗಿದ್ದಾರೆ. ವಿವೇಕ್ ತಂಡವೂ ಈ ಸಂಪತ್ತು ಸೃಷ್ಟಿ, ಉದ್ಯಮಶೀಲತೆ ಅಗತ್ಯವನ್ನೇ ತಮ್ಮ ಪ್ರಮುಖ ವ್ಯಾಖ್ಯಾನ ಮಾದರಿಯನ್ನಾಗಿಸಿಕೊಂಡಿರುವ ಸುಳಿವುಗಳು ಸಿಗುತ್ತಿವೆ.

ಉದಾಹರಣೆಗೆ, ಬುದ್ಧ ಇನ್ ಅ ಟ್ರಾಫಿಕ್ ಜಾಮ್ ನ ಟೀಸರ್ ಗಳಲ್ಲಿ ವಿಭಿನ್ನ ಜಾಡು ಅನುಸರಿಸಿರುವ ನಿರ್ದೇಶಕರು, ಯುವ ಉದ್ಯಮಶೀಲನೊಬ್ಬನನ್ನು ಮಾತಾಡಲು ಬಿಟ್ಟಿದ್ದಾರೆ. ಎಲ್ಲರೂ ತನ್ನನ್ನು ಸಂಶಯಿಸಿ ಜರೆಯುತ್ತಿದ್ದಾಗಲೂ ತಾನು ಹೇಗೆ ಅನ್ವೇಷಣೆಯಲ್ಲಿ ತೊಡಗಿಕೊಂಡೆ, ಸಸ್ಯದಿಂದ ಶಕ್ತಿ ಉತ್ಪಾದಿಸುವ ಐಡಿಯಾ ತನ್ನನ್ನು ಹೇಗೆ ಒಳಗೆಳೆದುಕೊಂಡಿತು ಎಂಬುದನ್ನೆಲ್ಲ ಈತ ವಿವರಿಸುತ್ತಾ ಹೋಗುತ್ತಾನೆ.

ಇದೊಂದೇ ಅಲ್ಲ, ಐಆ್ಯಮ್ ಬುದ್ಧ ಎಂಬ ಹ್ಯಾಶ್ ಟ್ಯಾಗ್ ನಾಮಧೇಯದ ಯೂಟ್ಯೂಬ್ ಚಾನೆಲ್ ಅನ್ನೇ ರೂಪಿಸಿಕೊಂಡು ಅದರಲ್ಲಿ ಐಡಿಯಾಗಳ ಭಾರತವನ್ನು ಬಿಂಬಿಸುತ್ತ ಕೊನೆಯಲ್ಲಿ ಚಿತ್ರದ ಬಗ್ಗೆಯೂ ಹೇಳುವ ವಿಭಿನ್ನ ಪ್ರಚಾರಾಂದೋಲನ ನಡೆಸುತ್ತಿದ್ದಾರೆ ವಿವೇಕ್ ಅಗ್ನಿಹೋತ್ರಿ. ಲಿಫ್ಟಿನಲ್ಲಿ ತನ್ನ ಮೇಲಾದ ಲೈಂಗಿಕ ದೌರ್ಜನ್ಯ ಹೇಳಿಕೊಳ್ಳುತ್ತಲೇ, ನಾನು ವ್ಯಭಿಚಾರಿಯಲ್ಲ ಬದಲಿಗೆ ಭಾರತದ ಭವಿಷ್ಯದ ಉದ್ದಿಮೆ ಸಂಘಟಿಸುವವಳು ಅಂತ ಹೆಮ್ಮೆಯಿಂದ ಹೇಳಿಕೊಳ್ಳುವ ಮಹಿಳೆ ಇಲ್ಲಿದ್ದಾಳೆ. ಕನ್ಹಯ್ಯಾ ಕುಮಾರನ ಘೋಷಣೆ ರಾಜಕೀಯವನ್ನು ವ್ಯಂಗ್ಯ ಮಾಡಿ, ವಿಂಡೋ ಸೀಟ್ ಕಿ ಆಜಾದಿ ಅಂತ ಯಾತ್ರಾ ಡಾಟ್ ಕಾಮ್ ಗೆ ಜಾಹೀರಾತು ಮಾಡಿಕೊಟ್ಟ ಇಬ್ಬರು ಹುಡುಗರು ತಮ್ಮ ಉದ್ಯಮ ಸಾಹಸಗಳನ್ನು ಹೇಳಿಕೊಂಡಿದ್ದಾರೆ.

ಇವರೆಲ್ಲ ಕೊನೆಯಲ್ಲಿ ಐಆ್ಯಮ್ ಬುದ್ಧ ಎನ್ನುತ್ತಾರೆ. ಎಲ್ಲ ಗಲಾಟೆಗಳಿಗೆ ತಲೆಕೆಡಿಸಿಕೊಳ್ಳದೇ ಬಂಡವಾಳ ಸೃಷ್ಟಿ ಕಾರ್ಯದಲ್ಲಿ ಧ್ಯಾನಸ್ಥರು ನಾವು ಎಂಬ ಅರ್ಥ ಹೊರಡಿಸುವಂತೆ…

ಅರ್ಥಾತ್…

ಸಮಾನ ಹಂಚಿಕೆ ಎಂದೆಲ್ಲ ಮಾರ್ಕ್ಸ್ ವಾದಿ ಪ್ರತಿಪಾದನೆಗೆ ಇಳಿಯುವುದಕ್ಕೆ ಮೊದಲು ಸಂಪತ್ತು ಇರಬೇಕು. ರೊಟ್ಟಿ ಇದೆ ಅಂತಾದಮೇಲಷ್ಟೇ ಅದನ್ನು ಹಂಚುವ ಮಾತು. ಹೀಗಾಗಿ ಇಂಥ ಸೃಷ್ಟಿಶೀಲ ಐಡಿಯಾಗಳಿಗೆ ವಿದ್ಯಾರ್ಥಿಗಳು ತೆರೆದುಕೊಳ್ಳಬೇಕೇ ಹೊರತು, ಘೋಷಣೆಗಳನ್ನಷ್ಟೇ ಕೂಗಿಸುವ ಇನ್ಯಾವುದೋ ಕಾಲದ ಐಡಿಯಾಗಳಿಗಲ್ಲ ಅಂತ ಪ್ರತಿಪಾದಿಸುವುದಕ್ಕೆ ಹೊರಟಿರುವುದು ಸ್ಪಷ್ಟವಾಗಿದೆ.

ನಕ್ಸಲಿಸಂ ಕೇಂದ್ರಿಕರಿಸಿಕೊಂಡು ಸಂವಾದಕ್ಕಿಳಿಯುತ್ತಿರುವ ‘ಬುದ್ಧ ಇನ್ ಅ ಟ್ರಾಫಿಕ್ ಜಾಮ್’, ಮುಂದೆ ಹಲವು ಚಿತ್ರಗಳು ರಾಜಕೀಯ ಚರ್ಚೆಯೊಂದನ್ನು ಎತ್ತಿಕೊಂಡು ಅರಳುವುದಕ್ಕೆ ಪ್ರೇರೇಪಿಸಬಹುದೇನೋ. ಮುಖ್ಯವಾಗಿ, ಸಿನಿಮಾ ಮೀಮಾಂಸೆ- ರಂಗಭೂಮಿ ಚರ್ಚೆಗಳೆಲ್ಲ ಎಡಕ್ಕೇ ವಾಲಿಕೊಂಡಿರಬೇಕಾದ ವಾತಾವರಣ ಬದಲಾಗಲಿದೆ ಎಂಬ ಸೂಚನೆಯನ್ನಂತೂ ಕೊಡುತ್ತಿದೆ ಬುದ್ಧ ಇನ್ ಅ ಟ್ರಾಫಿಕ್ ಜಾಮ್.

Leave a Reply