ಸುದ್ದಿಸಂತೆ: ಪಿಯು ಮೌಲ್ಯಮಾಪನ ವಿಳಂಬ, ಟೀಕೆಗೆ ಎಚ್ಚೆತ್ತ ಬಿ ಎಸ್ ವೈ, ಹಂದ್ವಾರಾ ಹಿಂಸಾಚಾರ….

43.85 ಮೀಟರ್ ನ ಹಗ್ಗವನ್ನು ಬಾಯಲ್ಲಿ ತೂರಿಸಿ ಮೂಗಲ್ಲಿ ಎಳೆಯುವ 30 ಸೆಕೆಂಡ್ ಕಾಲಾವಧಿಯ ಈ ಸಾಹಸಕ್ಕೆ ತೇಜಸ್ವಿನಿ ಗಿರೀಶ್ ಕುಮಾರ್ ಗೆ ಗಿನ್ನಿಸ್ ದಾಖಲೆ ಗೌರವ ಸಿಕ್ಕಿದೆ. ಬೆಂಗಳೂರಿನಲ್ಲಿಶನಿವಾರ ತಮ್ಮ ಕೌಶಲ ಪ್ರದರ್ಶಿಸಿದರು.

 

ಪಿಯು ಮೌಲ್ಯಮಾಪನ ಹೇಗೆ- ಎತ್ತ?

ಪಿಯು ಉತ್ತರ ಪತ್ರಿಕೆ ಮೌಲ್ಯಮಾಪನ ಇನ್ನೂ ಶುರುವಾಗಿಲ್ಲ. ಹಾಗಂತ ವಿದ್ಯಾರ್ಥಿಗಳು- ಪೋಷಕರೇನೂ ಆತಂಕಪಡಬೇಕಿಲ್ಲ ಎಂದಿದ್ದಾರೆ ಪದವಿಪೂರ್ಣ ಶಿಕ್ಷಣ ಮಂಡಳಿ ನಿರ್ದೇಶಕ ಡಾ. ರಾಮೇಗೌಡ.

‘ಮುಷ್ಕರ ನಿರತ ಉಪನ್ಯಾಸಕರಿಗೆ ಕಡೆಯ ಅವಕಾಶ ನೀಡಲಾಗಿದೆ. ಅವರು ಮುಷ್ಕರ ಕೈಬಿಟ್ಟು ಮೌಲ್ಯಮಾಪನಕ್ಕೆ ಹಾಜರಾಗದಿದ್ದರೆ ಖಾಸಗಿ ಕಾಲೇಜುಗಳ  ಉಪನ್ಯಾಸಕರಿಂದ ಮೌಲ್ಯಮಾಪನ ಮಾಡಿಸುತ್ತೇವೆ. ಖಾಸಗಿ ಕಾಲೇಜುಗಳ ಉಪನ್ಯಾಸಕರಿಗೆ ತರಬೇತಿ ನೀಡಿ ಡಿ-ಕೋಡಿಂಗ್ ಮಾಡಲು ಪ್ರಾರಂಭಿಸಲಾಗಿದೆ. 46 ಕೇಂದ್ರಗಳಲ್ಲಿ  ಡಿ-ಕೋಡಿಂಗ್ ಕಾರ್ಯ ನಡೆಯುತ್ತಿದ್ದು, ಎರಡು ದಿನಗಳಲ್ಲಿ ಪೂರ್ಣಗೊಳ್ಳಲಿದೆ. ಡಿ-ಕೋಡಿಂಗ್ ಮುಗಿಯುತ್ತಿದ್ದಂತೆ ಮೌಲ್ಯಮಾಪನ ಆರಂಭವಾಗಲಿದೆ. ಇದಕ್ಕಾಗಿ ಖಾಸಗಿ ಪದವಿಪೂರ್ವ ಕಾಲೇಜುಗಳ 7 ಸಾವಿರ ಮಂದಿ ಉಪನ್ಯಾಸಕರನ್ನು ಸಜ್ಜುಗೊಳಿಸಲಾಗಿದೆ’ ಎಂಬುದು ಅವರ ಸಮಜಾಯಿಷಿ.

ಬರ ಸಮೀಕ್ಷೆಗೆ ದುಬಾರಿ ಕಾರಿನ ಸಹವಾಸ ಬಿಟ್ರು ಬಿ ಎಸ್ ವೈ

ಮುರುಗೇಶ್ ನಿರಾಣಿ ಉಡುಗೊರೆಯ ಕೋಟಿ ರೂ. ಮೌಲ್ಯದ ಟಯೋಟಾ ಪ್ರಡೋ ಕಾರಿನಲ್ಲಿಬರಗಾಲ ವೀಕ್ಷಣೆ ಮಾಡೋದಿಲ್ಲ ಅಂತ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಸ್ಪಷ್ಟನೆ ಕೊಟ್ಟಿದ್ದಾರೆ. ಈ ಐಶಾರಾಮಿ ಕಾರು ಪಕ್ಷ ಸಂಘಟನೆ ತಿರುಗಾಟಕ್ಕೆ ಮಾತ್ರ ಬಳಕೆಯಾಗಲಿದ್ದು, ಬರ ವೀಕ್ಷಣೆಗೆ ರೈಲಿನಲ್ಲಿ ತೆರಳಿ, ಸ್ಥಳೀಯ ಕಾರ್ಯಕರ್ತರು ಒದಗಿಸುವ ವಾಹನ ವ್ಯವಸ್ಥೆಯನ್ನೇ ಉಪಯೋಗಿಸುವುದಾಗಿ ಬಿ ಎಸ್ ವೈ ಕಡೆಯಿಂದ ಸ್ಪಷ್ಟನೆ ಬಂದಿದೆ.

 ಎಸಿಬಿಯಲ್ಲಿ ಸಿದ್ದರಾಮಯ್ಯ ವಿರುದ್ಧ ದಾಖಲಾಯ್ತು ಮತ್ತೊಂದು ದೂರು

ಯಾಕೋ ಏನೋ ನಮ್ಮ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಗ್ರಹಗತಿ ಇತ್ತೀಚೆಗೆ ಸರಿಯಿಲ್ಲ ಅಂತ ಕಾಣುತ್ತೆ. ಎಸಿಬಿ ರಚಿಸಿದ ಸಿದ್ದರಾಮಯ್ಯನವರ ವಿರುದ್ಧ ಎಸಿಬಿಯಲ್ಲಿ ಶನಿವಾರ ಮತ್ತೊಂದು ದೂರು ದಾಖಲಾಗಿದೆ. ಪುತ್ರ ಡಾ. ಯತೀಂದ್ರ ನಿರ್ದೇಶಕರಾಗಿರುವ ಮ್ಯಾಟ್ರಿಕ್ಸ್ ಕಂಪನಿಗೆ ವಿಕ್ಟೋರಿಯ ಆಸ್ಪತ್ರೆ ಆವರಣದಲ್ಲಿ ಲ್ಯಾಬ್ ತೆರೆಯಲು ಸಹಕರಿಸಿದ್ದಾರೆ ಎಂದು ಆರೋಪಿಸಿ ಸಾಮಾಜಿಕ ಕಾರ್ಯಕರ್ತ ಭಾಸ್ಕರ್ ಎಂಬುವವರು ಎಸಿಬಿಗೆ ದೂರು ನೀಡಿದ್ದಾರೆ. ಈ ಹಿಂದೆಯೂ ಹೂಬ್ಲೋಟ್ ದುಬಾರಿ ವಾಚ್ ಪ್ರಕರಣದಲ್ಲೂ ಎಸಿಬಿಯಲ್ಲಿ ಸಿಎಂ ವಿರುದ್ಧ ದೂರು ದಾಖಲಾಗಿ, ಅದನ್ನು ವಜಾಗೊಳಿಸಲಾಗಿತ್ತು.

 

ಹಂದ್ವಾರಾ ಹಿಂಸಾಚಾರ: 5 ಸಾವು, ಒತ್ತಡದ ಹೇಳಿಕೆ ಪಡೆಯಾಲಾಗಿದೆ ಎಂದ ಬಾಲಕಿಯ ತಾಯಿ

ಕಾಶ್ಮೀರದ ಹಂದ್ವಾರಾ ಹಿಂಸಾಚಾರ ಪ್ರಕರಣ ಕಳೆದ ನಾಲ್ಕು ದಿನಗಳಿಂದ ತೀವ್ರ ಸ್ವರೂಪ ಪಡೆದಿದ್ದು, ಐದು ಮಂದಿ ಸಾವನಪ್ಪಿದ್ದಾರೆ. ಈ ನಡುವೆ ಪರಿಸ್ಥಿತಿಯನ್ನು ನಿಯಂತ್ರಕ್ಕೆ ತರಲು ಕೇಂದ್ರ ಸರ್ಕಾರ 3600 ಮಂದಿ ಹೆಚ್ಚುವರಿ ಅರೆಸೇನಾ ಸಿಬ್ಬಂದಿಯನ್ನು ಕಳುಹಿಸಲು ನಿರ್ಧರಿಸಿದೆ.

ತನ್ನ ಮೇಲೆ ಲೈಂಗಿಕ ದೌರ್ಜನ್ಯವಾಗಿದ್ದು ಸ್ಥಳೀಯ ಯುವಕರಿಂದ ಹೊರತು ಯೋಧನಿಂದಲ್ಲ ಎಂದು ಸಂತ್ರಸ್ತ ಬಾಲಕಿ ನೀಡಿದ್ದ ಹೇಳಿಕೆಯನ್ನು ಸೇನೆ ಬಿಡುಗಡೆ ಮಾಡಿತ್ತು. ಆದರೆ ಇದೀಗ ಆ ಬಾಲಕಿಯ ತಾಯಿ, ‘ಗಲಿಬಿಲಿಗೊಂಡಿದ್ದ ನನ್ನ ಮಗಳಿಂದ ಒತ್ತಡದಲ್ಲಿ ಹೇಳಿಕೆ ಪಡೆದುಕೊಳ್ಳಲಾಗಿದೆ. ಆಕೆ ಚೀರಿಕೊಂಡಿದ್ದು ಶೌಚಾಲಯ ಪ್ರವೇಶಿಸಿದ ಯೋಧನನ್ನು ನೋಡಿಯೇ’ ಎಂದು ಹೇಳಿಕೆ ನೀಡಿದ್ದಾಳೆ.

ಐಎಂಎಫ್ ನ ಮುಂದಿನ ಮುಖ್ಯಸ್ಥ ಸ್ಥಾನ ಭಾರತೀಯರಿಗೆ ನೀಡಲು ಒತ್ತಾಯ

ಜಗತ್ತಿನ ಅತಿ ದೊಡ್ಡ ಹಣಕಾಸು ಸಂಸ್ಥೆಯಾಗಿರುವ ಅಂತರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಗೆ ಮುಂದಿನ ಮುಖ್ಯಸ್ಥರನ್ನಾಗಿ ಅಭಿವೃದ್ಧಿ ಹೊಂದುತ್ತಿರುವ ಅರ್ಥವ್ಯವಸ್ಥೆಯ ದೇಶದವರನ್ನೇ ನೇಮಿಸಬೇಕು ಎಂದು ಭಾರತದ ಹಣಕಾಸು ಕಾರ್ಯದರ್ಶಿ ಶಕ್ತಿಕಾಂತ ದಾಸ್ ಐಎಂಎಫ್ ಗೆ ಒತ್ತಾಯಿಸಿದ್ದಾರೆ. ಕಳೆದ ತಿಂಗಳು ಕ್ರಿಸ್ಟೀಯಾನೋ ಲ್ಯಾಗಾರ್ಡ್ ಎಂಬುವವರು ಎರಡನೆ ಬಾರಿ 5 ವರ್ಷದ ಅವಧಿಗೆ ಆಯ್ಕೆಗೊಂಡಿದ್ದು, ಬದಲಿ ಅಭ್ಯರ್ಥಿ ಇಲ್ಲದ ಕಾರಣ ಭಾರತವೂ ಇವರಿಗೆ ಬೆಂಬಲ ನೀಡಿತ್ತು. ಆದರೆ ಇನ್ನು ಮುಂದೆ ಯುರೋಪೇತರ ರಾಷ್ಟ್ರದಿಂದ ನೇಮಕಗಳಾಗಬೇಕು. ಏಕೆಂದರೆ ಯುರೋಪಿನ ಅರ್ಥವ್ಯವಸ್ಥೆಯೇ ಸಂಕಷ್ಟದಲ್ಲಿದೆ ಎಂಬ ವಾದವನ್ನು ಭಾರತ ಮುಂದು ಮಾಡಿದೆ.

 ಜಪಾನ್ ನಲ್ಲಿ ಎರಡು ಬಾರಿ ಭೂಕಂಪ, 35ಕ್ಕೂ ಹೆಚ್ಚು ಸಾವು

ಜಪಾನಿನಲ್ಲಿ ಶನಿವಾರ ಸಂಭವಿಸಿದ ಎರಡು ಪ್ರಬಲ ಭೂಕಂಪನದಿಂದ 35 ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದು, ಮತ್ತಷ್ಟು ಮಂದಿ ಅವಶೇಷಗಳಡಿ ಸಿಲುಕಿದ್ದಾರೆ. ಇಲ್ಲಿನ ದಕ್ಷಿಣದ ಕುಮಮೋಟೋದಲ್ಲಿ ಈ ದುರ್ಘಟನೆ ನಡೆದಿದ್ದು, ಕಂಪನದ ಪ್ರಮಾಣ ರಿಕ್ಟರ್ ಮಾಪಕದಲ್ಲಿ 7.1 ರಷ್ಟು ದಾಖಲಾಗಿದೆ. ಈ ವೇಳೆ ಬೃಹತ್ ಪ್ರಮಾಣದ ಮಣ್ಣು ಗುಡ್ಡೆಗಳು ಕುಸಿದಿದ್ದು ಮನೆಗಳು, ರಸ್ತೆಗಳು ಮತ್ತು ರೈಲು ಹಳಿಗಳಿಗೆ ಹಾನಿಯಾಗಿದೆ. ಸ್ಥಳಕ್ಕೆ ಧಾವಿಸಿರುವ ಪೊಲೀಸರು, ಅಗ್ನಿಶಾಮಕ ದಳದ ಸಿಬ್ಬಂದಿ, ಮಿಲಿಟರಿ ಸಿಬ್ಬಂದಿಗಳು ರಕ್ಷಣಾ ಕಾರ್ಯ ಮುಂದುವರಿಸಿದ್ದಾರೆ. 90 ಸಾವಿರ ಜನರನ್ನು ಸ್ಥಳಾಂತರಿಸಿ, ಪುನರ್ ವಸತಿ ಇಲ್ಲಿನ ಸರ್ಕಾರ ಕಲ್ಪಿಸಿದೆ.

Leave a Reply