ಭವಿಷ್ಯ ನಿಧಿಗೆ ವಿಧಿಸಿದ್ದ ನಿರ್ಬಂಧ ಸಡಿಲಿಕೆಗೆ ಕೇಂದ್ರದ ನಿರ್ಧಾರ, ಈಗಲೂ ಪ್ರತಿಭಟಿಸುತ್ತಿರುವುದಕ್ಕೆ ಮಾಹಿತಿ ಕೊರತೆ ಕಾರಣವಾ?

ಡಿಜಿಟಲ್ ಕನ್ನಡ ಟೀಮ್

ಭವಿಷ್ಯ ನಿಧಿ, ಪ್ರತಿ ನೌಕರನ ಆರ್ಥಿಕ ಬೆನ್ನೆಲುಬು. ಹೆಸರೇ ಹೇಳುವಂತೆ ಕಾರ್ಮಿಕರ ಭವಿಷ್ಯವನ್ನು ಕಾಪಾಡುವ ನಿಟ್ಟಿನಲ್ಲಿ ಇರುವ ಯೋಜನೆ. ಕಳೆದ ಫೆಬ್ರವರಿಯಲ್ಲಿ ಕೇಂದ್ರ ಬಜೆಟ್ ನಲ್ಲಿ ಕೇಂದ್ರ ಸರ್ಕಾರ ಈ ಕುರಿತು ಕೆಲವು ನಿರ್ಬಂಧ ಹೇರಿದ ನಂತರ, ಸರ್ಕಾರದ ನಿರ್ಧಾರಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಲೇ ಇದೆ. ಈಗ ಅದರ ಕಾವು ಹೆಚ್ಚಾಗಿದ್ದು, ಪ್ರತಿಭಟನೆಗಳು ತೀವ್ರವಾಗುತ್ತಿವೆ. ಈ ಬೆಳವಣಿಗೆಗಳ ನಂತರ ಕಾರ್ಮಿಕರ ಹಿತಕ್ಕೆ ಧಕ್ಕೆಯಾಗದಂತೆ ನೋಡಿಕೊಳ್ಳಲು ಕೇಂದ್ರ ಕಾರ್ಮಿಕ ಸಚಿವಾಲಯ ಹೊಸ ನಿಯಮದಲ್ಲಿ ಹೇರಲಾಗಿದ್ದ ನಿರ್ಬಂಧಗಳನ್ನು ಸ್ವಲ್ಪ ಪ್ರಮಾಣದಲ್ಲಿ ಸಡಿಲಗೊಳಿಸಿದೆ.

ಭವಿಷ್ಯ ನಿಧಿ ಕುರಿತಂತೆ ಸರ್ಕಾರದ ಹೊಸ ಬದಲಾವಣೆಯ ಪ್ರಕಾರ, ವ್ಯಕ್ತಿಯೊಬ್ಬ ತನ್ನ ಹಾಗೂ ಕುಟುಂಬ ಸದಸ್ಯರ ಆರೋಗ್ಯ, ಮಕ್ಕಳ ಉನ್ನತ ಶಿಕ್ಷಣ, ಮದುವೆ ಸಂದರ್ಭದಲ್ಲಿ ಪೂರ್ಣ ಹಣ ಪಡೆಯುವ ಅವಕಾಶ ಕಲ್ಪಿಸಿಕೊಟ್ಟಿದೆ.

ಇಷ್ಟರ ನಡುವೆಯೂ ಪ್ರತಿಭಟನೆ ವ್ಯಕ್ತಪಡಿಸುತ್ತಿರುವವರು ಕೇಳುತ್ತಿರುವುದೇನೆಂದರೆ, ಪ್ರಾವಿಡೆಂಟ್ ಫಂಡ್ ಅನ್ನು ತಮಗೆ ಬೇಕಾದಾಗ ಹಿಂದಕ್ಕೆ ತೆಗೆದುಕೊಳ್ಳುವುದಕ್ಕೆ ಅವಕಾಶವಿರಬೇಕು ಅಂತ. ನಮ್ಮ ಹಣ ಎನ್ನುವ ಆಧಾರದಲ್ಲಿ ಮಾತ್ರವೇ ನೋಡಿದಾಗ ಈ ವಾದ ಸರಿ. ಆದರೆ ಭವಿಷ್ಯ ನಿಧಿ ಎಂಬುದರ ಪರಿಕಲ್ಪನೆಯೇ ದೀರ್ಘಾವಧಿಗೆ ಹೂಡಿಕೆ ಹಾಗೂ ಆಪದ್ಧನ ಮಾತ್ರ ಅನ್ನೋದು. ಹೀಗಿರುವಾಗ ಇದನ್ನು ಇನ್ನೊಂದು ಬಗೆಯ ಉಳಿತಾಯ ಖಾತೆಯನ್ನಾಗಿಸಿದರೆ ನೀತಿ ನಿರೂಪಣೆ ದೃಷ್ಟಿಯಿಂದ ಕಷ್ಟವೇ. ಏಕೆಂದರೆ ಯಾವತ್ತೂ ಹಿಂತೆಗೆಯಬಹುದಾದ ಈ ಹಣವನ್ನು ಸರ್ಕಾರ ಇನ್ನೆಲ್ಲೋ ತೊಡಗಿಸುವುದು ಸಾಧ್ಯವಾಗುವುದಿಲ್ಲ.

ಯಾವುದೇ ಕಾರ್ಮಿಕನಿಗೆ ದೊಡ್ಡ ಪ್ರಮಾಣದ ಹಣದ ಅಗತ್ಯ ಬೀಳುವುದು, ತನ್ನ ಅಥವಾ ಕುಟುಂಬ ಸದಸ್ಯರ ಆರೋಗ್ಯ ಕೆಟ್ಟಾಗ, ಮನೆ ನಿರ್ಮಾಣ, ಮಕ್ಕಳ ಉನ್ನತ ವಿದ್ಯಾಭ್ಯಾಸ, ಮದುವೆಯಂತಹ ಸಂದರ್ಭದಲ್ಲಿ. ಈಗ ಅವುಗಳಿಗೆ ಸರ್ಕಾರ ವಿನಾಯಿತಿ ನೀಡಿರುವುದು ಒಳ್ಳೆಯ ನಿರ್ಧಾರ. ಕೆಲಸ ಬಿಟ್ಟ ತಕ್ಷಣ ಭವಿಷ್ಯ ನಿಧಿಯನ್ನು ತೆಗೆದುಕೊಂಡು ಬರಿಗೈ ಮಾಡಿಕೊಳ್ಳುವುದರ ಬದಲು ಅಗತ್ಯ ಬಿದ್ದಾಗ ಮಾತ್ರ ತೆಗೆದುಕೊಳ್ಳಬೇಕೆಂಬ ನಿರ್ಬಂಧವೂ ಕಾರ್ಮಿಕ ದೃಷ್ಟಿಯಿಂದಲೂ ಉತ್ತಮ ಕ್ರಮ.

ಈ ಹಿಂದೆ ಯಾವುದೇ ಕಾರ್ಮಿಕನೊಬ್ಬ ಕೆಲಸ ಬಿಟ್ಟು ಎರಡು ತಿಂಗಳ ಕಾಲ ನಿರುದ್ಯೋಗಿಯಾಗಿದ್ದರೆ, ತನ್ನ ಪಿಎಫ್ ಹಣವನ್ನು ಪೂರ್ಣವಾಗಿ ತೆಗೆದುಕೊಳ್ಳುವ ಅವಕಾಶವಿತ್ತು. ಕಳೆದ ಫೆಬ್ರವರಿಯಲ್ಲಿ ಕೇಂದ್ರ ಬಜೆಟ್ ಮಂಡಣೆ ವೇಳೆ ಕಾರ್ಮಿಕ ಹಾಗೂ ಉದ್ಯೋಗ ಸಚಿವಾಲಯ ಭವಿಷ್ಯ ನಿಧಿಯನ್ನು ಪಡೆಯುವ ಕುರಿತು ಕೆಲವು ನಿರ್ಬಂಧ ಹೇರಲಾಯಿತು.

ಯಾವುದೇ ಕಾರ್ಮಿಕ ಕೆಲಸ ಬಿಟ್ಟ ನಂತರ ಪಿಎಫ್ ಹಣದ ಮೊತ್ತದಲ್ಲಿ ಅರ್ಧದಷ್ಟನ್ನು ಮಾತ್ರ ಪಡೆಯಬಹುದು. ಉಳಿದ ಮೊತ್ತವನ್ನು 58 ವರ್ಷ ಪೂರ್ಣಗೊಂಡ ನಂತರ ಪಡೆಯಬಹುದು ಎಂಬ ಬದಲಾವಣೆ ಮಾಡಿತ್ತು. ಒಂದು ವೇಳೆ ಸ್ವಂತ ವ್ಯಾಪಾರ ಆರಂಭಿಸಿದರೆ, ಮಹಿಳಾ ಕಾರ್ಮಿಕಳು ಮದುವೆ, ಗರ್ಭಿಣಿಯಾಗಿ ಕೆಲಸ ತೊರೆದ ಸಂದರ್ಭದಲ್ಲಿ ಅವರಿಗೆ ವಿನಾಯಿತಿ ನೀಡಿ ಪೂರ್ಣಪ್ರಮಾಣದ ಹಣ ಪಡೆಯುವ ಅವಕಾಶ ನೀಡಿತ್ತು.

ಕೇಂದ್ರದ ಈ ನೀತಿ ವಿರುದ್ಧ ಕಾರ್ಮಿಕರು ಅಸಮಾಧಾನಗೊಂಡು ವ್ಯಾಪಕ ವಿರೋಧ ವ್ಯಕ್ತಪಡಿಸಿ ಪ್ರತಿಭಟನೆಗಳು ತೀವ್ರವಾಗಿವೆ. ಈ ಹಿನ್ನೆಲೆಯಲ್ಲಿ ಭವಿಷ್ಯ ನಿಧಿಗೆ ಸಂಬಂಧಿಸಿದಂತೆ ಹೇರಲಾಗಿದ್ದ ನಿರ್ಬಂಧದಲ್ಲಿ ಕೆಲವು ಬದಲಾವಣೆ ಮಾಡಲು ನಿರ್ಧರಿಸಿದೆ. ಅಲ್ಲದೆ ಈ ನೂತನ ಕಾಯ್ದೆ ಮೇ 1ರ ಬದಲಿಗೆ ಬದಲಿಗೆ ಆಗಸ್ಟ್ 1ರಿಂದ ಜಾರಿಯಾಗಲಿದೆ. ಅಲ್ಲದೆ 58 ವರ್ಷದ ನಂತರ ಹಣ ಪಡೆಯಲಿರುವ ಕಾರ್ಮಿಕನಿಗೆ ಅಲ್ಲಿಯವರೆಗೂ ಬಡ್ಡಿಯನ್ನು ಸೇರಿಸಿ ಹಣ ಪಾವತಿ ಮಾಡುವುದಾಗಿ ಸಚಿವಾಲಯದ ಹೇಳಿಕೆಯಲ್ಲಿ ತಿಳಿಸಲಾಗಿದೆ.

2 COMMENTS

  1. ದೇಶ ಪ್ರಕಾಶಿಸುವುದು ….ಅಚ್ಚೆ ದಿನಗಳು ಅಂದ್ರೆ ಇದೆ ಏನೋ ಬಡವರ, ಮಧ್ಯಮ ವರ್ಗದವರ,ಕಾರ್ಮಿಕರ
    ಸಣ್ಣ ಉಳಿತಾಯದ ಮೇಲಿನ ಹಗಲು ದರೋಡೆ

Leave a Reply