ನಾವು ಒಕ್ಕಣ್ಣ ರಾಜರೆನ್ನುತ್ತಿರುವ ರಾಜನ್, ನಾವೇ ಮಹಾರಾಜರೆನ್ನುತ್ತಿರುವ ಜೇಟ್ಲಿ… ನಿಜವ ನುಡಿದವರಾರು ಈ ಇಬ್ಬರೊಳಗೆ?

authors-rangaswamyಭಾರತ ‘ಕುರುಡರ ರಾಜ್ಯದಲ್ಲಿ ಒಕ್ಕಣ್ಣ ರಾಜ’ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಗವರ್ನರ್ ರಾಜನ್ ನಾಲ್ಕು ದಿನದ ಹಿಂದೆ ಭಾರತದ ಎಕಾನಮಿ ಕುರಿತು ನುಡಿದಿದ್ದರು. ಅದಕ್ಕೆ ಮಾನ್ಯ ವಿತ್ತ ಸಚಿವರಾದ ಜೇಟ್ಲಿ ಅವರು ‘ಜಗತ್ತಿನ ಬೇರೆ ಯಾವ ದೇಶ 7.5 ಪ್ರತಿಶತ ಬೆಳೆಯುತ್ತಿದೆ ಹೇಳಿ? ಇದನ್ನು ಮುಂಬರುವ ವರ್ಷಗಳಲ್ಲಿ ನಾವು ಇನ್ನಷ್ಟು ಉತ್ತಮ ಪಡಿಸುವ ಸಾಮರ್ಥ್ಯ ಹೊಂದಿದ್ದೇವೆ’ ಎಂದು ಹೇಳುವುದರ ಮೂಲಕ ರಾಜನ್ ಹೇಳಿಕೆಗೆ ಟಾಂಗ್ ನೀಡಿದ್ದಾರೆ.
ಯಾರು ಸರಿ ? ರಾಜನ್ ಹೇಳುತ್ತಿರುವುದು ಸರಿಯೇ ? ಅಥವಾ ರಾಜನ್ ನಿರಾಶವಾದಿಯೇ? ಜೇಟ್ಲಿ ಆಶಾವಾದಿಯೇ ? ಅಥವಾ ದೇಶಕ್ಕೆ ಹರಿದು ಬರುತ್ತಿರುವ ಹೂಡಿಕೆಗೆ ಎಲ್ಲಿ ಪೆಟ್ಟು ಬಿಳುವುದೋ ಎನ್ನುವ ಆತಂಕದಿಂದ ರಾಜನ್ ಹೇಳಿಕೆಗೆ ಈ ರೀತಿ ಉತ್ತರಿಸಿದರೆ?
ಇವುಗಳಿಗೆ ಉತ್ತರ ಹುಡುಕೋಣ. ಅದಕ್ಕೂ ಮೊದಲು ರಾಜನ್ ವ್ಯಕ್ತಿತ್ವ ಎಂತಹುದು ಗೊತ್ತೇ?  ತನ್ನ ವೃತ್ತಿಯ ಉತ್ತುಂಗದಲ್ಲಿ ಅಮೆರಿಕದಲ್ಲಿ ವಾಸ. ಕೈತುಂಬಾ ಹಣ, ಬಯಸಿದ್ದೆಲ್ಲಾ ಕಾಲ ಬುಡದಲ್ಲಿ ಇರುವಾಗ, ಅಮೆರಿಕದ ವಿತ್ತ ವ್ಯವಸ್ಥೆ ಸರಿ ಇಲ್ಲ, ಹಣಕಾಸು ನಿರ್ವಹಿಸುತ್ತಿರುವ ರೀತಿ ತರವಲ್ಲ ಎಂದು ಹೇಳಿದ ಕೆಲವೇ ಕೆಲವು ಮಂದಿಯಲ್ಲಿ ರಾಜನ್ ಪ್ರಮುಖರು. ನಂತರ ಅಮೆರಿಕ ಎಕಾನಮಿ ಕುಸಿದದ್ದು, ಅಮೆರಿಕ ಒಳಗೊಂಡು ಈಡಿ ವಿಶ್ವವೇ ರಾಜನ್ ರನ್ನು ಮೆಚ್ಚಿದ್ದು ಇಂದಿಗೆ ಇತಿಹಾಸ.
ಜಗತ್ತಿನ ಪ್ರಮುಖ ರಾಷ್ಟ್ರಗಳು ಜಿಡಿಪಿ ಆಧಾರದ ಅನುಸಾರ ಯಾವುವು ನೋಡೋಣ… ಅವುಗಳ ಇಂದಿನ ಅರ್ಥಿಕ ಸ್ಥಿತಿ ಗತಿಗಳ ಬಗ್ಗೆ, ಮುಂಬರುವ ವರ್ಷಗಳಲ್ಲಿ ಅವುಗಳ ಭವಿಷ್ಯ ಇವುಗಳ ಬಗ್ಗೆ ಒಂದಷ್ಟು ತಿಳಿದು ಕೊಳ್ಳೋಣ. ಈ ವಿಷಯಗಳ ತಿಳಿದುಕೊಂಡ ಮೇಲೆ ಬುದ್ಧಿವಂತ ಓದುಗ ರಾಜನ್ ಸರಿಯೋ? ಜೇಟ್ಲಿಯೋ? ಎಂದು ನಿರ್ಧರಿಸಬಹುದು.
2015ರ ಅಂಕಿ ಅಂಶದ ಪ್ರಕಾರ ಜಿಡಿಪಿ ಮೂಲವಾಗಿಟ್ಟು ನೋಡಿದಾಗ ಅಮೆರಿಕ ಸಂಯುಕ್ತ ಸಂಸ್ಥಾನ ಜಗತ್ತಿನ ವಿತ್ತ ಪ್ರಪಂಚದದಲ್ಲಿ ಮೊದಲ ಸ್ಥಾನದಲ್ಲಿದೆ. ನಂತರ ಚೀನಾ, ಜಪಾನ್, ಜರ್ಮನಿ, ಯುನೈಟೆಡ್ ಕಿಂಗ್ಡಮ್, ಫ್ರಾನ್ಸ್ , ಇಂಡಿಯಾ, ಇಟಲಿ, ಬ್ರೆಜಿಲ್, ಕೆನಡಾ ದೇಶಗಳು ಜಗತ್ತಿನ ಮೊದಲ ಹತ್ತು ಸ್ಥಾನ ತುಂಬುತ್ತವೆ. ನೆನಪಿಡಿ… ಜಗತ್ತಿನಲ್ಲಿ 196 ದೇಶಗಳಿವೆ. ಅವುಗಳಲ್ಲಿ ಮೊದಲ ಹತ್ತು ದೇಶಗಳ ಜಿಡಿಪಿ ಪ್ರಪಂಚದ 65 ಭಾಗ ಆಕ್ರಮಿಸಿವೆ. ಅಂದರೆ ಉಳಿದ 186 ದೇಶಗಳ ಒಟ್ಟು ಜಿಡಿಪಿ ಮೊತ್ತ 35 ಭಾಗ. ಹೀಗಾಗಿ ಈ ಹತ್ತು ದೇಶಗಳ ಅರ್ಥಿಕ ಸ್ಥಿತಿಗತಿಗಳ ಮೇಲೆ ಕಣ್ಣಾಡಿಸಿದರೆ ಅದು ಜಗತ್ತಿನ ಚಿತ್ರಣ ಕಟ್ಟಿ ಕೊಟ್ಟಂತೆಯೇ ಸರಿ.
ಅಮೆರಿಕದ ಕಣ್ಣಿಗೆ ಕಾಣುವ ಸಮಸ್ಯೆ ಎಂದರೆ ಕೆಲಸದ ಕೊರತೆ, ಕುಸಿದ ರಿಯಲ್ ಎಸ್ಟೇಟ್ ಸೆಕ್ಟರ್, ಪಾತಾಳ ತಲುಪುತ್ತಿರುವ ತೈಲೋದ್ಯಮ. ಮೊದಲ ನೋಟಕ್ಕೆ ಸಿಲುಕದ ಆದರೆ ಅತಿ ಪ್ರಮುಖ ಕೊರತೆ ಏನು ಗೊತ್ತೇ? ಅಮೆರಿಕಾದ ಆಮದು ಅದರ ರಫ್ತಿಗಿಂತ ಹೆಚ್ಚು. ಅಲ್ಲದೆ ಅಮೆರಿಕಾದ ಪ್ರಗತಿ ಸ್ವಂತ ಹಣದಿಂದ ಆದದಲ್ಲ, ಅದು ಸಾಲ ದಿಂದ ಆದ ಪ್ರಗತಿ. ‘ಡೆಟ್ ಇಸ್ ನ್ಯೂ ಮನಿ’ ಅಮೆರಿಕದಲ್ಲಿ.
ಚೀನಾ ಕಳೆದ ಒಂದು ದಶಕದಿಂದ ಜಗತ್ತಿಗೆ ವಸ್ತು ತಯಾರಿಸುವ ಕಾರ್ಖಾನೆಯಾಗಿ ಮಾರ್ಪಟ್ಟಿರುವುದು ತಿಳಿದ ವಿಷಯವೇ. ಜಗತ್ತಿನ ಹಿರಿಯಣ್ಣನಿಗೆ, ಅವನ  ತಮ್ಮ ಯೂರೋಪಿಗೆ ಬೇಕಾದ ಬೇಡವಾದ ಎಲ್ಲಾ ವಸ್ತುಗಳನ್ನು ಉತ್ಪಾದಿಸಿ ಸುರಿಯುತಿದ್ದ ಚೀನಾ ಕುಸಿದ ಡಿಮ್ಯಾಂಡ್ ನಿಂದ ಸಹಜವಾಗೇ ಕಂಗೆಟ್ಟಿದೆ.  ಹೇಗಾದರೂ ಸರಿಯೇ ವ್ಯಾಪಾರ ಮಾತ್ರ ಕಡಿಮೆ ಆಗಬಾರದು ಎನ್ನುವ ಭರದಲ್ಲಿ ತನ್ನ ಕರೆನ್ಸಿ ಅಪಮೌಲ್ಯ ಮಾಡಿ, ಕರೆನ್ಸಿ ವಾರ್ ಗೆ ನಾಂದಿ ಹಾಡಿದೆ. ತನ್ನ ಕರೆನ್ಸಿ ವಿದೇಶಿ ವಿನಿಮಯಕ್ಕೆ ಹೊಂದಿಸಿಕೊಳ್ಳುವುದು, ತನ್ನ ಉತ್ಪಾದನೆಯನ್ನು ನಿಲ್ಲದೆ ಮುಂದುವರಿಸುವುದು ಚೀನಾದ ಮುಂದಿರುವ ಬಹುದೊಡ್ಡ ಸವಾಲು.
ಜಪಾನ್ ನೆಗೆಟಿವ್ ಇಂಟರೆಸ್ಟ್ ರೇಟ್ ನತ್ತ ಮುಖ ಮಾಡಿದೆ. ಸಾಲ ಕೊಟ್ಟವನೇ, ಸಾಲ ಪಡೆದವನಿಗೆ ಬಡ್ಡಿ ಕೊಡುವ ಕ್ರಿಯೆ!  ಸ್ಥಿತಿ ಹೀಗಿದ್ದೂ ಸಾಲ ಕೊಟ್ಟವನಿಗೆ  ನಷ್ಟ ಇಲ್ಲ, ಹೌದು  ಹಾಗೆ ನಷ್ಟ ಆಗದೆ ಇರಬೇಕಾದರೆ ಅದು ಕೇವಲ ಜಪಾನ್ ಆರ್ಥಿಕತೆ ಒಂದನ್ನೇ ಅವಲಂಬಿಸಿಲ್ಲ, ಜಪಾನ್ ಎರಡು ಅಲುಗಿನ ಕತ್ತಿಯ ಮೇಲೆ ನಡೆಯುತ್ತಿದೆ. ತನ್ನದಲ್ಲದ ತಪ್ಪಿಗೂ ಹೆಚ್ಚು ದಂಡ ಕಟ್ಟುವ ಸ್ಥಿತಿ ಅದರದ್ದು.
ಜರ್ಮನಿ, ಯುನೈಟೆಡ್ ಕಿಂಗ್ಡಮ್, ಫ್ರಾನ್ಸ್, ಇಟಲಿಗಳು 2009ರಲ್ಲಿ ಕುಸಿದ ರಿಯಾಲಿಟಿ ಮಾರ್ಕೆಟ್ ನಿಂದ ಇನ್ನೂ ಪೂರ್ಣವಾಗಿ ಚೇತರಿಸಿಕೊಂಡಿಲ್ಲ, 20 -25 ಭಾಗ ಇರುವ ಕೆಲಸದ ಕೊರತೆ  ಈ ದೇಶಗಳ ಬಹು ದೊಡ್ಡ ಸಮಸ್ಯೆ.  ಜೊತೆಗೆ ಸಿರಿಯಾ ನಿರಾಶ್ರಿತರ ಸಮಸ್ಯೆ , ಹೆಚ್ಚು ನಿವೃತ್ತರ ಸಂಖ್ಯೆ , ಕುಸಿಯುತ್ತಿರುವ ಶೈಕ್ಷಣಿಕ ಮೌಲ್ಯಗಳು ಈ ದೇಶಗಳ ಹೈರಾಣಾಗಿಸಿವೆ. ಜರ್ಮನಿ , ಫ್ರಾನ್ಸ್ ಗಳ ಆರ್ಥಿಕತೆ ಅಷ್ಟೊಂದು ಕೆಟ್ಟದಲ್ಲದಿದ್ದರೂ  ಯುರೋಪಿಯನ್ ಯೂನಿಯನ್ ನಲ್ಲಿ ಇರುವ ಎಲ್ಲಾ 28 ದೇಶಗಳ ಸರಿದೂಗಿಸಿ ಕೊಂಡುಹೋಗುವ ಗುರುತರ ಹೊಣೆ ಹೊತ್ತಿವೆ. ಇನ್ನು ಯುನೈಟೆಡ್ ಕಿಂಗ್ಡಮ್, ಸ್ಕಾಟ್ಲೆಂಡ್ ಎಕ್ಸಿಟ್ ನಿಂದ ಹೊರ ಬಂದು ನಿರಳವಾಗುವುದಕ್ಕೆ ಮುಂಚೆ ಇದೆ ಜೂನ್ ನಲ್ಲಿ ಬ್ರಿಟನ್ ಯೂರೋಪಿಯನ್ ಯೂನಿಯನ್ ನಿಂದ ಹೊರಹೋಗಲು ಜನರ ಒಪ್ಪಿಗೆ ಪಡೆಯುವ ಎಲೆಕ್ಷನ್ ನಡೆಸುವ ಹುನ್ನಾರದಲ್ಲಿದೆ. ಆರ್ಥಿಕವಾಗಿ ಜರ್ಜರಿತವಾಗಿರುವ ಮನೆಯಲ್ಲಿ ಇನ್ನಷ್ಟು ಬಿರುಕು ಬಿಡುವ ಸಾಧ್ಯತೆಗಳು ಇವೆ.
ಇನ್ನು ಬ್ರೆಜಿಲ್ ಹಣ ದುಬ್ಬರ, ಕೆಲಸದ ಕೊರತೆ, ಫಿಸ್ಕಲ್ ಡೆಫಿಸಿಟ್ ನಿಂದ ಸೊರಗಿ ಹೋಗಿದೆ. ಬ್ರೆಜಿಲ್ ಕರೆನ್ಸಿ ಬ್ರೆಸಿಲಿಯನ್ ರಿಯಲ್   ಅಮೆರಿಕಾದ ಡಾಲರ್ ಎದುರು ಕಳೆದ ಹನ್ನೆರಡು ತಿಂಗಳಲ್ಲಿ 50 ಭಾಗ ಕುಸಿದಿದೆ ಎಂದರೆ ಅಲ್ಲಿನ ಆರ್ಥಿಕತೆಯ ಸ್ಥಿತಿಯ ಅರಿವಾಗಬಹುದು.
ಉಳಿದಂತೆ ಭಾರತದಲ್ಲಿ ಹಣದುಬ್ಬರ ಹಿಡಿತದಲ್ಲಿದೆ. ಫಿಸ್ಕಲ್ ಡೆಫಿಸಿಟ್ ಉತ್ತಮ ಮಟ್ಟದಲ್ಲಿದೆ. ಮಾರುಕಟ್ಟೆ 7.5 ರ ಗತಿಯಲ್ಲಿ ಬೆಳೆಯುತ್ತಿದೆ. ಮೇಲ್ನೋಟಕ್ಕೆ ಎಲ್ಲವೂ ಸೂಪರ್. ಜಗತ್ತಿನ ಹೂಡಿಕೆದಾರರ ಸ್ವರ್ಗ ಎಂದು ಬಿಂಬಿಸಲು ಏನು ಬೇಕೋ ಎಲ್ಲವೂ  ಇಂದು ಭಾರತದ ಬಳಿ ಇದೆ. ಹೀಗಿದ್ದೂ ರಾಜನ್,  ಭಾರತ ‘ಕುರುಡರ ರಾಜ್ಯದಲ್ಲಿ ಒಕ್ಕಣ್ಣ ರಾಜ ‘ ಎಂದರೇಕೆ? ಮೇಲೆ ಹೇಳಿದ ದೇಶಗಳಲ್ಲಿ ಇರುವ ಎಲ್ಲಾ ಕೊರತೆಗಳು ನಮ್ಮಲ್ಲಿವೆ. ಅದಕ್ಕೂ ಮೀರಿ  ಕುಸಿಯುತ್ತಿರುವ ವ್ಯವಸಾಯ, ಶೈಕ್ಷಣಿಕ ಮಟ್ಟದ ಜೊತೆ ಜೊತೆಗೆ ಹೆಚ್ಚಿರುವ ಪ್ರೈವೇಟ್ ಡೆಟ್ ನಮ್ಮ ಮುಖ್ಯ ತಲೆನೋವಾಗಿವೆ. ಮಲ್ಯ ನಂತ ಎಲ್ಲಾ ಕುಳಗಳನ್ನೂ ಬಿಡದೆ ದಂಡಿಸಿ ಹಣ ವಸೂಲಿ ಮಾಡಿದರೂ  ನಮ್ಮ ಬ್ಯಾಂಕ್ ಗಳ ಬ್ಯಾಲೆನ್ಸ್ ಶೀಟ್ ಸರಿ ಮಾಡಲು ಇನ್ನೆರಡು ವರ್ಷ ಬೇಕು. ಅಲ್ಲದೆ ಎಲ್ಲದಕ್ಕೂ ಮುಖ್ಯ ಇಂದಿನ ವೇಗ, ಓಟ ಸದಾ ಇರುತ್ತದೆ ಎಂದು ಹೇಳಲು ಬರುವುದಿಲ್ಲ. ವಸ್ತು ಸ್ಥಿತಿಯ ಪೂರ್ಣ ಅವಲೋಕನ ಮಾಡಿದರೆ ರಾಜನ್ ಹೇಳಿರುವುದು ಸರಿ ಎನಿಸದೆ ಇರುವುದಿಲ್ಲ.
ಖಂಡಿತವಾದಿ ಲೋಕವಿರೋಧಿ ಎಂಬ ಮಾತಿದೆ. ಖಂಡಿತವಾದಿ ರಾಜನ್ ಗೆ ಅದರ ಬಗ್ಗೆ ಚಿಂತೆ ಇದ್ದಂತಿಲ್ಲ ಬಿಡಿ.

(ಲೆಕ್ಕ ಪರಿಶೋಧಕರಾಗಿ ಹಲವು ದೇಶಗಳನ್ನು ಸುತ್ತಿರುವ, ಹಣಕಾಸು ಜಗತ್ತನ್ನು ಹತ್ತಿರದಿಂದ ನೋಡಿರುವ ಅನುಭವ ಲೇಖಕರದ್ದು. 15 ವರ್ಷಗಳ ಕಾಲ ಸ್ಪೇನ್ ನಿವಾಸಿಯಾಗಿದ್ದವರು ಈಗ ಬೆಂಗಳೂರಿನಲ್ಲಿ ಪೆಟ್ರಾಬೈಟ್ಸ್ ಎಂಬ ತೈಲಕ್ಕೆ ಸಂಬಂಧಿಸಿದ ಡಾಟಾ ಅನಾಲಿಸಿಸ್ ನವೋದ್ದಿಮೆಯ, ವಹಿವಾಟು ವೃದ್ಧಿಯ (ಬಿಸಿನೆಸ್ ಡಿವಲಪ್ಮೆಂಟ್) ಹೊಣೆ ನಿರ್ವಹಿಸುತ್ತಿದ್ದಾರೆ.)

2 COMMENTS

  1. ಓದಿಸಿಕೊಂಡು ಹೋಗಬಲ್ಲ ‘ಅರ್ಥ’ಪೂರ್ಣ ಲೇಖನ. 🙂
    “ಕುರುಡರ ರಾಜ್ಯದಲ್ಲಿ ಒಕ್ಕಣ್ಣ ರಾಜ..” ಅನ್ನುವ ರಾಜನ್ ಹೇಳಿಕೆಯನ್ನು ಯಾವುದಕ್ಕೆ ಅನ್ವಯಿಸಬೇಕು ಅನ್ನುವದರ ಬಗ್ಗೆಯೇ ನನಗೆ ಗೊಂದಲವಿದೆ. ಈ ಹೇಳಿಕೆಯನ್ನು ಮುಂದುವರೆದ ರಾಷ್ಟ್ರಗಳು ಮತ್ತು ಭಾರತೀಯ ಅರ್ಥವ್ಯವಸ್ಥೆಯ ನಡುವಿನ ಹೋಲಿಕೆ ಅಂತ ತಿಳಿಯಬೇಕೋ ಅಥವಾ ಭಾರತದಲ್ಲಿನ ಪ್ರಸ್ತುತ ಅರ್ಥವ್ಯವಸ್ಥೆಯ ಬಗ್ಗೆ ಮೋದಿ ಸರ್ಕಾರ ಅತಿರಂಜಿತವಾಗಿ ವಿಶ್ವದ ಎದುರಿಗೆ ಸಾದರಪಡಿಸುತ್ತಿದೆ ಅಂತ ಅರ್ಥೈಸಬೇಕೋ ಅನ್ನುವ ಗೊಂದಲವಿದೆ.

    ಈ ಹೇಳಿಕೆಗೆ ಜೇಟ್ಲಿಯವರ ಸ್ಪಷ್ಟೀಕರಣ ಗಮನಿಸಿದರೆ, ರಾಜನ್ ಸ್ಟೇಟ್ ಮೆಂಟ್ ಮೇಲೆ ಹೇಳಿದ ಎರಡನೇ ಅರ್ಥಕ್ಕೆ ಸರಿಹೊಂದಬಹುದೇನೋ. ಹಾಗಿದ್ದಾಗ, ಜೇಟ್ಲಿ ಸಮರ್ಥನೆ ಸಮಂಜಸವಾಗಿಯೇ ಇದೆ ಅಂತನಿಸುತ್ತದೆ. ಯಾಕೆಂದರೆ, ಫಾರಿನ್ ಇನ್ವೆಸ್ಟ್ ಮೆಂಟ್ ಬಗ್ಗೆ ಮುಲಾಜು ಅಥವಾ ನೋವು ಅಥವಾ ಆಶಯ ಇರಬೇಕಿರುವದು ಜೈಟ್ಲಿಯವರಿಗೇ ಹೊರತು ರಾಜನ್ ನವರಿಗೆ ಅಲ್ಲವಲ್ಲ?
    -Rj

  2. ಈ ಹೇಳಿಕೆಯನ್ನು ಮುಂದುವರೆದ ರಾಷ್ಟ್ರಗಳು ಮತ್ತು ಭಾರತೀಯ ಅರ್ಥವ್ಯವಸ್ಥೆಯ ನಡುವಿನ ಹೋಲಿಕೆ ಅಂತ ತಿಳಿಯಬೇಕು , ಜೇಟ್ಲಿ ಹೇಳಿಕೆ ಪೂರ್ಣ ಸುಳ್ಳೇನು ಅಲ್ಲ , ಬೇರೆ ದೇಶಗಳಿಗೆ ಹೋಲಿಸಿದರೆ ನಮ್ಮ ಅರ್ಥಿಕ ಸ್ಥಿತಿ ಚನ್ನಾಗಿದೆ , ಬಟ್ ರಾಜನ್ ಹೇಳಿದ ಮಾತು ನೂರಕ್ಕೆ ನೂರು ನಿಜ , ಅವರಿಗೆ ಎರಡು ಕಣ್ಣು ಇಲ್ಲ ಎಂದಾಗ ನಮಗೆ ಒಂದು ಕಣ್ಣು ಇದ್ದರೆ ಅದು ಗ್ರೇಟ್ ಹೇಗೆ ಆಗುತ್ತೆ . ರಾಜನ್ ಹೇಳಿದ ಅರ್ಥ ಇನ್ನೂ ಹೆಚ್ಚು ಉತ್ತಮ ಸ್ಥಿತಿ ತಲುಪಲು ನಾವು ಕಷ್ಟ ಪಡಬೇಕು , ಹಿಗ್ಗುವ ಅವಶ್ಯಕತೆ ಖಂಡಿತಾ ಇಲ್ಲ ಎನ್ನುವುದೇ ಆಗಿದೆ .

    ಸ್ಪಂದನೆಗೆ , ಮೆಚ್ಚುಗೆಗೆ ಧನ್ಯವಾದಗಳು .

Leave a Reply