ಸುದ್ದಿಸಂತೆ: ಪಿ ಎಫ್ ಹೊಸ ನಿಯಮ ರದ್ದು, ಕಾಶ್ಮೀರದಲ್ಲೇನಾಯ್ತು?, ಅಫ್ಘನ್ ದಾಳಿಗೆ 28 ಸಾವು, ವಿಶ್ವನಾಥ್ ಏನಂದ್ರು, ಬಾಲಾರೋಪಿಗಿಲ್ಲ ಜಾಮೀನು…

ಪಿಎಫ್ ನೀತಿ ವಿರುದ್ಧದ ಪ್ರತಿಭಟನೆಯಲ್ಲಿ ಮಂಗಳವಾರ ಕಂಡ ಒಡಕಲು ಬಿಂಬ

ಡಿಜಿಟಲ್ ಕನ್ನಡ ಟೀಮ್

ಅಪ್ ಡೇಟೆಡ್- ಕೇಂದ್ರ ಸರ್ಕಾರ ಒಟ್ಟಾರೆ ಪಿಎಫ್ ಮೇಲಿನ ಬಿಗಿ ನೀತಿಗಳನ್ನೇ ಹಿಂದಕ್ಕೆ ತೆಗೆದುಕೊಂಡಿದೆ. ಈ ಪ್ರಕಾರ ಪಿಎಫ್ ಹಣವನ್ನು ಹಿಂದಕ್ಕೆ ಪಡೆಯಲು 58 ವರ್ಷದವರೆಗೆ ಕಾಯಬೇಕಿಲ್ಲ.

ಜು.31ರವರೆಗೆ ಪಿಎಫ್ ಹೊಸ ನಿಯಮ ತಡೆ

ಭವಿಷ್ಯ ನಿಧಿಯ ಹಣ ಪಡೆಯುವುದಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ಹೊಸ ನಿರ್ಬಂಧ ವಿರೋಧಿಸಿ ವ್ಯಾಪಕ ಪ್ರತಿಭಟನೆಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ನಿರ್ಧಾರವನ್ನು ಜುಲೈ 31ರವರೆಗೆ ತಡೆ ಹಿಡಿದಿದೆ. ಈ ಕುರಿತು ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಕೇಂದ್ರ ಕಾರ್ಮಿಕ ಸಚಿವ ಬಂಡಾರು ದತ್ತಾತ್ರೆಯ ‘ಈ ನಿಯಮ ಗೊತ್ತುವಳಿಯನ್ನು ಜುಲೈ 31ರವರೆಗೆ ತಡೆ ಹಿಡಿಯಲಾಗಿದೆ. ಈ ಅಂಶಗಳ ಕುರಿತಂತೆ ಹಿತಾಸಕ್ತ ಗುಂಪುಗಳ ಜತೆ ಮಾತುಕತೆ ನಡೆಸಲಾಗುವುದು’ ಎಂದು ತಿಳಿಸಿದ್ದಾರೆ.

ವಿಶ್ಲೇಷಣಾತ್ಮಕ ಓದು- ಪಿಎಫ್ ನಿಯಮ ಸಡಿಲಿಕೆ ಮಾಹಿತಿ ಯಾರಿಗೆಷ್ಟು ಗೊತ್ತು?

peenya bus fireಪೀಣ್ಯ ಬಸ್ ನಿಲ್ದಾಣದ ಹತ್ತಿರದ ದೃಶ್ಯ. ಇದೇನು ಭಯೋತ್ಪಾದಕ ದಾಳಿಯಲ್ಲ. ಪಿಎಫ್ ನೀತಿ ವಿರುದ್ಧದ  ಪ್ರತಿಭಟನೆ ನೆಪವಾಗಿಸಿಕೊಂಡು ಬಸ್ಸಿಗೆ ಬೆಂಕಿ ಹಚ್ಚಿ ದಾಂದಲೆ ಎಬ್ಬಿಸಲು ಪ್ರಯತ್ನಿಸಿದ್ದು ಸ್ಪಷ್ಟ.

ಹಂದ್ವಾರದಲ್ಲಿಲೈಂಗಿಕ ದೌರ್ಜನ್ಯದ ಆರೋಪಿ ಯುವಕನ ಬಂಧನ, ಬಂಕರ್ ತೆರವು, ಮೋದಿ-ಮುಫ್ತಿ ಮಾತು

ಕಳೆದ ಒಂದು ವಾರದಿಂದ ಕಾಶ್ಮೀರದಲ್ಲಿ ನಡೆಯುತ್ತಿರುವ ಹಿಂಸಾಚಾರಕ್ಕೆ ಕಾರಣವಾಗಿದ್ದ ಯುವತಿ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯಾಗಿದ್ದ ಸ್ಥಳೀಯ ಯುವಕನೊಬ್ಬನನ್ನು ಬಂಧಿಸಲಾಗಿದೆ. ಸೋಮವಾರ ರಾತ್ರಿ ಜಮ್ಮು ಮತ್ತು ಕಾಶ್ಮೀರ ಪೊಲೀಸರು, ಹಿಲಾಲ್ ಅಹ್ಮದ್ ಬಂಧೆ ಎಂಬಾತನನ್ನು ಬಂಧಿಸಿದ್ದಾರೆ. ಯುವತಿ ಹೇಳಿಕೆಯಲ್ಲಿ ಇಬ್ಬರು ಆರೋಪಿಗಳ ಹೆಸರನ್ನು ಸೂಚಿಸಿದ್ದ ಆಧಾರದ ಮೇಲೆ ಪೊಲೀಸರು ಹಿಲಾಲ್ ನನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ.

ಹಂದ್ವಾರಾದ ಮಾರುಕಟ್ಟೆಯಲ್ಲಿದ್ದ ಭಾರತೀಯ ಭದ್ರತಾ ಪಡೆಯ 3 ಬಂಕರ್ ಗಳನ್ನು ತೆರವುಗೊಳಿಸಲಾಗಿದೆ. ಇದು ಸ್ಥಳೀಯ ನಿವಾಸಿಗಳ ಸುದೀರ್ಘ ಬೇಡಿಕೆಯೂ ಆಗಿತ್ತು.

ಮಂಗಳವಾರ ಕಾತ್ರಾದಲ್ಲಿರುವ ಶ್ರೀಮಾತಾ ವೈಷ್ಣೋದೇವಿ ವಿಶ್ವವಿದ್ಯಾಲಯ ಘಟಿಕೋತ್ಸವದಲ್ಲಿ ಭಾಗವಹಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಜಮ್ಮು ಕಾಶ್ಮೀರದ ಯುವಕರಲ್ಲಿ ಮಹತ್ವಾಕಾಂಕ್ಷೆಯನ್ನು ಬಿತ್ತುವ ಪ್ರಯತ್ನ ಮಾಡಿದರು. ‘ಭಾರತ ಪ್ರಗತಿಯತ್ತ ಹೆಜ್ಜೆ ಹಾಕುವುದೆಂದರೆ ಜಮ್ಮು ಮತ್ತು ಕಾಶ್ಮೀರ ಜತೆಗಿರದೇ ಸಾಧ್ಯವಿಲ್ಲ ಎಂದು ಅಟಲ್ ಬಿಹಾರಿ ವಾಜಪೇಯಿ ಅವರು ಹೇಳಿದ್ದರು. ಅವರ ದೃಷ್ಟಿಕೋನವನ್ನು ಮನದಲ್ಲಿಟ್ಟುಕೊಂಡು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳೆರಡೂ ಹೆಗಲಿಗೆ ಹೆಗಲು ಕೊಟ್ಟು ಈ ರಾಜ್ಯದ ಅಭಿವೃದ್ಧಿಗೆ ಶ್ರಮಿಸಬೇಕು’ ಎಂದು ಅಭಿಪ್ರಾಯಪಟ್ಟರು.

ಮತ್ತೊಂದೆಡೆ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಮೆಹಬೂಬ್ ಮುಫ್ತಿ, ‘ಜಮ್ಮು ಕಾಶ್ಮೀರ ಜನರ ಹೃದಯದಲ್ಲಿರುವ ನೋವನ್ನು ಅರಿತು ಅದಕ್ಕೆ ಪರಿಹಾರ ನೀಡಬೇಕು. ಆಗ ಯುವಕರು ದೇಶದ ಅಭಿವೃದ್ಧಿಗೆ ತಮ್ಮದೇ ಆದ ಕಾಣಿಕೆ ನೀಡಲು ಉತ್ಸುಕರಾಗುತ್ತಾರೆ. ಪಾಕಿಸ್ತಾನದಲ್ಲಿ ಸರ್ಕಾರ ತನ್ನ ಸ್ವಂತ ಜನರ ಮೇಲೆ ದಾಳಿ ನಡೆಸುತ್ತಿದೆ. ಹಾಗಾಗಿ ವಿವಿಧ ಧರ್ಮಗಳಿದ್ದರೂ ಶಾಂತಿಯಿಂದ ಬಾಳುತ್ತಿರುವ ಭಾರತದಲ್ಲಿ ವಾಸಿಸುತ್ತಿರುವುದು ಹೆಮ್ಮೆಯಾಗಿದೆ. ಆದರೂ ನಮ್ಮ ಜನರಲ್ಲಿ ನೋವಿದೆ ಅದನ್ನು ನಿವಾರಿಸಬೇಕು’ ಎಂದು ಹೇಳಿದ್ದಾರೆ.

ಇದನ್ನೂ ಓದಿ- ಸೇನೆಯ ವಿರುದ್ಧ ಕಾಶ್ಮೀರಿಗಳ ಸಂಚಿನ ಜಾಯಮಾನ

ಫ್ಘಾನಿಸ್ತಾನದ ಮೇಲೆ ತಾಲಿಬಾನ್ ದಾಳಿ, 28 ಸಾವು

ಅಫ್ಘಾನಿಸ್ತಾನದ ಕಾಬುಲ್ ನಲ್ಲಿರುವ ಸರ್ಕಾರಿ ಭದ್ರತಾ ಸಂಸ್ಥೆಯ ಮೇಲೆ ಮಂಗಳವಾರ ಉಗ್ರರ ದಾಳಿ ನಡೆದಿದೆ. ಈ ದಾಳಿಯಲ್ಲಿ ಕನಿಷ್ಠ 28 ಮಂದಿ ಮೃತಪಟ್ಟಿದ್ದು 320ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಕಾರ್ ಬಾಂಬಿಂಗ್ ಮೂಲಕ ನಡೆದ ಈ ಕೃತ್ಯದ ಜವಾಬ್ದಾರಿಯನ್ನು ತಾಲಿಬಾನ್ ಹೊತ್ತುಕೊಂಡಿದೆ.

ಭೂ ಹಗರಣ: ಸಿಎಂಗೆ ವಿಶ್ವನಾಥ್ ಎಚ್ಚರಿಕೆ ಮಾತು

ಕಾಂಗ್ರೆಸ್ಸಿಗ ಎಚ್. ವಿಶ್ವನಾಥ್ ಸಕ್ರಿಯರಾಗುತ್ತಿದ್ದಾರೆ. ರಾಜಕೀಯ ಎದುರಾಳಿಗಳ ವಿರುದ್ಧವಲ್ಲ, ಅವರದೇ ಪಕ್ಷದಲ್ಲಾಗಬೇಕಿರುವ ಬದಲಾವಣೆಗಳ ವಿಚಾರದಲ್ಲಿ ಉತ್ಸುಕರಾಗಿದ್ದಾರೆ. ಈ ಹಿಂದೆ ದಿಗ್ವಿಜಯ್ ಸಿಂಗ್ ಅವರ ಉಸ್ತುವಾರಿ ಬದಲಾಗಬೇಕೆಂದು ಬಹಿರಂಗವಾಗಿಯೇ ಹೇಳಿದ್ದ ಅವರು, ಮಂಗಳವಾರ ಹೇಳಿದ ಇ್ನನೊಂದು ಮಾತು ಪರೋಕ್ಷವಾಗಿ ಸಿದ್ದರಾಮಯ್ಯನವರನ್ನು ಎಚ್ಚರಿಸುವಂತಿದೆ.

‘ಭೂವಿವಾದದಿಂದಲೇ ಯಡಿಯೂರಪ್ಪ ಅಧಿಕಾರ ಕಳೆದುಕೊಂಡರು. ಕುಮಾರಸ್ವಾಮಿ ಕೂಡಾ ಈ ವಿವಾದದಿಂದಲೇ ಜಾಮೀನು ಪಡೆದುಕೊಂಡು ಓಡಾಡುವ ಸ್ಥಿತಿ ಬಂದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕೊರಳಿಗೂ ಭೂ ವಿವಾದ ಸುತ್ತಿಕೊಂಡಿರುವುದು ವಿಪರ್ಯಾಸ’ ಎಂದಿದ್ದಾರೆ.

ಸದಾಶಿವನಗರದಲ್ಲಿರುವ ಎಸ್.ಎಂ.ಕೃಷ್ಣ ಅವರ ನಿವಾಸಕ್ಕೆ ಭೇಟಿ ನೀಡಿದ ನಂತರ ಈ ಮಾತು ಹೇಳಿರುವುದೂ ವಿಶೇಷ.

‘ಮುಖ್ಯಮಂತ್ರಿಯವರ ಪುತ್ರ ಪಾಲುದಾರಿಕೆ ಹೊಂದಿರುವ ಸಂಸ್ಥೆಗೆ ಬೆಂಗಳೂರು ನಗರಾಭಿವೃದ್ದಿ ಇಲಾಖೆ ವತಿಯಿಂದ ದೊಡ್ಡ ಪ್ರಮಾಣದ ನಿವೇಶನ ನೀಡಿರುವುದಕ್ಕೆ ಮುಖ್ಯಮಂತ್ರಿಯವರೇ ವಿವರಣೆ ನೀಡಬೇಕು’ ಎಂದರಲ್ಲದೇ ಬರ ಪರಿಸ್ಥಿತಿಗೆ ಸಂಬಂಧಿಸಿ ಕಂದಾಯ ಸಚಿವ ಶ್ರೀನಿವಾಸ ಪ್ರಸಾದರ ಕಾರ್ಯ ಸಮರ್ಪಕವಾಗಿಲ್ಲ ಅಂತ ಹರಿಹಾಯ್ದರು. ಬರ ಸಮೀಕ್ಷೆಗೆ ಮುಖ್ಯಮಂತ್ರಿಗಳೊಂದಿಗೆ ಕಂದಾಯ ಮತ್ತು ಗ್ರಾಮೀಣಾಭಿವೃದ್ಧಿ ಸಚಿವರೂ ತೆರಳಬೇಕಿತ್ತು ಎಂದಿದ್ದಾರೆ.

ಈ ಹಿಂದಿನ ಓದು- ಸಿದ್ದರಾಮಯ್ಯ ಮೇಲೇಕೆ ಕೃಷ್ಣರಿಗೆ ಬೇಸರ?

ದೆಹಲಿ ಗುದ್ದೋಡು: ಬಾಲಾರೋಪಿಗಿಲ್ಲ ಜಾಮೀನು

ಮರ್ಸಿಡೆಸ್ ಕಾರು ಗುದ್ದಿಸಿ ವ್ಯಕ್ತಿಯೊಬ್ಬರ ಸಾವಿಗೆ ಕಾರಣನಾಗಿದ್ದ ಅಪ್ರಾಪ್ತ ವಯಸ್ಕ ಬಾಲಕನಿಗೆ ಬಾಲನ್ಯಾಯ ಮಂಡಳಿಯು ಜಾಮೀನು ನಿರಾಕರಿಸಿದೆ. ಈ ಹಿಂದೆಯೂ ಈ ಬಾಲಾರೋಪಿ ಸಂಚಾರ ನಿಯಮಗಳ ಉಲ್ಲಂಘನೆಯಲ್ಲಿ ಸಿಕ್ಕಿಬಿದ್ದಿದ್ದರ ದಾಖಲೆ ಇರುವುದನ್ನು ಪರಿಗಣಿಸಿ ಈ ತೀರ್ಮಾನಕ್ಕೆ ಬಂದಿದೆ. ಇದೇ ಪ್ರಕರಣದಲ್ಲಿ ಈತನ ತಂದೆಗೆ ನ್ಯಾಯಾಲಯದಿಂದ ಜಾಮೀನು ಸಿಕ್ಕಿದ್ದು, ಇದನ್ನು ಪೋಲೀಸರು ಉನ್ನತ ನ್ಯಾಯಾಲಯದಲ್ಲಿ ಪ್ರಶ್ನಿಸಲಿದ್ದಾರೆ.

ಮರುಓದು-  ಶ್ರೀಮಂತಿಕೆ ಅಹಂಕಾರಕ್ಕೆ ಶಿಕ್ಷೆ ಬೇಡವೇ?

ಪಾಲಕನಿಗೆ ಬೇಡವೇ ಹೊಣೆಗಾರಿಕೆ?

Leave a Reply