ಕೆನಾಡದಲ್ಲಿ ಆತ್ಮಹತ್ಯೆ ಸಲೀಸು, ಚೀನಾದಲ್ಲೊಂದು ಮರುನಾಮಕರಣ ಆಂದೋಲನ… ವಾರಾಂತ್ಯಕ್ಕೆ 2 ಇಂಟ್ರೆಸ್ಟಿಂಗ್ ಸುದ್ದಿ ತುಣುಕು

ಕೆನಾಡದಲ್ಲಿ ಆತ್ಮಹತ್ಯೆ ಕಾನೂನುಬದ್ಧ, ಷರತ್ತುಗಳು ಅನ್ವಯಿಸುತ್ತವೆ…

ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿರುವವರು ಮತ್ತು ಮಾನಸಿಕ ಕಾಯಿಲೆಗಳಿಗೆ ತುತ್ತಾಗಿರುವವರಿಗೆ ವೈದ್ಯರು ಆತ್ಮಹತ್ಯೆಗೆ ಸಹಕರಿಸುವುದನ್ನು ಕಾನೂನುಬ್ಧವಾಗಿಸುವ ಮಸೂದೆಯೊಂದು ಕೆನಡಾದಲ್ಲಿ ಮಂಡನೆಯಾಗಿದೆ. ಇದಕ್ಕೆ ಇಲ್ಲಿನ ಪ್ರಧಾನಮಂತ್ರಿ ಜುಸ್ತೀನ್ ಟ್ರುಡಾಯ್ ಕೂಡ ಬೆಂಬಲ ನೀಡಿದ್ದಾರೆ. ಕಳೆದ ವರ್ಷ ಕೆನಡಾದ ನಿವಾಸಿಯೊಬ್ಬರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿ ವ್ಯಕ್ತಿಯೊಬ್ಬರ ಸಾವಿಗೆ ವೈದ್ಯರು ಸಹಕರಿಸುವುದನ್ನು ನಿಷೇಧಿಸಿ ಎಂದು ಅರ್ಜಿಸಲ್ಲಿಸಿದ್ದರು. ಆದರೆ ಕೋರ್ಟ್ ಈ ಮನವಿಯನ್ನು ತಿರಸ್ಕರಿಸಿತ್ತು.

ಈ ಪ್ರಸ್ತಾವನೆಯನ್ನು ವೈದ್ಯರ ಕಾನೂನು ಪರಿಮಿತಿಯೊಳಗೆ ರಚಿಸಲಾಗಿದ್ದು, ಆತ್ಮಹತ್ಯೆಗೆ ಇಚ್ಚಿಸುವವರು ಗಂಭೀರ ಮತ್ತು ಗುಣಪಡಿಸಲಾಗದ ಅನಾರೋಗ್ಯದಿಂದ ಬಳಲುತ್ತಿರಬೇಕು. ಇಂತಹವರು ರಾಷ್ಟ್ರೀಯ ಆರೋಗ್ಯ ಸಮಿತಿಯ ಮಂದೆ ಹಾಜರಾಗಿ ಅನುಮತಿ ಪಡೆಯಬೇಕು.

ಕೆನಡಾದ ಈ ಕಾನೂನಿನ ಲಾಭ ಪಡೆಯುವುದಕ್ಕೆ ವಿದೇಶಿಗರೆಲ್ಲ ಮುಂದಾಗಿ, ದೇಶದಲ್ಲಿ ಸೂಸೈಡ್ ಟೂರಿಸಂ ಆರಂಭವಾಗದಿರಲಿ ಎಂಬ ಕಾಳಜಿಯಿಂದ ದೇಶೀಯರಿಗೆ ಮಾತ್ರವೇ ಈ ಅವಕಾಶ ಎಂಬ ನಿಯಮ ಹೊಂದಲಾಗಿದೆ.

ಈ ಮಸೂದೆ ಒಪ್ಪಿಗೆ ಪಡೆದರೆ ಆತ್ಮಹತ್ಯೆಗೆ ನೆರವು ನೀಡಲು ಒಪ್ಪಿಗೆ ಸೂಚಿಸಿರುವ ಬೆಲ್ಜಿಯಂ ನೆದರ್ ಲ್ಯಾಂಡ್, ಸ್ವಿಜ್ಜರ್ ಲ್ಯಾಂಡ್ ಮತ್ತು ಜರ್ಮನಿ ದೇಶಗಳ ಗುಂಪಿಗೆ ಕೆನಡಾ ಕೂಡ ಸೇರ್ಪಡೆಯಾಗಲಿದೆ. ಅಮೆರಿಕದ ಓರೆಗನ್ ಮತ್ತು ವೆರ್ ಮೌಂಟ್ ಸೇರಿದಂತೆ ಕೆಲವು ರಾಜ್ಯಗಳಲ್ಲಿ  ಮಾತ್ರ ಇದನ್ನು ಕಾನೂನು ಬದ್ಧಗೊಳಿಸಲಾಗಿದೆ.

ಅಪಾರ್ಟ್ ಮೆಂಟ್ ಗಳಿಗೆ ವಿದೇಶಿ ಹೆಸರಿಟ್ಟರೆ ಜೋಕೆ ಅಂತಿದೆ ಚೀನಾ!

ಚೀನಾಕ್ಕೆ ಬೇರೆಯವರ ಮೇಲೆ ಆಕ್ರಮಣ ಮಾಡಿ ಮಾತ್ರ ಗೊತ್ತು, ತನ್ನ ಮೇಲೆ ಆಕ್ರಮಣ ಮಾಡೋದಕ್ಕೆ ಬಿಡುತ್ತದೆಯೇ ಅದು? ಭಾತಿಕ ಆಕ್ರಮಣದ ಕತೆ ಹಾಗಿರಲಿ, ಪಾಶ್ಚಾತ್ಯರ ಇತರ ಬಗೆಯ ಆಕ್ರಮಣಗಳೂ ಆಗಬಾರದು ಎಂಬ ನೀತಿ ಅದರದ್ದು.

ಹೀಗಾಗಿ ಅದೀಗ ಪಾಶ್ಚಾತ್ಯ ಹೆಸರುಗಳನ್ನು ಹೊತ್ತ ಕಟ್ಟಡಗಳ ಹುಡುಕಾಟಕ್ಕೆ ಒಡ್ಡಿಕೊಂಡಿದೆ. ಫ್ರೆಂಚ್ ಅಥವಾ ಬೇರೆ ಭಾಷೆಯಿಂದ ಹುಟ್ಟಿದ ಹೆಸರುಗಳೆಲ್ಲ ಬದಲಾಗಿ, ಚೀನಾ ಸಂಸ್ಕೃತಿಗೆ ತಕ್ಕ ಹೆಸರುಗಳು ಇರಬೇಕು ಎಂಬುದು ಅದರ ಆಗ್ರಹ.

 ಅಪಾರ್ಟ್ ಮೆಂಟ್ ಸಂಸ್ಕೃತಿ ಶುರುವಾದ ನಂತರ ನಾವೆಲ್ಲ ಪಾರ್ಕ್ ಅವೆನ್ಯು, ಪಾಮ್ ಸ್ಟ್ರಿಂಗ್ ಇಂಥ ಹೆಸರುಗಳು ನಮ್ಮದೇ ಎಂದುಕೊಂಡು ಅಭ್ಯಾಸ ಮಾಡಿಕೊಂಡುಬಿಟ್ಟಿದ್ದೇವೆ. ಆದರೆ ಚೀನಾದ ಜಾಯಮಾನ ಅದಲ್ಲ.

‘ವಿದೇಶಿ ಹೆಸರುಗಳನ್ನು ಇಡುವ ಸಲುವಾಗಿ ಬೃಹತ್ ಅಕ್ರಮಗಳು ನಡೆಯುತ್ತಿವೆ. ಇವುಗಳಿಗೆ ಯಾವುದೇ ನಿಯಂತ್ರಣವೂ ಇಲ್ಲದಂತಾಗಿದೆ’ ಎಂದು ನಾಗರೀಕ ವ್ಯವಹಾರಗಳ ಸಚಿವ ಲಿ ಲಿಗ್ಯೂ ಹೇಳಿರುವುದಾಗಿ ಸ್ಥಳೀಯ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಈ ರೀತಿಯ ಕೆಲವು ಹೆಸರುಗಳು ಇಲ್ಲಿನ ಸಾರ್ವಭೌಮತ್ವಕ್ಕೆ ಮತ್ತು ರಾಷ್ಟ್ರೀಯ ಘನತೆಗೆ ದಕ್ಕೆ ತರುತ್ತಿವೆ. ಇವು ಸಾಪ್ರದಾಯಿಕ ನೈತಿಕತೆ ಮತ್ತು ಸಮಾಜದಲ್ಲಿ ಅಸಮತೋಲನಕ್ಕೆ ಕಾರಣವಾಗುತ್ತಿದೆ. ಈ ಹೆಸರುಗಳು ಬಳಕೆಗೆ ಜನರು ವಿರೋಧಿಸುತ್ತಿದ್ದು, ಆರೋಪ ಮಾಡುವುದಕ್ಕೆ ಪ್ರೇರೇಪಿಸುತ್ತಿವೆ.

ಚೀನಾದ ವಸತಿ ಅಭಿವೃದ್ಧಿಯಲ್ಲಿ ಪಾಶ್ಚಾತ್ಯ ಕಂಪನಿಗಳು ಹಣ ಹೂಡಿರುವುದರಿಂದ ಅವಕ್ಕೆ ಒಗ್ಗುವ ಹೆಸರಿಟ್ಟರೆ ಪ್ರಮಾದವೇನು ಎಂಬ ಪ್ರಶ್ನೆಗೆ ಅಲ್ಲಿನ ಪತ್ರಿಕೆಗಳ ಅಭಿಪ್ರಾಯ ನಿರೂಪಕರ ಪ್ರತಿಕ್ರಿಯೆ ಎಂದರೆ- ಹೀಗೆ ಹೆಸರಿಡುವ ಮೂಲಕ ಆಧುನಿಕತೆ ಮೇಲೆ ಪಾಶ್ಚಾತ್ಯರು ತಮ್ಮದೇ ಮುದ್ರೆ ಒತ್ತಿದಂತಾಗುತ್ತದೆ. ಚೀನಾಕ್ಕಿಂತ ನಾವೇ ಆಧುನಿಕರು ಎಂದು ಸಾರುವ ಪ್ರಯತ್ನ ಇದು. ಹೀಗಾಗಿ ಚೀನಿ ಸಂಸ್ಕೃತಿಯ ಹೆಸರುಗಳನ್ನೇ ನಮ್ಮ ಆಧುನಿಕ ಕಟ್ಟಡಗಳಿಗೆ ಇಡಬೇಕು!

Leave a Reply