ಸಹರಾ ಮರಳುಗಾಡಿಂದ ಅಮೆಜಾನ್ ಮಳೆಕಾಡಿಗೆ ಪುಕ್ಕಟೆ ಸಾಗಣೆಯಾಗುತ್ತಿದೆ ರಸಗೊಬ್ಬರ, ಬಿರುಗಾಳಿಯೇ ಗುತ್ತಿಗೆದಾರ

author-ananthramuಸಹರಾ ಮರುಭೂಮಿಗೂ ಅಮೆಜಾನ್ ಕಾಡಿಗೂ ಯಾವ ನಂಟು? ಅರ್ಥಾತ್ ಸಂಬಂಧವೇ ಇಲ್ಲ. ಇಷ್ಟಾಗೂ ಅವು ನೆರೆಯಲ್ಲೂ ಇಲ್ಲ. ಉತ್ತರ ಮತ್ತು ದಕ್ಷಿಣ ಧ್ರುವ ಪ್ರದೇಶಗಳನ್ನು ಬಿಟ್ಟರೆ ಜಗತ್ತಿನ ಅತ್ಯಂತ ದೊಡ್ಡ ಮರುಭೂಮಿ ಸಹರಾ. ಆಫ್ರಿಕದ ಉತ್ತರ ಭಾಗದಲ್ಲಿ ಅದರದ್ದೇ ಸಾಮ್ರಾಜ್ಯ. ಸುಮಾರು ಮೂರು ಭಾರತಗಳನ್ನು ಕೂಡಿಸುವಷ್ಟು ಅದರ ವಿಸ್ತೀರ್ಣ. ತಾಪ 40 ಡಿಗ್ರಿ ಸೆಂ. ಮೇಲೆಯೇ. ಎಲ್ಲೋ ಅಲ್ಲಲ್ಲಿ ಒಂದಷ್ಟು ಕುರುಚಲು ಇದೆ, ಚೀನಿಯರಿಗೆ ಗಡ್ಡ ಬಂದಂತೆ. ಇತ್ತ ಅಮೆಜಾನ್? ಜಗತ್ತಿನ ಅರ್ಧ ಮಳೆಕಾಡಿಗೆ ಇದೇ ಒಡೆಯ. ಜೀವಿವೈವಿಧ್ಯದ ಜಗತ್ತಿನ ಬಹು ದೊಡ್ಡ ನೆಲೆ. ಸದಾ ನಳನಳಿಸುವ ಸಸ್ಯರಾಜಿ, ಅದಕ್ಕೆ ತಳಕುಹಾಕಿಕೊಂಡಿರುವ ಜೀವರಾಶಿ. ವಿರಳಾತಿವಿರಳ ಕಾಡು ಇದು. ಇವೆರಡರ ಸಂಬಂಧವನ್ನು ಹೇಳಲು ಹೊರಟರೆ ಅಲ್ಲಮಪ್ರಭುವಿನ ವಚನದ ಸಾಲು ನೆನಪಾಗುತ್ತದೆ. ‘ಎತ್ತಣ ಮಾಮರ, ಎತ್ತಣ ಕೋಗಿಲೆ, ಎತ್ತಣಿಂದೆತ್ತ ಸಂಬಂಧ?’ ಕೊನೆಯಪಕ್ಷ ಕೋಗಿಲೆಗೂ ಮಾವಿನ ಮರಕ್ಕೂ ವಸಂತದಲ್ಲಾದರೂ ಸಂಬಂಧವಿರುತ್ತದೆ-ಹನ್ನೆರಡೂವರೆ ಕೋಟಿ ವರ್ಷಗಳ ಹಿಂದೆ ದಕ್ಷಿಣ ಅಮೆರಿಕ-ಆಫ್ರಿಕ ಖಂಡ ಒಗ್ಗೂಡಿದ್ದವಂತೆ. ಆಮೇಲೆ ದೂರ ದೂರ ಸರಿದವು ಎನ್ನುತ್ತಾರೆ ಭೂವಿಜ್ಞಾನಿಗಳು. ಸದ್ಯಕ್ಕೆ ಸಂಖ್ಯೆಗಳನ್ನು ಬಳಸಿ ಇವುಗಳಿಗೆ ಸಂಬಂಧ ಕಲ್ಪಿಸಬಹುದು. ಸಹರಾ ಹತ್ತು ದೇಶಗಳಿಗೆ ತನ್ನ ಕಬಂಧಬಾಹು ಚಾಚಿದೆ, ಅಮೆಜಾನ್ ಕಾಡು ಒಂಬತ್ತು ರಾಷ್ಟ್ರಗಳನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದೆ.

ಕಳೆದ ಏಳು ವರ್ಷಗಳಿಂದ ವಿಜ್ಞಾನಿಗಳು ಒಂದು ವಿಚಿತ್ರ ಸಂಬಂಧ ಹುಡುಕುತ್ತಿದ್ದಾರೆ. ಇದೀಗ ಆ ಹುಡುಕಾಟಕ್ಕೊಂದು ಅರ್ಥ ಬಂದಿದೆ. ಅದೆಂಥ ಸಂಬಂಧವೆಂದರೆ ಸಹರಾ ಮರುಭೂಮಿ ಅಮೆಜಾನ್‍ಗೆ ಜೀವಕೊಡುತ್ತಿದೆ, ಬೆಳೆಸುತ್ತಿದೆ, ಪೋಷಿಸುತ್ತಿದೆ. ಆಶ್ಚರ್ಯವಾಗುತ್ತದೆ! ನರಪೇತಲ ನಾರಾಯಣ ಕಿಂಗ್‍ಕಾಂಗ್ ಅಥವಾ ದಾರಾಸಿಂಗ್‍ನನ್ನು ಬೆಳೆಸಿದಂತೆ.

sahara4

ಪ್ರತಿವರ್ಷ ಅಕ್ಟೋಬರ್-ಮಾರ್ಚ್ ತಿಂಗಳಲ್ಲಿ ಸಹರಾ ಮರುಭೂಮಿಯ ಚಾಡ್ ಸರೋವರದ ಈಶಾನ್ಯ ಭಾಗದಲ್ಲಿ ಬೋದಿಲೆ ಎಂಬ ತಗ್ಗಿನಿಂದ ಭರ್ಜರಿ ಬಿರುಗಾಳಿ ಬೀಸುತ್ತದೆ. ನೂರಾರು ವರ್ಷಗಳ ಹಿಂದೆ ಈ ತಗ್ಗು ಚಾಡ್ ಸರೋವರದ ಒಂದು ಭಾಗವಾಗಿತ್ತಂತೆ. ಈಗ ಚಾಡ್ ಸರೋವರಕ್ಕೇ ದುಃಸ್ಥಿತಿ ಬಂದಿದೆ. ಹಿಂದೊಮ್ಮೆ ಸಮುದ್ರ ಭಾಗವಾಗಿದ್ದ ಈ ಜಲರಾಶಿ ಹತ್ತು ಲಕ್ಷ ಚದರ ಕಿಲೋ ಮೀಟರ್ ವಿಸ್ತರಿಸಿತ್ತಂತೆ. ಈಗ ಅದರ ಸಾಮ್ರಾಜ್ಯ ಕುಗ್ಗಿದೆ, ಬರೀ 1,250 ಚದರ ಕಿಲೋ ಮೀಟರ್ ವಿಸ್ತೀರ್ಣ. ಡೆಡ್ ಸೀ ಪರಿಸ್ಥಿತಿಯಂತೆ ಇದರದ್ದು. ಇದರೊಳಗೆ ಹರಿಯುವ ನದಿ ನೀರಿಗೆ ಬಿಡುಗಡೆಯೇ ಇಲ್ಲ. ಸುತ್ತಮುತ್ತ ಜಾನುವಾರು ಮೇಯುವುದು ಹೆಚ್ಚಾಗಿ ಬರುಬರುತ್ತ ಶುಷ್ಕವಾಗಿ ಈಗ ಈ ಸ್ಥಿತಿ ತಲಪಿದೆ. ನಾಲ್ಕು ದೇಶಗಳು ಇಲ್ಲಿನ ನೀರನ್ನು ಅತಿಯಾಗಿ ಬಳಸಿ ಇಂದಿನ ಸ್ಥಿತಿಗೆ ದೂಡಿವೆ. ಇದು ಹೇಗೂ ಇರಲಿ, ಬೋದಿಲೆ ತಗ್ಗಿನಿಂದ ಮರಳು, ಡಯಾಟಂ ಎಂಬ ಸೂಕ್ಮ್ಮಜೀವಿಗಳ ಕವಚದ ಸಿಪ್ಪೆ, ಬಹುತೇಕ ಸಿಲಿಕ, ಫಾಸ್ಪರಸನ್ನು ಬಿರುಗಾಳಿ ಏಕದಂ ಎತ್ತಿ ವಾಯುಗೋಳದಲ್ಲೂ ಜಮಾಯಿಸದೆ ಸುಮಾರು ಐದು ಸಾವಿರ ಮೀಟರ್ ಎತ್ತರದಲ್ಲಿ ಬರ್ ಎಂದು ಅಟ್ಲಾಂಟಿಕ್ ಸಾಗರದ ಮೇಲೆ ಸಾಗಿ ಒಂದಷ್ಟು ಸರಕನ್ನು ಅಮೆಜಾನ್ ಕಾಡಿಗೆ ಸುರಿಯುತ್ತಿದೆ. ಈ ಕಣಗಳು ಎಷ್ಟು ಸಣ್ಣವೆಂದರೆ ನಮ್ಮ ಕೂದಲನ್ನು ಮೂವತ್ತು ಭಾಗ ಮಾಡಿದರೆ ಅದರ ಒಂದು ಭಾಗದಷ್ಟು. 2.5 ಮೈಕ್ರಾನ್ ಗಾತ್ರ. ಅಮೆರಿಕದ ನಾಸಾ ಸಂಸ್ಥೆ 2006ರಲ್ಲಿ ಕ್ಯಾಲಿಪ್ಸೋ ಎನ್ನುವ ಉಪಗ್ರಹವನ್ನು ಹಾರಿಸಿತ್ತು, ಅದರಲ್ಲಿ ದೂಳಿನ ದಟ್ಟಣೆಯನ್ನು ಅಳೆಯಲು ಉಪಕರಣಗಳನ್ನು ಇಟ್ಟಿತ್ತು. ಈಗ ಅದು ಫಲಕೊಟ್ಟಿದೆ, ದೂಳಿನ ರಾದ್ಧಾಂತದ ಚರಿತ್ರೆ ಸಿಕ್ಕುತ್ತಿದೆ. ವಿಜ್ಞಾನಿಗಳು ತಬ್ಬಿಬ್ಬಾಗಿದ್ದಾರೆ. ಬೋದಿಲೆ ತಗ್ಗನ್ನು ಬರ್ ಎಂದು  ಅಲ್ಲಾಡಿಸಿ ದೂಳಿನ ಬಿರುಗಾಳಿ ಗಂಟೆಗೆ 47 ಕಿಲೋ ಮೀಟರ್ ನುಗ್ಗಿ ಹೋಗುವಾಗ 182 ದಶಲಕ್ಷ ಟನ್ನು ದೂಳನ್ನು ಒಂದೇ ಸಲ ಎತ್ತುತ್ತದಂತೆ. ದಿಢೀರ್ ಎಂದು ಹಾಯ್ದು ಹದ್ದು ಕೋಳಿಮರಿಯನ್ನು ಎತ್ತಿಕೊಂಡು ಹೋದಹಾಗೆ. ಯಾಕಿಷ್ಟು ದೊಡ್ಡ ಬಿರುಗಾಳಿ ಏಳುತ್ತದೆಯೆಂದರೆ, ಈ ತಗ್ಗು ಇರುವುದು ಎರಡು ದೊಡ್ಡ ಪರ್ವತಗಳ ನಡುವೆ ಗಾಳಿನುಗ್ಗುವ ಭಾಗದಲ್ಲಿ. 182 ದಶಲಕ್ಷ ಟನ್ನು ಎಂದರೆ ಊಹೆ ಕಷ್ಟ ಅಲ್ಲವೆ?  ಹೀಗೆ ಹೇಳಬಹುದು, ಇಷ್ಟು ದೂಳನ್ನು ತುಂಬಲು 6,89,290 ಟ್ರಕ್ಕುಗಳು ಬೇಕು. ಮುಂದೆ ಈ ದೂಳು  2,500 ಕಿಲೋ ಮೀಟರ್ ದೂರ ಅಟ್ಲಾಂಟಿಕ್ ಸಾಗರದ ಮೇಲೆ ತೇಲುವಾಗ ಸ್ವಲ್ಪ ಮಳೆ ಬಂದರೆ ಒಂದಷ್ಟು ಪ್ರಮಾಣವನ್ನು ನಷ್ಟಮಾಡಿಕೊಳ್ಳುತ್ತದೆ, ಸೀದಾ ಅಮೆಜಾನ್ ಭಾಗಕ್ಕೆ ಬರುತ್ತದೆ. ಅಲ್ಲಿ 27.7 ಮಿಲಿಯನ್ ಟನ್ನು ದೂಳನ್ನು ಅಮೆಜಾನ್‍ನಲ್ಲಿ ಇಳಿಸುತ್ತದೆ. ಈ ದೂಳಿನಲ್ಲಿ 22,000 ಟನ್ನು ಫಾಸ್ಪರಸ್ ಇರುತ್ತದೆ. ಬಿರುಗಾಳಿ ಮತ್ತೆ ಕೆರೆಬಿಯನ್ ಸಮುದ್ರದಲ್ಲಿ ತನ್ನ ಉಳಿದ ಸರಕನ್ನು ಖಾಲಿಮಾಡಿಕೊಳ್ಳುತ್ತದೆ. ಸದ್ಯದಲ್ಲಿ ಇದು ಯಾರೂ ಮುರಿಯದ ರೆಕಾರ್ಡ್. ಅಮೆಜಾನ್ ಕಾಡುಗಳಿಗಂತೂ ಜೀವತರುವ ರಸ ಇದು. ಏಕೆಂದರೆ ಫಾಸ್ಪರಸ್ ಸಸ್ಯಗಳ ಬೆಳವಣಿಗೆಗೆ ಅಗತ್ಯ ಸರಕು. ವಿಚಿತ್ರವೆಂದರೆ ಅಮೆಜಾನ್ ನೆಲದ ಮಣ್ಣಿನಲ್ಲಿ ಫಾಸ್ಪರಸ್ ಅಂಶ ಹೆಚ್ಚಾಗಿಲ್ಲ. ಇಲ್ಲಿ ಫಾಸ್ಪರಸ್ ಜಮಾಯಿಸಿದರೂ ಮಳೆಗಾಲದಲ್ಲಿ ಇದ್ದಬದ್ದ ಉಳಿಕೆಯನ್ನೆಲ್ಲ ನದಿಗಳು ನುಂಗಿ ನೀರುಪಾಲು ಮಾಡುತ್ತವೆ. ಇದರ ನಷ್ಟಭರ್ತಿಯನ್ನು ಬೋದಿಲೆ ತಗ್ಗಿನಿಂದ ಬರುವ ಫಾಸ್ಪರಸ್ ತುಂಬಿಕೊಡಬೇಕು-ಕಾಸು ಖರ್ಚಿಲ್ಲದ ಟ್ರೇಡ್ ಅಗ್ರಿಮೆಂಟ್.

sahara3

ವಿಜ್ಞಾನಿಗಳು ಈ ಮಹಾ ದೂಳಿನ ಚರಿತ್ರೆಯ ಪುಟಗಳನ್ನು ತೆರೆಯುತ್ತಿದ್ದಾರೆ. ಬೋದಿಲೆ ತಗ್ಗಿನಲ್ಲಿ ಇನ್ನೂ ಒಂದು ಸಾವಿರ ವರ್ಷಕ್ಕೆ ಸಾಕಾಗುವಷ್ಟು ಫಾಸ್ಪರಸ್ ತುಂಬಿದ ದೂಳಿದೆಯಂತೆ. ಆ ಹೊತ್ತಿಗೆ ಹವಾಮಾನ ಹೇಗೆ ವರ್ತಿಸುತ್ತದೋ ಸರಿಯಾಗಿ ತಿಳಿಯದು. ಇನ್ನೂ ಒಂದು ಅಂಶವೆಂದರೆ ಸಹರಾ ಮರುಭೂಮಿಗೂ ಮತ್ತು ಪಕ್ಕದ ಸೂಡಾನಿನ ಸವನ್ನಾ ಹುಲ್ಲುಗಾವಲಿಗೂ ನಡುವೆ ಸಹೆಲ್ ಎಂಬ ಸಂಕ್ರಮಣ ವಲಯವಿದೆ. ಅದು ಕಾಡೂ ಅಲ್ಲ, ಮರುಭೂಮಿಯೂ ಅಲ್ಲ. ಒಂದುವೇಳೆ ಈ ಭಾಗದಲ್ಲಿ ಭರ್ಜರಿ ಮಳೆಯಾದರೆ ಗಿಡಗಳೇಳುತ್ತವೆ, ಈ ದೂಳಿನ ಬಿರುಗಾಳಿಗೆ ಬ್ರೇಕ್ ಹಾಕುತ್ತವೆ.

ಇಷ್ಟೊಂದು ಪ್ರಮಾಣದ ರಸಗೊಬ್ಬರ ಪುಕ್ಕಟೆಯಾಗಿ ಅಮೆಜಾನ್ ಕಾಡಿಗೆ ಸಿಕ್ಕುತ್ತಿದೆ. ವ್ಯಾಟ್ ಇಲ್ಲ, ವಾಣಿಜ್ಯ ತೆರಿಗೆ ಇಲ್ಲ, ಸೀಮಾಸುಂಕವಿಲ್ಲ, ಹೆದ್ದಾರಿಯ ಸುಂಕವಿಲ್ಲ, ಟ್ರಾಫಿಕ್ ಜಾಮ್ ಇಲ್ಲ. ಆದರೆ ಎಲ್ಲ ಸಂದರ್ಭದಲ್ಲೂ ಅಲ್ಲ. ದೂಳಿನ ಬಿರುಗಾಳಿ ಅಪರೂಪಕ್ಕೆ ಇಂಥ ಉಪಕಾರ ಮಾಡುತ್ತದೆ. ಹೆಚ್ಚಿನ ಪಾಲು ಇದು ತರುವುದು ನಷ್ಟವನ್ನೇ. 2003ರಲ್ಲಿ ಇರಾಕ್ ಯುದ್ಧದಲ್ಲಿ ಅಮೆರಿಕದೊಡನೆ ಇರಾಕ್ ಬಡಿದಾಡುತ್ತಿದ್ದಾಗ, ಆ ಸೈನಿಕರಿಗೆ ದೂಳಿನ ಬಿರುಗಾಳಿಯೊಂದಿಗೆ ಬಡಿದಾಡುವುದೇ ಕಷ್ಟವಾಗಿತ್ತಂತೆ. ಈ ಬಿರುಗಾಳಿಗೆ ಯಾವ ನೆಲದ ಹಂಗೂ ಇಲ್ಲ. ಅದು ಸಾವಯವ ರಾಶಿಯನ್ನೆಲ್ಲ ಒಮ್ಮೆಲೇ ಎತ್ತಿಕೊಂಡು ನೆಲವನ್ನು ಬರಡುಮಾಡಿಬಿಡುತ್ತದೆ. ವಿಮಾನದ ಪೈಲಟ್‍ಗಳೂ ಕೂಡ ದೂಳಿನ ಬಿರುಗಾಳಿಗೆ ಹೆದರುತ್ತಾರೆ. ಏಕೆಂದರೆ ಅದು ಗೋಚರತೆಗೆ ಅಡ್ಡಬರುತ್ತದಂತೆ. ಇನ್ನು ದೂಳಿನ ಬಿರುಗಾಳಿ ಎಲ್ಲಿ ಕೆಳಕ್ಕಿಳಿಯುತ್ತದೋ ಅಲ್ಲಿ ಸಿಲಿಕ ಅಂಶದಿಂದಾಗಿ ಶ್ವಾಸಕೋಶಕ್ಕೆ ಲಗ್ಗೆ ಹಾಕುತ್ತದೆ. ಸಿಲಿಕೋಸಿಸ್ ರೋಗದ ಅಪಾಯ ಇದ್ದದ್ದೇ. ಇನ್ನು ವೈರಸ್‍ಗಳು ಪುಕ್ಕಟೆಯಾಗಿ ಖಂಡದಿಂದ ಖಂಡಕ್ಕೆ ಸಾಗಿ ರೋಗ ತರಬಲ್ಲವು. ಸಹರಾದ ದೂಳಿನ ಬಿರುಗಾಳಿ ಬೀಸುವ ದಿಕ್ಕು ಒಂದುವೇಳೆ ತಿರುವು ಮುರುವಾದರೆ, ಯೂರೋಪಿನಲ್ಲಿ ರಕ್ತದ ಮಳೆ ಬೀಳುತ್ತದೆಂದು ಕಳೆದ ವರ್ಷವೇ ಜನ ಹೆದರಿದ್ದರು. ಸಣ್ಣ ಕಬ್ಬಿಣದ ಕಣಗಳೂ ಮಳೆಬಿದ್ದಾಗ ಕೆಂಪು ಬಣ್ಣ ತರುತ್ತವೆ. ಇನ್ನು ಹವಾಮಾನ ತಜ್ಞರಿಗಂತೂ ಇದೊಂದು ಭಾರಿ ಸವಾಲು. ದೂಳಿನ ಬಿರುಗಾಳಿ ವಾಯುಗುಣವನ್ನು ಬದಲಾಯಿಸುತ್ತದೋ ಅಥವಾ ವಾಯುಗುಣವೇ ಬಿರುಗಾಳಿಯನ್ನು ನಿಯಂತ್ರಿಸುತ್ತದೋ ಎಂಬುದು ಈಗಲೂ ಚರ್ಚೆಯಾಗಿತ್ತಿರುವ ವಿಚಾರ.

ದೂಳಿನ ಬಿರುಗಾಳಿಯಿಂದ ಯಾರಿಗೆ ಲಾಭ, ಯಾರಿಗೆ ನಷ್ಟ ಎನ್ನುವುದು ನಮ್ಮ ನಿಮ್ಮ ಲೆಕ್ಕಾಚಾರ. ನಿಸರ್ಗಕ್ಕೆ ಈ ಬಗೆಯ ಕೂಡು-ಕಳೆ ಲೆಕ್ಕಾಚಾರ ಬೇಕಾಗಿಲ್ಲ. ಅದಕ್ಕೆ ತನ್ನದೇ ಆದ ಫಾರ್ಮುಲಾ ಇದೆ.

1 COMMENT

Leave a Reply