ಡಿಜಿಟಲ್ ಕನ್ನಡ ಟೀಮ್
ವಿಶ್ವ ಜಿಮ್ನಾಸ್ಟಿಕ್ ನಲ್ಲಿ ಭಾರತದ ಸಾಧನೆ ಹೇಳಿಕೊಳ್ಳುವಂತಿಲ್ಲ. ಆದರೆ, ದೇಶದ ಭರವಸೆಯ ಯುವ ಮಹಿಳಾ ಜಿಮ್ನಾಸ್ಟಿಕ್ ಸ್ಪರ್ಧಿ ದೀಪಾ ಕರ್ಮಾಕರ್ ಈ ಸ್ಪರ್ಧೆಯಲ್ಲಿ ಭಾರತದ ಕೀರ್ತಿ ಪತಾಕೆ ಹಾರಿಸುವ ಭರವಸೆ ಮೂಡಿಸಿದ್ದಾರೆ. ಸೋಮವಾರ ದೀಪಾ ಕರ್ಮಾಕರ್ ರಿಯೋ ಒಲಿಂಪಿಕ್ಸ್ ಗೆ ಅರ್ಹತೆ ಪಡೆದಿದ್ದು, ಪ್ರತಿಷ್ಠಿತ ಕ್ರೀಡಾಕೂಟಕ್ಕೆ ಅರ್ಹತೆ ಪಡೆದ ಮೊದಲ ಭಾರತೀಯ ಮಹಿಳಾ ಜಿಮ್ನಾಸ್ಟಿಕ್ ಪಟು ಎಂಬ ಇತಿಹಾಸವನ್ನೂ ನಿರ್ಮಿಸಿದ್ದಾರೆ.
ರಿಯೊ ಡಿ ಜನೈರೊದಲ್ಲಿ ನಡೆದ ಆರ್ಟಿಸ್ಟಿಕ್ ವಿಭಾಗದ ಅರ್ಹತಾ ಸುತ್ತಿನಲ್ಲಿ 22 ವರ್ಷದ ದೀಪಾ ಕರ್ಮಾಕರ್ (ವಾಲ್ಟ್- 15,066, ಅನ್ ಇವನ್ ಬಾರ್ಸ್- 11,700, ಬೀಮ್- 13,366 ಮತ್ತು ಫ್ಲೋರ್ ಎಕ್ಸರ್ ಸೈಜ್- 12,566) ಒಟ್ಟು 52,698 ಅಂಕಗಳನ್ನು ಕಲೆ ಹಾಕಿದರು.
ದೀಪಾ ಕರ್ಮಾಕರ್ ಪ್ರೊಡುನೇವ್ ಪೂರ್ಣಗೊಳಿಸಿದ ಕ್ಷಣ ಹೀಗಿದೆ ನೋಡಿ
ಸುದೀರ್ಘ 52 ವರ್ಷಗಳ ಇತಿಹಾಸದಲ್ಲಿ ಭಾರತದ ಮಹಿಳೆಯರು ಈವರೆಗೂ ಒಲಿಂಪಿಕ್ಸ್ ಗೆ ಅರ್ಹತೆಯನ್ನೇ ಪಡೆದಿರಲಿಲ್ಲ ಎಂಬುದು ಕಹಿ ಸತ್ಯ. ನಿಜ, ಆರಂಭದಲ್ಲಿ ಜಿಮ್ನಾಸ್ಟಿಕ್ ಎಂಬುದು ಭಾರತೀಯರಿಗೆ ಅದರಲ್ಲೂ ಮಹಿಳೆಯರಿಗೆ ದೂರದ ವಿಷಯವೇ ಆಗಿತ್ತು. ಕಾಲ ಕ್ರಮೇಣ ಕೆಲ ವರ್ಷಗಳಿಂದ ಈ ಸ್ಪರ್ಧೆಯಲ್ಲಿ ಮಹಿಳೆಯರು ತೊಡಗಿಸಿಕೊಳ್ಳಲು ಆರಂಭಿಸಿದ್ದಾರೆ. ಇದರ ಪರಿಣಾಮ ಈವರೆಗೂ ಭಾರತ ಮಹಿಳಾ ಜಿಮ್ನಾಸ್ಟಿಕ್ ಸ್ಪರ್ಧಿ ಪ್ರತಿಷ್ಠಿತ ಕ್ರೀಡಾಕೂಟಕ್ಕೆ ಅರ್ಹತೆ ಪಡೆಯಲು ವಿಫಲರಾಗಿದ್ದರು.
ಭಾರತಕ್ಕೆ ಸ್ವತಂತ್ರ ಬಂದಾಗಿನಿಂದ ಲೆಕ್ಕ ಹಾಕಿದರೆ, ಈವರೆಗೂ ಭಾರತದ 11 ಪುರುಷ ಜಿಮ್ನಾಸ್ಟಿಕ್ ಸ್ಪರ್ಧಿಗಳು ಅರ್ಹತೆ ಪಡೆದಿದ್ದಾರೆ.
ದೀಪಾ ಕರ್ಮಾಕರ್ ಈವರೆಗಿನ ಹಾದಿ..
ಭಾರತದ ಮಹಿಳೆಯರು ಕ್ರೀಡೆಯಲ್ಲಿ ಆಸಕ್ತಿ ಹೊಂದಿದ್ದರೆ ಬ್ಯಾಡ್ಮಿಂಟನ್, ಟೆನಿಸ್, ಹಾಕಿ, ಟೇಬಲ್ ಟೆನಿಸ್ ನತ್ತ ಮುಖ ಮಾಡುವುದು ಸಹಜ. ಆದರೆ, ತ್ರಿಪುರಾ ಮೂಲದ ದೀಪಾ ಕರ್ಮಾಕರ್ ತಮ್ಮ 6ನೇ ವಯಸ್ಸಿನಲ್ಲಿ ಜಿಮ್ನಾಸ್ಟಿಕ್ ಅಭ್ಯಾಸ ಆರಂಭಿಸಿದರು. ಅಲ್ಲಿಂದ 16 ವರ್ಷಗಳ ಕಠಿಣ ಪರಿಶ್ರಮ ಇಲ್ಲಿಯವರಗೂ ತಂದು ನಿಲ್ಲಿಸಿದೆ.
ದೀಪಾ ಕರ್ಮಾಕರ್ ಹಾದಿ ಏನು ಹೂ ಹಾಸಿನದ್ದಾಗಿರಲಿಲ್ಲ. ಚಿಕ್ಕ ವಯಸ್ಸಿನಲ್ಲಿ ಹಿರಿಯ ಜಿಮ್ನಾಸ್ಟರ್ ವಿಶ್ವೇಶ್ವರ್ ನಂದಿ ಅವರ ಗರಡಿ ಸೇರಿದರು. ಆರಂಭದಲ್ಲೇ ದೀಪಾಗೆ ಎದುರಾದ ದೊಡ್ಡ ಸವಾಲು ಅಂದರೆ, ಅದು ಆಕೆಯ ಚಪ್ಪಟೆಯ ಪಾದ. ಜಿಮ್ನಾಸ್ಚಿಕ್ ಸ್ಪರ್ಧಿಗಳಿಗೆ ಪಾದ ಚಪ್ಪಟೆಯಾಗಿರಬಾರದು. ಇದು ಸ್ಪ್ರಿಂಗ್ ಮತ್ತು ಜಂಪ್ ವೇಳೆ ಸಾಕಷ್ಟು ಸಮಸ್ಯೆ ಎದುರಾಗುತ್ತದೆ. ಈ ವಿಷಯದಲ್ಲಿ ದೀಪಾ ಸಹ ಹಲವು ಸಮಸ್ಯೆ ಎದುರಿಸಿದರು. ದೀಪಾ ಅವರನ್ನು ಸರಿಯಾದ ರೀತಿಯಲ್ಲಿ ಸಂಯೋಜಿಸಲು ಹರ ಸಾಹಸ ಪಡಬೇಕಾಯಿತು ಎಂದು ಸ್ವತಃ ವಿಶ್ವೇಶ್ವರ್ ಹೇಳಿಕೊಂಡಿದ್ದಾರೆ. ಆಕೆಯ ಈವರೆಗಿನ ಹಾದಿಯ ಪ್ರಮುಖ ಹೈಲೈಟ್ಸ್ ಹೀಗಿದೆ.
- 14ನೇ ವಯಸ್ಸಿನಲ್ಲಿ ಜಲಪೈಗುರಿಯಲ್ಲಿ ನಡೆದ ಕಿರಿಯರ ರಾಷ್ಟ್ರ ಮಟ್ಟದ ಸ್ಪರ್ಧೆಯಲ್ಲಿ ದೀಪಾ ಪ್ರಶಸ್ತಿ ಗೆದ್ದಳು. 2007ರಿಂದ ಇಲ್ಲಿಯವರೆಗೂ ದೀಪಾರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದು, 67 ಚಿನ್ನದ ಪದಕ ಸೇರಿದಂತೆ ಒಟ್ಟು 77 ಪದಕಗಳನ್ನು ಬಾಕಿಕೊಂಡಿದ್ದಾರೆ.
- ಜಿಮ್ನಾಸ್ಟಿಕ್ ನಲ್ಲಿ ಅತ್ಯಂತ ಕಠಿಣ ವಿಭಾಗ ಪ್ರೊಡುನೇವ್ ನಲ್ಲಿ ಸಂಪೂರ್ಣ ನಿಯಂತ್ರಣ ಸಾಧಿಸಿದ್ದಾರೆ. ಈ ವಿಭಾಗದಲ್ಲಿ ವಿಶ್ವದಲ್ಲಿ ಅತಿ ಹೆಚ್ಚು ಅಂಕ (15,100) ಸಂಪಾದಿಸಿದ ಸಾಧನೆ ಈಕೆಯದು. ಉಳಿದಂತೆ ಡೊಮಿನಿಕನ್ ರಿಪಬ್ಲಿಕ್ ನ ಪೆನಾ ಮತ್ತು ಈಜಿಪ್ಟ್ ನ ಫಾದ್ವಾ ಮೊಹಮದ್ ನಂತರದ ಸ್ಥಾನಗಳಲ್ಲಿದ್ದಾರೆ.
- 2015ರ ವರ್ಲ್ಡ್ ಆರ್ಟಿಸ್ಟಿಕ್ ಜಿಮ್ನಾಸ್ಟಿಕ್ಸ್ ಚಾಂಪಿಯನ್ ಶಿಪ್ ಟೂರ್ನಿಯ ಪ್ರಶಸ್ತಿ ಸುತ್ತಿಗೆ ಪ್ರವೇಶಿಸಿದ್ದರು. ಈ ಟೂರ್ನಿಯಲ್ಲಿ 14,863 ಅಂಕಗಳನ್ನು ಸಂಪಾದಿಸಿ 5ನೇಸ್ಥಾನ ಪಡೆದರು. ಆ ಮೂಲಕ ಈ ಟೂರ್ನಿಯ ಫೈನಲ್ ಸುತ್ತಿಗೆ ಪ್ರವೇಶಿಸಿದ ಭಾರತದ ಮೊದಲ ಮಹಿಳೆ ಎಂಬ ಸಾಧನೆ ಮಾಡಿದರು.
- 2014ರ ಇಂಚಾನ್ ಏಷ್ಯನ್ ಕ್ರೀಡಾಕೂಟದಲ್ಲಿ ನಾಲ್ಕನೇ ಸ್ಥಾನ ಪಡೆದರು.
ಒಟ್ಟಿನಲ್ಲಿ ಆಗಸ್ಟ್ ನಲ್ಲಿ ಆರಂಭವಾಗಲಿರುವ ರಿಯೋ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತದ ಭರವಸೆಯ ಸ್ಪರ್ಧಿಗಳಲ್ಲಿ ದೀಪಾ ಕರ್ಮಾಕರ್ ಸಹ ಒಬ್ಬರಾಗಿದ್ದು, ಪದಕ ಪಡೆಯುವಲ್ಲಿ ಯಶಸ್ವಿಯಾಗಲಿ ಎಂಬುದು ಎಲ್ಲರ ಹಾರೈಕೆ.