ಸರ್ಕಾರಿ ಬಂಗಲೆಯ ಬಾಡಿಗೆ ಜಾಸ್ತಿ ಅಂತಿದಾರೆ ಪ್ರಿಯಾಂಕಾ ಗಾಂಧಿ

ಡಿಜಿಟಲ್ ಕನ್ನಡ ಟೀಮ್

ಪ್ರಿಯಾಂಕ ಗಾಂಧಿ ಅವರಿಗೆ ಸರ್ಕಾರದಿಂದ ನೀಡಿರುವ ಬಂಗಲೆಯ ಕನಿಷ್ಠ ಬಾಡಿಗೆಯನ್ನು ಭರಿಸಲು ಶಕ್ತರಲ್ಲವಂತೆ.. ಹೀಗಾಗಿ ಅವರು ವಿನಾಯತಿ ಕೇಳಿರುವುದು ಮಾಹಿತಿ ಹಕ್ಕು ಅರ್ಜಿಯೊಂದರಿಂದ ಬಯಲಾಗಿದೆ. ಇದನ್ನಾಧರಿಸಿ ಟೈಮ್ಸ್ ಆಫ್ ಇಂಡಿಯಾ ಮಾಡಿರುವ ವರದಿ ಟ್ವಿಟ್ಟರಿನಲ್ಲೂ ಪರ – ವಿರೋಧದ ಚರ್ಚೆಗಳಿಗೆ ವೇದಿಕೆಯಾಯಿತು.

ನೆಹರು ಕುಟುಂಬದ ಕುಡಿ, ಮಾಜಿ ಪ್ರಧಾನಿ ರಾಜೀವ್ ಗಾಂಧಿ ಮತ್ತು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮಗಳಾದ ಪ್ರಿಯಾಂಕ, 14 ವರ್ಷಗಳ ಹಿಂದೆ ಸರ್ಕಾರ ತನಗೆ ನೀಡಿದ್ದ ದೆಹಲಿಯ ಲೋಧಿ ಎಸ್ಟೇಟಿನ 2765.18 ಚದುರ ಮೀಟರ್ ಅಳತೆಯ ಬಂಗಲೆ ಬಾಡಿಗೆ ವಿಚಾರದಲ್ಲಿ ಕೇಂದ್ರದೊಂದಿಗೆ ಚೌಕಾಸಿಗೆ ಇಳಿದು ಬಾಡಿಗೆಯನ್ನು ₹ 53,421 ರಿಂದ ₹ 8,888 ಕ್ಕೆ ಕಡಿಮೆ ಮಾಡಿಸುವಲ್ಲಿ ಸಫಲವಾಗಿದ್ದರು. ಪ್ರಸ್ತುತ ಈ ಬಂಗಲೆಗೆ ₹ 31,300 ಪಾವತಿಸುತ್ತಿದ್ದಾರೆ.

ಲೋಧಿ ಎಸ್ಟೇಟ್ ಆವರಣದಲ್ಲಿ ಪ್ರಿಯಾಂಕಾ ಸೇರಿದಂತೆ ನಾಲ್ವರು ವ್ಯಕ್ತಿಗಳಿಗೆ ಬಂಗಲೆಗಳನ್ನು ನೀಡಲಾಗಿದೆ. ಪಂಜಾಬಿನ ಮಾಜಿ ಡಿಸಿಪಿ ಕೆಪಿಎಸ್ ಗಿಲ್, ಅಖಿಲ ಭಾರತ ಭಯೋತ್ಪಾದಕ ವಿರೋಧಿ ಸಂಘದ ಮುಖ್ಯಸ್ಥ ಎಂ ಎಸ್ ಬಿಟ್ಟ ಮತ್ತು ಪಂಜಾಬ್ ಕೇಸರಿ ಪತ್ರಿಕೆಯ ಸಂಪಾದಕ ಅಶ್ವಿನಿ ಕುಮಾರ್ ಇತರರು. ಇವರೆಲ್ಲರ ಪ್ರಾಣಕ್ಕೆ ಆತಂಕ ಇರುವುದರಿಂದ ಸರ್ಕಾರವೇ ಈ ಬಂಗಲೆಗಳನ್ನು ಅವರ ವಾಸಕ್ಕೆ ನೀಡಿ, ಬಾಡಿಗೆ ತುಂಬಿಕೊಳ್ಳಿಸುತ್ತಿದೆ. ಈ ಎಸ್ಟೇಟಿನಲ್ಲಿ ಕೇವಲ ಈ ವಿಐಪಿಗಳೇ ಅಲ್ಲದೇ ವಿಶೇಷ ಭದ್ರತಾ ದಳದ ತಂಡವೂ ಇರುತ್ತದೆ. ಪ್ರಿಯಾಂಕಾ ಅವರ ಅಹವಾಲು ಏನೆಂದರೆ, ಇಡೀ ಎಸ್ಟೇಟನ್ನು ಕುಟುಂಬವರ್ಗವೇನೂ ಆಕ್ರಮಿಸಿಕೊಂಡಿಲ್ಲ, ಬದಲಿಗೆ ಭದ್ರತಾ ಸಿಬ್ಬಂದಿ ವಾಸಕ್ಕೆ ಅಷ್ಟೊಂದು ಜಾಗ ಬೇಕಾಗುತ್ತಿದೆ. ಹೀಗಿರುವಾಗ ಎಲ್ಲದರ ಹೊರೆ ತಮ್ಮ ಮೇಲೆ ಸಲ್ಲ, ಅದನ್ನು ಭರಿಸುವಷ್ಟು ಶಕ್ತರು ತಾವಲ್ಲ ಎಂಬುದು.

2002 ರ ಮೇ 7 ರಂದು ಸರ್ಕಾರಕ್ಕೆ ಪತ್ರ ಬರೆದ ಪ್ರಿಯಾಂಕ ₹ 53,421 ಬಾಡಿಗೆ ತುಂಬ ಹೆಚ್ಚಾಗಿದ್ದು, ಈ ಹಿಂದೆ ಪಾವತಿಸುತ್ತಿದ್ದ ₹ 28,451 ರಷ್ಟು ಬಾಡಿಗೆ ಪ್ರತಿ ತಿಂಗಳು ಪಾವತಿಸುತ್ತೇವೆಂದು ಹೇಳಿದ್ದರು. ನಂತರ ಹಲವು ಬಾರಿ ದರ ಏರಿಕೆ ಆಗಿದ್ದರೂ ಪ್ರಿಯಾಂಕಾ ಮತ್ತು ಇತರ ಮೂವರು ಹಳೆಯ ಬಾಡಿಗೆಯನ್ನೇ ನೀಡುತ್ತಿದ್ದಾರೆ. 2004ರ ಜನವರಿ ವೇಳೆಗೆ 3.75 ಲಕ್ಷ ರುಪಾಯಿಗಳ ಬಾಕಿಯಿತ್ತು ಎಂದು ಮಾಹಿತಿ ಹಕ್ಕು ಕಾಯ್ದೆ ಮೂಲಕ ಪಡೆದುಕೊಂಡ ಮಾಹಿತಿ ತಿಳಿಸುತ್ತಿದೆ.

Leave a Reply