ಪಂಜಾಬಿನ ಡ್ರಗ್ ಮಾಫಿಯಾ ಕತೆ ಹೇಳುತ್ತ ಆಸಕ್ತಿ ಹುಟ್ಟಿಸಿದೆ ‘ಉಡ್ತಾ ಪಂಜಾಬ್’ ಟ್ರೈಲರ್

ಡಿಜಿಟಲ್ ಕನ್ನಡ ಟೀಮ್

‘ಉಡ್ತಾ ಪಂಜಾಬ್’ ಹಿಂದಿ ಚಿತ್ರದ ಟ್ರೈಲರ್ ಯೂಟ್ಯೂಬಿನಲ್ಲಿ ಲಭ್ಯವಿದೆ. ಇದನ್ನು ಗಮನಿಸಬೇಕು ಎಂಬುದಕ್ಕೆ ಇರುವ ಕಾರಣ, ಜ್ವಲಂತ ವಿಷಯವೊಂದನ್ನು ಇಟ್ಟುಕೊಂಡು ಈ ಸಿನಿಮಾ ಮೂಡಿದೆ ಎಂಬುದು ಟ್ರೈಲರ್ ನಲ್ಲಿ ನಿಚ್ಚಳವಾಗುತ್ತದೆ. ನಾಯಕ- ನಾಯಕಿ ಮರ ಸುತ್ತುವುದು, ನಂತರದ ದಿನಗಳಲ್ಲಿ ವಿದೇಶ ಸುತ್ತುವ, ನಾಯಕಿಯನ್ನು ಮದುವೆಯಾಗುವುದನ್ನೇ ಮಹಾಧ್ಯೋಯವಾಗಿಸಿಕೊಂಡು ವಿಲನ್ ಗಳಿಗೆ ಚಚ್ಚುವ ವರಸೆಯ ಸಿನಿಮಾಗಳಿಗೆ ವ್ಯತಿರಿಕ್ತವಾಗಿ ಮಾಡುವ ಎಲ್ಲ ಪ್ರಯತ್ನಗಳನ್ನು ಆಸಕ್ತಿಯಿಂದ ನೋಡಬೇಕಾದ ಹಂತದಲ್ಲಿ ನಾವಿದ್ದೇವೆ.

ಹೀಗಿರುವಾಗ, ಅಭಿಷೇಕ್ ಚೌಬೆ ನಿರ್ದೇಶನದ, ಶಾಹಿದ್- ಅಲಿಯಾ ಭಟ್- ಕರೀನಾ ಮುಖ್ಯ ತಾರಾಗಣದ ಈ ಚಿತ್ರವು ಪಂಜಾಬಿನ ಮಾದಕ ವ್ಯಸನ ಸಮಸ್ಯೆಯನ್ನು ಹೇಳಲು ಹೊರಟಿದೆ ಎಂಬುದೇ ಗಮನಿಸಬೇಕಾದ ಅಂಶ.

ಕೆಲ ವರ್ಷಗಳ ಹಿಂದೆ ವಿಶ್ವಸಂಸ್ಥೆಯು ಸ್ಥಳೀಯ ವಿಶ್ವವಿದ್ಯಾಲಯದ ಸಹಾಯದಿಂದ ಮಾಡಿದ್ದ ಸಮೀಕ್ಷೆ ಪ್ರಕಾರ ಪಂಜಾಬ್ ನ ಶೇ. 73ರಷ್ಟು ಯುವಜನತೆ ಮಾದಕ ವ್ಯಸನಿಗಳು. ಬಾಬಾ ರಾಮ್ ದೇವ್ ಅವರ ಅಂದಾಜಿನ ಪ್ರಕಾರ ಈ ಪ್ರಮಾಣ ಶೇ. 80. ಪಂಜಾಬ್ ನಲ್ಲಿ ದೇಶದ ಸಶಸ್ತ್ರ ಪಡೆಯನ್ನು ಸೇರುತ್ತಿದ್ದವರ ಪ್ರಮಾಣ ಶೇ. 17ರಿಂದ ಶೇ. 0.75ಕ್ಕೆ ಇಳಿದಿದೆ ಹಾಗೂ ಇದಕ್ಕೆ ಮಾದಕ ವ್ಯಸನವೇ ಕಾರಣ ಎಂದಿರುವ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ನ ಪ್ರತಿಪಾದನೆ ಗಮನಿಸಿದಾಗ ವಾಸ್ತವ ಎಷ್ಟು ಭೀಕರವಾಗಿದೆ ಎಂಬುದು ಮನದಟ್ಟಾಗುತ್ತದೆ. ಪಂಜಾಬ್ ನಲ್ಲಿ ಅಂದಾಜಿಸಲಾಗುತ್ತಿರುವ 700 ಕೋಟಿ ರುಪಾಯಿಗಳ ಡ್ರಗ್ ಮಾಫಿಯಾದಲ್ಲಿ ಬಾದಲ್ ಸಂಪುಟದಲ್ಲಿರುವ ಪ್ರಭಾವಿಗಳೇ ಭಾಗಿಯಾಗಿರುವ ಆರೋಪ ಆ ರಾಜ್ಯದಲ್ಲಿ ಪದೇ ಪದೆ ಕೇಳಿಬರೋದು ಸಹ ವಿಶೇಷ ವಿದ್ಯಮಾನ ಅಲ್ಲ.
ಈ ಮಾದಕ ಪದಾರ್ಥಗಳ ಕೆಲವು ಭಾಗವಾದರೂ ಬರುವುದು ಆಫೀಮು ಸ್ವರ್ಗ ಅಫ್ಘಾನಿಸ್ತಾನದಿಂದ. ಇದು ಪಂಜಾಬ್ ಪ್ರವೇಶಿಸಬೇಕಾದರೆ ಗಡಿಯಲ್ಲಿ ಕೈ ಬದಲಾಯಿಸಲೇಬೇಕು. ಇಂಥ ನುಣುಚು ದಾರಿಗಳೇ ಇವತ್ತು ದೇಶಕ್ಕೆ ಉಗ್ರರನ್ನು ಒಳಬಿಟ್ಟುಕೊಳ್ಳುತ್ತಿವೆಯಾ? ಡ್ರಗ್ ಮಾಫಿಯಾ ಭ್ರಷ್ಟಾಚಾರ ದೇಶದ ಭದ್ರತೆಗೇ ಆತಂಕ ಒಡ್ಡುವ ಸ್ಥಿತಿಗೆ ಬೆಳೆದಿದೆಯೇ?

ಮೊನ್ನೆಯ ಪಠಾಣ್ ಕೋಟ್ ದಾಳಿ ನಂತರ ಈ ಪ್ರಶ್ನೆಗಳೆಲ್ಲ ಇನ್ನೂ ತೀವ್ರವಾಗಿ ಚುಚ್ಚುತ್ತಿರುವಾಗ, ಈ ಸಿನಿಮಾ ಅಲ್ಲಿನ ಡ್ರಗ್ಸ್ ಪಿಡುಗನ್ನು ಯಾವ ಆಯಾಮದಲ್ಲಿ ಚಿತ್ರಿಸಿದೆ ಎಂಬುದು ಕೌತುಕದ ಅಂಶ.

Leave a Reply