ಈಶಾನ್ಯ ರಾಜ್ಯಗಳಿಗೆ ಒಳ್ಳೆದಿನ ಬರುತ್ತಿರುವ ಉದಾಹರಣೆ, ಅರುಣಾಚಲದ ಹಳ್ಳಿಯನ್ನು ರಸ್ತೆ ಮೂಲಕ ಬೆಸೆಯಿತು ಭಾರತೀಯ ಸೇನೆ

ಸೇನೆಯ ಗಡಿ ರಸ್ತೆ ಸಂಘಟನೆಯ ಪ್ರಾತಿನಿಧಿಕ ಚಿತ್ರ

ಡಿಜಿಟಲ್ ಕನ್ನಡ ಟೀಮ್

ಭಾರತದ ಗಡಿ ರಾಜ್ಯ ಅರುಣಾಚಲ ಪ್ರದೇಶದ ಕುರಿತಂತೆ ಚೀನಾದ ಆಕ್ರಮಣ ಧೋರಣೆ ಗೊತ್ತಿರುವಂಥದ್ದೇ. ಇಂತಹ ಸಂದರ್ಭದಲ್ಲಿ ಈ ರಾಜ್ಯಕ್ಕೆ ನಾವು ತಲುಪಿದರಷ್ಟೇ ಅದು ನಮ್ಮ ದೇಶದ ತೆಕ್ಕೆಗೆ ಬರಲು ಸಾಧ್ಯ. ಹಾಗಾಗಿ ಈಗ ನಾವು ಹೇಳುತ್ತಿರೋದು, ನಾಗರೀಕತೆ ಜತೆಗೆ ಸಂಬಂಧವನ್ನೇ ಹೊಂದದ ಗಡಿ ಪ್ರದೇಶದ ಹಳ್ಳಿಯೊಂದಕ್ಕೆ ಭಾರತೀಯ ಯೋಧರು ಸಂಪರ್ಕ ಕಲ್ಪಿಸಿದ ಕಥೆಯನ್ನು.

ಇಲ್ಲಿಯವರೆಗೂ ಸಮಾಜದ ಮುಖ್ಯಭೂಮಿಕೆಯ ಜತೆ ಸಂಪರ್ಕವನ್ನು ಹೊಂದಿಲ್ಲದೇ ಪರದಾಡಿದ್ದು ಸುಬನಸಿರಿ ಜಿಲ್ಲೆಯ ಪುಟ್ಟ ಹಳ್ಳಿ ತಮೆ ಚುಂಗ್ ಚುಂಗ್. ಏರುಪೇರು ಪ್ರದೇಶ, ಪ್ರತಿಕೂಲ ಹವಾಮಾನ, ಅರಿಯಲಾಗದಷ್ಟು ಗಿಡಮರಗಳ ಸಸ್ಯರಾಶಿಯನ್ನು ಹಾಸುಹೊದ್ದು ಮಲಗಿರುವ ಈ ಹಳ್ಳಿ, ಸಹಜವಾಗಿಯೇ ಭಾರತದ ಅತ್ಯಂತ ಹಿಂದುಳಿದ ಹಳ್ಳಿಗಳಲ್ಲಿ ಪಟ್ಟಿಯಲ್ಲಿ ಸ್ಥಾನ ಪಡೆಯಬಲ್ಲದು. ಸ್ಥಳೀಯವಾಗಿ ಈ ಹಳ್ಳಿಯನ್ನು ದ ಲ್ಯಾಂಡ್ ಆಫ್ ಸ್ನೇಕ್ಸ್ ಎಂದು ಕರೆಯಲಾಗುತ್ತೆ. ಈ ಕುಗ್ರಾಮ ಏಪ್ರಿಲ್ 4ರಂದು ರಸ್ತೆ ಸಂಪರ್ಕವನ್ನು ಪಡೆಯಿತು.

ಈ ಬದಲಾವಣೆಗೆ ಮುಖ್ಯ ಕಾರಣ ಬಾರ್ಡರ್ ರೋಡ್ ಆರ್ಗನೈಸೇಷನ್ (ಬಿ ಆರ್ ಒ) ನ ‘ಪ್ರಾಜೆಕ್ಟ್ ಅರುಣಾಕ್’ ಯೋಜನೆ. ಅರುಣಾಚಲ ಪ್ರದೇಶದಲ್ಲಿ, ಉತ್ತಮ ಗುಣಮಟ್ಟದ ರಸ್ತೆ ಸಂಪರ್ಕ ಆಧುನಿಕ ಸಂವಹನ ವ್ಯವಸ್ಥೆ ಮೂಲಕ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಯಲ್ಲಿ ಪ್ರಾಜೆಕ್ಟ್ ಅರುಣಾಕ್ ಮಹತ್ವದ ಪಾತ್ರ ವಹಿಸಿದೆ.

2008ರಲ್ಲಿ ಆಗಿನ ಪ್ರಧಾನಿ ಮನಮೋಹನ್ ಸಿಂಗ್ ಅರುಣಾಚಲ ಪ್ರದೇಶಕ್ಕೆ ಭೇಟಿ ನೀಡಿದ್ದಾಗ ರಾಜ್ಯ ಸರ್ಕಾರ ಇಲ್ಲಿನ ಅಭಿವೃದ್ಧಿ ಕಾರ್ಯಗಳಿಗಾಗಿ ಸಿಎಸ್ ಜಿ ರಸ್ತೆ, ಎಎಆರ್ ಡಿಪಿ ಎನ್ಇ ಪ್ಯಾಕೆಜ್ ಮತ್ತು ಪಿಎಂ ಪ್ಯಾಕೇಜ್ ನ ಸೌಲಭ್ಯ ದೊರೆಯಬೇಕು ಎಂದು ಮನವಿ ಮಾಡಿತ್ತು. ಆಗ ಮನಮೋಹನ್ ಸಿಂಗ್ ಅವರು ಬಿ ಆರ್ ಒ ಅಡಿಯಲ್ಲಿ ಈ ಪ್ರಾಜೆಕ್ಟ್ ಅರುಣಾಕ್ ಯೋಜನೆಯನ್ನು ಘೋಷಿಸಿದರು.

ಈ ಯೋಜನೆ ಆರಂಭದಿಂದ ಇಲ್ಲಿಯವರೆಗೂ ಭಾರತೀಯ ಸೈನಿಕರ ಪಾತ್ರ ಮಹತ್ವದ್ದಾಗಿದೆ. ಆರಂಭದಲ್ಲಿ ಮೂರು ಟಾಸ್ಕ್ ಫೋರ್ಸ್ ಮೂಲಕ 7-8 ಜಿಲ್ಲೆಗಳಲ್ಲಿ ಕಾರ್ಯಾರಂಭ ಮಾಡಿತು. ಅಲ್ಲಿಂದ ಇಲ್ಲಿಯವರೆಗೂ ರಾಜ್ಯದ ಗಡಿ ಪ್ರದೇಶದ ಮೂಲೆ ಮೂಲೆಗೂ ಸಂಪರ್ಕ ಕಲ್ಪಿಸುವತ್ತ ಶ್ರಮಿಸುತ್ತಿದೆ.

ಈ ತಮೆ ಚುಂಗ್ ಚುಂಗ್ ಪ್ರದೇಶಕ್ಕೆ ಸಂಪರ್ಕ ಸಾಧಿಸಿರುವುದು ಅತ್ಯಂತ ಕಠಿಣ ಮತ್ತು ತಂತ್ರಗಾರಿಕೆಯಿಂದ ಕೂಡಿದ್ದು, ನೆರೆಯ ಚೀನಾಕ್ಕೆ ತಮ್ಮ ಉಪಸ್ಥಿತಿಯನ್ನು ಎಚ್ಚರಿಸುವಲ್ಲಿ ಪ್ರಮುಖವಾಗಿದೆ ಎಂದು ‘ಇಂಡಿಯನ್ ಡಿಫೆನ್ಸ್ ರಿವ್ಯೂ’ ನಿಯತಕಾಲಿಕದಲ್ಲಿ ವಿವರಿಸಲಾಗಿದೆ. ತಮೆ ಚುಂಗ್ ಚುಂಗ್ ಗೆ ರಸ್ತೆ ನಿರ್ಮಿಸುವ ಸವಾಲು ತುಂಬ ಕಠಿಣದ್ದಾಗಿತ್ತು. ಭೂಕುಸಿತಗಳು ಮಾಮೂಲಾಗಿದ್ದ ಇಲ್ಲಿ ಪಕ್ಕಾ ರಸ್ತೆ ನಿರ್ಮಿಸುವ ಕಾರ್ಯದಲ್ಲಿ ಮೂವರ ಪ್ರಾಣತ್ಯಾಗವಾಗಿದೆ ಹಾಗೂ ಹಲವು ಕಾಮಗಾರಿ ಸಾಧನಗಳು ಕೈಬಿಟ್ಟಿವೆ ಎಂದು ‘ದ ಅರುಣಾಚಲ್ ಟೈಮ್ಸ್’ ವರದಿ ಮಾಡಿದೆ. ಈ ಭಾರತೀಯ ಯೋಧರ ಈ ಪರಿಶ್ರಮ ತಮೆ ಚುಂಗ್ ಚುಂಗ್ ನಂತಹ ಗಡಿ ಪ್ರದೇಶದ ಹಿಂದುಳಿದ ಹಳ್ಳಿಗಳ ಜನರು ಸಂತೋಷದಿಂದ ಜೀವನ ನಡೆಸುವುದಕ್ಕೆ ದಾರಿ ಮಾಡಿಕೊಟ್ಟಿದೆ.

ಏನಿದು ಬಿ ಆರ್ ಒ?

borde road

ಈ ಬಾರ್ಡರ್ ರೋಡ್ ಆರ್ಗನೈಸೇಷನ್ ಸೈನಿಕರು, ಮಿಲಿಟರಿ ಪೊಲೀಸರು ಹಾಗೂ ಸೇನಾ ಇಂಜಿನಿಯರ್ ಗಳಿಂದ ಕೂಡಿದೆ. ಭಾರತೀಯ ಗಡಿ ಪ್ರದೇಶಗಳಲ್ಲಿ ಮೂಲಭೂತ ಸೌಕರ್ಯ ಹೆಚ್ಚಿಸುವ ನಿಟ್ಟಿನಲ್ಲಿ 1960ರ ಮೇ 7ರಂದು ಇದನ್ನು ರಚಿಸಲಾಗಿತ್ತು. ಇದು ಕೇವಲ ಅರುಣಾಚಲ ಪ್ರದೇಶವಲ್ಲ, ದೇಶದ ಒಟ್ಟು 21 ರಾಜ್ಯಗಳಲ್ಲಿ ಕಾರ್ಯನಿರ್ವಹಿಸುತ್ತಿದೆ. ಇಲ್ಲಿಯವರೆಗೂ ದೇಶದಲ್ಲಿ 33,882 ಕಿ.ಮೀ ರಸ್ತೆ, 12,200 ಮೀಟರ್ ನಷ್ಟು ಸೇತುವೆಗಳನ್ನು ನಿರ್ಮಿಸಿ, ನಿರ್ವಹಣೆ ಮಾಡುತ್ತಿದೆ. ಅಷ್ಟೇ ಅಲ್ಲ, 2004ರ ಸುನಾಮಿ, 2005ರ ಜಮ್ಮುಕಾಶ್ಮೀರ ಭೂಕಂಪದಂತಹ ಕಠಿಣ ಪರಿಸ್ಥಿತಿಯಲ್ಲಿ ಈ ತಂಡದ ಪಾತ್ರ ಮಹತ್ತರವಾಗಿದೆ.

Leave a Reply