ಸುದ್ದಿಸಂತೆ: ಸಿಎಂ ಪುತ್ರನ ಸ್ನೇಹಿತಗೆ ‘ಭೂಮಿಭಾಗ್ಯ’, ಮಲ್ಯ ಪಾಸ್ಪೋರ್ಟ್ ಅಮಾನತು, ಬಿಜೆಪಿಗೆ ಮತ ಹಾಕಿದ್ದಕ್ಕೆ ತಲಾಖ್!

ರಾಮ ನವಮಿ ಪ್ರಯುಕ್ತ ಬೆಂಗಳೂರಿನ ಮೆಜೆಸ್ಟಿಕ್ ಬಳಿ ಮಜ್ಜಿಗೆ ಹಂಚಿದ ವೇಷಧಾರಿಗಳು

ಸಿಎಂ ಪುತ್ರನ ಸ್ನೇಹಿತನಿಗೆ ಚದರಡಿಗೆ 20 ಸಾವಿರ ರುಪಾಯಿ ಇರೋ ಜಾಗ ಬರೀ 20 ರುಪಾಯಿಯಂತೆ ಬಿಕರಿ!

ಡಿಜಿಟಲ್ ಕನ್ನಡ ಟೀಮ್

ಮುಖ್ಯಮಂತ್ರಿ ಪುತ್ರ ಡಾ. ಯತೀಂದ್ರ ಪಾಲುದಾರಿಕೆಯ ಮ್ಯಾಟ್ರಿಕ್ಸ್ ಕಂಪನಿಗೆ ಲ್ಯಾಬ್ ಗುತ್ತಿಗೆ ಬೆನ್ನಲ್ಲೇ ಇದೀಗ ಸಿದ್ದರಾಮಯ್ಯ ಸೂಚನೆ ಮೇರೆಗೆ ಬೆಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಬದಲಿ ನಿವೇಶನಗಳ ಹಂಚಿಕೆಯಲ್ಲಿ ನೂರಾರು ಕೋಟಿ ರುಪಾಯಿ ಅವ್ಯವಹಾರ ನಡೆದಿರುವ ಕೂಗು ಕೇಳಿಬಂದಿದೆ.

ಸಿಎಂ ಪುತ್ರನ ಸ್ನೇಹಿತ ಡಾ. ರಾಜೇಶ್ ಗೌಡ ಅವರಿಗೆ ಚದರಡಿಗೆ 20 ಸಾವಿರ ಬೆಳೆ ಬಾಳುವ ಭೂಮಿಯನ್ನು ಚದರಡಿಗೆ ಕೇವಲ 20 ರುಪಾಯಿಯಂತೆ ಒಟ್ಟು 2,32,08 ಚದರಡಿ ಭೂಮಿಯನ್ನು ಪರಭಾರೆ ಮಾಡಿಕೊಡಲಾಗಿದೆ. ಇದೂ ಬದಲಿ ನಿವೇಶನ ಅವ್ಯವಹಾರವೇ. ಬದಲಿ ನಿವೇಶನ ನೀಡಲು ಕಾನೂನಿನಲ್ಲಿ ಅವಕಾಶ ಇಲ್ಲ, ಈಗಾಗಲೇ ಆ ಭೂಮಿಗೆ ಪರಿಹಾರ ನೀಡಲಾಗಿದೆ ಎಂಬ ಕಾನೂನು ಸಲಹೆಯನ್ನು ಧಿಕ್ಕರಿಸಲಾಗಿದೆ.

ಅದೇ ರೀತಿ 150 ಕೋಟಿ ರೂ. ಮೌಲ್ಯದ ನಿವೇಶನಗಳು ಬದಲಿ ನಿವೇಶನಗಳ ರೂಪದಲ್ಲಿ ಮುಖ್ಯಮಂತ್ರಿಯಾವರ ಆಪ್ತೇಷ್ಟರ ಪಾಲಾಗಿವೆ. ಬಡಾವಣೆ ನಿರ್ಮಾಣಕ್ಕಾಗಿ ಜಮೀನು ಕಳೆದುಕೊಂಡ ರೈತರಿಗೆ ದಕ್ಕಬೇಕಾದ ನಿವೇಶನಗಳು ಭೂ ಮಾಫಿಯಾ ಹಾಗೂ ರಿಯಲ್ ಎಸ್ಟೇಟ್ ಕುಳಗಳ ಪಾಲಾಗಿವೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಜೆಡಿಎಸ್ ಸದಸ್ಯ ಹನುಮಂತೇಗೌಡ ಇದೇ ರೀತಿ 100 ಕ್ಕೂ ನಿವೇಶನಗಳನ್ನು ಪಡೆದಿದ್ದಾರೆ. ಇದೇ ರೀತಿ ಬೇರೆ ಬೇರೆಯವರು ಭೂಮಿ ಕಳೆದುಕೊಂಡ ಸೋಗಿನಲ್ಲಿ ಬದಲಿ ನಿವೇಶನ ಪಡೆದಿದ್ದಾರೆ ಎಂದು ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಸುದ್ದಿಗೋಷ್ಠಿಯಲ್ಲಿ ಕೆಲ ದಾಖಲೆಗಳನ್ನು ಬಿಡುಗಡೆ ಮಾಡಿ ಶುಕ್ರವಾರ ಆರೋಪಿಸಿದರು.

ಹೊಸ ಬಡಾವಣೆಗಳಲ್ಲಿ ಮಂಜೂರು ಮಾಡಬೇಕಿದ್ದ ನಿವೇಶನಗಳನ್ನು ಹಳೆ ಬಡಾವಣೆಗಳಿಗೆ ಬದಲಿಸಿ ಕೊಡಲಾಗುತ್ತಿದೆ. ಏಕೆಂದರೆ ಹಳೇ ಬಡಾವಣೆಗಳಲ್ಲಿ ಭೂಮಿ ಬೆಲೆ ಚದರಡಿಗೆ 8 ರಿಂದ 10 ಸಾವಿರ ರುಪಾಯಿಗಳವರೆಗೆ ಇದೆ. ಹೊಸ ಬಡಾವಣೆಗಳ ಬೆಲೆ ಕಡಿಮೆ. ಹೀಗಾಗಿ ಬದಲಿ ನಿವೇಶನಗಳ ಮಂಜೂರು ಮೂಲಕ ನೂರಾರು ಕೋಟಿ ರುಪಾಯಿ ಅವ್ಯವಹಾರ ನಡೆಸಲಾಗುತ್ತಿದೆ. ಹೀಗಾಗಿ ಬದಲಿ ನಿವೇಶನಗಳನ್ನು ತಕ್ಷಣ ರದ್ದು ಮಾಡಿ, ಹಗರಣದ ಬಗ್ಗೆ ಸಮಗ್ರ ತನಿಖೆ ಮಾಡಬೇಕು ಎಂದು ಅವರು ಆಗ್ರಹಿಸಿದರು.

ಪೆಟ್ರೋಲ್ ₹ 0.70, ಡಿಸೇಲ್ ₹ 1.30 ಇಳಿಕೆ

ಪೆಟ್ರೋಲ್ ₹ 0.70, ಡಿಸೇಲ್ ₹ 1.30 ಇಳಿಕೆ. ಕಳೆದೆರಡು ಸಲದಿಂದ ಏರಿಕೆಯ ಹಾದಿ ಹಿಡಿದಿದ್ದ ಇಂಧನ ದರ ಕಡಿಮೆಯಾಗಿರುವುದು ಸಹಜವಾಗಿಯೇ ಸವಾರರಿಗೆ ಖುಷಿ ನೀಡಿದೆ. ಪರಿಷ್ಕೃತ ದರ ಶುಕ್ರವಾರ ಮಧ್ಯರಾತ್ರಿಯಿಂದಲೇ ಅನ್ವಯವಾಗಲಿದೆ. ಈ ಹಿಂದೆ ಏಪ್ರಿಲ್ 4 ರಂದು ಇಂಧನ ದರ ಏರಿಕೆಯಾಗಿತ್ತು. ಇದಕ್ಕೂ ಮುನ್ನ ರಾಜ್ಯ ಸರ್ಕಾರದ ಬಜೆಟ್ ನಲ್ಲಿ ಘೋಷಿಸಿದಂತೆ ಏಪ್ರಿಲ್ 1 ರಿಂದ ಜಾರಿಗೆ ಬಂದ ಇಂಧನದ ಮೇಲಿನ ಅಬಕಾರಿ ಸುಂಕ, ಇವೆರಡು ದರಗಳು ಕಡಿಮೆ ಅವಧಿಯಲ್ಲಿ ಸವಾರರ ಮೇಲೆ ಹೆಚ್ಚುವರಿ ಹೊರೆ ಬಿದ್ದಂತಾಗಿತ್ತು.

 

ಮುಂಗಾರು ಮಳೆ ಚೆನ್ನಾಗಾಗಿ, ಹಣದುಬ್ಬರ ಇಳಿದ್ರೆ ಮತ್ತೆ ರೇಪೋ ದರ ಕಡಿತ!

ಈ ಬಾರಿಯ ಮುಂಗಾರು ಮಳೆ ಉತ್ತಮವಾಗಿ ಬಿದ್ದು, ಹಣದುಬ್ಬರ ಇಳಿಕೆ ಕಂಡರೆ, ಬಡ್ಡಿದರ ಕಡಿತಗೊಳ್ಳುವ ಸಂಭವ ಇದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿ ಎ) ನ ಗೌವರ್ನರ್ ರಘುರಾಮ್ ರಾಜನ್ ತಿಳಿಸಿದ್ದಾರೆ. ಸತತ ಎರಡು ವರ್ಷಗಳಿಂದ ಮುಂಗಾರು ಮಳೆ ಕುಂಟಿತಗೊಂಡಿದ್ದು, ಪ್ರಸಕ್ತ ಸಾಲಿನ ಮುಂಗಾರು ಮಳೆಯ ಆರಂಭವನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವುದಾಗಿ ತಿಳಿಸಿದ್ದಾರೆ. ಈ ತಿಂಗಳ ಪ್ರಾರಂಭದಲ್ಲಿ ರೆಪೋ ದರವನ್ನು ಶೇ 0.25 ರಷ್ಟು ಕಡಿತಗೊಳಿಸಿ, ಶೇ 6.5ಕ್ಕೆ ನಿಗದಿ ಮಾಡಲಾಗಿದೆ.

ಮಲ್ಯ ಪಾರ್ಸ್ ಪೋರ್ಟ್ ಅಮಾನತುಗೊಳಿಸಿದ ಕೇಂದ್ರ ಸರ್ಕಾರ!

ಬ್ಯಾಂಕುಗಳಿಂದ ಪಡೆದ ಸಾಲವನ್ನು ತೀರಿಸದೇ ದೇಶ ಬಿಟ್ಟಿರುವ ವಿಜಯ್ ಮಲ್ಯರ ಪಾರ್ಸ್ ಪೋರ್ಟ್ಅನ್ನು ಭಾರತ ಸರ್ಕಾರ ಶುಕ್ರವಾರ ಅಮಾನತುಗೊಳಿಸಿದೆ. ಮುಂಬೈಗೆ ವಾಪಸ್ಸಾಗಿ ವಿಚಾರಣೆ ಎದುರಿಸುವಂತೆ ಕೇಂದ್ರ ಹಲವು ಬಾರಿ ಮಲ್ಯಗೆ ನೋಟಿಸ್ ನೀಡಿತ್ತು. ನಿಯಮಗಳನ್ನು ಉಲ್ಲಂಘಿಸಿರುವ ಕಾರಣ ಮಲ್ಯ ಪಾರ್ಸ್ ಪೋರ್ಟ್ ಅನ್ನು ಅಮಾನತ್ತು ಮಾಡಲು ಜಾರಿ ನಿರ್ದೇಶನಾಲಯ (ಇಡಿ) ವಿದೇಶಾಂಗ ಸಚಿವಾಲಕ್ಕೆ ಶಿಫಾರಸ್ಸು ಮಾಡಿತ್ತು. ಇದರನ್ವಯ ಕ್ರಮ ಕೈಗೊಳ್ಳಲಾಗಿದೆ. ಇದರ ಪರಿಣಾಮ ಎಂದರೆ ವಿಜಯ್ ಮಲ್ಯ ಭಾರತಕ್ಕೆ ಹಿಂತಿರುಗುವುದನ್ನು ಹೊರತುಪಡಿಸಿ ಬೇರೆ ಇನ್ಯಾವ ದೇಶಕ್ಕೂ ಪ್ರಯಾಣಿಸಲು ಆಗುವುದಿಲ್ಲ.

ಸಮ-ಬೆಸ ಉಲ್ಲಂಘನೆ, 500 ಕ್ಕೂ ಹೆಚ್ಚು ಕಾರುಗಳಿಗೆ ಭಾರಿ ಪ್ರಮಾಣದ ದಂಡ

ದೆಹಲಿಯಲ್ಲಿ ಎರಡನೆ ಬಾರಿಗೆ ಸಮ ಬೆಸ ಸಂಖ್ಯೆ ಆಧಾರಿತ ಸಂಚಾರ ನಿಯಮ ಜಾರಿಗೆ ಬಂದಿದ್ದು, ನಿಯಮ ಉಲ್ಲಂಘಿಸಿದ 500ಕ್ಕೂ ಹೆಚ್ಚು ಕಾರುಗಳಿಗೆ ದಂಡ ವಿಧಿಸಲಾಗಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ತೀವ್ರವಾಗಿ ಹದಗೆಟ್ಟಿದ್ದ ವಾಯುಮಾಲಿನ್ಯವನ್ನು ಹತೋಟಿಗೆ ತರಲು ಕೇಜ್ರಿವಾಲ್ ನೇತೃತ್ವದ ಎಎಪಿ ಸರ್ಕಾರ ಈ ನಿಯಮವನ್ನು ಜಾರಿಗೆ ತಂದಿದೆ. ಸಂಚಾರಿ ಪೊಲೀಸರು ಕೇವಲ 5 ಗಂಟೆಯ ಕಾರ್ಯಚರಣೆಯಲ್ಲಿ ನಿಯಮ ಉಲ್ಲಂಘಿಸಿದ 511 ಕಾರುಗಳಿಗೆ ತಲಾ ₹ 2 ಸಾವಿರ ದಷ್ಟು ಭಾರಿ ಪ್ರಮಾಣದ ದಂಡ ವಿಧಿಸಿದ್ದಾರೆ. ಕಾರ್ಯಾಚರಣೆಗೆ 2 ಸಾವಿರ ಸಂಚಾರಿ ಸಿಬ್ಬಂದಿ, 580 ಜಾರಿ ಅಧಿಕಾರಿಗಳನ್ನು ಮತ್ತು 5 ಸಾವಿರಕ್ಕೂ ನಾಗರೀಕ ರಕ್ಷಣಾ ಸ್ವಯಂಸೇವಕರನ್ನು ನಿಯೋಜಿಸಲಾಗಿತ್ತು. ಈ ನಿಯಮ ಏಪ್ರಿಲ್ 30 ರವರೆಗೆ ಜಾರಿಯಲ್ಲಿ ಇರಲಿದೆ.

ಅಸ್ಸಾಂನಲ್ಲಿ ಕಾಂಗ್ರೆಸ್ ಬದಲಿಗೆ ಬಿಜೆಪಿಗೆ ಓಟು ಹಾಕಿದ ಪತ್ನಿಗೆ ತಲಾಖ್ ನೀಡಿದ ಗಂಡ !

ಅಸ್ಸಾಮಿನಲ್ಲಿ ಧರ್ಮದ ಆಧಾರದಲ್ಲಿ ರಾಜಕೀಯ ಧ್ರುವೀಕರಣ ಎಷ್ಟರಮಟ್ಟಿಗಿದೆ ಹಾಗೂ ಮುಸ್ಲಿಂ ಸಮುದಾಯದ ಕೆಲವರ ಮನಸ್ಥಿತಿ ಯಾವ ಮಟ್ಟದಲ್ಲಿದೆ ಎಂಬುದಕ್ಕೆ ಈ ಘಟನೆಯೇ ಕನ್ನಡಿ. 10 ವರ್ಷಗಳ ಸಾಂಸಾರಿಕ ಜೀವನ ಕೊನೆಗೊಳ್ಳಲು ಒಂದು ಮತ ಕಾರಣವಾಗಿರೋದು ನಿಜಕ್ಕೂ ಬೇಸರದ ಸಂಗತಿ. ಸೋನಿಟ್ ಪುರ ಜಿಲ್ಲೆಯ ದೊನಾಮ್ ಅದ್ದಹಟಿ ಹಳ್ಳಿಯ ಅನುದ್ದೀನ್ ಎಂಬಾತ ಅಸ್ಸಾಂನಲ್ಲಿ ನಡೆಯುತ್ತಿರುವ ವಿಧಾನಸಭೆ ಚುನಾವಣೆಯಲ್ಲಿ ತನ್ನ ಪತ್ನಿ ದಿಲ್ ವಾರಾ ಬೇಗಂ ಕಾಂಗ್ರೆಸ್ ಬದಲಿಗೆ ಬಿಜೆಪಿಗೆ ಮತ ಹಾಕಿದ್ದಕೆ ವಿಚ್ಛೇದನ ನೀಡಿದ್ದಾನೆ. ಹಳ್ಳಿಯ ಹಿರಿಯರೆಲ್ಲರೂ ಹಳ್ಳಿಯ ಎಲ್ಲಾ ಮತಗಳನ್ನು ಕಾಂಗ್ರೆಸ್ ಗೆ ಹಾಕುವ ಒಪ್ಪಂದ ಮಾಡಿಕೊಂಡಿದ್ದರು.  ಆದರೆ ಬೇಗಂ ಬಿಜೆಪಿಗೆ ಮತ ಚಲಾಯಿಸಿರುವುದಾಗಿ ತನ್ನ ಗಂಡನೊಂದಿಗೆ ಹೇಳಿಕೊಂಡ ಪರಿಣಾಮ ಈ ಘಟನೆ ನಡೆದಿದೆ.

Leave a Reply