ತಲಾಕ್ ಶೋಷಣೆ ವಿರುದ್ಧ ಕೋರ್ಟ್ ಮೆಟ್ಟಿಲೇರಿರುವ ಶಯಾರಾ, ಪ್ರಗತಿಪರ ಮಹಾಶಯರು ಬೆಂಬಲಿಸೋಕೆ ತಯಾರಾ?

ಡಿಜಿಟಲ್ ಕನ್ನಡ ವಿಶೇಷ

ತಲಾಕ್.. ತಲಾಕ್.. ತಲಾಕ್.. ಎಂದು ಹೇಳಿ ವಿಚ್ಛೇದನ ಪಡೆಯುವ 1939ರ ಮುಸ್ಲಿಂ ವಿವಾಹ ಕಾಯ್ದೆ ಭಾರತೀಯ ಮುಸ್ಲಿಂ ಮಹಿಳೆಯರನ್ನು ರಕ್ಷಿಸಲು ಸಂಪೂರ್ಣ ವಿಫಲವಾಗಿದೆ. ಹಾಗಾಗಿ ಈ ಕಾಯ್ದೆಯನ್ನು ವಜಾಗೊಳಿಸಬೇಕು ಎಂದು ಶಯಾರಾ ಬಾನು ಸುಪ್ರೀಂ ಕೋರ್ಟ್ ಮೆಟ್ಟಿಲೇರಿರುವುದು ಹಳೆಯ ವಿಚಾರ. ಈಗ ನ್ಯಾಯಾಲಯದಲ್ಲಿ ಈಕೆಯ ಪ್ರತಿವಾದಿಯಾಗಿ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ (ಎಐಎಂಪಿಎಲ್ ಬಿ) ನಿಂತಿದೆ.

ಈ ಧಾರ್ಮಿಕ ನಿಯಮದ ಮೂಲಕ ಮುಸ್ಲಿಂ ಮಹಿಳೆಯರ ಮೇಲೆ ದಬ್ಬಾಳಿಕೆ ನಡೆಯುತ್ತಲೇ ಇದೆ. ಈ ಬಗ್ಗೆ ಎಲ್ಲರಿಗೂ ಗೊತ್ತಿದ್ದರೂ ಶಯಾರಾ ಬಾನು ಪರ ನಿಲ್ಲಲು ಯಾರೊಬ್ಬರಿಗೂ ಮನಸ್ಸಿಲ್ಲ. ಮನಸ್ಸಿಲ್ಲ ಅನ್ನೋದಕ್ಕಿಂದ ಧೈರ್ಯವಿಲ್ಲ ಎನ್ನೋದು ಸೂಕ್ತ. ನಿಜ, ಇತ್ತೀಚೆಗೆ ದೇವಾಸ್ಥಾನಗಳಲ್ಲಿ ಮಹಿಳೆಯರಿಗೂ ಪ್ರವೇಶ ನೀಡಬೇಕು ಎಂದು ಮಾಡಿದ್ದ ಹೋರಾಟವನ್ನು ಪ್ರಗತಿಪರ ಚಳುವಳಿ ಎಂದು ಕರೆದುಕೊಂಡಿದ್ದವರು, ಈಗ ಕಣ್ಣಿಗೆ ಕಾಣದಂತೆ ಮಾಯವಾಗಿದ್ದಾರೆ. ಯಾವುದೋ ಕಾಲದಲ್ಲಿದ್ದ ಸತಿ ಪದ್ಧತಿಯನ್ನು ಇಂದಿಗೂ ಆಡಿಕೊಂಡಿರುವ ಎಡಪಂಥೀಯ ಪ್ರಗತಿವಾದಿಗಳ್ಯಾರೂ ಶಯಾರಾ ಬಾನು ಬೆಂಬಲಕ್ಕೆ ನಿಂತು ತಲಾಕ್ ಪದ್ಧತಿ ಹೋಗಬೇಕೆಂದು ಹೇಳುತ್ತಿಲ್ಲ. ಇದು ಸ್ತ್ರೀ ಶೋಷಣೆ ಅಂತ ಯಾರಿಗೂ ಅನ್ನಿಸುತ್ತಿಲ್ಲ!

Shayarabano
ಶಯಾರಾ ಬಾನು (ಚಿತ್ರಕೃಪೆ- ಓಪನ್ ನಿಯತಕಾಲಿಕ)

ಶಯಾರಾ ಬಾನು ತನ್ನ ಅರ್ಜಿಯಲ್ಲಿ ‘ಈ ವಿಚ್ಛೇಧನ ಪ್ರಕ್ರಿಯೆಯಲ್ಲಿ ಕೈ ಕಟ್ಟಿ ಹಾಕಿದಂತಾಗಿದೆ. ಇಲ್ಲಿ ಪುರುಷರು ತಮಗಿಷ್ಟ ಬಂದ ಕಾರಣ ಹೇಳಿ ವಿಚ್ಛೆದನ ಪಡೆದು ತಮ್ಮ ಅಧಿಕಾರ ಚಲಾಯಿಸುತ್ತಾರೆ. 21ನೇ ಶತಮಾನದಲ್ಲೂ ತಲಾಕ್ ಎಂಬ ಮಾತಿನಿಂದ ಈ ರೀತಿಯಾದ ಭೇದ ಮತ್ತು ಅಸಮಾನತೆಗಳು ಹೆಚ್ಚಾಗುತ್ತಿವೆ. ಒಮ್ಮೆ ಮಹಿಳೆಯನ್ನು ವಿಚ್ಛೇದಿಸಿದ ನಂತರ ಆಕೆಯ ಗಂಡ ಮತ್ತೆ ಅವಳನ್ನು ಸ್ವೀಕರಿಸಲು ಅವಕಾಶವಿಲ್ಲ. ಯಾವುದೋ ಒತ್ತಡದಲ್ಲಿ ಆ ವ್ಯಕ್ತಿ ತಲಾಕ್ ಹೇಳಿದ್ದರೂ ಅದನ್ನು ಮನ್ನಣೆ ಮಾಡಲಾಗುತ್ತದೆ. ಈ ವೇಳೆ ನಿಖಾ ಹಲಾಲ್ ನಂತರವಷ್ಟೇ ಅವರಿಬ್ಬರು ಮತ್ತೆ ಸೇರಬಹುದು. ಅಂದರೆ, ವಿಚ್ಛೇದನ ಪಡೆದ ಮಹಿಳೆ ಮತ್ತೊಂದು ಮದುವೆಯಾಗಿ ತನ್ನ ಎರಡನೇ ಗಂಡನಿಂದ ವಿಚ್ಛೇದನ ಪಡೆದ ನಂತರ ಮೊದಲ ಗಂಡನನ್ನು ಸೇರಲು ಅವಕಾಶವಿದೆ’ ಎಂದು ಅಳಲು ತೋಡಿಕೊಂಡಿದ್ದಾಳೆ.

ಮುಸ್ಲಿಂ ಸಾಂಪ್ರದಾಯಿಕ ಸಮಾಜ ತಿರುಗಿಬೀಳುತ್ತದೆ ಎಂದು ಗೊತ್ತಿದ್ದೂ ತಾನು ಕೋರ್ಟ್ ಮೆಟ್ಟಿಲು ಹತ್ತಿರುವುದಕ್ಕೆ ತಾನು ಅನುಭವಿಸಿದ ಬವಣೆಯೇ ಕಾರಣ ಅಂತ ಅದನ್ನು ವಿವರಿಸಿದ್ದಾರೆ ಶಯಾರಾ ಬಾನು. ಗಂಡನ ದಬ್ಬಾಳಿಕೆಯಿಂದ ತಾನು 6 ಬಾರಿ ಗರ್ಭಪಾತ ಮಾತ್ರೆ ಬಲವಂತವಾಗಿ ನುಂಗಬೇಕಾಯಿತು. ಇದರಿಂದ ಆರೋಗ್ಯವೂ ಹಾಳಾಗಿದೆ. ತನ್ನ ಇಬ್ಬರೂ ಮಕ್ಕಳೂ ಸಹ ಗಂಡನ ಬಳಿ ಇರುವುದಾಗಿ ಅರ್ಜಿಯಲ್ಲಿ ತಿಳಿಸಿದ್ದಾಳೆ.

ಶಯಾರಾ ಬಾನು ಕಥೆ ಏನು?

35 ವರ್ಷದ ಶಯಾರಾ ಬಾನು ಇಬ್ಬರ ಮಕ್ಕಳ ತಾಯಿ. ಕಳೆದ ವರ್ಷ ಅಕ್ಟೋಬರ್ ನಲ್ಲಿ ಚಿಕಿತ್ಸೆಗಾಗಿ ಉತ್ತರಾಖಂಡದಲ್ಲಿರುವ ತವರು ಮನೆಗೆ ತೆರಳಿದ್ದರು. ಈ ವೇಳೆ ಆಕೆ ತನ್ನ ಗಂಡ ರಿಜ್ವಾನ್ ಅಹ್ಮದ್ ನಿಂದ ತಲಾಕ್ನಾಮಾ (ವಿಚ್ಛೇದನ ಬೇಕು ಎಂಬ ಪತ್ರ) ಪಡೆದಳು. ಈ ಹಂತದಲ್ಲಿ 15 ವರ್ಷಗಳ ಕಾಲ ಸಂಸಾರ ನಡೆಸಿದ್ದ ತನ್ನ ಗಂಡನನ್ನು ಸಂಪರ್ಕಿಸಲು ಆಕೆಯ ಎಲ್ಲ ಪ್ರಯತ್ನಗಳು ವಿಫವಾದವು. ತನ್ನ ಮಕ್ಕಳ ಭವಿಷ್ಯದ ಬಗ್ಗೆ ಆತಂಕಗೊಂಡ ಶಹಯಾರಾ ಇದೇ ವರ್ಷ ಫೆಬ್ರವರಿಯಲ್ಲಿ ನ್ಯಾಯಾಲಯದ ಮೆಟ್ಟಿಲೇರಿದ್ದಾಳೆ.

ಶಾಹ್ ಬಾನು ಪ್ರಕರಣದ ಮುಂದುವರಿದ ಭಾಗ..

1980ರ ದಶಕದ ಆರಂಭದಲ್ಲಿ 62 ವರ್ಷದ ಶಾಹ್ ಬಾನು ಬೇಗಮ್ ಎಂಬ ಐದು ಮಕ್ಕಳ ತಾಯಿ, 1978ರಲ್ಲಿ ತನ್ನ ಪತಿ ವಿಚ್ಛೇದನ ನೀಡಿದರ ವಿರುದ್ಧ ಸುಪ್ರೀಂ ಕೋರ್ಟ್ ನಲ್ಲಿ ಕ್ರಿಮಿನಲ್ ಮೊಕದ್ದಮೆ ಅರ್ಜಿ ಸಲ್ಲಿಸಿದ್ದಳು. ಆ ಪ್ರಕರಣದಲ್ಲಿ ಜಯ ಸಾಧಿಸಿದ್ದ ಬೇಗಮ್, ತನ್ನ ಪತಿಯಿಂದ ಜೀವನಾಂಶ ಪಡೆಯುವಲ್ಲಿ ಯಶಸ್ವಿಯಾಗಿದ್ದಳು. ನಂತರ ಇಸ್ಲಾಂ ಸಿದ್ಧಾಂತದ ನೆಪದಲ್ಲಿ ಕಾನೂನಿಗೆ ತಿದ್ದುಪಡಿ ತಂದು ಈ ತೀರ್ಪನ್ನು ಬದಲಿಸಲಾಯಿತು.

ಈ ಘಟನೆಯ ನಂತರ ಈಗ ಶಯಾರಾ ಬಾನು ಪ್ರಕರಣ ಮತ್ತೆ ಸುದ್ದಿ ಮಾಡಿದೆ. ಶಯಾರಾ, ಈ ತಲಾಕ್ ಹೇಳಿ ವಿಚ್ಛೇದನ ನೀಡುವ ಪದ್ಧತಿ ವಿರುದ್ಧ ಹೋರಾಟ ಮಾಡುತ್ತಿದ್ದಾಳೆ. ಈಕೆ ನ್ಯಾಯಕ್ಕಾಗಿ ಕೋರ್ಟ್ ಮೆಟ್ಟಿಲೇರಿರುವುದರ ವಿರುದ್ಧ ಎಐಎಂಪಿಎಲ್ ಬಿ ಪ್ರತಿವಾದಿಯಾಗಲು ನಿರ್ಧರಿಸಿದೆ. ಈ ಸಂದರ್ಭದಲ್ಲಿ ಶಯಾರಾ ಬಾನು ಪರ ಯಾರಾದರೂ ಧ್ವನಿ ಎತ್ತಿದ್ದು ಕೇಳಿದ್ದೀರಾ? ಇದು ಪ್ರಗತಿಪರತೆ, ಸ್ತ್ರೀ ವಿಮೋಚನೆಗಳ ಚೌಕಟ್ಟಿಗೆ ಬರುವುದಿಲ್ಲವೇ? ಹಿಂದು ಧರ್ಮದ ಸುಧಾರಣೆ ವಿಷಯ ಬಂದಾಗಲಷ್ಟೇ ಬುದ್ಧಿಜೀವಿಗಳಿಗೆ ಮಾತನಾಡುವ, ಬೆಂಬಲ ವ್ಯಕ್ತಪಡಿಸುವ ಬದ್ಧತೆ ಇರುತ್ತದೇನು?

ಶಯಾರಾ ಬೆನ್ನಿಗೀಗ ಭಾರತವೇ ನಿಲ್ಲಬೇಕಿದೆ.

Leave a Reply