ಅಜ್ಲಾನ್ ಷಾ ಫೈನಲ್ ಸೋಲು ಭಾರತದ ಹಾಕಿಯ ಅಚ್ಛೇ ದಿನಗಳ ಬಗ್ಗೆ ಭ್ರಮನಿರಸನ ಹುಟ್ಟಿಸಬೇಕಿಲ್ಲ, ಯಾಕಂದ್ರೆ…

ಸೋಮಶೇಖರ ಪಿ. ಭದ್ರಾವತಿ

ಸುದೀರ್ಘ ಐದು ವರ್ಷಗಳ ನಂತರ ಭಾರತ ತಂಡ ಅಜ್ಲಾನ್ ಷಾ ಹಾಕಿ ಟೂರ್ನಿಯ ಫೈನಲ್ ಗೆ ಲಗ್ಗೆ ಇಟ್ಟಿತ್ತು. ಭಾರತ ಪ್ರಶಸ್ತಿ ಗೆದ್ದು ರಿಯೋ ಒಲಿಂಪಿಕ್ಸ್ ಗೆ ಕಾಲಿಡಲಿದೆ ಎಂಬ ನಿರೀಕ್ಷೆ ಅಭಿಮಾನಿಗಳದ್ದಾಗಿತ್ತು. ಆದರೆ, ಶನಿವಾರ ನಡೆದ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಭಾರತ ಹಾಕಿ ತಂಡ ಆಸ್ಟ್ರೇಲಿಯಾ ವಿರುದ್ಧ 4-0 ಗೋಲುಗಳ ಸೋತು, ಅಂತಿಮ ಹೆಜ್ಜೆಯಲ್ಲಿ ಮುಗ್ಗರಿಸಿ ಪ್ರಶಸ್ತಿಯಿಂದ ವಂಚಿತವಾಗಿದೆ. ಇದು ಸಹಜವಾಗಿ ಆಟಗಾರರು ಸೇರಿದಂತೆ ಅಭಿಮಾನಿಗಳಲ್ಲಿ ನಿರಾಸೆ ಮೂಡಿದೆ. ಇಲ್ಲಿ ಪ್ರಮುಖವಾಗಿ ನಾವು ಗಮನಿಸಬೇಕಿರೋದು ಪಂದ್ಯದ ಫಲಿತಾಂಶವನ್ನಲ್ಲ, ಅದರ ಹೊರತಾಗಿ ಟೂರ್ನಿಯಲ್ಲಿ ಆಟಗಾರರಿಗೆ ಸಿಕ್ಕ ಅನುಭವ.

ಯೆಸ್, ಭಾರತ ಈ ಪಂದ್ಯದಲ್ಲಿ ಗೆದ್ದಿದ್ದರೆ, ಮುಂಬರುವ ರಿಯೋ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳಬಹುದಿತ್ತು. ಆದರೆ, ಇಲ್ಲಿ ಗೆಲವುಗಿಂತ ಮುಖ್ಯವಾಗೋದು ಈ ಟೂರ್ನಿಯಲ್ಲಿ ಭಾರತದ ಪ್ರದರ್ಶನ ಮತ್ತು ಸಿಕ್ಕ ಅನುಭವ ಮುಂದಿನ ಅಗ್ನಿಪರೀಕ್ಷೆಯಲ್ಲಿ ಹೇಗೆ ಬಳಸಿಕೊಳ್ಳಬೇಕು ಎಂಬುದು. ಭಾರತಕ್ಕೆ ನ್ಯೂಜಿಲೆಂಡ್ ಹಾಗೂ ಆಸ್ಟ್ರೇಲಿಯಾ ತಂಡಗಳ ಸವಾಲು ಕಠಿಣವಾಗಿ ಪರಿಣಮಿಸುತ್ತಿವೆ. ಆಸ್ಟ್ರೇಲಿಯಾ ವಿರುದ್ಧವೇ ಎರಡು ಬಾರಿ 4 ಗೋಲು ಅಂತರದ ಸೋಲನುಭವಿಸಿದ್ದು, ತಂಡ ಇನ್ನು ಪರಿಪೂರ್ಣವಾಗಬೇಕಿದೆ ಎಂಬ ಎಚ್ಚರಿಕೆ ನೀಡಿದೆ. ಹಾಗಾಗಿ ಈ ಎರಡು ತಂಡಗಳ ವಿರುದ್ಧ ಆಡಿದ ಅನುಭವ ಮುಂದಿನ ದಿನಗಳಲ್ಲಿ ತನ್ನ ತಪ್ಪನ್ನು ಸರಿಪಡಿಸಿಕೊಂಡು ಸವಾಲು ಎದುರಿಸಲು ಸಹಾಯವಾಗಲಿದೆ.

ಟೂರ್ನಿಯಲ್ಲಿ ಭಾರತದ ಪ್ರದರ್ಶನ ಉತ್ತಮವಾಗಿಯೇ ಇದೆ. ಜಪಾನ್ ವಿರುದ್ಧ 2-1, ಕೆನಡಾ ವಿರುದ್ಧ 3-1, ಪಾಕಿಸ್ತಾನ ವಿರುದ್ಧ 5-1, ಮಲೇಷ್ಯಾ ವಿರುದ್ಧ 6-1 ಗೋಲುಗಳ ಭರ್ಜರಿ ಜಯ ದಾಖಲಿಸಿತು. ಪ್ರಬಲ ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾ ವಿರುದ್ಧ ಪರಾಭವಗೊಂಡಿದೆ. ಅದರಲ್ಲೂ ಮಾಡು ಇಲ್ಲವೆ ಮಡಿ ಪರಿಸ್ಥಿತಿಯಲ್ಲಿ ಮಲೇಷ್ಯಾ ವಿರುದ್ಧದ ಜಯದಿಂದ ಪ್ರಬಲ ನ್ಯೂಜಿಲೆಂಡ್ ತಂಡಕ್ಕೆ ಮನೆ ದಾರಿ ತೋರಿದ್ದು ಗಮನಾರ್ಹವಾಗಿತ್ತು. ಅಲ್ಲದೆ, ತಂಡದ ಸಂಘಟಿತ ಪ್ರದರ್ಶನಕ್ಕೆ ಉತ್ತಮ ಸಾಕ್ಷಿ.

‘ಮುಂದಿನ ಒಲಿಂಪಿಕ್ಸ್ ನಲ್ಲಿ ಭಾರತ ಚಿನ್ನದ ಪದಕ ಗೆಲ್ಲುತ್ತದೆ ಎಂಬ ನಿರೀಕ್ಷೆ ವಾಸ್ತವಕ್ಕೆ ಸ್ವಲ್ಪ ದೂರವೇ ಆಗಿದೆ’ ಈ ಮಾತನ್ನು ಹೇಳಿರುವುದು ಸ್ವತಃ ಭಾರತ ತಂದ ಕೋಚ್ ರೋಯ್ಲೆಂಟ್ ಒಲ್ಟ್ ಮನ್ಸ್. ಅರೆ, ಕೋಚ್ ಆಗಿ ಈ ಮಾತು ಹೇಳಲು ಹೇಗೆ ಸಾಧ್ಯ ಎಂದು ಅನಿಸಬಹುದು. ಆದರೆ, ವಾಸ್ತವವಾಗಿ ನೋಡುವುದಾದರೆ, ಕಳೆದ ಲಂಡನ್ ಒಲಿಂಪಿಕ್ಸ್ ನಲ್ಲಿ ಭಾರತ ಆಡಿದ ಐದೂ ಪಂದ್ಯಗಳಲ್ಲೂ ಸೋತು ಕಡೇಯ ಸ್ಥಾನಕ್ಕೆ ಕುಸಿದು ಹೀನಾಯ ಪ್ರದರ್ಶನ ನೀಡಿತ್ತು. ಕಳೆದ ನಾಲ್ಕು ವರ್ಷದಲ್ಲಿ ಭಾರತ ತಂಡ ಕೋಚ್ ಗಳ ಅನಿರೀಕ್ಷಿತ ಬದಲಾವಣೆ ಹಾಗೂ ಇತರ ಸವಾಲುಗಳ ಮಧ್ಯೆ, ಕಠಿಣ ಪರಿಶ್ರಮದ ನೆರವಿನಿಂದ ಮತ್ತೆ ಉತ್ತಮ ಹಾದಿಗೆ ಮರಳುವ ಪ್ರಯತ್ನ ನಡೆಸಿದೆ. ಹಾಗಾಗಿ ಭಾರತಕ್ಕೆ ಚಿನ್ನದ ಪದಕ ಕಠಿಣ ಸವಾಲಾಗಿದ್ದರೂ, ಪೋಡಿಯಂ ಫಿನಿಶ್ (ಎರಡು ಮತ್ತು ಮೂರನೇ ಸ್ಥಾನ) ಸಾಧನೆ ಅಸಾಧ್ಯವೇನಲ್ಲ. ಹೌದು, ಕಳೆದ ಎರಡು ವರ್ಷಗಳಲ್ಲಿ ಭಾರತ ತಂಡ ನೀಡುತ್ತಿರುವ ಪ್ರದರ್ಶನ ನೋಡಿದಾಗ ಮುಂದಿನ ಒಲಿಂಪಿಕ್ಸ್ ನಲ್ಲಿ ಭಾರತ ಪದಕ ಗೆಲ್ಲುವ ನಿರೀಕ್ಷೆಯನ್ನು ಹುಟ್ಟಿಸಿದೆ.

ಪ್ರಸ್ತುತ ತಂಡದಲ್ಲಿ ಭಾರತ ನಾಯಕ ಸರ್ದಾರ್ ಸಿಂಗ್, ಉಪನಾಯಕ ಶ್ರೀಜೇಶ್, ರಮಣ್ ದೀಪ್ ಸಿಂಗ್, ಕನ್ನಡಿಗರಾದ ಎಸ್.ವಿ ಸುನೀಲ್, ವಿ.ಆರ್ ರಘುನಾಥ್ ರಂತಹ ಹಿರಿಯ ಆಟಗಾರರ ಜತೆ ದೇವಿಂದರ್ ವಾಲ್ಮಿಕಿ, ಮಂದೀಪ್ ಸಿಂಗ್, ಆಕಾಶ್ ದೀಪ್ ಸಿಂಗ್ ರಂತಹ ಯುವ ಆಟಗಾರರಿಂದ ಕೂಡಿದೆ. ಕಳೆದ ಎರಡು ವರ್ಷದಲ್ಲಿ ಭಾರತ, ಏಷ್ಯಾಕಪ್ ನಲ್ಲಿ ಚಿನ್ನದ ಸಾಧನೆ, ಹಾಲೆಂಡ್, ಫ್ರಾನ್ಸ್ ಪ್ರವಾಸದಲ್ಲಿ ಸರಣಿ ಜಯ ತಂಡ ಉತ್ತಮ ರೀತಿಯಲ್ಲಿ ಸಂಯೋಜನೆಗೊಳ್ಳುತ್ತಿರೋ ಲಕ್ಷಣ ಮೂಡಿಸಿದೆ.

ಪ್ರಸ್ತುತ ಸಂದರ್ಭದಲ್ಲಿ ಭಾರತದ ಪ್ರತಿ ಪಂದ್ಯವನ್ನು ಒಲಿಂಪಿಕ್ಸ್ ಕ್ರೀಡಾಕೂಟದ ತಯಾರಿ ಆಯಾಮದಲ್ಲಿ ನೋಡುವುದು ಒಳಿತು. ಪಂದ್ಯದಲ್ಲಿ ಸಿಗೋ ಫಲಿತಾಂಶಕ್ಕಿಂತ, ಪಂದ್ಯದಲ್ಲಿ ಎದುರಾಗುವ ಪರಿಸ್ಥಿತಿಯಿಂದ ಸಿಗೋ ಅನುಭವ ಮುಖ್ಯ. ಈ ವೇಳೆ ಭಾರತ ಆಡೋ ಎಲ್ಲಾ ಪಂದ್ಯಗಳು ಪೂರ್ವಭಾವಿ ಸಿದ್ಧತೆಗೆ ಅವಕಾಶವೆಂದೇ ಪರಿಗಣಿಸೋದು ಒಳ್ಳೆಯದು. ಆಸೀಸ್, ಕಿವೀಸ್ ನಂತ ಕಠಿಣ ಸವಾಲುಗಳು ತಂಡದ ಕ್ಷಮತೆ ಪರೀಕ್ಷಿಸಲು ಒಂದು ಅವಕಾಶ ಕಲ್ಪಿಸಿಕೊಡುತ್ತದೆ. ತಂಡ ಯಾವ ವಿಭಾಗದಲ್ಲಿ ಎಡವುತ್ತಿದೆ, ಆಟಗಾರರ ಬಲಾಬಲ ಏನು? ಎಲ್ಲ ವಿಭಾಗಗಳಲ್ಲಿ ಹೊಂದಾಣಿಕೆ ಸಾಧಿಸಲು, ತಂಡದ ನ್ಯೂನತೆಗಳನ್ನು ಅರಿತುಕೊಳ್ಳಲು ಈ ಪಂದ್ಯಗಳು ಸಹಾಯವಾಗುತ್ತದೆ. ಆಸ್ಟ್ರೇಲಿಯಾದಂತ ಕಠಿಣ ತಂಡದ ವಿರುದ್ಧ ಆಡುವಾಗ ಒತ್ತಡದ ಸಂದರ್ಭದಲ್ಲಿ ಆಟಗಾರರು ಒಟ್ಟಾಗಿ ಆಡುವ ಅನುಭವ ತಂಡದ ಸಂಘಟಿತ ಶಕ್ತಿಯನ್ನು ಹೆಚ್ಚಿಸುತ್ತದೆ.

ಈ ಎಲ್ಲ ಅಂಶಗಳನ್ನು ಗಮನಿಸಿದಾಗ ಭಾರತ ತಂಡದ ಆಟಗಾರರು, ಅಭಿಮಾನಿಗಳು ಸೋಲಿನ ಬಗ್ಗೆ ಯೋಚಿಸೋದು ಬಿಟ್ಟು, ಸೋಲೇ ಗೆಲವಿನ ಸೋಪಾನ ಎಂಬ ಮಾತನ್ನು ಸಾಕಾರಗೊಳಿಸುವತ್ತ ಗಮನಹರಿಸುವುದು ಉತ್ತಮ.

Leave a Reply