ಉಗ್ರವಾದದ ಕುರಿತ ದ್ವಂದ್ವ ನಿಲುವು- ಚೀನಾ ಕುತಂತ್ರಕ್ಕೆ ಭಾರತದ ತರಾಟೆ, ವಿಶ್ವಸಂಸ್ಥೆಯಲ್ಲಿ ಹೆಚ್ತಿದೆ ದೇಶದ ವರ್ಚಸ್ಸು!

ಡಿಜಿಟಲ್ ಕನ್ನಡ ಟೀಮ್

ಇತ್ತೀಚೆಗೆ ವಿಶ್ವಸಂಸ್ಥೆಯಲ್ಲಿ ಭಾರತ ಚುರುಕುಗೊಂಡಿದೆ. ವಿಶ್ವದ ಬಲಿಷ್ಠ ಸಂಸ್ಥೆಯ ಕಾರ್ಯವೈಖರಿಯಲ್ಲಿ ಸರಿ ಯಾವುದು, ತಪ್ಪು ಯಾವುದು ಎಂದು ನಿಷ್ಠುರವಾಗಿ ಹೇಳುವುದನ್ನು ರೂಢಿಸಿಕೊಳ್ಳುತ್ತಿದೆ. ಇದಕ್ಕೆ ಪೂರಕವಾಗಿ ಕೆಲ ದಿನಗಳ ಹಿಂದೆ ಉಗ್ರವಾದಕ್ಕೆ ಸಂಬಂಧಿಸಿದಂತೆ ಪ್ರಧಾನಿ ಮೋದಿ ತಮ್ಮ ಭಾಷಣದಲ್ಲಿ, ‘ಉಗ್ರವಾದಕ್ಕೆ ವಿಶ್ವಸಂಸ್ಥೆ ಬಳಿ ಸರಿಯಾದ ವ್ಯಾಖ್ಯೆಯೇ ಇಲ್ಲ’ ಅಂತ ಚುರುಕು ಮುಟ್ಟಿಸಿದ್ದು ಎಲ್ಲರಿಗೂ ಗೊತ್ತೇ ಇದೆ.

ಇದೀಗ ಮಸೂದ್ ಅಜರ್ ನನ್ನು ಅಂತಾರಾಷ್ಟ್ರೀಯ ಭಯೋತ್ಪಾದಕ ಎಂದು ಗುರುತಿಸುವುದಕ್ಕೆ ವಿಶ್ವಸಂಸ್ಥೆಯಲ್ಲಿ ಚೀನಾ ಅಡ್ಡಗಾಲು ಹಾಕಿದ್ದಕ್ಕೆ ಭಾರತ ಅದೇ ವಿಶ್ವಸಂಸ್ಥೆಯ ಸಭೆಯಲ್ಲಿ ಖಾರವಾಗಿ ಪ್ರತಿಕ್ರಿಯಿಸಿದೆ.

ಹಿಡೆನ್ ವೆಟೊ (ಗೌಪ್ಯ ಮತ) ಅನ್ನು ಉಗ್ರರ ರಕ್ಷಣೆಯಾಗಿ ಬಳಸಲಾಗುತ್ತಿದೆ ಎಂದು ವಿಶ್ವಸಂಸ್ಥೆಯಲ್ಲಿ ಭಾರತದ ಪ್ರತಿನಿಧಿ ಸೈಯದ್ ಅಕ್ಬರುದ್ದೀನ್ ಖಂಡಿಸಿದ್ದಾರೆ.

ನಿಜ, ಉಗ್ರರ ವಿಚಾರದಲ್ಲಿ ಅದರಲ್ಲೂ ಜೈಷ್ ಇ ಮೊಹಮದ್ ಮುಖ್ಯಸ್ಥ ಮಸೂದ್ ಅಜರ್ ನನ್ನು ಉಗ್ರವಾದಿ ಎಂದು ಪರಿಗಣಿಸುವ ಪ್ರಕ್ರಿಯೆಯಲ್ಲಿ ಚೀನಾ, ಹಿಡೆನ್ ವೆಟೊ (ಗೌಪ್ಯ ಮತ) ಮೂಲಕ ವಿರೋಧ ಮತ ಚಲಾಯಿಸಿ ತೆರೆಮರೆಯಲ್ಲಿ ಭಾರತಕ್ಕೆ ಹಿನ್ನಡೆಯಾಗುವಂತೆ ಮಾಡಿದೆ.

ಉಗ್ರವಾದಕ್ಕೆ ಸಂಬಂಧಿಸಿದಂತೆ ವಿಶ್ವಸಂಸ್ಥೆಯಲ್ಲಿ ಅನುಮೋದನಾ ಸಮಿತಿ ಸರ್ವಾನುಮತದ ಆಧಾರದ ಮೇಲೆ ನಿರ್ಧಾರ ಕೈಗೊಳ್ಳಬೇಕಿದೆ. ಇಂಥ ಸಂದರ್ಭದಲ್ಲಿ ಭದ್ರತಾ ಸಮಿತಿ 15 ಸದಸ್ಯರಲ್ಲಿ ಯಾರು ಬೇಕಾದರೂ ಹಿಡೆನ್ ವೆಟೊ ಚಲಾಯಿಸುವ ಮೂಲಕ ಅನುಮೋದನಾ ಸಮಿತಿ ನಿರ್ಧಾರವನ್ನು ವಿರೋಧಿಸಬಹುದು. ವಿಶ್ವಸಂಸ್ಥೆಯ ನಿಯಮದ ಪ್ರಕಾರ ಈ ಪ್ರಕ್ರಿಯೆಯಲ್ಲಿ ಭದ್ರತಾ ಸಮಿತಿ ಸದಸ್ಯರು ಅನುಮೋದನಾ ಸಮಿತಿಯ ನಿರ್ಧಾರ ವಿರೋಧಿಸುವಾಗ ಯಾವುದೇ ರೀತಿಯ ವಿವರಣೆ ನೀಡುವ ಅಗತ್ಯವೂ ಇಲ್ಲವೆಂದು ಹೇಳಿದೆ. ಈ ಅವಕಾಶವನ್ನು ಬಳಸಿಕೊಂಡ ಚೀನಾ ಅಜರ್ ಗೆ ರಕ್ಷಾಕವಚವಾಗಿ ನಿಂತಿದೆ.

ಚೀನಾದ ಈ ಕುತಂತ್ರ ಸಮಿತಿಯಲ್ಲಿದ್ದ ಇತರೆ ಸದಸ್ಯರ ಮೂಲಕ ಭಾರತಕ್ಕೆ ತಿಳಿಯಿತು. ಹಾಗಾಗಿ ಭಾರತದ ಪ್ರತಿನಿಧಿ ಸೈಯದ್ ಅಕ್ಬರುದ್ದೀನ್ ಚೀನಾದ ಈ ನಿರ್ಧಾರದ ವಿರುದ್ಧ ವಿಶ್ವಸಂಸ್ಥೆಯ ಮುಕ್ತ ಸಂವಾದದಲ್ಲಿ ಖಂಡಿಸಿದ್ದಾರೆ.

‘ಅಲ್ ಖೈದಾ, ತಾಲಿಬಾನ್ ಮತ್ತು ಐಎಸ್ ಸಂಘಟನೆ ಕುರಿತಂತೆ ವಿಶ್ವಸಂಸ್ಥೆಯ ಒಮ್ಮತ ಮತ್ತು ಗೌಪ್ಯ ಪ್ರಕ್ರಿಯೆ ಕುರಿತು ಅನುಮೋದನಾ ಸಮಿತಿ ಪರಿಶೀಲನೆ ನಡೆಸಬೇಕು. ಭದ್ರತಾ ಸಮಿತಿಯ 15 ಸದಸ್ಯರು ವೆಟೊ ಅಧಿಕಾರ ಹೊಂದಿದ್ದಾರೆ. ಆದರೆ, ಈ ಸದಸ್ಯರ ಪೈಕಿ ಯಾರು ಯಾವ ಸಂದರ್ಭದಲ್ಲಿ ವೆಟೊ ಬಳಸಿದ್ದಾರೆ ಎಂದು ಹೇಳುವುದಿಲ್ಲ. ಉಗ್ರವಾದವನ್ನು ಹತ್ತಿಕ್ಕಲು ಇರುವ ಅನುಮೋದನಾ ಸಮಿತಿ ಎಲ್ಲರಲ್ಲೂ ನಂಬಿಕೆ ಮೂಡಿಸಬೇಕು. ಹಿಡನ್ ವೆಟೊ ಬಳಸಿಕೊಂಡು ಇತಹ ಸಂಘಟನೆಗಳಿಗೆ ಅಭಯ ನೀಡುವಂತೆ ಕೆಲಸ ಮಾಡಬಾರದು’ ಎಂದು ಅಕ್ಬರುದ್ದೀನ್ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

ವ್ಯಂಗ್ಯವೆಂದರೆ, ಈ ತಿಂಗಳ ಭದ್ರತಾ ಸಮಿತಿ ಅಧ್ಯಕ್ಷತೆಯನ್ನು ಚೀನಾವೇ ವಹಿಸಿತ್ತು. ಈ ಸಂದರ್ಭದಲ್ಲಿ ಅಕ್ಬರುದ್ದೀನ್ ದಾಖಲಿಸಿರುವ ಕಟು ವಿರೋಧವು, ಅಧ್ಯಕ್ಷೀಯ ಪೀಠದಲ್ಲಿ ಕುಳಿತಿದ್ದ ಚೀನಾದ ಮುಖಕ್ಕೇ ಹೊಡೆದಂತಿತ್ತು.

ಒಟ್ಟಿನಲ್ಲಿ, ವಿಶ್ವಸಂಸ್ಥೆಯಲ್ಲಿ ಭಾರತವು ಮೃದುವಾಗಿ ಮಾತನಾಡುತ್ತ, ಕೋಪ ವ್ಯಕ್ತಪಡಿಸಿದರೆ ಯಾರಿಗೇನು ಬೇಜಾರಾಗುವುದೋ ಅಂತೆಲ್ಲ ಯೋಚಿಸುವ ದಿನಗಳು ಮುಗಿದಂತಿದೆ. ಮತ್ತೊಂದು ಬಗೆಯಲ್ಲೂ ವಿಶ್ವಸಂಸ್ಥೆಯಲ್ಲಿ ಭಾರತದ ವರ್ಚಸ್ಸು ಹೆಚ್ಚುತ್ತಿದೆ. ಇದೇ ಮೊದಲ ಬಾರಿಗೆ ವಿಶ್ವಸಂಸ್ಥೆಯಿಂದ ಅಂಬೇಡ್ಕರ್ ಜನ್ಮದಿನ ಆಚರಣೆ, ಯೋಗದಿನ ಆಚರಣೆ ಹೀಗೆ ಮನ್ನಣೆಗಳು ಸಿಗುತ್ತಿವೆ.

Leave a Reply