ಬೌದ್ಧ ಧರ್ಮಾಂತರ ಅಂತಂದ್ರೆ ಹಿಂದುಗಳಿಗೆ ಟಾಂಗ್ ಕೊಡಲಿಕ್ಕಿರುವ ಕ್ಲಬ್ ಮೆಂಬರ್ಶಿಪ್ ಅಂದುಕೊಂಡ್ರಾ ಪರಮೇಶ್ವರರು?

ಡಿಜಿಟಲ್ ಕನ್ನಡ ವಿಶೇಷ

ಈ ಹಿಂದೆ ಮಾಜಿ ಪ್ರಧಾನಿ ದೇವೇಗೌಡರು ತಾವು ಮುಂದಿನ ಜನ್ಮದಲ್ಲಿ ಮುಸ್ಲಿಮನಾಗಿಯೇ ಹುಟ್ಟುತ್ತೇನೆ ಎಂಬ ಘನಘೋರ ಹೇಳಿಕೆ ಒಗಾಯಿಸಿದ್ದರು. ಆಗಲೂ ಎದ್ದಿದ್ದ ಪ್ರಶ್ನೆ- ಅದೇಕೆ ಗೌಡರು ಮುಂದಿನ ಜನ್ಮದವರೆಗೂ ಕಾಯಬೇಕು, ಪ್ರಾಮಾಣಿಕವಾಗಿ ಅನ್ನಿಸಿದ್ದೇ ಆದರೆ ಈ ಜನ್ಮದಲ್ಲೇ ತಡ ಮಾಡದೇ ಆಗಬಹುದಲ್ಲ?

ಇದೀಗ ಡಾ. ಜಿ ಪರಮೇಶ್ವರ ಅವರ ಸರದಿ. ‘ಹಿಂದು ಧರ್ಮದಲ್ಲಿ ಹುಟ್ಟಿದ್ದು ಅವರ ದುರ್ದೈವವಂತೆ. ಹಿಂದುಗಳು ದಲಿತರನ್ನು ತಮ್ಮವರೆಂದು ಒಪ್ಪಿಕೊಂಡಿಲ್ಲವಾದ್ದರಿಂದ ಕೆಲವೊಮ್ಮೆ ಬೌದ್ಧಧರ್ಮ ಸೇರೋದೆ ಸರಿ’ ಎಂದೆನಿಸುತ್ತದಂತೆ.

ಅದೇಕೆ ಕೆಲವೊಮ್ಮೆ ಅನಿಸಬೇಕು? ಈ ಕ್ಷಣದಲ್ಲಿ ಸೇರಿದರಾಯಿತು. ಯಾರದ್ದೇನು ಅಡ್ಡಿ? ಬಿಜೆಪಿಯಲ್ಲಿದ್ದಿದ್ದರೆ, ‘ಕೂಡದು, ಕೂಡದು.. ತಾವು ಹಿಂದುಧರ್ಮದಲ್ಲೇ ಇರತಕ್ಕದ್ದು’ ಅಂತ ಯಾರಾದರೂ ಫರ್ಮಾನು ಹೊಡೆಸುತ್ತಿದ್ದರೇನೋ, ಒತ್ತಡಗಳು ಬರುತ್ತಿದ್ದವೇನೋ. ತಾವು ಪ್ರಖರ ಜಾತ್ಯತೀತರು ಅಂತ ಹೇಳಿಕೊಳ್ಳುವ ಕಾಂಗ್ರೆಸ್ ನಲ್ಲಿ ಇದಕ್ಕೆ ಖಂಡಿತ ಪ್ರತಿರೋಧ ಬರಲು ಸಾಧ್ಯವಿಲ್ಲ. ಪರಮೇಶ್ವರ್ ಅವರೇನು ವಿರಾಟ ಹಿಂದು ಸಮಾಜದ ಪ್ರತಿಕ್ರಿಯೆಗಾಗಿ ಕಾಯುತ್ತಿದ್ದಾರೆಯೇ? ದಲಿತರನ್ನು ಹಿಂದುಗಳು ತಮ್ಮವರು ಅಂತ ಅಂದುಕೊಳ್ಳುತ್ತಲೇ ಇಲ್ಲ ಎಂದು ಅವರಿಗೆ ಪ್ರಾಮಾಣಿಕವಾಗಿ ಅನಿಸುವುದಾದರೆ, ಗೌರವ ಇಲ್ಲದ ಕಡೆ ಇರಬಾರದು. ಬೌಧ್ಧ ಮತವನ್ನು ಆದಷ್ಟು ಬೇಗ ಸ್ವೀಕರಿಸಬೇಕು.

ಆದರೆ…

ಅಂಬೇಡ್ಕರರ ಹೆಸರು ಹೇಳಿಕೊಂಡು ಬೌದ್ಧಮತಕ್ಕೆ ಸೇರಿಬಿಡುವುದು ಅನ್ನೋದು ಕ್ಲಬ್ ಮೆಂಬರ್ ಶಿಪ್ ತೆಗೆದುಕೊಂಡ ಹಾಗಲ್ಲ. ಡಾ.ಬಿ.ಆರ್ ಅಂಬೇಡ್ಕರ್ ಅವರು 6 ಲಕ್ಷ ಅನುಯಾಯಿಗಳೊಂದಿಗೆ ಬೌದ್ಧ ಧರ್ಮಕ್ಕೆ ಮತಾಂತರಗೊಳ್ಳುವಾಗ ಪ್ರತಿಜ್ಞಾವಿಧಿಯೊಂದನ್ನು ಬೋಧಿಸಿದ್ದಾರೆ. ಅದನ್ನು ಪರಮೇಶ್ವರ್ ಅವರು ಸಹ ತೆಗೆದುಕೊಳ್ಳಬೇಕಾಗುತ್ತದೆ.

  • ನನಗೆ ಬ್ರಹ್ಮ, ವಿಷ್ಣು, ಮಹೇಶ್ವರರ ಮೇಲೆ ಯಾವುದೇ ನಂಬಿಕೆ ಇಲ್ಲ; ಹಾಗಾಗಿ ಅವರನ್ನು ಪೂಜಿಸುವುದಿಲ್ಲ.
  • ದೇವರ ಅವತಾರವೆಂದು ಬಿಂಬಿಸುವ ರಾಮ ಮತ್ತು ಕೃಷ್ಣನ ಮೇಲೆ ನಂಬಿಕೆ ಇಲ್ಲ. ಅದನ್ನು ನಂಬುವುವುದೂ ಇಲ್ಲ. ಅವರನ್ನು ಆರಾಧಿಸುವುದಿಲ್ಲ.
  • ಹಿಂದೂಗಳ ದೇವಾನುದೇವತೆಗಳಾದ ಗೌರಿ, ಗಣಪತಿ ಹಾಗೂ ಇತರರ ಮೇಲೆ ನಂಬಿಕೆ ಇಲ್ಲ. ಅವರನ್ನು ಪೂಜಿಸುವುದಿಲ್ಲ.
  • ದೇವರ ಅವತಾರಗಳನ್ನು ನಂಬುವುದಿಲ್ಲ.
  • ಭಗವಾನ್ ಬುದ್ಧ, ವಿಷ್ಣುವಿನ ಅವತಾರ ಎಂಬುವುದನ್ನು ನಂಬುವುದಿಲ್ಲ. ಇದೊಂದು ಸುಳ್ಳು ಪ್ರಚಾರ ಮತ್ತು ಕೇವಲ ಹುಚ್ಚುತನ ಎಂದು ಭಾವಿಸುತ್ತೇನೆ.
  • ನಾನು ಯಾವುದೇ ಸಮಾರಂಭವನ್ನು ಬ್ರಾಹ್ಮಣರ ಮೂಲಕ ಮಾಡಿಸುವುದಿಲ್ಲ.
  • ಅಸಮಾನತೆ ಮೂಲಕ ಮಾನವೀಯತೆಗೆ ಧಕ್ಕೆಯುಂಟು ಮಾಡುವ ಮಾನವನ ಆಧುನೀಕತೆ ಮತ್ತು ಅಭಿವೃದ್ಧಿಗೆ ಅಡ್ಡಿಯಾಗುವ ಹಿಂದುತ್ವವನ್ನು ತ್ಯಜಿಸುತ್ತೇನೆ. ಬೌದ್ಧ ಧರ್ಮವನ್ನು ಸ್ವೀಕರಿಸುತ್ತೇನೆ.

ಅಂಬೇಡ್ಕರ್ ಅವರು ಈ ಮೇಲಿನ ವಿಷಯಗಳಲ್ಲಿ ಪ್ರಾಮಾಣಿಕ ಬದ್ಧತೆ ತೋರಿದ್ದರಿಂದ ಅವರಿಗೆ ಬೌದ್ಧಮತ ಸ್ವೀಕಾರ ಗೋಜಲಾಗಲಿಲ್ಲ.

ಇವಿಷ್ಟನ್ನು ಓದಿಕೊಂಡ ನಂತರ ಪರಮೇಶ್ವರರು ಉತ್ತರಿಸಬೇಕು- ಅರಮನೆ ಮೈದಾನದಲ್ಲಿ ಹೋಮ-ಹವನ ಕಾರ್ಯಕ್ರಮಗಳಲ್ಲಿ ಬಹಿರಂಗವಾಗಿಯೇ ಭಾಗಿಯಾಗಿದ್ದ ನಿಮಗೆ ಬೌದ್ಧಮತದ ಅಂಬೇಡ್ಕರ್ ಪ್ರತಿಜ್ಞಾವಿಧಿ ಸ್ವೀಕರಿಸುವ ಅರ್ಹತೆ ಇದೆಯೇ? ನಿಮ್ಮ ಮನೆಯ ಧಾರ್ಮಿಕ ಕಾರ್ಯಕ್ರಮಗಳಲ್ಲಿ ದೇವರು- ಪುರೋಹಿತರು ಇಂಥವನ್ನೆಲ್ಲ ಹತ್ತಿರಕ್ಕೂ ಸೇರಿಸದೇ ಅಂಬೇಡ್ಕರರ ಪ್ರತಿಜ್ಞಾವಿಧಿಗೆ ಬದ್ಧತೆ ತೋರುವ ಶಕ್ತಿ ತಮಗಿದೆಯೇ? ಅಥವಾ ಬೌದ್ಧಮತ ಸೇರ್ಪಡೆ ಅಂತಂದ್ರೆ, ಯಾವ್ದಕ್ಕೂ ಒಂದಿರ್ಲಿ ಅಂತ ಕ್ಲಬ್ ಮೆಂಬರ್ಶಿಪ್ ಪಡೆದಂತೆ ಅಂತ ತಮ್ಮ ಭಾವನೆಯೋ?

ತಮ್ಮ ಲಾಭಕ್ಕೆ ಬೇಕಾಗಿ ದಲಿತ ಕಾರ್ಡು, ಅಂಬೇಡ್ಕರ್ ಜೈಕಾರಗಳನ್ನು ಹಾಕಿಕೊಂಡಿರುವ ರಾಜಕಾರಣಿಗಳಿಗೆ ಈ ಮೇಲಿನ ಘೋಷಣೆಗಳನ್ನೆಲ್ಲ ಹೇಳಿ ಅರಗಿಸಿಕೊಳ್ಳುವುದು ಅಷ್ಟು ಸುಲಭದಲ್ಲಿಲ್ಲ. ಹೇಳಿಕೆ ಪೌರುಷಗಳು ಸುಲಭ, ಆದರೆ ಈ ವಿಷಯದಲ್ಲಿ ಅನುಷ್ಠಾನಕ್ಕೆ ಹೋದರೆ ದಲಿತರ ಮತಗಳೇ ಬೀಳುವುದು ಕಷ್ಟವಿದೆ. ಹಾಗೆಂದೇ ಪ್ರಖರ ಪ್ರಗತಿಪರರಂತೆ ಕಾಣಿಸಿಕೊಳ್ಳುವ ಸಿದ್ದರಾಮಯ್ಯನವರು ಸಹ ‘ನಾನು ನಾಸ್ತಿಕನೇನಲ್ಲ, ಮನೆದೇವರನ್ನು ಪೂಜಿಸುತ್ತೇನೆ’ ಅಂತ ಆಗಾಗ ಹೇಳೋದು, ಊರಜಾತ್ರೆಯಲ್ಲಿ ಪಾಲ್ಗೊಳ್ಳುವುದು.

ಇವರೆಲ್ಲರ ಕತೆ ಹಾಗಿರಲಿ, ಉತ್ತರ ಪ್ರದೇಶದಲ್ಲಿ ಅಂಬೇಡ್ಕರರ ವಾರಸುದಾರಿಕೆ ಇಡಿ ಇಡಿಯಾಗಿ ತಮ್ಮದೇ ಎಂಬ ಪ್ರತಿಪಾದನೆಯಲ್ಲಿರುವ ಬಹುಜನ ಸಮಾಜವಾದಿ ಪಕ್ಷದ ಮಾಯಾವತಿ ಅವರೇಕೆ ಬೌದ್ಧಮತಕ್ಕೆ ಇನ್ನೂ ಮತಾಂತರವಾಗಿಲ್ಲ? ಹಾಗೇನಾದರೂ ಮಾಡಿದರೆ ದಲಿತೇತರರ ಮತಗಳು ಸಿಗದೇ ಹೋದಾವು ಎಂಬ ಹೆದರಿಕೆ ದೊಡ್ಡಮಟ್ಟದಲ್ಲಿ ಕಾಡಿದೆ. ‘ಹಾಥಿ ನಹಿ ಗಣೇಶ್ ಹೈ, ಬ್ರಹ್ಮ ವಿಷ್ಣು ಮಹೇಶ್ ಹೈ’ (ಕೇವಲ ಆನೆ (ಬಿಎಸ್ಪಿ ಚಿಹ್ನೆ) ಎಂದುಕೊಳ್ಳದಿರಿ ಇದು ಗಣೇಶ, ಜತೆಗೆ ಬ್ರಹ್ಮ, ವಿಷ್ಣು ಮಹೇಶ) ಅಂತ ಇದೇ ಬಿಎಸ್ಪಿ ಬ್ರಾಹ್ಮಣರ ಮತಗಳನ್ನು ಸೆಳೆಯಿತು. ಅಲ್ಲಿಗೆ ಅಂಬೇಡ್ಕರ್ ಬೌದ್ಧಮತದ ಪ್ರತಿಜ್ಞಾವಿಧಿಗಳು ಎಲ್ಲಿ ತೂರಿಕೊಂಡವು?

ದಲಿತ- ಒಬಿಸಿ ರಾಜಕಾರಣದ ಉತ್ತರ ಪ್ರದೇಶ ಸ್ಥಿತಿಯೇ ಹೀಗೆ ಎಂದಾದರೆ ಕರ್ನಾಟಕದಲ್ಲಿನ ಸಂವೇದನೆಗಳು ಹೇಗಿರಬಹುದು? ತಾರತಮ್ಯ ನಿವಾರಣೆ, ಸಾಮಾಜಿಕ ನ್ಯಾಯ ಇವೆಲ್ಲ ವಿಷಯಗಳಲ್ಲಿ ದಲಿತರ ಪರ ಧ್ವನಿ ಎತ್ತುವ ಅವಶ್ಯ ಖಂಡಿತ ಇದೆ. ಆದರೆ ಹಿಂದು ಧರ್ಮವನ್ನು ಬೈದು ಇಲ್ಲಿನ ದಲಿತರನ್ನು ಸಂತೃಪ್ತಿಗೊಳಿಸಿಬಿಡಬಹುದು ಎಂದುಕೊಂಡರೆ ಅದಕ್ಕಿಂತ ಮೂರ್ಖತನ ಇನ್ನೊಂದಿಲ್ಲ. ದೇವ- ದೇವತೆಯರನ್ನು ಬಯ್ದುಕೊಂಡು ಕರ್ನಾಟಕದ ಬೆರಳೆಣಿಕೆಯ ಪ್ರಗತಿಪರರನ್ನು ಖುಷಿಗೊಳಿಸಬಹುದೇ ವಿನಃ ದಲಿತರನ್ನಲ್ಲ. ಅದು ನಿಜವೇ ಆಗಿದ್ದರೆ ದೇವರು- ಧರ್ಮ ಎಂದೇ ಮಾತಾಡುವ ಬಿಜೆಪಿಗೆ ಈ ಹಿಂದಿನ ಸರ್ಕಾರದಲ್ಲಿ ಅಷ್ಟೊಂದು ದಲಿತ ಶಾಸಕರನ್ನುಪಡೆಯುವುದಕ್ಕೆ ಸಾಧ್ಯವೇ ಆಗುತ್ತಿರಲಿಲ್ಲ.

ಹಂಗೆಲ್ಲ ಅಲ್ಲ… ವಾಸ್ತವ ಬೇರೆಯೇ ಇದೆ ಅಂತ ಪರಮೇಶ್ವರರಿಗೆ ಅನ್ನಿಸಿದ್ದರೆ ಅವರು ಬೌದ್ಧಮತಕ್ಕೆ ಮತಾಂತರವಾಗುವ ಕೆಲಸವನ್ನು ಖಂಡಿತ ವಿಳಂಬ ಮಾಡಬಾರದು.

Leave a Reply