ಸುದ್ದಿ ಸಂತೆ: ಮಲ್ಯ ವಾರೆಂಟ್, ಕೊಹಿನೂರ್ ವಜ್ರ ಲಂಡನ್ ಸ್ವತ್ತಂತೆ, ಚೀನಾಕ್ಕೆ ತಕರಾರು ಸಲ್ಲಿಸಿದ್ರು ಸುಷ್ಮಾ, ಸಿಎಂ ಪರ ಜಾರ್ಜ್ ಮಾತು, ಚೀನಾದ ಭಾರತ ಸುಂದರಿ ಟೀಕೆ…

ಲಾತೂರ್ ನ ಬರಪೀಡಿತ ಪ್ರದೇಶದ ಭೇಟಿ ವೇಳೆ ಸೆಲ್ಫಿ ತೆಗೆದು ಟ್ವಿಟ್ಟರ್ ನಲ್ಲಿ ಹಾಕಿಕೊಂಡ ಮಹಾರಾಷ್ಟ್ರದ ಜಲಸಂಪನ್ಮೂಲ ಸಚಿವೆ ಪಂಕಜಾ ಮುಂಡೆ, ಅವರ ಸಂವೇದನಾರಹಿತ ಮನಸ್ಥಿತಿಗೆ ಟೀಕೆಗೊಳಗಾದರು. ಲಾತೂರ್ ನಲ್ಲಿ ನೀರು ಕಂಡ ಸಂತೋಷಕ್ಕೆ ತೆಗೆದ ಸೆಲ್ಫಿ ಅದು ಅನ್ನೋದು ಸಚಿವೆಯ ಸಮಜಾಯಿಷಿ.

 

ಡಿಜಿಟಲ್ ಕನ್ನಡ ಟೀಮ್

ವಿಜಯ್ ಮಲ್ಯ ವಿರುದ್ಧ ಜಾಮೀನುರಹಿತ ವಾರೆಂಟ್

ಕಿಂಗ್ ಫಿಶರ್ ಏರ್ ಲೈನ್ಸ್ ಗಾಗಿ 9000 ಕೋಟಿ ಸಾಲ ಮಾಡಿ ವಿದೇಶದಲ್ಲಿ ಆಸ್ತಿ ಖರೀದಿ ಮಾಡಿದ ಆರೋಪದಲ್ಲಿ ಉದ್ಯಮಿ ವಿಜಯ್ ಮಲ್ಯ ವಿರುದ್ಧ ಬಂಧನ ವಾರೆಂಟ್ ಜಾರಿಯಾಗಿದೆ. ಈ ಪ್ರಕರಣವನ್ನು ಅಕ್ರಮ ಹಣ ಸಾಗಾಣಿಕೆ ಅಡಿಯಲ್ಲಿ ವಿಚಾರಣೆ ನಡೆಸುತ್ತಿರುವ ಮುಂಬೈನ ವಿಶೇಷ ನ್ಯಾಯಾಲಯ ಸೋಮವಾರ ಜಾಮೀನುರಹಿತ ವಾರೆಂಟ್ ಹೊರಡಿಸಿದೆ. ಮಲ್ಯ ಕಳೆದ ಮಾರ್ಚ್ ಆರಂಭದಲ್ಲಿ ಲಂಡನ್ ಗೆ ಪ್ರಯಾಣ ಬೆಳೆಸಿದ್ದು, ವಿಚಾರಣೆಯಲ್ಲಿ ಖುದ್ದಾಗಿ ಭಾಗಿಯಾಲು ನಿರಾಕರಿಸಿದ್ದರು. ಈ ಹಿನ್ನೆಲೆಯಲ್ಲಿ ಅವರ ವಿರುದ್ಧ ವಾರೆಂಟ್ ಜಾರಿ ಮಾಡಲಾಗಿದೆ.

ಕೊಹಿನೂರ್ ವಜ್ರ ಲಂಡನ್ ಗೆ ಸೇರಿದ್ದು: ಸುಪ್ರೀಂ ಕೋರ್ಟ್ ಗೆ ಕೇಂದ್ರದ ಸ್ಪಷ್ಟನೆ

ಬ್ರಿಟನ್ ರಾಣಿ ಎಲಿಜಬೆತ್ ಅವರ ಕಿರೀಟದಲ್ಲಿರುವ ಕೊಹಿನೂರ್ ವಜ್ರವನ್ನು ಬ್ರಿಟೀಷರಿಗೆ ಉಡುಗೊರೆಯಾಗಿ ನೀಡಲಾಗಿದ್ದು, ಅದು ಕಳುವಾದ ವಸ್ತುವಲ್ಲ. ಹಾಗಾಗಿ ಆ ವಜ್ರ ಬ್ರಿಟನ್ ಗೆ ಸೇರಿದ್ದು ಎಂದು ಕೇಂದ್ರ ಸರ್ಕಾರ ಸೋಮವಾರ ಸುಪ್ರೀಂ ಕೋರ್ಟ್ ಗೆ ತಿಳಿಸಿದೆ. ಈ ಪ್ರತಿಷ್ಠಿತ ವಜ್ರವನ್ನು ಭಾರತಕ್ಕೆ ಮರಳಿ ತರಬೇಕು ಎಂಬ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸುತ್ತಿದೆ. 19ನೇ ಶತಮಾನದಲ್ಲಿ ಸಿಖ್ ದೊರೆ ರಂಜಿತ್ ಸಿಂಗ್ ಈ ವಜ್ರವನ್ನು ಸ್ವಯಂ ಪ್ರೇರಿತವಾಗಿ ನೀಡಿದ್ದರು. ಅದು ಕಳ್ಳತನದ ವಸ್ತುವಲ್ಲ ಎಂದು ಭಾರತದ ಸೊಲಿಸಿಟರ್ ಜೆನರಲ್ ರಂಜಿತ್ ಕುಮಾರ್ ನ್ಯಾಯಾಲಯದ ಮುಂದೆ ಹೇಳಿದ್ದಾರೆ.

ಚೀನಾ ಜತೆ ಮಸೂದ್ ಅಜರ್ ವಿಷಯ ಚರ್ಚಿಸಿದ ಸುಷ್ಮಾ

ರಷ್ಯಾ ಪ್ರವಾಸದಲ್ಲಿರುವ ಭಾರತ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್, ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಭೇಟಿ ಮಾಡಿ, ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನ ಉಗ್ರ ಮಸೂದ್ ಅಜರ್ ನನ್ನು ರಕ್ಷಿಸಿದ ವಿಷಯವನ್ನು ಚರ್ಚಿಸಿದರು. ಇತ್ತೀಚೆಗೆ ವಿಶ್ವಸಂಸ್ಥೆಯಲ್ಲಿ ಪಠಾಣ್ ಕೋಠ್ ದಾಳಿ ರೂವಾರಿ ಜೈಷ್ ಇ ಮೊಹಮದ್ ಸಂಘಟನೆ ಮುಖ್ಯಸ್ಥ ಮಸೂದ್ ಅಜರ್ ನನ್ನು ಉಗ್ರರ ಪಟ್ಟಿಯಲ್ಲಿ ಸೇರಿಸುವ ಪ್ರಕ್ರಿಯೆಯಲ್ಲಿ ಹಿಡನ್ ವೆಟೊ ಮೂಲಕ ಚೀನಾ ವಿರೋಧ ವ್ಯಕ್ತಪಡಿಸಿತ್ತು. ಸೋಮವಾರ ರಷ್ಯಾ ಮತ್ತು ಚೀನಾ ವಿದೇಶಾಂಗ ಸಚಿವರ ಜತೆ ತ್ರಿಕೋನ ಸಭೆಯಲ್ಲಿ ಭಾಗವಹಿಸಿದ್ದ ಸುಷ್ಮಾ ಸ್ವರಾಜ್, ಉದ್ದೇಶಪೂರ್ವಕವಾಗಿಯೇ ಈ ವಿಷಯವನ್ನು ಚರ್ಚೆ ತೆಗೆದುಕೊಂಡರು ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಇನ್ನುಳಿದಂತೆ ತಿಳಿಯಬೇಕಾದ ಸುದ್ದಿಸಾಲುಗಳು..

  • ಕುಡಿಯುವ ನೀರಿನ ಸಮಸ್ಯೆ ಕಾಣಿಸಿಕೊಂಡ ಸ್ಥಳಗಳಲ್ಲಿ ಖಾಸಗಿ ಬೋರ್ ವೆಲ್ ಗಳನ್ನು ವಶಕ್ಕೆ ಪಡೆದು ಜನ, ಜಾನುವಾರುಗಳಿಗೆ ಕುಡಿಯುವ ನೀರು ಪೂರೈಸುವಂತೆ ಜಿಲ್ಲಾಡಳಿತಕ್ಕೆ ಸರ್ಕಾರ ಸೂಚಿಸಿದೆ.
  • ವಿಕ್ಟೋರಿಯಾ ಆಸ್ಪತ್ರೆ ಆವರಣದಲ್ಲಿ ಡಯಾಗ್ನೋಸ್ಟಿಕ್ ಕೇಂದ್ರ ತೆರೆಯಲು, ಮುಖ್ಯಮಂತ್ರಿ ಸಿದ್ದರಾಮಯ್ಯ ಪುತ್ರ ಡಾ.ಯತೀಂದ್ರ ಅವರ ಪಾಲುದಾರಿಕೆಯ ಕಂಪನಿಗೆ ಅವಕಾಶ ಮಾಡಿಕೊಟ್ಟಿರುವುದನ್ನು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ಸಮರ್ಥಿಸಿಕೊಂಡಿದ್ದಾರೆ.
  • ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬೆನ್ನಿಗೆ ಚೂರಿ ಹಾಕುವ ಕೆಲಸ ನಡೆದಿದೆ. ನಾಯಕತ್ವ ಬದಲಾವಣೆ ಬಗ್ಗೆ ವರಿಷ್ಠರು ಚಿಂತನೆಯೇ ನಡೆಸಿಲ್ಲ. ರಾಜ್ಯದ ಉಸ್ತುವಾರಿ ಹೊಣೆ ಹೊತ್ತ ಎಐಸಿಸಿ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್ ಈಗಾಗಲೇ ಸ್ಪಷ್ಟನೆ ನೀಡಿದ್ದಾರೆ. ಆನಂತರವೂ ಇಂತಹ ಊಹಾಪೋಹಾ ಸುದ್ದಿಗಳು ಹೊರ ಬರುತ್ತಿದೆ ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ. ಜಾರ್ಜ್ ಅಸಮಧಾನ ವ್ಯಕ್ತಪಡಿಸಿದ್ದಾರೆ.

ಎಲ್ಲರಿಂದಲೂ ಸುಂದರಿ ಅನ್ನಿಸಿಕೊಳ್ಳೋ ತವಕ ಭಾರತಕ್ಕೆ- ಚೀನಾ ಮಾಧ್ಯಮದ ಟೀಕೆ

ಭಾರತದ ರಕ್ಷಣಾ ಸಚಿವ ಮನೋಹರ್ ಪರಿಕರ್ ಚೀನಾ ಪ್ರವಾಸದಲ್ಲಿದ್ದಾರೆ. ನಮ್ಮವರು ಹೀಗೆ ಪ್ರವಾಸದಲ್ಲಿದ್ದಾಗ ತನ್ನ ನಿಯಂತ್ರಣದ ಮಾಧ್ಯಮದ ಮೂಲಕ ಏನಾದರೊಂದು ಕೊಂಕು ತೆಗೆಯೋದು ಚೀನಾದ ಜಾಯಮಾನ.

ಈ ಬಾರಿ ಅದು – ಬೀಜಿಂಗ್ ಮತ್ತು ವಾಷಿಂಗ್ಟನ್ ಎರಡನ್ನೂ ಆಕರ್ಷಿಸುವ ಪ್ರಯತ್ನದಲ್ಲಿರುವ ಸುಂದರ ಮಹಿಳೆ ತಾನೆಂದು ಭಾರತ ಅಂದುಕೊಂಡಿದೆ ಅಂತ ಕಿಚಾಯಿಸಿದೆ. ಇಷ್ಟಕ್ಕೂ ಅದು ಹೇಳುವುದಕ್ಕೆ ಹೊರಟಿದ್ದು, ಭಾರತ- ಅಮೆರಿಕಗಳ ನಡುವಿನ ಸೇನಾ ಸಾಮಗ್ರಿಗಳ ಸರಬರಾಜು ಒಪ್ಪಂದಕ್ಕೆ ತಾನೇನೂ ತಲೆಕೆಡಿಸಿಕೊಂಡಿಲ್ಲ ಅಂತ. ಎಲ್ಲರನ್ನೂ ಖಉಷಿಗೊಳಿಸುವ ಭರದಲ್ಲಿ ಭಾರತ ಅವಿಶ್ವಾಸ ಮೂಡಿಸಿಕೊಂಡಿರುವುದರಿಂದ ಆ ಒಪ್ಪಂದ ಮುಂದೆ ಹೋಗಿಲ್ಲ ಅಂತಲೂ ಚೀನಾದ ಗ್ಲೋಬಲ್ ಟೈಮ್ಸ್ ಕಟಕಿಯಾಡಿದೆ.

ಶೀತಲ ಸಮರದ ದಿನಗಳಲ್ಲೂ ಭಾರತ ಹೀಗೆ ಎಲ್ಲರಿಂದಲೂ ಒಪ್ಪಿಗೆಯಾಗುವಂತೆ ನಡೆದುಕೊಳ್ಳುವ ವರ್ತನೆ ತೋರಿತ್ತು. ದಕ್ಷಿಣ ಚೀನಾ ಸಮುದ್ರದಲ್ಲಿ ಅಮೆರಿಕ ಕಣ್ಗಾವಲು ಕುರಿತೂ ಅದರ ಬೆಂಬಲವಿದೆ. ಆದರೆ ಬಹಿರಂಗವಾಗಿ ಹೇಳಲಾಗುತ್ತಿಲ್ಲ ಅಷ್ಟೆ ಎಂದು ವ್ಯಾಖ್ಯಾನಿಸುವುದರ ಮೂಲಕ, ಭಾರತದ್ದು ರಕ್ಷಣಾತ್ಮಕ- ನಾಜೂಕಿನಾಟ ಎಂಬುದನ್ನು ಲೇಖನ ಬಿಂಬಿಸಿದೆ. ಅಮೆರಿಕ- ಚೀನಾ- ರಷ್ಯಾಗಳ ತಿಕ್ಕಾಟದಿಂದ ಭಾರತ ಕಾರ್ಯತಂತ್ರದ ದೃಶ್ಟಿಯಿಂದ ಲಾಭ ಪಡೆಯುತ್ತಿದೆ. ಬ್ರಿಕ್ಸ್ ಬ್ಯಾಂಕ್ ಸ್ಥಾಪನೆಗೆ ಭಾರತ ಸಹಯೋಗ ನೀಡಿತಾದರೂ ಈಗ ಅದಕ್ಕೆ ಅಷ್ಟಾಗಿ ಆಸಕ್ತಿ ಇದ್ದಂತಿಲ್ಲ ಎಂದೆಲ್ಲ ವಿಶ್ಲೇಷಿಸಿದೆ ಪತ್ರಿಕೆ.

————————————————————————-

suresh prabhu (2)

ಕಳಿಂಗ ಇನ್ ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸ್ಗೆ ಶನಿವಾರ ಭೇಟಿ ನೀಡಿದ್ದ ರೈಲ್ವೆ ಸಚಿವ ಸುರೇಶ್ ಪ್ರಭು, ಅಲ್ಲಿನ 25 ಸಾವಿರ ಬುಡಕಟ್ಟು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.

Leave a Reply