ಬ್ರಿಟನ್ ರಾಜವಂಶಸ್ಥ ದಂಪತಿ ಪ್ರವಾಸ ಭಾರತದ ಬಗ್ಗೆ ನೀಡುತ್ತಿರೋ ಚಿತ್ರಣ ಯಾವುದು?

ಸೌಮ್ಯ ಸಂದೇಶ್

ಇತಿಹಾಸ ಓದುವಾಗ ಆಶ್ಚರ್ಯ ಆಗುತ್ತಿತ್ತು. ಬ್ರಿಟನ್ ನಂಥ ಪುಟ್ಟ ದೇಶ ಇಷ್ಟು ವ್ಯಾಪಕವಾದ ಭಾರತವನ್ನು ಆಳಿದ್ದು ಹೇಗೆ, ಇಲ್ಲಿನ ವ್ಯಾಪಾರ, ಆರ್ಥಿಕತೆಯನ್ನೆಲ್ಲ ತಮ್ಮ ಕೈಗೆ ತೆಗೆದುಕೊಂಡ ಬಗೆಯಾದರೂ ಹೇಗೆ ಅಂತೆಲ್ಲ ಅನ್ನಿಸುತ್ತಿತ್ತು. ಏಕೆಂದರೆ, ಸಕಲ ಸೇನೆಬಲದೊಂದಿಗೆ ದಂಡೆತ್ತಿ ಬಂದೇನೂ ಬ್ರಿಟನ್ ಭಾರತವನ್ನು ಗೆದ್ದುಕೊಂಡಿರಲಿಲ್ಲ. ಆದರೂ ಇಲ್ಲಿನ ಜನ ಅರಸೊತ್ತಿಗೆಗೆ ಅಷ್ಟೆಲ್ಲ ವರ್ಷಗಳ ಕಾಲ ಹೇಗೆ ತಲೆಬಾಗಿಬಿಟ್ಟರು ಅಂತ ನೆನೆದಾಗಲೆಲ್ಲ ಅಚ್ಚರಿ ಎನಿಸುತ್ತಿತ್ತು.

ಆದರೆ ಏಳುದಿನಗಳ ಭಾರತ ಪ್ರವಾಸಕ್ಕೆ ಬ್ರಿಟನ್ ಯುವರಾಜ ವಿಲಿಯಮ್ಸ್ ಮತ್ತು ಪತ್ನಿ ಕೇಟ್ ಆಗಮಿಸಿದಾಗಿನ ಮಾಧ್ಯಮ ಕವರೇಜ್ ನೋಡಿದರೆ ಎಲ್ಲ ಆಶ್ಚರ್ಯಗಳು ನೆಗೆದುಬಿದ್ದವು. ಭಾರತ ಮುನ್ನುಗ್ಗುತ್ತಿದೆ, ಮಾಹಿತಿ ಯುಗದಲ್ಲಿ ಯಾರಿಗೂ ಕಡಿಮೆ ಇಲ್ಲ ಎಂಬಂತೆ ಕುಳಿತಿದ್ದೇವೆ ಎಂದೆಲ್ಲ ಹೇಳಿಕೊಳ್ಳುತ್ತಿರುವ ಈ ಸಂದರ್ಭದಲ್ಲೇ ಆ ದಂಪತಿ ಕುಳಿತಿದ್ದು- ನಿಂತಿದ್ದು- ತಿಂದಿದ್ದರ ಬಗ್ಗೆ ಈ ಪರಿ ಮಹತ್ವ ನೀಡುವ ಉತ್ಸಾಹ ಮಾಧ್ಯಮದಲ್ಲಿದೆ ಹಾಗೂ ಇದಕ್ಕೆಲ್ಲ ಓದುಗರು- ವೀಕ್ಷಕಕರು ಇದ್ದಾರೆ ಅಂತಾದರೆ ಇನ್ನೂರು ವರ್ಷಗಳ ಹಿಂದೆ ಈಸ್ಟ್ ಇಂಡಿಯಾ ಕಂಪನಿ ಬಂದು, ನಿಮಗೇನೂ ಗೊತ್ತಿಲ್ಲ- ನಮಗೆಲ್ಲ ಬಿಟ್ಟುಕೊಡಿ ಅಂದಾಗ ನಾವು ತಲೆಯಾಡಿಸಿ ಪಕ್ಕ ಸರಿದಿದ್ದರಲ್ಲಿ ಆಶ್ಚರ್ಯವೇನಿಲ್ಲ.

ಇದರರ್ಥ ರಾಜಮನೆತನದವರ ಭೇಟಿಯನ್ನು ಉಪೇಕ್ಷಿಸಿಬಿಡಬೇಕು ಅಂತೇನಲ್ಲ. ಈ ದೇಶದ ಅತಿಥಿಗಳಾಗಿ ಅವರನ್ನು ಸತ್ಕರಿಸುವುದರಲ್ಲಿ ತಪ್ಪಿಲ್ಲ. ಇದವರ ಖಾಸಗಿ ಭೇಟಿಯೇ ಹೊರತು ಪ್ರಜಾಪ್ರಭುತ್ವದ ಚೌಕಟ್ಟಿನಲ್ಲಿ ನಮ್ಮ ದೇಶದೊಂದಿಗೆ ಯಾವುದೇ ಒಡಂಬಡಿಕೆಗೆ ಸಹಿ ಹಾಕುವ ಅವಕಾಶ ಅವರಿಗೂ ಇಲ್ಲ. ಹೋಗಲಿ, ಇದರ ಹೊರತಾಗಿ ಅವರೇನಾದರೂ ಮಹಾ ಸಾಧನೆ ಮಾಡಿದ್ದರೆ, ಜನರಿಗೆ ಇನ್ಯಾವುದೋ ಬಗೆಯಲ್ಲಿ ಆನಂದ ಹಂಚುವ ಕೆಲಸ ಮಾಡುತ್ತಿದ್ದರೆ ಅವರ ಭೇಟಿ ಬಗ್ಗೆ ಆ ಬಗೆಯ ಕುತೂಹಲ ಸರಿ. ಅಂಥದ್ದೇನೂ ಇಲ್ಲ. ರಾಜಮನೆತನದವರು ಎಂಬ, ಇವತ್ತಿಗೆ ಅರ್ಥವೇ ಇಲ್ಲದ ಶೃಂಗಾರದ ಕೋಡಿಗೆ ನಾವು ಈ ಪರಿ ಗೋಣು ಅಲ್ಲಾಡಿಸೋದೇ?

ಆದರೆ ಆಗಿದ್ದೇನು?

ಕ್ರಿಕೆಟ್ ನಲ್ಲಿ ಸ್ಕೋರ್ ಗಳ ನೇರ ಮಾಹಿತಿ ನೀಡುವಂತೆ, ಈ ದಂಪತಿ ಪ್ರವಾಸದಲ್ಲಿ ಕುಂತಿದ್ದು, ತಿಂದಿದ್ದು, ಲಂಗ ಹಾರಿದ್ದನ್ನೆಲ್ಲ ಬಿತ್ತರಿಸಿದ್ದಾಯಿತು. ಈ ಪ್ರವಾಸದಲ್ಲಿ ಕೆಲ ಮಾಧ್ಯಮಗಳ ಅತಿರೇಕದ ಪ್ರಕಟಣೆಯ ಪ್ರಮುಖ ಉದಾಹರಣೆಗಳು ಹೀಗಿವೆ.

  • ದೆಹಲಿಯ ಇಂಡಿಯಾ ಗೇಟ್ ವಾರ್ ಮೆಮೊರಿಯಲ್ ಭೇಟಿ ವೇಳೆ ಕೇಟ್ ಲಂಗ ಹಾರಿದ ಚಿತ್ರ ಟೈಮ್ಸ್ ಆಫ್ ಇಂಡಿಯಾದ ಮೊದಲ ಪುಟದಲ್ಲಿ ಪ್ರಕಟವಾಯ್ತು. ಮಾಧ್ಯಮದ ಕೆಲವರು ಇದನ್ನು ಮರ್ಲಿನ್ ಮನ್ರೋ ಶೈಲಿಗೆ ಹೋಲಿಕೆ ಮಾಡಿ ಪುನೀತರಾದರು.
  • ಎರಡು ಮಕ್ಕಳ ತಾಯಾಗಿದ್ದರೂ ಕೇಟ್ ಎಷ್ಟು ಸಪೂರ ದೇಹ ಕಾಯ್ದುಕೊಂಡಿದ್ದಾರೆ ಎಂಬ ವರ್ಣನೆಯ ವರದಿಗಳೂ ಪ್ರಕಟವಾದವು.
  • ವಿಲಿಯಮ್ಸ್ ಮೊದಲ ಬಾರಿಗೆ ದೋಸೆಯನ್ನು ಸವಿದ ಬಗ್ಗೆ 400 ಪದಗಳ ಲೇಖನ. ಅದರಲ್ಲಿ ವಿಲಿಯಮ್ಸ್ ಹೇಗೆ ದೋಸೆಯನ್ನು ಮುರಿದು ತಿಂದು ಅದರ ರುಚಿಯನ್ನು ಸವಿದು ಆನಂದಿಸಿದ. ಹಾಗೂ ಕೇಟ್ ಅದನ್ನು ತಿನ್ನದಿರುವ ಕುರಿತ ಮಾಹಿತಿ.

ಬ್ರಿಟನ್ ರಾಜಕುವರನ ಪ್ರವಾಸ ನಮ್ಮ ಬಗ್ಗೆ, ವಿಶೇಷವಾಗಿ ನಮ್ಮ ಮಾಧ್ಯಮದ ಬಗ್ಗೆ ಜಗತ್ತಿಗೆ ಸಾರುತ್ತಿರುವ ಸಂದೇಶ ಇಷ್ಟು. ಭಾರತೀಯರನ್ನು ಇಂಪ್ರೆಸ್ ಮಾಡುವುದಕ್ಕೆ ಬುದ್ಧಿಬಲ, ವಿಚಾರದ ಬಲಗಳೇನೂ ಬೇಕಾಗಿಲ್ಲ. ಇದು ರಾಯಲ್ ರಕ್ತ ಎದುಬಿಟ್ಟರೆ ಅಡ್ಡಡ್ಡ ಬೀಳುವ ಮನಸ್ಥಿತಿ ಈಗಲೂ ಇದೆ!

1 COMMENT

  1. sariyaagi heliddeeri.
    gandhi samadhi bali chappali bittiddu, avaru endooo bari kaalalli hejje idade idda bagge banda varadi bittubittiri??

Leave a Reply