ಗಾರ್ಮೆಂಟ್ ನೌಕರರ ಪ್ರತಿಭಟನೆಗೆ ನಲುಗುತ್ತಿರುವ ಬೆಂಗಳೂರು, ಹಲವು ಮಾರ್ಗಗಳು ಜಾಮ್, ಹಿಂಸೆಗೆ ತಿರುಗಿದೆ ಘರ್ಷಣೆ

ಡಿಜಿಟಲ್ ಕನ್ನಡ ಟೀಮ್

ಕೇಂದ್ರ ಸರ್ಕಾರದ ನೂತನ ಭವಿಷ್ಯ ನಿಧಿ (ಪಿ ಎಫ್) ನಿಯಮವನ್ನು ವಿರೋಧಿಸಿ ಬೆಂಗಳೂರು ಸೇರಿದಂತೆ ನಗರಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಗಾರ್ಮೆಂಟ್ಸ್ ಉದ್ಯಮದ ಸಹಸ್ರಾರು ಕಾರ್ಮಿಕರು ಬೀದಿಗಿಳಿದು ಆರಂಭಿಸಿರುವ ಪ್ರತಿಭಟನೆ ತೀವ್ರಸ್ವರೂಪ ಪಡೆದುಕೊಂಡಿದೆ. ನಗರದ ಹೊಸೂರು ರಸ್ತೆಯ ಬೊಮ್ಮನಹಳ್ಳಿ, ಎಲೆಕ್ಟ್ರಾನಿಕ್ ಸಿಟಿ, ಬೊಮ್ಮಸಂದ್ರ ಕೈಗಾರಿಕಾ ಪ್ರದೇಶ, ತುಮಕೂರು ರಸ್ತೆಯ ಗೊರುಗುಂಟೆ ಪಾಳ್ಯ, ಜಾಲಹಳ್ಳಿ, ಪೀಣ್ಯಾ ಕೈಗಾರಿಕಾ ಪ್ರದೇಶ, ಮೈಸೂರು ರಸ್ತೆಯ ಬಿಡದಿ ರಾಮನಗರ, ಮದ್ದೂರು, ಶ್ರೀರಂಗ ಪಟ್ಟಣ, ಮಾಗಡಿ ರಸ್ತೆಯ ಸುಂಕದಕಟ್ಟೆ, ಸರ್ಜಾಪುರ ರಸ್ತೆಯ ಬೆಳಂಡೂರು, ಬನ್ನೇರುಘಟ್ಟದ ಕೋಳಿಫಾರಂ ಸೇರಿದಂತೆ ನಗರದ ಎಲ್ಲೆಡೆ ಪ್ರತಿಭಟನೆಗಳು ತೀವ್ರವಾಗಿವೆ.

Bomanahalli-Protest2

ತುಮಕೂರು ರಸ್ತೆಯ ಗೊರುಗುಂಟೆ ಪಾಳ್ಯದಲ್ಲಿ ಪ್ರತಿಭಟನೆ ತೀವ್ರ ಸ್ವರೂಪ ಪಡೆದು, ಉದ್ರಿಕ್ತರಿಂದ ಸಾರ್ವಜನಿಕ ಮತ್ತು ಸರ್ಕಾರಿ ವಾಹನಗಳ ಮೇಲೆ ಕಲ್ಲು ತೂರಾಟ ನಡೆದಿದೆ. ಘಟನೆಯಲ್ಲಿ 3 ಬಿಎಂಟಿಸಿ ಬಸ್ಸುಗಳಿಗೆ ಸೇರಿ ಹಲವು ಖಾಸಗಿ ವಾಹನಗಳಿಗೆ ಹಾನಿ ಉಂಟಾಗಿದೆ. ಸುಮಾರು 10 ಸಾವಿರಕ್ಕೂ ಹೆಚ್ಚು ಕಾರ್ಮಿಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದು, ಸಂಚಾರ ಅಸ್ತವ್ಯಸ್ತಗೊಂಡಿದೆ. ಸುಮಾರು 12 ಕಿ.ಮೀ ಗಳಷ್ಟು ದೂರದ ವರೆಗೂ ಸಂಚಾರ ದಟ್ಟಣೆ ಏರ್ಪಟ್ಟಿದ್ದು ಜನಸಾಮಾನ್ಯರು ಹೈರಾಣಾಗಿದ್ದಾರೆ. ಇದರ ಜೊತೆಗೆ ಮೆಟ್ರೋ ರೈಲಿಗೂ ಪ್ರತಿಭಟನೆಯ ಬಿಸಿ ತಟ್ಟಿದ್ದು ರೈಲು ನಿಲ್ದಾಣಗಳಲ್ಲಿ ಪ್ರಯಾಣಿಕರು ತುಂಬಿ ತುಳುಕುತ್ತಿದ್ದು, ನಿಲ್ದಾಣಗಳಿಂದ ಪ್ರಯಾಣಿರು ಹೊರಬರಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಮೈಸೂರು ಹೆದ್ದಾರಿಯಲ್ಲೂ ಪ್ರತಿಭಟನೆಗಳು ನಡೆದಿದ್ದು, ಬೆಂಗಳೂರಿನಿಂದ ಮೈಸೂರಿನವರೆಗೂ ಸಂಚಾರ ದಟ್ಟಣೆಯ ಬಿಸಿ ಸಾರ್ವಜನಿಕರಿಗೆ ಆಗಿದೆ. ಶ್ರೀರಂಗಪಟ್ಟಣದ ಬಳಿ ಆಂಬುಲೆನ್ಸ್ ಗೆ ದಾರಿ ಬಿಡುವ ವಿಚಾರದಲ್ಲಿ ಕಾರ್ಮಿಕರು ಮತ್ತು ಸಾರ್ವಜನಿಕರು ಕೈಕೈ ಮಿಲಾಯಿಸಿದ ಪ್ರಸಂಗವೂ ನಡೆದಿದೆ.

ಹೊಸೂರು ರಸ್ತೆಯ ಬೊಮ್ಮಸಂದ್ರ ಕೈಗಾರಿಕಾ ಪ್ರದೇಶದಲ್ಲಿ 10 ಸಾವಿರಕ್ಕೂ ಹೆಚ್ಚೂ ಕಾರ್ಮಿಕರು ಪ್ರತಿಭಟನೆ ನಡೆಸುತ್ತಿದ್ದು, ತೀವ್ರ ಸ್ವರೂಪ ಪಡೆದ ಹಿನ್ನೆಲೆ ಪ್ರತಿಭಟನಾ ನಿರತರು ಮತ್ತು ಪೊಲೀಸರ ನಡುವೆ ವಾಗ್ವಾದ ನಡೆದಿದೆ. ಈ ವೇಳೆ ಕೆಲ ದುಷ್ಕರ್ಮಿಗಳು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ್ದು, ಇವರನ್ನು ಚದುರಿಸಲು ಲಘು ಲಾಠಿ ಪ್ರಹಾರ ನಡೆದಿದೆ.

ಸೋಮವಾರದಿಂದ ಪ್ರಾರಂಭವಾಗಿರುವ ಪ್ರತಿಭಟನೆ ಇಂದು ಸಹ ಮುಂದುವರೆದಿದೆ. ನಿನ್ನೆಯು ಸಹ ಪ್ರತಿಭಟನೆ ತೀವ್ರ ಸ್ವರೂಪ ಪಡೆದು ಹಲವು ಪೊಲೀಸರು ಮತ್ತು ಪ್ರತಿಭಟನಾಕಾರರು ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ.

Bomanahalli-Protest3

Leave a Reply