ಚಬಹರ್ ಬಂದರು ಒಪ್ಪಂದದಿಂದ ಚೀನಾ-ಪಾಕಿಸ್ತಾನಗಳಿಗೆ ಭಾರತ ತಿರುಗೇಟು ನೀಡಿದ್ದು ಹೇಗೆ ಗೊತ್ತೇ?

ಡಿಜಿಟಲ್ ಕನ್ನಡ ಟೀಮ್

ರಕ್ಷಣಾಮಂತ್ರಿ ಮನೋಹರ ಪಾರಿಕರ್ ಅವರು ಚೀನಾ ಪ್ರವಾಸದಲ್ಲಿದ್ದರೆ, ವಿದೇಶ ವ್ಯವಹಾರ ಸಚಿವೆ ಸುಷ್ಮಾ ಸ್ವರಾಜ್ ಅವರು ಇರಾನ್ ಭೇಟಿಯಲ್ಲಿದ್ದಾರೆ. ಅತ್ತ ಚೀನಿ ಮಾಧ್ಯಮಗಳು ಪರಿಕರ್ ಭೇಟಿ ಸಂದರ್ಭದಲ್ಲಿ ‘ಭಾರತ ಎಲ್ಲರಿಂದಲೂ ಪುಸಲಾಯಿಸಿಕೊಳ್ಳಲು ಬಯಸುವ ಸುಂದರಿಯಂತೆ ವರ್ತಿಸುತ್ತಿದೆ’ ಅಂತ ವಿಶ್ಲೇಷಣೆಗಳನ್ನು ಹೆಣೆಯುತ್ತಿರುವುದರಲ್ಲೇ ನಮ್ಮ ಮೇಲಿನ ತುರುಸು ಎಷ್ಟಿದೆ ಎಂಬುದು ಗೊತ್ತಾಗುತ್ತಿದೆ. ಆದರೆ ಅತ್ತ ಪರಿಕರ್ ಪ್ರವಾಸದಲ್ಲಿರುವಾಗಲೇ ಇಲ್ಲಿ ಸುಷ್ಮಾರ ಇರಾನ್ ಭೇಟಿ ಒಂದರ್ಥದಲ್ಲಿ ಚೀನಾಕ್ಕೆ ಟಾಂಗ್ ಕೊಟ್ಟಂತೆಯೇ ಇದೆ. ಏಕೆಂದರೆ ಸುಷ್ಮಾ ಸ್ವರಾಜ್ ಇರಾನ್ ನೊಂದಿಗೆ ಭಾನುವಾರ ಮಾತುಕತೆಗೆ ಆರಂಭಿಸಿದ ಮೊದಲ ಸುತ್ತಿನಲ್ಲೇ, ಈಗಾಗಲೇ ಒಪ್ಪಿಕೊಂಡಿರುವ ಚಬಹರ್ ಬಂದರು ನಿರ್ಮಾಣವನ್ನು ತ್ವರಿತಗೊಳಿಸುವ ನಿಟ್ಟಿನಲ್ಲಿ ಚರ್ಚಿಸಿದ್ದಾರೆ.

ಪಾಕಿಸ್ತಾನವು ಗ್ವಾದರ್ ಬಂದರನ್ನು ಚೀನಿಯರಿಗೆ ಒಪ್ಪಿಸುವ ಮೂಲಕ ಮಧ್ಯ ಏಷ್ಯ ವ್ಯಾಪಾರದಲ್ಲಿ ಭಾರತದ ಮೇಲೆ ಪರಾಕ್ರಮ ಸಾಧಿಸುವ ಪ್ರಯತ್ನ ಮಾಡಿದ್ದಕ್ಕೆ ಪ್ರತಿಯಾಗಿ ಇರಾನ್ ನ ಚಬಹರ್ ಬಂದರನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದೆ ಭಾರತ. ಭಾನುವಾರ ಇರಾನ್ ನ ವಿದೇಶಾಂಗ ಸಚಿವ ಮೊಹಮದ್ ಜಾವೆದ್ ಜರಿಫ್ ಭೇಟಿ ಮಾಡಿದ ಸುಷ್ಮಾ ಸ್ವರಾಜ್ ಅವರು ಬಂದರು ಯೋಜನೆ ವೇಗವಾಗಿ ಜಾರಿಗೊಳಿಸಲು ಒಪ್ಪಿಗೆ ಸೂಚಿಸಿದ್ದಾರೆ. ಭಾರತ ಈ ಬಂದರಿನಲ್ಲಿ ವರ್ಷಕ್ಕೆ 2.5 ಮಿಲಿಯನ್ ಟನ್ ಗಳಷ್ಟು ಪದಾರ್ಥ ವಹಿವಾಟು ನಡೆಸುವ ಸಾಮರ್ಥ್ಯವನ್ನು ಹೊಂದಿದೆ.

ಈ ಹಿಂದೆ ಪಾಕಿಸ್ತಾನ ತನ್ನ ಪ್ರದೇಶದಿಂದ ಅಫ್ಘಾನಿಸ್ತಾನ ಮತ್ತು ಇತರೆ ಕೇಂದ್ರ ಏಷ್ಯಾಭಾಗಕ್ಕೆ ಭಾರತದ ಉತ್ಪನ್ನಗಳನ್ನು ರಫ್ತು ಮಾಡುವುದಕ್ಕೆ ಅವಕಾಶ ನೀಡಿರಲಿಲ್ಲ. ಕೆಲ ವರ್ಷಗಳ ಹಿಂದೆ ಅಫ್ಘಾನಿಸ್ತಾನದಿಂದ ಭಾರತಕ್ಕೆ ಸರಕು ರವಾನಿಸಲು ಮಾತ್ರ ಅವಕಾಶ ನೀಡಿತ್ತು. ಹಾಗಾಗಿ ಭಾರತಕ್ಕೆ ಕೇಂದ್ರ ಏಷ್ಯಾ ರಾಷ್ಟ್ರಗಳ ಸಂಪರ್ಕ ಸಾಧಿಸುವುದು ಸವಾಲಾಗಿತ್ತು. ಚಬಹರ್ ಒಪ್ಪಂದದಿಂದಾಗಿ ಪಾಕಿಸ್ತಾನದ ತಡೆ ನಿವಾರಿಸಿಕೊಂಡು ಅಫ್ಘಾನಿಸ್ತಾನ ಮತ್ತು ಮಧ್ಯ ಏಷ್ಯಾ ರಾಷ್ಟ್ರಗಳನ್ನು ಸಂಪರ್ಕಿಸಲು ಮಾರ್ಗ ತೆರೆದುಕೊಂಡಿದೆ.

ಇದೇ ಮೊದಲ ಬಾರಿಗೆ ಭಾರತ ವಿದೇಶಿ ಬಂದರಿನ ಮೇಲೆ ಬಂಡವಾಳ ಹೂಡುತ್ತಿದ್ದು, ಚಬಹರ್ ಬಂದರು ಯೋಜನೆಗೆ 20 ಬಿಲಿಯನ್ ಅಮೆರಿಕನ್ ಡಾಲರ್ ನಷ್ಟು ವೆಚ್ಚ ಮಾಡುತ್ತಿದೆ. ಈ ಯೋಜನೆಯಿಂದ ಭಾರತದ ಉತ್ಪನ್ನಗಳನ್ನು ಸರಬರಾಜು ಮಾಡುವ ಸಮಯ ಮತ್ತು ವೆಚ್ಚದಲ್ಲಿ ಮೂರನೇ ಒಂದರಷ್ಟು ಕಡಿಮೆಯಾಗಲಿದೆ. ಈ ಬಂದರಿನಿಂದ ಅಫ್ಘಾನಿಸ್ಥಾನಕ್ಕೆ ಸಂಪರ್ಕ ಸಾಧಿಸಲು ಭಾರತ 220 ಕಿ.ಮೀ ರಸ್ತೆಯನ್ನು ನಿರ್ಮಿಸಿದ್ದು, ಪಾಕಿಸ್ತಾನದ ಹೊರತಾಗಿ ಅಫ್ಘಾನಿಸ್ತಾನ ತಲುಪಲು ನೆರವಾಗುತ್ತದೆ.

port

ಕೆಲ ವರ್ಷಗಳ ಹಿಂದೆ ಚೀನಾ, ಪಾಕಿಸ್ತಾನದ ಗ್ವಾದರ್ ನಲ್ಲಿ ಬಂದರು ನಿರ್ಮಾಣ ಯೋಜನೆ ಮೂಲಕ ಭಾರತಕ್ಕೆ ಪೆಟ್ಟು ನೀಡಿತು. ಇದು ಭಾರತೀಯ ಭೂಪ್ರದೇಶಕ್ಕಿಂದ 400 ಕಿ.ಮೀ ದೂರವಿದ್ದು, ಈ ಬಂದರು ಯೋಜನೆಯಿಂದ ಪಾಕಿಸ್ತಾನ ನೌಕಾ ಸೇನೆಗೆ ಬಲ ಬಂದಂತಾಗಿದೆ. ಗ್ವಾದರ್ ಬಂದರಿನಿಂದ ಚೀನಾ ತನ್ನ ಸಮುದ್ರ ಮಾರ್ಗವನ್ನು ವಿಸ್ತರಿಸಿಕೊಂಡಿತ್ತು. ಅಲ್ಲದೆ ಭಾರತದ ಸಮುದ್ರ ಮಾರ್ಗ ಹಾಗೂ ನಾಕೌ ಪಡೆಯ ಚಲನವಲನದ ಮೇಲೆ ಕಣ್ಣಿಡುವುದು ಈ ಯೋಜನೆಯ ಮುಖ್ಯ ಉದ್ದೇಶಗಳಲ್ಲಿ ಒಂದಾಗಿತ್ತು.

ಪಾಕ್ ಮತ್ತು ಚೀನಾದ ಗ್ವಾದರ್ ಬಂದರು ಒಪ್ಪಂದದಿಂದ ಕೇವಲ ಭಾರತವಷ್ಟೇ ಅಲ್ಲ, ಇರಾನ್ , ಯುಎಇ ಮತ್ತು ಅಮೆರಿಕಕ್ಕೂ ಪರೋಕ್ಷವಾಗಿ ಪೆಟ್ಟು ಬಿದ್ದಿತ್ತು. ಹಾಗಾಗಿ ಭಾರತ, ಇರಾನ್ ಜತೆಗೆ ಚಬಹರ್ ಬಂದರಿನ ಯೋಜನೆ ಈ ಎರಡು ದೇಶಗಳ ತಂತ್ರಕ್ಕೆ ಪ್ರತಿತಂತ್ರವಾಗಿದೆ.

Leave a Reply