ಕೊಹಿನೂರ್ ಚರ್ಚೆಯಾಗುತ್ತಿರುವ ಹೊತ್ತಲ್ಲಿ ಭಾರತದಿಂದ ಕೈಬಿಟ್ಟ ಸಂಪತ್ತಿನ ಬಗ್ಗೆ ನಾವು ತಿಳಿದಿರಬೇಕಾದ 3 ಸಂಗತಿಗಳು

ಜಗತ್ತಿನ ಅತಿದೊಡ್ಡ ಪಿಂಕ್ ಡೈಮಂಡ್ ಎಂಬ ಖ್ಯಾತಿಯ ದರಿಯಾ ನೂರ್ (ಸಮುದ್ರದ ಬೆಳಕು) ಭಾರತದ್ದೇ ಆಗಿತ್ತು. ಮೊಗಲರ ಕಾರಣದಿಂದ ಈಗ ಇರಾನ್ ನ ಸ್ವತ್ತಾಗಿದೆ.

ಡಿಜಿಟಲ್ ಕನ್ನಡ ಟೀಮ್

ಕೊಹಿನೂರು ವಜ್ರವನ್ನು ಮತ್ತೆ ಭಾರತಕ್ಕೆ ಮರಳಿ ತರಬೇಕು ಎಂಬ ಚರ್ಚೆ ಹೊಸತೇನಲ್ಲ. ಹಲವು ವರ್ಷಗಳಿಂದ ಆಗಾಗ್ಗೆ ಪ್ರಚಾರ ಪಡೆದು ಹಾಗೇ ಕಣ್ಮರೆಯಾಗಿದ್ದನ್ನು ನೋಡಿದ್ದೇವೆ. ಈಗ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಮೂಲಕ ಸುಪ್ರೀಂಕೋರ್ಟ್ ಎದುರಿಗೆ ಬಂದಿರುವ ಪ್ರಕರಣ, ಕೊಹಿನೂರ್ ಅನ್ನು ಸುಲಭದಲ್ಲಿ ಮರಳಿ ಪಡೆಯುವುದಕ್ಕೇನೂ ಇಂಬು ಕೊಡದಿದ್ದರೂ, ಕೊನೆಪಕ್ಷ ಯಾವೆಲ್ಲ ಕಾರಣಗಳಿಂದ ಇಂದು ಭಾರತದ ಸ್ವತ್ತು ಎಂದು ವ್ಯಾಖ್ಯಾನವೊಂದು ರೂಪುಗೊಳ್ಳುವುದಕ್ಕಂತೂ ಪ್ರೇರೇಪಿಸಲಿದೆ.

ಇತ್ತೀಚೆಗಷ್ಟೇ ಸುಪ್ರೀಂ ಕೋರ್ಟ್ ಗೆ ನೀಡಿದ್ದ ಹೇಳಿಕೆಯಲ್ಲಿ ‘ಕೊಹಿನೂರ್ ವಜ್ರ ಕದ್ದವಸ್ತುವಲ್ಲ. ಉಡುಗೊರೆಯಾಗಿ ಬ್ರಿಟಿಷರಿಗೆ ಸಂದವಸ್ತುವನ್ನು ಹಿಂದಕ್ಕೆ ತರೋದು ಕಷ್ಟ’ ಎಂದು ಕೇಂದ್ರ ಸರ್ಕಾರ ತಿಳಿಸಿತ್ತು. ಇದನ್ನು ಖಂಡಿಸಿದ ಬಿಜೆಪಿ ಮುಖಂಡ ಸುಬ್ರಮಣಿಯನ್ ಸ್ವಾಮಿ ಟೀಕಿಸಿ, ವಜ್ರ ನಮ್ಮ ಸ್ವತ್ತು ಎಂದು ವಾದಿಸಿದ್ದರು.

ಆದರೆ,

  • ಈಗ ಕೇಂದ್ರ ಸಂಸ್ಕೃತಿ ಸಚಿವಾಲಯ ನೀಡಿರುವ ಸಮಜಾಯಿಷಿ ಎಂದರೆ, ‘ಮೇಲೆ ವರದಿಯಾಗಿರುವ ಸಾಲುಗಳು ಸರ್ಕಾರದ ಈಗಿನ ನಿಲುವಲ್ಲ. ಈ ಹಿಂದಿನ ಸರ್ಕಾರಗಳು ಕೊಹಿನೂರ್ ಹಿಂಪಡೆಯುವ ಬಗ್ಗೆ ಯಾವ ನಿಲುವು ಹೊಂದಿದ್ದವು ಎಂಬುದನ್ನಷ್ಟೇ ಸುಪ್ರೀಂಕೋರ್ಟ್ ಗೆ ಸಲ್ಲಿಸಿರುವ ಪ್ರಸ್ತಾವನೆಯಲ್ಲಿ ಉಲ್ಲೇಖಿಸಲಾಗಿದೆ.’ ಎಂದು.

ಸ್ಪಷ್ಟನೆಯಲ್ಲಿ ಜವಾಹರ್ಲಾಲ್ ನೆಹರು ಅವರನ್ನು ಎಳೆತರಲಾಗಿದೆ. 1956ರಲ್ಲಿ ಭಾರತದ ಮೊದಲ ಪ್ರಧಾನಿ ಜವಹರ್ ಲಾಲ್ ನೆಹರು ಸಹ ಈ ಪ್ರಯತ್ನ ಉತ್ತಮವಲ್ಲ ಎಂದು ತಿಳಿಸಿದ್ದರು. ‘ಈ ಸಂಪತ್ತನ್ನು ಮತ್ತೆ ಕೇಳಲು ಯಾವುದೇ ಕಾರಣಗಳಿಲ್ಲ. ಈ ಪ್ರಯತ್ನ ಸಾಕಷ್ಟು ಸಮಸ್ಯೆಗಳಿಗೆ ಎಡೆ ಮಾಡಿಕೊಡುತ್ತವೆ. ಒಂದು ದೇಶದ ಜತೆಗಿನ ಸಂಬಂಧ ಉತ್ತಮವಾಗಿರುವಾಗ ಆ ದೇಶದ ಹೊಂದಿರುವ ದುಬಾರಿ ಮೌಲ್ಯದ ವಸ್ತುಗಳನ್ನು ಮರಳಿ ಪಡೆಯುವುದು ಸೂಕ್ತವಲ್ಲ. ಅಲ್ಲದೇ ವಿದೇಶಿ ವಸ್ತುಸಂಗ್ರಹಾಲಯದಲ್ಲಿ ಭಾರತದ ಸಂಪತ್ತೂ ಪ್ರದರ್ಶನಗೊಳ್ಳುವಂತಾದರೆ ತಪ್ಪಲ್ಲ’ ಎಂದು ಅಭಿಪ್ರಾಯಪಟ್ಟಿದ್ದರು.

ಹೀಗೆ ಹಿಂದಿನ ಕತೆಯನ್ನೆಲ್ಲ ಉದ್ಧರಿಸಿರುವ ಸಂಸ್ಕೃತಿ ಸಚಿವಾಲಯವು, ‘ಕೊಹಿನೂರ್ ಹಿಂದೆ ತರಲಾಗದ ಉಡುಗೊರೆ ಎಂಬುದು ನಮ್ಮ ನಿಲುವು ಅಲ್ಲವೇ ಅಲ್ಲ. ಈ ಬಗ್ಗೆ ಸಮ್ಮತಿಯ ನಿರ್ಧಾರವೊಂದು ರೂಪುಗೊಳ್ಳುವುದಕ್ಕೆ ಎಲ್ಲ ರೀತಿ ಪ್ರಯತ್ನ ಮಾಡಲಾಗುವುದು. ಮೋದಿಯವರು ಪ್ರಧಾನಿಯಾದ ನಂತರ ಭಾರತಕ್ಕೆ ಸೇರಿದ್ದ ಪ್ರಮುಖ ಮೂರು ಸಂಪತ್ತುಗಳನ್ನು ಹಿಂದೆ ತಂದಿರೋದನ್ನು ಮರೆಯಬಾರದು’ ಎಂದಿದೆ.

  • ಕೊಹಿನೂರ್ ಬ್ರಿಟಿಷರಿಗೆ ಉಡುಗೊರೆಯಾಗಿ ಸಂದಿದ್ದು ಅಂತ ಹೇಳಲಾಗುವುದಿಲ್ಲ ಅಂತ ಇತಿಹಾಸಕಾರ ವಿಲಿಯಮ್ ದಾಲ್ರಿಂಪಲ್ ಸಹ ವಾದಿಸುತ್ತಾರಾದರೂ, ‘ಹಾಗಂತ ಕೊಹಿನೂರ್ ಹಿಂದಕ್ಕೆ ಬೇಕು ಎಂದು ಹೇಳುವುದು ಅಂಥದೇ ಹಲವು ಪ್ರಶ್ನೆಗಳಿಗೆ ಜೀವ ಕೊಟ್ಟಂತೆ. ಏಕೆಂದರೆ ಬ್ರಿಟಿಷರಿಗೆ ಸಲ್ಲುವುದಕ್ಕಿಂತ ಮೊದಲು ರಣಜಿತ್ ಸಿಂಗ್ ಬಳಿಯಲ್ಲಿ ಆ ವಜ್ರವಿತ್ತು ಎಂಬುದು ಹೌದಾದರೂ ಆತ ಸಹ ಇನ್ನೊಬ್ಬರಿಂದ ವಶಪಡಿಸಿಕೊಂಡಿದ್ದ. ಕೊಹಿನೂರ್ ಮೂಲ ತಮ್ಮದು ಎಂದು ಹೇಳುವವರು ಸಾಕಷ್ಟು ಮಂದಿ ಇದ್ದಾರೆ. ಅವಿಭಜಿತ ಭಾರತದ ಲಾಹೋರಿನಿಂದ ಬ್ರಿಟಿಷರು ತೆಗೆದುಕೊಂಡಿದ್ದರಿಂದ, ಪಾಕಿಸ್ತಾನ ಈಗಾಗಲೇ ಅದು ತನಗೆ ಹಿಂತಿರುಗಬೇಕು ಎನ್ನುತ್ತಿದೆ.

ಈಗ ಬ್ರಿಟನ್ ನಿಂದ ವಜ್ರವನ್ನು ಕೇಳುವುದಾದರೆ, ಭಾರತದ ರಾಜರು ಪೊಲೊನ್ನರುವಾ ಮೇಲೆ ದಾಳಿ ನಡೆಸಿದ್ದಕ್ಕೆ ಶ್ರೀಲಂಕಾ ನಷ್ಟಭರ್ತಿ ಕೇಳುವ ಅಧಿಕಾರ ಪಡೆಯುತ್ತದೆ. ಚೋಳರು ಇಂಡೋನೇಷ್ಯಾ ಮೇಲೆ ದಾಳಿ ನಡೆಸಿದ್ದರಿಂದ, ಅವರು ಸಹ ಭಾರತದಿಂದ ನಷ್ಟಭರ್ತಿ ಕೇಳಬಹುದು. ಇತಿಹಾಸ ನೋಡಿದಾಗ ದುರ್ಬಲರ ಮೇಲೆ ಪ್ರಬಲರ ದಾಳಿ ವಿಶ್ವದಾದ್ಯಂತ ನಡೆದಿರುವುದು ಸಹಜ’ ಅಂತ ಪ್ರತಿಪಾದಿಸುತ್ತಾರೆ ದಾಲ್ರಿಂಪಲ್.

  • ದೇಶವೀಗ ಕೊಹಿನೂರ್ ನಮ್ಮದಲ್ಲವೇ ಅಂತ ತಲೆಕೆಡಿಸಿಕೊಳ್ಳುತ್ತಿರುವಾಗಲೇ ಇನ್ನೊಂದು ದುಬಾರಿ ವಜ್ರವೂ ಭಾರತದ ಮೂಲ ಹೊಂದಿದ್ದು ಈಗಿಲ್ಲವಾಗಿರುವುದು ಚರ್ಚೆಯೇ ಆಗುತ್ತಿಲ್ಲ. ಅದೆಂದರೆ ದಾರಿಯಾ ನೂರ್! ಮೊಗಲರು ದೆಹಲಿಯಲ್ಲಿ ದಾಳಿ ನಡೆಸಿ ಲೂಟಿ ಮಾಡಿದಾಗ 10 ಸಾವಿರ ಚಿನ್ನ ಮತ್ತು ವಜ್ರದ ಆಭರಣ ದೋಚಿದ್ದರು. 1739ರ ದಾಳಿಯಲ್ಲಿ ನಾದಿರ್ ಶಾ ಹೊತ್ತೊಯ್ದ ವಜ್ರ ದಾರಿಯಾ ನೂರ್. ಇದೀಗ ಇರಾನಿನ ತೆಹ್ರಾನ್ ವಸ್ತುಸಂಗ್ರಹಾಲಯದಲ್ಲಿದೆ. ಹಾಗೆ ನೋಡಿದರೆ ಇವತ್ತು ಚರ್ಚೆಯಾಗುತ್ತಿರುವ ಕೊಹಿನೂರ್, ಮಯೂರ ಸಿಂಹಾಸನ ಸಿಂಗರಿಸುವಲ್ಲಿ ಬಳಸಿದ್ದ ಒಂದು ಆಭರಣವಷ್ಟೆ. ಹಾಗಾದರೆ ಇನ್ನೂ ಹಲವು ಆಭರಣಗಳನ್ನು ಹೊದ್ದಿದ್ದ ಮಯೂರ ಸಿಂಹಾಸನ ಎಲ್ಲಿ ಹೋಯಿತು ಎಂದರೆ ಮತ್ತೆ ಮೊಗಲರತ್ತ ಬೊಟ್ಟು ಮಾಡಬೇಕಾಗುತ್ತದೆ. ಮೊಗಲರು ತಾವು ದೋಚಿದ್ದ ಸಂಪತ್ತನ್ನು ಇರಾನಿನ ಜತೆಗೆ, ಅವತ್ತಿನ ಒಟ್ಟೊಮಾನ್ ಸಾಮ್ರಾಜ್ಯಕ್ಕೆ ಮತ್ತು ರಷ್ಯದ ದೊರೆಗಳಿಗೆ ಕೊಟ್ಟರು. ಹೀಗಾಗಿ ತೆಹರಾನ್, ಇಸ್ತಾನಬುಲ್ ಮತ್ತು ಸೇಂಟ್ ಪೀಟರ್ಸ್ ಬರ್ಗ್ ಗಳಲ್ಲಿ ಭಾರತದ ಹಲವು ಸಂಪತ್ತುಗಳನ್ನು ಕಾಣಬಹುದು.

Leave a Reply