ಜನ ಕುಡಿಯೋದಿಕ್ಕೆ ನೀರಿಲ್ಲದಿದ್ದರೂ ಪರವಾಗಿಲ್ಲ, ಆದರೆ ಸಿದ್ದರಾಮಯ್ಯನವರ ಕಾರು ಮಾತ್ರ ಧೂಳು ಕುಡಿಯಬಾರದು!

ಡಿಜಿಟಲ್ ಕನ್ನಡ ಟೀಮ್

ಅದ್ಯಾವ ಪುರುಷಾರ್ಥಕ್ಕೆ ಇವರೆಲ್ಲ ಬರ ಅಧ್ಯಯನ ಮಾಡ್ತಿದ್ದಾರೋ ಗೊತ್ತಾಗ್ತಿಲ್ಲ.

ಮಳೆ-ಬೆಳೆ ಕೈಕೊಟ್ಟು, ನೀರು-ಮೇವು ಕೊರತೆ ಆಗಿರೋದನ್ನ ಬರ ಅಂತಾರೆ. ಪರಿಸ್ಥಿತಿ ಪರಿಶೀಲನೆ ಮಾಡಿ ಪರಿಹಾರ ಕಲ್ಪಿಸೋದು ಆಡಳಿತ ನಡೆಸೋರ ಹೊಣೆ. ಆದರೆ ಬರ ಬಿದ್ದಿರೋ ನೀರು ಇವರ ಅಧ್ಯಯನ ಪ್ರಕ್ರಿಯೆಗೆ ಪೋಲಾಗುತ್ತದೆ ಅಂದ್ರೆ ಎಂಥ ವೈರುಧ್ಯ ನೋಡಿ.

ಬಾಗಲಕೋಟೆ ಜಿಲ್ಲೆ ಬೀಳಗಿಯಲ್ಲಿ ಬರ ನೋಡೋದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಾಗೋ ಮಾರ್ಗದಲ್ಲಿ ಮಣ್ಣೇಳಬಾರದು ಅಂತ ಸಾವಿರಾರು ಲೀಟರ್ ನೀರನ್ನ ರಸ್ತೆಗೆ ಸುರಿದಿದ್ದಾರೆ. ಜನರಿಗೆ ಕುಡಿಯೋದಿಕ್ಕೆನೀರಿಲ್ಲದಿದ್ದರೂ ಪರವಾಗಿಲ್ಲ. ಆದರೆ ಸಿದ್ದರಾಮಯ್ಯನವರ ಕಾರು ಮಾತ್ರ ಧೂಳು ಕುಡಿಯಬಾರದು! ವಿಪರ್ಯಾಸ ಅಂದ್ರೆ ಇದಲ್ಲವೇ?

ಈ ಬಗ್ಗೆ ಬೀಳಗಿ ಕಾಂಗ್ರೆಸ್ ಶಾಸಕ ಜಿ.ಟಿ. ಪಾಟೀಲ್ ಹೇಳ್ತಾರೆ, ‘ಸುರಿದಿರೋದು ವೇಸ್ಟ್ ವಾಟರ್. ಎಲ್ಲಕ್ಕಿಂತ ಮಿಗಿಲಾಗಿ ನಮ್ಮ ಕ್ಷೇತ್ರದಲ್ಲಿ ನೀರಿಗೇ ಸಮಸ್ಯೆಯೇ ಇಲ್ಲ’ ಅಂತಾ. ನೀರು ಅದ್ಹೇಗೆ ನಿಷ್ಪ್ರಯೋಜಕ ಅಂತಾ ಗೊತ್ತಾಗಲಿಲ್ಲ. ಒಂದೊಮ್ಮೆ ಅದು ಕುಡಿಯಲು ಯೋಗ್ಯ ಅಲ್ಲ ಅಂತಾದರೆ ಯಾವುದಾದರೂ ಬೆಳೆಗೋ, ಗಿಡಕ್ಕೊ, ಮರಕ್ಕೋ ಬಳಸಬಹುದಿತ್ತಲ್ಲ. ಮುಖ್ಯಮಂತ್ರಿ ಸಾಗುವ ರಸ್ತೇಲಿ ಧೂಳೆದ್ದುಬಿಟ್ಟರೇ ಅದ್ಯಾವ ಸಾಮ್ರಾಜ್ಯ ಹಾಳಾಗಿ ಹೋಗುತ್ತೋ ಗೊತ್ತಿಲ್ಲ. ತೀರಾ ವಿಚಿತ್ರ ಅಂತಂದರೆ ನೀರಿನ ಸಮಸ್ಯೆಯೇ ಇಲ್ಲದ ಜಾಗದಲ್ಲಿ ಸಿಎಂಗೆ ಇದ್ದ ಕೆಲಸವಾದರೂ ಏನು? ಅವರು ಅಲ್ಲಿಗೆ ಹೋಗಿದ್ದಾದರೂ ಯಾಕೆ, ಸಿಎಂ ನಿಜಕ್ಕೂ ಬರ ಅಧ್ಯಯನ ಮಾಡ್ತಿದ್ದಾರೋ ಅಥವಾ ಬರ ಅಧ್ಯಯನ ನೆಪದಲ್ಲಿ ಸುಮ್ನೆ ಟೂರ್ ಮಾಡ್ತೀದ್ದಾರೋ ಅರ್ಥವೇ ಆಗ್ತಿಲ್ಲ.

ಯಾಕೆ ಈ ಮಾತು ಅಂತಂದ್ರೆ, ಮೊನ್ನೆ ಸಿಎಂ ಭೇಟಿ ಕೊಟ್ಟ ಯಾದಗಿರಿ ಜಿಲ್ಲೆ ಶಹಾಪುರದ ಗುಂಡಳ್ಳಿ ಕೆರೆಯಲ್ಲಿ ನಕಲಿ ಹೂಳೆತ್ತುವ ಕಾರ್ಯಕ್ರಮ ಆಯೋಜನೆ ಆಗಿತ್ತು. ಸಿಎಂ ಬಂದಾಗ ಪೆಂಡಾಲ್ ಹಾಕಿ, 200 ಮಂದಿ ಕಾರ್ಮಿಕರನ್ನು ಸೇರಿಸಲಾಗಿತ್ತು. ಸಿಎಂ ಅಲ್ಲಿಂದ ಮರಳುತ್ತಿದ್ದಂತೆ ಹೂಳೆತ್ತುವ ಸಾಧನಗಳ ಜತೆ ಕಾರ್ಮಿಕರೂ ನಾಪತ್ತೆ. ಹೂಳು ಅಲ್ಲೇ ಇದೆ, ಬರ ಬಿಡಿಸಿರುವ ಬಿರುಕುಗಳ ಅಡಿಯಲ್ಲೇ!

ಅದೇ ರೀತಿ ಕಲಬುರಗಿಗೆ ಸಿಎಂ ಭೇಟಿ ಕೊಟ್ಟಾಗ ನಕಲಿ ಗೋಶಾಲೆ ಸೃಷ್ಟಿಯಾಗಿತ್ತು. ಗೋವುಗಳು ಇಲ್ಲದ ಕಡೆ ಮೇವುಮನೆ ಮಾಡಿ, ಅಕ್ಕಪಕ್ಕದ ಊರಿನ ಜನರಿಂದ ಬಲವಂತವಾಗಿ ಗೋವುಗಳನ್ನು ತರಿಸಿ ಕಟ್ಟಲಾಗಿತ್ತು. ಸಿಎಂ ವಾಪಸು ಹೋಗುತ್ತಿದ್ದಂತೆ ಗೋವುಗಳು ಆಯಾ ಮಾಲೀಕರ ಮನೆಗೆ ಮರಳಿ, ಮೇವುಮನೆ ಮಾಯವಾಗಿತ್ತು.

ಸಿದ್ದರಾಮಯ್ಯನವರು ಬರದ ಟೂರ್ ಶುರು ಮಾಡಿದ ದಿನದಿಂದಲೂ ಬರೀ ಇಂಥವೇ ದೂರುಗಳು. ಬರ ಇರೋ ಕಡೆ ಕಾಟಾಚಾರಕ್ಕೆ ಭೇಟಿ ಕೊಡ್ತಾರೆ, ಇಲ್ಲದ ಕಡೆ ಈ ರೀತಿ ಸೃಷ್ಟಿ ಮಾಡ್ತಾರೆ ಅಂತಾ. ಯಾಕೆ ಬೇಕು ಇಂಥ ಬೂಟಾಟಿಕೆಗಳು? ಬರ ಅಧ್ಯಯನಕ್ಕಾಗಲಿ, ಪರಿಹಾರ ಕಲ್ಪಿಸುವುದಕ್ಕಾಗಲಿ ಮನಸ್ಸು ಮತ್ತು ಬದ್ಧತೆ ಇಲ್ಲದ ಮೇಲೆ ಯಾಕೆ ಹೀಗೆ ಸಮಯ ಮತ್ತು ಬೊಕ್ಕಸದ ಹಣ ಪೋಲು ಮಾಡಬೇಕು? ಸಿಎಂ ಟೂರು ಎಂದರೆ ಸುಮ್ಮನೆ ಆಗುವುದಿಲ್ಲ, ಇಡೀ ಜಿಲ್ಲಾಡಳಿತವೇ ಅವರ ಬಾಲಂಗೋಚಿ ಆಗಿರುತ್ತದೆ. ಹಿಂಡು-ಹಿಂಡು ಪಟಲಾಂ ಬೆನ್ನಿಗಿರುತ್ತದೆ. ಜನರ ತೆರಿಗೆ ಹಣ ಈ ರೀತಿ ನಿರರ್ಥಕ ಕಾರಣಗಳಿಗೆ ವ್ಯಯ ಆಗುವುದು ಎಷ್ಟರ ಮಟ್ಟಿಗೆ ಸರಿ? ಈ ಸಿಎಂಗೆ ಮಾಡೋಕೆ ಕೆಲಸ ಇಲ್ಲದೇ ಹೀಗೆ ಸುಖಾಸುಮ್ಮನೆ ತಿರುಗುತ್ತಿದ್ದಾರೆ ಅಂತ ಜನ ಭಾವಿಸುವುದಿಲ್ಲವೇ? ನೀವೇನೊ ಜನರನ್ನು ಮೂರ್ಖರನ್ನಾಗಿಸುತ್ತೇವೆ ಅಂತ ಹೊರಟಿರಬಹುದು. ಆದರೆ ಅವರು ಮೂರ್ಖರಾಗಬೇಕಲ್ಲಾ..?

ಮಹಾರಾಷ್ಟ್ರದಲ್ಲಿ ಭೀಕರ ಬರಗಾಲ ಇರೋ ಕಾರಣಕ್ಕೆ, ಅಲ್ಲಿ ನಡೆಯಬೇಕಿದ್ದ ಐಪಿಎಲ್ ಕ್ರಿಕೆಟ್ ಪಂದ್ಯಗಳನ್ನು ಬೇರೆ ರಾಜ್ಯಗಳಿಗೆ ಸ್ಥಳಾಂತರ ಮಾಡಲಾಗಿದೆ. ಫೈನಲ್ ಪಂದ್ಯ ಬೆಂಗಳೂರಿಗೂ ಶಿಫ್ಟ್ ಆಗಿದೆ. ಪಿಚ್ ನಿರ್ವಹಣೆಗೆ ಲಕ್ಷಾಂತರ ಲೀಟರ್ ನೀರು ಪೋಲಾಗುತ್ತದೆ ಅಂತಾ. ಹೀಗಿರುವಾಗ ಅಲ್ಲಿನ ಸಚಿವ ಏಕನಾಥ್ ಖಡ್ಸೆ ಬರ ಅಧ್ಯಯನದ ನಿಮಿತ್ತ ಲಾತೂರಿನಲ್ಲಿ ಇಳಿದುಕೊಂಡ ಹೆಲಿಪ್ಯಾಡ್ ನಿರ್ಮಾಣಕ್ಕೆ ಲಕ್ಷಾಂತರ ಲೀಟರ್ ನೀರು ಪೋಲು ಮಾಡಿದ್ದು ದೊಡ್ಡ ವಿವಾದ ಸೃಷ್ಟಿಸಿತ್ತು. ಇದು ಕಣ್ಣ ಮುಂದೆ ಇದ್ದಾಗ್ಯೂ ಬಾಗಲಕೋಟದಲ್ಲಿ ಸಿದ್ದರಾಮಯ್ಯನವರು ಸಾಗೋ ರಸ್ತೇಲಿ ನೀರು ಸುರಿಯುತ್ತಾರೆಂದರೆ, ಇದನ್ನು ಮತಿಹೀನತೆ ಎಂದು ಕರೆಯಬೇಕೋ, ಅಹಂಕಾರದ ಅತಿರೇಕ ಎಂದು ಜರಿಯಬೇಕೋ ಗೊತ್ತಾಗುತ್ತಿಲ್ಲ. ಮಾಡುವ ಕೆಲಸದಲ್ಲಿ ಬದ್ಧತೆ ಇಲ್ಲದೇ ಹೋದಾಗ ಮಾತ್ರ ಇಂಥ ಪ್ರಮಾದಗಳು ಮರುಕಳಿಸುತ್ತಲೇ ಇರುತ್ತವೆ. ಪಾಪ, ಸಿದ್ದರಾಮಯ್ಯನವರು ಕೂಡ ಇದಕ್ಕೆ ಹೊರತಲ್ಲ ಎನ್ನಿಸುತ್ತದೆ.

Leave a Reply