ಸ್ಟಾರ್ಟ್ ಅಪ್ ಭಾರತಕ್ಕೊಬ್ಬ ಶ್ರೀರಾಮ!

ಮಾಯಾವಿ

ಇವತ್ತಿಗೆ ಮಿಸ್ಟರ್ ಶ್ರೀರಾಮ್ ಎಲ್ಲರ ಕಣ್ಣಿಗೆ ಯಶಸ್ವಿ ಮಾದರಿ. ಹಾಗಂತ ಆತನ ಬಗ್ಗೆ ವಿವಾದ- ತಕರಾರುಗಳಿಲ್ಲ ಅಂತೇನಲ್ಲ. ಆದರೂ ಕೌಶಲ, ಏನನ್ನಾದರೂ ಕಟ್ಟಿ ನಿಲ್ಲಿಸುವ ಉದ್ಯಮಶೀಲತೆ ಇಂಥವನ್ನೆಲ್ಲ ಪೊರೆದುಕೊಂಡಿರುವ ಸಂಸ್ಥೆಗಳು- ವ್ಯಕ್ತಿಗಳೆಲ್ಲ ಆತನನ್ನು ಉದಾಹರಿಸಲೇಬೇಕು.

ಇವನ್ನೆಲ್ಲ ಗಮನಿಸುತ್ತಿರುವ ಶ್ರೀರಾಮಗೆ ಕೆಲವೊಮ್ಮೆ ಪಿಚ್ಚೆನಿಸುತ್ತದೆ. ತನ್ನನ್ನು ಹೊಗಳುತ್ತಿರುವವರಲ್ಲಿ ಅನೇಕರು ಸಮಗ್ರ ಮಾರ್ಗದ ಬಗ್ಗೆ ಬೆರಗಿರಿಸಿಕೊಳ್ಳದೇ, ಕೊನೆಯಲ್ಲಿ ಯಶಸ್ಸಾದ ಎಂಬ ಆ ಕೊನೆಯ ವಿಜೃಂಭಣೆಯನ್ನು ಮಾತ್ರವೇ ಆರಾಧಿಸುತ್ತಿದ್ದಾರಲ್ಲ ಅಂತ.

ಮಿಸ್ಟರ್ ಶ್ರೀರಾಮ್ ಅವರ ಯಶೋಗಾಥೆಯನ್ನು ಹಲವು ಮಜಲುಗಳಲ್ಲಿ ವಿವರಿಸಬಹುದಾದರೂ ಇವತ್ತಿನ ಗಮನ ಛಿದ್ರಿತ- ಗಮನ ಸಂಕುಚಿತ ಜಮಾನಾಕ್ಕೆ ಸಂಕ್ಷಿಪ್ತದಲ್ಲಿ ಹೇಳಬೇಕಾಗುತ್ತದೆ.

ಇನ್ನೇನು ತಂದೆಯ ಸಾಮ್ರಾಜ್ಯ ವಹಿಸಿಕೊಳ್ಳಬೇಕಿದ್ದ ಶ್ರೀರಾಮ್, ಯಾವ್ಯಾವುದೋ ಕೌಟುಂಬಿಕ ಜಟಿಲತೆಗಳ ಸುಳಿಗೆ ಸಿಕ್ಕು ತಾನು ವಾರಸುದಾರಿಕೆ ವಹಿಸಬೇಕಾದ ಕಂಪನಿಯಿಂದಲೇ ಏಕಾಏಕಿ ಹೊರಬೀಳಬೇಕಾಯಿತು. ಹಾಗೆ ಹೊರಬಿದ್ದಾಗ ಈತನ ಬಳಿ ತಂದೆಯ ಕಂಪನಿಯ ಪುಡಿ ಶೇರುಗಳೂ ಇರಲಿಲ್ಲ. ಒದಗಿಬಂದ ಬಲವೆಂದರೆ ಹೆಂಡತಿ ಮತ್ತು ತಮ್ಮ, ಅದ್ಯಾವ ಕಷ್ಟದ ಹೊಸಮಾರ್ಗವಾದರೂ ನಿನ್ನೊಂದಿಗಿರುತ್ತೇವೆ ಅಂತ ಜತೆಗಾದದ್ದು.

ಒಂದು ಪ್ರತಿಷ್ಠಾಪಿತ ಬ್ರಾಂಡ್ ನೇತೃತ್ವ ವಹಿಸುವುದಕ್ಕೆ ಜವಾಬ್ದಾರಿಯ ಭಾರವಿರುತ್ತದೆ. ಆದರೆ ಮೂಲಸೌಕರ್ಯಗಳೆಲ್ಲ ಅದಾಗಲೇ ಸ್ಥಾಪಿತಗೊಂಡಿರುತ್ತವಾದ್ದರಿಂದ ಅಷ್ಟರಮಟ್ಟಿಗೆ ಸರಳ ಅಂತಲೂ ಹೇಳಬಹುದು. ಇದಕ್ಕೆ ವ್ಯತಿರಿಕ್ತವಾದದ್ದು ನವೋದ್ದಿಮೆ. ಅಲ್ಲಿಸೌಕರ್ಯಗಳನ್ನೆಲ್ಲ ನೆಲೆಗೊಳಿಸಬೇಕಾದ ಕೆಲಸವೇ ಮೂಲದ್ದು. ಇಲ್ಲಿ ಶ್ರಮ ಮತ್ತು ಅಗಾಧ ಸಹನೆಯೇ ಬಂಡವಾಳ. ಅದಾಗಲೇ ಸ್ಥಾಪಿತ ಕಂಪನಿಯಲ್ಲಿ ಕಾರ್ಯನಿರ್ವಹಿಸುವಾಗ ಯಾರಿಗೋ ಏನನ್ನೋ ಕೊಡುತ್ತಿದ್ದೇವೆ ಎಂಬ ಭಾವನೆ ಬಂದುಬಿಟ್ಟಿರುತ್ತದೆ. ಇಲ್ಲಿ ಹಾಗಲ್ಲ… ಏನೋ ಕಲಿಯುತ್ತಿದ್ದೇನೆ, ಅಪರಿಚಿತವೇ ಆಗಿಬಿಡಬಹುದಾಗಿದ್ದ ಅನುಭವಗಳಿಗೆ ಒಡ್ಡಿಕೊಳ್ಳುತ್ತಿದ್ದೇನೆ ಎಂಬುದರ ಬಗ್ಗೆ ಪುಳಕವೇ ಇಲ್ಲಿನ ಜೀವದ್ರವ್ಯ. ಅದಲ್ಲದೇ ಪ್ರಕ್ರಿಯೆ ಹೊರತಾದ ಎಂಡ್ ಪ್ರಾಡಕ್ಟ್ ಕುರಿತ ಯೋಚನೆಯಲ್ಲೇ ದಿಗಿಲು ಬರಮಾಡಿಕೊಂಡರೆ ಹತಾಶೆ- ವೈಫಲ್ಯಗಳೇ ಉಡುಗೊರೆ.

ಸಾಮ್ರಾಜ್ಯದ ಮಿರಿ ಮಿರಿ ಮಿನುಗಿನ ವ್ಯಾಪ್ತಿಯಿಂದ ಬಹುದೂರವೇ ಸರಿದುಬಿಟ್ಟಿದ್ದ ಶ್ರೀರಾಮ್, ಮುಂದಿನ 14 ವರ್ಷ ಪ್ರತಿದಿನದ ಹೋರಾಟವೆಂಬ ಬೇರೆಯದೇ ಪ್ರಕ್ರಿಯೆಗೆ ತನ್ನನ್ನು ಕೊಟ್ಟುಕೊಂಡ. ತನ್ನ ಕಂಪನಿಯ ಮುಖ್ಯಕಚೇರಿಯೇ ಜಗತ್ತಿನ ಕೇಂದ್ರಬಿಂದು ಅಂದುಕೊಂಡಿದ್ದು ಎಷ್ಟು ತಪ್ಪು ಗ್ರಹಿಕೆಯಾಗಿತ್ತು ಅಂತ ಆತನಿಗೆ ನಗು ಉಕ್ಕಿತ್ತು. ಅದಕ್ಕೆ ಹೊರತಾದ ಅತಿ ಅಗಾಧ ಪ್ರಪಂಚದಲ್ಲಿ ಥರೇವಾರಿ ಬುಡಕಟ್ಟು ಮಂದಿಯನ್ನು, ಮಾನವ ಸಂಪನ್ಮೂಲದ ಭಿನ್ನ ಬಗೆಗಳನ್ನೂ ಆತ ಕಂಡ. ಅವುಗಳನ್ನೆಲ್ಲ ಒಂದು ನೆಟ್ ವರ್ಕ್ ನಲ್ಲಿ ಜೋಡಿಸಿದ. ಅವರ ಸಾಮರ್ಥ್ಯದ ಪರಿಚಯ ಮಾಡಿಕೊಟ್ಟ. ಈ ನಡುವೆ ವೈಯಕ್ತಿಕ ದುಮ್ಮಾನಗಳೂ ತೀವ್ರವಾಗಿ ಬಾಧಿಸಿದವು. ಅವೆಲ್ಲವನ್ನೂ ಎದುರಿಸುತ್ತಿದ್ದಾಗ ಆತನೇ ರೂಪಿಸಿದ ನಿಷ್ಠಪಡೆ ಜತೆಗಿತ್ತಾಗಲೀ, ಜೈಕಾರ ಹಾಕುವವರು ಯಾರಿರಲಿಲ್ಲ.

ಕೊನೆಗೊಮ್ಮೆ ಹೆಡ್ ಕ್ವಾಟರ್ಸ್ ಗೆ ಹಿಂತಿರುಗಿದಾಗ ಈತನ ಬ್ರಾಂಡ್ ವ್ಯಾಲ್ಯೂ ಮುಖ್ಯಕಚೇರಿಯ ಮಿನುಗನ್ನೆಲ್ಲ ನಿವಾಳಿಸುವಂತಿತ್ತು. ಸಂಕಷ್ಟಗಳ್ಯಾವವೂ ಬಾಧಿಸದೇ ಹೆಡ್ಕ್ವಾಟರ್ಸ್ ನಲ್ಲೇ ಉಳಿದುಕೊಳ್ಳುವಂತಾಗಿದ್ದರೆ ಶ್ರೀರಾಮ್ ಬದುಕಿನಲ್ಲಿ ವಿವರಗಳೇ ಇರುತ್ತಿರಲಿಲ್ಲ. ಹಾಗೆ ಮುಖ್ಯ ಕಚೇರಿಗೆ ಹಿಂತಿರುಗಿದ್ದನ್ನು ಸಂಭ್ರಮಿಸಿ ಜೈಜೈಕಾರ ಹಾಕಿದ ವಿದ್ಯಮಾನದ ಬಗ್ಗೆ ಖುದ್ದು ಶ್ರೀರಾಮ್ ಗೆ ಅಂಥ ಆಸಕ್ತಿಯೇನೂ ಇಲ್ಲ. ಏಕೆಂದರೆ ಕೊನೆಗೂ ಮುಖ್ಯವಾಗಬೇಕಿರುವುದು ಹೆಡ್ಕ್ವಾಟರ್ಸ್ ನಿಂದ ದೂರವಿದ್ದ ಸಂದರ್ಭದಲ್ಲಿ ಎದುರಿಸಿದ ಸವಾಲುಗಳು, ಅಲ್ಲಿದ್ದ ಕಾಯುವಿಕೆ, ಅಲ್ಲಿನ ಪರಿತಾಪ, ಏಳು-ಬೀಳು ಹಾಗೂ ಅವನ್ನೆಲ್ಲ ತಾಳಿಕೊಂಡ ಬಗೆಯೇ ಹೊರತು ಕೊನೆಗೊಂದು ದಿನ ಹುದ್ದೆಗಾದ ಪಟ್ಟಾಭಿಷೇಕವಲ್ಲ ಅಂತ ಆತ ನಂಬಿದ್ದಾನೆ. ಯಶಸ್ಸೆಂಬುದು, ಬದುಕಿನ ಖುಷಿ ಅನ್ನೋದು ರಾತ್ರಿ ಬೆಳಗಾಗವುದರಲ್ಲಿ ಪಡೆದುಕೊಂಡುಬಿಡಬಹುದಾದದ್ದು ಎಂದುಕೊಂಡಿರುವ, ಇಷ್ಟು ಹೂಡಿದರೆ ಪ್ರತಿಯಾಗಿ ಇಷ್ಟು ಬಾಚಿಬಿಡಬಹುದು ಎಂಬ ತೀವ್ರ ಲೆಕ್ಕಾಚಾರದಲ್ಲಿರುವ ಪೀಳಿಗೆಗೆ ಈ ತಾಳಿಕೆಯ ಕತೆಯನ್ನು ಹೇಳಿಕೊಂಡಿರುವುದು ಶ್ರೀರಾಮ್ ಗೆ ಇಷ್ಟವಾಗುವ ಸಂಗತಿ.

ಅಂದಹಾಗೆ ಶ್ರೀರಾಮ್ ಅದ್ಯಾವುದೋ ಬೀದಿ ತಿರುವಿನಲ್ಲಿ ನಿಂತಿದ್ದಾನೆ. ಈ ಬಿಸಿಲಲ್ಲಿ ಪಾನಕ- ಮಜ್ಜಿಗೆ ವಿತರಿಸುವ ಕಾರ್ಯದಲ್ಲಿ ಆತನಿಗೇನೋ ಥ್ರಿಲ್ ಇದೆ. ರಾಮನವಮಿ ಅವನಿಗೆ ಇಷ್ಟದ ಹಬ್ಬ. ಚಂದಾ ಎತ್ತುವ ಧಾವಂತವಿಲ್ಲದೇ, ಆರ್ಕೆಸ್ಟ್ರಾ ಮತ್ತೊಂದರ ಗೌಜಿಲ್ಲದೇ ಪಾನಕ- ಕೋಸಂಬರಿ ವಿತರಣೆ ಸಂಭ್ರಮ ಮಾತ್ರದ ಆಚರಣೆ ಆತನಿಗೆ ಆಪ್ತ. ಆದರೆ ಪ್ಲಾಸ್ಟಿಕ್ ಕಪ್ ಬಳಕೆಯ ಬದಲಿಗೆ ಕೃಷಿ ಉತ್ಪನ್ನದ ತಾಟು- ಕಪ್ಪುಗಳಿದ್ದರೆ ಚೆಂದ ಅಂದುಕೊಳ್ಳುತ್ತ, ಅಂಥ ಉದ್ಯಮ ಸಂಘಟಿಸುವುದರ ಕುರಿತೂ ಆಸಕ್ತವಾಗುತ್ತಿದ್ದಾನೆ….

Leave a Reply