ಮರೆಯಾದ ಚಲ: ನೆನಪುಗಳು ಅಚಲ

ಎನ್.ಎಸ್.ಶ್ರೀಧರ ಮೂರ್ತಿ

ಈಗ ಎರಡು ವರ್ಷಗಳ ಹಿಂದೆ ‘ಚಿತ್ರಮಂದಿರಗಳಲ್ಲಿ’ ಎನ್ನುವ ಸಿನಿಮಾ ಸಾಕಷ್ಟು ಹೆಸರನ್ನು ಮಾಡಿತ್ತು. ಅದು ಕಲಾತ್ಮಕ ಚಿತ್ರಗಳಿಂದ ಹೊರತಾದ ದಾರಿಯನ್ನು ತುಳಿದು ವ್ಯಾಪಾರಿ ಚಿತ್ರಗಳ ಶೈಲಿಯಲ್ಲೇ ಗಂಭೀರ ವಸ್ತುವನ್ನು ಹೇಳಲು ಹೊರಟಿತ್ತು. ಇದರ ಮಹತ್ವಾಕಾಂಕ್ಷಿ ನಿರ್ದೇಶಕ ವಿ.ಚಲ ಎಂದು ಹೆಸರನ್ನು ಇಟ್ಟುಕೊಂಡಿದ್ದ ವೆಂಕಟಾಚಲ. ಅವರಿಗೆ ವ್ಯಾಪಾರಿ ಮತ್ತು ಕಲಾತ್ಮಕ ಚಿತ್ರಗಳ ನಡುವೆ ಉಂಟಾಗಿದ್ದ ಬಿರುಕನ್ನು ಜೋಡಿಸುವ ಕನಸಿತ್ತು. ಈ ಚಿತ್ರಕ್ಕೆ ಹಂಸಲೇಖ ಅವರ ಬಳಿ ಎಂಟು ಹಾಡುಗಳನ್ನು ಕೂಡ ಅವರು ಸಂಯೋಜನೆ ಮಾಡಿಸಿದ್ದರು. ಆದರೆ ಆ ಹಾಡುಗಳನ್ನು ಬಳಸಿಕೊಳ್ಳಲು ಆಗಲೇ ಇಲ್ಲ. ಅಲ್ಲಿಂದಲೇ ಆರಂಭವಾಯಿತು ಹಿನ್ನೆಡೆಯ ಅನುಭವ. ಅವರು ನಿರೀಕ್ಷಿಸಿದಂತೆ ಗಾಂಧಿನಗರ ಅವರ ಚಿತ್ರವನ್ನು ಸ್ವೀಕರಿಸಲೇ ಇಲ್ಲ. ಅದರ ಪ್ರಯೋಗಶೀಲತೆಯನ್ನು ಗುರುತಿಸಲಿಲ್ಲ. ಇನ್ನೊಂದು ಕಡೆ ಕಮರ್ಷಿಯಲ್ ಸೂತ್ರಗಳಿವೆ ಎನ್ನುವ ಕಾರಣ ಪ್ರಶಸ್ತಿಯೂ ಸಿಗಲಿಲ್ಲ. ಅವರು ಬಯಸಿದ ಹೊಸತನಕ್ಕೆ ಚಿತ್ರರಂಗದ ಬೆಂಬಲ ಸಿಕ್ಕಿರಲಿಲ್ಲ. ಅದರಿಂದ ಅವರಿಗೆ ನಿರಾಶೆಯಾಗಿತ್ತು. ಆದರೆ ಇಲ್ಲಿದ್ದೇ ತಮ್ಮ ಗುರಿ ಸಾಧಿಸಬೇಕು ಎನ್ನುವ ಕನಸು ಮಾತ್ರ ಮಾಯವಾಗಿರಲಿಲ್ಲ. ಮತ್ತೆ ಹೊಸತನದ ಹುಡುಕಾಟವನ್ನು ಮುಂದುವರಿಸಿದ್ದರು.

ನಿನ್ನೆ ವಿ.ಚಲ ಅವರ ಅಕಾಲಿಕ ಮರಣದ ಸುದ್ದಿಯನ್ನು ಕೇಳಿದಾಗ  ಈ ಅಂಶಗಳು ನೆನಪಿಗೆ ಬಂದವು. ‘ಅಭಿನಯ ತರಂಗ’ದ ಮೂಲಕ ರಂಗಭೂಮಿಯ ಅನುಭವವನ್ನು ಪಡೆದಿದ್ದ ಅವರು ಹವ್ಯಾಸಿ ಪತ್ರಕರ್ತರೂ ಆಗಿದ್ದರು. ಚಲನಚಿತ್ರ ಅವರಿಗೆ ಇದ್ದ ಕನಸು. ಚಲನಚಿತ್ರದ ಗಂಭೀರ ವಿದ್ಯಾರ್ಥಿಯಾಗಿದ್ದ ಅವರು ಅಂತರರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ನನಗೆ ಖಾಯಂ ಜೊತೆಗಾರರೂ ಆಗಿದ್ದರು. ಆಗ ನಾವು ಹತ್ತು ಹಲವು ವಿಷಯಗಳನ್ನು ಚರ್ಚಿಸುತ್ತಿದ್ದೆವು. ಆಗ ನನ್ನನ್ನು ಸೆಳೆದಿದ್ದು ಇಂದಿನ ಚಿತ್ರರಂಗಕ್ಕೆ ಹೇಗೆ ಹೊಸತನವನ್ನು ನೀಡಬಹುದು ಎನ್ನುವ ಅವರ ತುಡಿತ. ‘ಚಿತ್ರ ಮಂದಿರಗಳಲ್ಲಿ’ ಹಾಗೆ ನೋಡಿದರೆ ಅವರ ಚಿಂತನೆಗಳಿಗೆ ಕೈಗನ್ನಡಿಯಂತಿದ್ದ ಚಿತ್ರ. ಒಂದು ಚಿತ್ರ ಹೇಗಿರಬೇಕು, ಅದು ಸಮಾಜವನ್ನು ಹೇಗೆ ತಲುಪಬೇಕು ಮೊದಲಾದ ಪ್ರಶ್ನೆಗಳನ್ನು ಅವರು ಫಿಲಂ ಬಗ್‍ ಮೂಲಕ ಹೇಳುವ ಪ್ರಯತ್ನವನ್ನು ಮಾಡಿದ್ದರು. ಕಥೆಯೊಳಗೆ ಕಥೆ ಹೇಳುವ ತಂತ್ರವನ್ನೂ ಸಮರ್ಥವಾಗಿ ಬಳಿಸಿದ್ದರು.  ನನಗೆ ಈ ಚಿತ್ರದ ವಿನ್ಯಾಸವನ್ನು ಒಂದಿಷ್ಟು ನಮ್ಮ ವ್ಯಾಪಾರಿ ಚಿತ್ರರಂಗ ಗಂಭೀರವಾಗಿ ಪರಿಗಣಿಸಿದ್ದರೆ ಮಹತ್ವದ ತಿರುವು ಸಿಕ್ಕ ಬಹುದಿತ್ತು. ಅಷ್ಟೇ ಅಲ್ಲ ಕಲಾತ್ಮಕ ಚಿತ್ರಗಳಿಗೂ ಹೊಸ ನೆಲೆ ಸಿಗಬಹುದಾಗಿತ್ತು. ಚಿತ್ರರಂಗವಿರಲಿ ಈ ಕುರಿತು ಪತ್ರಿಕೆಗಳೂ ಕೂಡ ಗಮನ ಹರಿಸಲಿಲ್ಲ ಎನ್ನುವುದು ಅವರಿಗೆ ನೋವನ್ನು ಕೊಟ್ಟಿತ್ತು. ನಂತರ ಅವರು ‘ಬಿರುಕು’ಎನ್ನುವ ಚಿತ್ರವನ್ನು ಮಾಡಿದರು. ಅದು ಈ ವರ್ಷದ ಅಂತರರಾಷ್ಟ್ರೀಯ ಚಿತ್ರೋತ್ಸವದಲ್ಲಿ ಪ್ರದರ್ಶಿತವಾಗಿ ಗಮನ ಸೆಳೆದಿತ್ತು. ಈ ಚಿತ್ರದಲ್ಲಿ ಕೂಡ ವಸ್ತುವಿನ ನಿರ್ವಹಣೆಯಲ್ಲಿ ಅವರು ಹೊಸತನ ತಂದಿದ್ದರು. ಸಂಚಾರಿ ವಿಜಯ್ ಅವರನ್ನು ನಾಯಕರನ್ನಾಗಿಸಿಕೊಂಡು ಹೊಸ ಚಿತ್ರವೊಂದರ ಸಿದ್ಧತೆ ನಡೆಸಿದ್ದರು.

ಎರಡು ಚಿತ್ರಗಳ ನಂತರ ಅವರಿಗೆ ಎರಡು ಮಾದರಿಗಳ ಬಿರುಕನ್ನು ಮುಚ್ಚುವುದು ಕಷ್ಟ ಎನ್ನುವುದು ಅರ್ಥವಾಗಿತ್ತು. ಈ ಹಿನ್ನೆಲೆಯಲ್ಲಿಯೇ ಸ್ಕ್ರಿಪ್ಟ್ ಸಿದ್ಧಪಡಿಸಿ ನಾವು ಕೆಲವು ಸ್ನೇಹಿತರಿಗೆ ಈಗ ಕೆಲವು ದಿನಗಳ ಹಿಂದಷ್ಟೇ ತೋರಿಸಿದ್ದರು. ಅಷ್ಟರಲ್ಲಿ ಅನಾರೋಗ್ಯ ಅದೂ ಎಚ್1 ಎನ್1ಗೆ ತಿರುಗಿ ನಮ್ಮನ್ನು ಅಗಲಿದ್ದಾರೆ. ಕನ್ನಡ ಚಿತ್ರರಂಗಕ್ಕೆ ವೆಂಕಟಾಚಲ ಅವರಂತಹ ಮಹತ್ವಾಕಾಂಕ್ಷಿಯ ಅಗತ್ಯ ಖಂಡಿತವಾಗಿಯೂ ಇತ್ತು. 44 ಸಾಧನೆಯ ವಯಸ್ಸು, ಅವರಿಗೆ ಸಾಧಿಸುವ ಛಲ ಇತ್ತು. ಕನಸೂ ಇತ್ತು. ಆದರೆ ಎಲ್ಲವೂ ಅರೆಬರೆಯಾದಂತೆ ತಮ್ಮ ಕನಸುಗಳನ್ನು ಬಿಟ್ಟು ತೆರಳಿದ್ದಾರೆ.

ಅಗಲಿದ ಗೆಳೆಯನಿಗೆ ಈ ಮೂಲಕ ನಮನಗಳು, ಇನ್ನಾದರೂ ಅವರ ಚಿತ್ರಗಳ ಕುರಿತು ಚರ್ಚೆಯಾಗ ಬೇಕು. ಕಮರ್ಷಿಯಲ್ ಮತ್ತು ಕಲಾತ್ಮಕ ಎನ್ನುವ ಗೆರೆ ಅಳಿಸ ಬೇಕು ಎಂಬ ಕನಸು ನನಸಾಗ ಬೇಕು ಅದೇ ನಾವು ಸಲ್ಲಿಸ ಬಹುದಾದ ಶ್ರದ್ಧಾಂಜಲಿ.

Leave a Reply