ಕೊಹಿನೂರ್ ಹೆಂಗ್ರೀ ಇಂಗ್ಲೆಂಡಿನದಾಗುತ್ತೆ? ಕೇಂದ್ರಕ್ಕೆ ತಗೋಳ್ತಿದಾರೆ ಸುಬ್ರಮಣಿಯನ್ ಸ್ವಾಮಿ ಕ್ಲಾಸು!

ಡಿಜಿಟಲ್ ಕನ್ನಡ ಟೀಮ್

‘ಇಂಗ್ಲೆಂಡ್ನಿಂದ ಕೊಹಿನೂರ್ ವಜ್ರವನ್ನು ವಾಪಸು ಪಡೆಯುವುದಕ್ಕಾಗಲ್ಲ, ಏಕಂದ್ರೆ ಅದು ನಮ್ಮಿಂದ ಕದ್ದಿದ್ದಲ್ಲ, ಬದಲಿಗೆ ಗಿಫ್ಟ್ ಕೊಟ್ಟಿದ್ದು’ ಅಂತ ಕೇಂದ್ರ ಸರ್ಕಾರದ ಪರವಾಗಿ ಸುಪ್ರೀಂಕೋರ್ಟ್ ನಲ್ಲಿ ಹೇಳಿಕೆ ಸಲ್ಲಿಕೆಯಾಗಿರುವುದು ಗೊತ್ತಲ್ಲ? ಇದು ಬಿಜೆಪಿಯ ಸುಬ್ರಮಣಿಯನ್ ಸ್ಮಾಮಿಯವರಿಗೆ ಬಿಲ್ಕುಲ್ ಸರಿ ಬಂದಿಲ್ಲ. ಕೇಂದ್ರದ ಈ ನಿಲುವನ್ನು ವಿರೋಧಿಸಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆಯುವುದಾಗಿ ಹೇಳಿರುವ ಸ್ವಾಮಿ, ಎಎನ್ಐ ಸುದ್ದಿಸಂಸ್ಥೆ ಬಳಿ ಕೊಹಿನೂರ್ ಕತೆಯನ್ನು ಹೀಗೆ ಬಿಚ್ಚಿಟ್ಟಿದ್ದಾರೆ.

‘ಕಾಕತಿಯ ವಂಶಸ್ಥರ ಕಾಲದಲ್ಲಿ ವಾರಂಗಲ್ ನಲ್ಲಿ ಕೊಹಿನೂರ್ ವಜ್ರ ತಯಾರಾಯಿತು. ಗುಂಟೂರಿನ ಗಣಿಯಿಂದ ತೆಗೆದಿದ್ದದು. ಇದನ್ನು ನಂತರದಲ್ಲಿ ಮೊಘಲರು ಸೆಳೆದುಕೊಂಡು ಅದನ್ನು ಸಿಂಹಾಸನ ಮುಕುಟದಲ್ಲಿರಿಸಿದ್ದರು. ನಂತರ ಅಬ್ದಾಲಿ ಎಂಬಾತನಿಗೆ, ಅವನಿಂದ ಆತನ ವಿರೋಧಿಗಳಿಗೆ ಹೋದ ಕೊಹಿನೂರ್ ವಜ್ರಮಣಿ ಕೊನೆಗೆ ಮಹಾರಾಜ ರಣಜಿತ್ ಸಿಂಗ್ ಬಳಿಗೆ ಬಂತು. ಈತ ಅನಾರೋಗ್ಯಕ್ಕೆ ಬಿದ್ದು ಸಾವಿನ ಸುಳಿವು ಸಿಗುತ್ತಲೇ, ವಜ್ರವು ಜಗನ್ನಾಥ ಮಂದಿರಕ್ಕೆ ಸೇರಬೇಕೆಂದು ಉಯಿಲು ಬರೆದಿಟ್ಟಿದ್ದ.’

ಹಾಗಾದರೆ ಇದು ಬ್ರಿಟಿಷರಿಗೆ ಸಂದಾಯವಾಗಿದ್ದು ಹೇಗೆ? ಅದಕ್ಕೆ ಸ್ವಾಮಿ ಹೇಳಿರುವುದು ಹೀಗೆ- ‘ಮಹಾರಾಜ ರಣಜಿತ್ ಸಿಂಗ್ ಗೆ 13 ವರ್ಷದ ದಿಲೀಪ್ ಸಿಂಗ್ ಎಂಬ ಮಗನಿದ್ದ. ಆತನಿಗೆ ಬ್ರಿಟಿಷ್ ಶಿಕ್ಷಕನಿದ್ದ. ದಿಲೀಪನಿಗೆ ಕ್ವೀನ್ ವಿಕ್ಟೋರಿಯಾಳನ್ನು ಭೇಟಿ ಮಾಡುವ ಅವಕಾಶ ಬಂತು. ಆ ಸಂದರ್ಭದಲ್ಲಿ, ರಾಣಿಗೆ ಏನಾದರೂ ವೈಭವೋಪೇತ ಉಡುಗೊರೆ ನೀಡಲೇಬೇಕು ಎಂದು ಕೇಳಿದಾಗ ಆತ ಆ ವಜ್ರವನ್ನೇ ಕೊಟ್ಟ. ಆದರೆ ಪ್ರಾಯಕ್ಕೆ ಬರುತ್ತಲೇ ತನ್ನ ಕಾರ್ಯದ ಬಗ್ಗೆ ಆತ ವಿಷಾದ ವ್ಯಕ್ತಪಡಿಸಿದ. ಇವೆಲ್ಲವೂ ಲಂಡನ್ ನ ಹೈಕಮಿಷನರ್ ಬಳಿ ಇರುವ ‘ಎಕ್ಸೈಲ್’ ಎಂಬ ಪುಸ್ತಕದಲ್ಲಿದಾಖಲಾಗಿವೆ. ಅಡಿಷನಲ್ ಜನರಲ್ ಮತ್ತು ಸಾಲಿಸಿಟರ್ ಜನರಲ್ ಗಳು ಕೊಹಿನೂರ್ ವಜ್ರದ ಕುರಿತ ಹೊಸ ಅಫಡವಿಟ್ ಸಲ್ಲಿಸುವುದಕ್ಕೂ ಮುಂಚೆ ಈ ಪುಸ್ತಕವನ್ನು ಕಡ್ಡಾಯವಾಗಿ ಓದಲು ಪ್ರಧಾನಿಯವರು ನಿರ್ದೇಶಿಸಬೇಕು’ ಎಂದಿದ್ದಾರೆ ಸ್ವಾಮಿ.

ಕೊಹಿನೂರ್ ವಜ್ರ ಜಗತ್ತಿನಲ್ಲೇ ಅತಿದೊಡ್ಡದು. ಈಗದು ಟವರ್ ಆಫ್ ಲಂಡನ್ ನಲ್ಲಿ ಪ್ರದರ್ಶನಕ್ಕಿಟ್ಟಿರುವ ಕ್ವೀನ್ ಮದರ್ಸ್ ಕಿರೀಟವನ್ನು ಅಲಂಕರಿಸಿದೆ. ಬ್ರಿಟಿಷ್ ಸಾಮ್ರಾಜ್ಯವು ಪಂಜಾಬ್ ಅನ್ನು ತನ್ನೊಳಗೆ ಲೀನಗೊಳಿಸಿಕೊಂಡ ಸಂದರ್ಭದಲ್ಲೇ ಈ ವಜ್ರ ಪಡೆದುಕೊಂಡಿತ್ತಾದ್ದರಿಂದ ಇದನ್ನು ಹಿಂತಿರುಗಿಸುವ ಪ್ರಶ್ನೆ ಇಲ್ಲ ಎಂಬುದು ಬ್ರಿಟಿಷರ ಪ್ರತಿಪಾದನೆ. ಕೊಹಿನೂರ್ ಹಿಂದಕ್ಕೆ ಕೊಡಿ ಅಂತ ಭಾರತವು ಲಾಗಾಯ್ತಿನಿಂದಲೂ ಹಲವು ಸಂದರ್ಭಗಳಲ್ಲಿ ಇಂಗ್ಲೆಂಡ್ ಅನ್ನು ಒತ್ತಾಯಿಸಿದ್ದು ಹಾಗೂ ಅದಕ್ಕೆ ಅವರು ತಿರಸ್ಕರಿಸಿದ್ದು ನಡೆದುಕೊಂಡೇ ಬಂದಿದೆ.

ಇದೀಗ ಸುಪ್ರೀಂ ಕೋರ್ಟ್ ಎದುರಿಗೆ ಕೊಹಿನೂರ್ ಹಿಂದೆ ತರುವ ಬಗ್ಗೆ ಸ್ಪಷ್ಟನೆ ಬೇಕೆಂಬ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದಿದೆ. ಅದರ ವಿಚಾರಣೆ ವೇಳೆಯಲ್ಲೇ ಕೇಂದ್ರವು, ಅದು ಇಂಗ್ಲೆಂಡ್ ಗೆ ನೀಡಿದ್ದ ಉಡುಗೊರೆಯಾದ್ದರಿಂದ, ಇಲ್ಲಿ ಕಳ್ಳತನ- ಬಲವಂತದ ಸೆಳೆತ ಇಲ್ಲವಾದ್ದರಿಂದ ಮತ್ತೆ ಕೇಳಲಾಗುವುದಿಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸಿತ್ತು. ಆರು ವಾರಗಳ ಒಳಗೆ ಈ ಬಗ್ಗೆ ವಿವರವಾದ ಪ್ರತಿಕ್ರಿಯೆ ಸಲ್ಲಿಸುವಂತೆ ಸುಪ್ರೀಂಕೋರ್ಟ್ ಕೇಂದ್ರಕ್ಕೆ ನಿರ್ದೇಶಿಸಿದೆ.

ಈ ಹಂತದಲ್ಲಿ ಸುಬ್ರಮಣಿಯನ್ ಸ್ವಾಮಿ ಆಕ್ಷೇಪ ಎತ್ತಿರುವುದು, ಪ್ರತಿಕ್ರಿಯೆ ಸಂದರ್ಭದಲ್ಲಿ ಎಚ್ಚರಿಕೆ ವಹಿಸುವಂಥ ಒತ್ತಡವೊಂದನ್ನು ಕೇಂದ್ರದ ಮೇಲೆ ಸೃಷ್ಟಿಸಿದೆ.

Leave a Reply