ಭಾರತದ ವೈದ್ಯಕೀಯ ಶಿಕ್ಷಣದಲ್ಲಿ ಸಂಶೋಧನೆಗಳಿಗೆ ಬರ, ಬದ್ಧತೆ ಇಲ್ಲದ ಜಾಗದಲ್ಲಿ ಎಲ್ಲವೂ ವ್ಯಾಪಾರ?

ಡಿಜಿಟಲ್ ಕನ್ನಡ ಟೀಮ್

ಶಿಕ್ಷಣ ಸಂಸ್ಧೆಗಳಲ್ಲಿ ಸಂಶೋಧನೆಗೆ ಮಹತ್ವದ ಪಾತ್ರವಿದೆ. ಹಾಗಾಗಿ ಯಾವುದೇ ವಿಷಯವಾದರೂ ವಿದ್ಯಾರ್ಥಿಗಳು ಅಥವಾ ಬೋಧಕರು ಸಂಶೋಧನಾ ಪತ್ರ ಮಂಡನೆ ಮಾಡುವುದು ಸಹಜ ಪ್ರಕ್ರಿಯೆ. ಅದು ಮಹತ್ವ ಪ್ರಕ್ರಿಯೆಯೂ ಹೌದು. ವೈದ್ಯಕೀಯ ರಂಗದಲ್ಲಿ ಸಂಶೋಧನೆ ಲೇಖನಗಳು ಬರುತ್ತಿವೆ ಎಂದರೆ ಮಾತ್ರವೇ ಅಷ್ಟರಮಟ್ಟಿಗೆ ಅಪ್ಡೇಟ್ ಎಂದು ಅರ್ಥ. ಆದರೆ, ಭಾರತದ ವೈದ್ಯಕೀಯ ಶಿಕ್ಷಣದಲ್ಲಿ ಈ ಸಂಶೋಧನೆ ಮೇಲಿನ ಆಸಕ್ತಿ ಬತ್ತಿಹೋದಂತಿದೆ. ಇದಕ್ಕೆ ಸಾಕ್ಷಿಯಾಗಿರೋದು ದೆಹಲಿ ಮೂಲಕ ವೈದ್ಯರ ತಂಡವೊಂದು ನಡೆಸಿದ ಬಿಬ್ಲಿಯೋಗ್ರಾಫಿಕ್ ಅನಾಲಿಸಿಸ್. ಈ ವಿಶ್ಲೇಷಣೆ ಪ್ರಕಾರ ಭಾರತದಲ್ಲಿರುವ 579 ವೈದ್ಯಕೀಯ ಕಾಲೇಜುಗಳ ಪೈಕಿ ಅರ್ಧಕ್ಕರ್ಧದಷ್ಟು ಕಾಲೇಜುಗಳು ಕಳೆದ ಒಂದು ದಶಕದಲ್ಲಿ ಒಂದೇ ಒಂದು ಸಂಶೋಧನಾ ಬರಹವನ್ನೂ ಮಂಡನೆ ಮಾಡಿಲ್ಲ.

ದೆಹಲಿ ಮೂಲದ ವೈದ್ಯರಾದ ಸಮೀರನ್ ನಂದಿ, ಸಮರ್ಥ್ ರಾಯ್ ಮತ್ತು ಇಶನ್ ಶಾ ಅವರನ್ನೊಳಗೊಂಡ ತಂಡದ ವಿಶ್ಲೇಷಣೆಯನ್ನು ‘ಕರೆಂಟ್ ಮೆಡಿಸಿನ್ ರಿಸರ್ಚ್ ಅಂಡ್ ಪ್ರಾಕ್ಟೀಸ್’ ಎಂಬ ಜರ್ನಲ್ ನಲ್ಲಿ ಪ್ರಕಟಿಸಲಾಗಿದೆ. ಆ ಮೂಲಕ ದೇಶದ ವೈದ್ಯಕೀಯ ಕ್ಷೇತ್ರದಲ್ಲಿ ಸಂಶೋಧನೆಯ ಕೊರತೆ ಮೇಲೆ ಬೆಳಕು ಚೆಲ್ಲಿದೆ.

ಈ ವಿಶ್ಲೇಷಣೆಯ ಅಂಕಿ ಅಂಶಗಳ ಪ್ರಕಾರ 2005ರಿಂದ 2014ರವರೆಗೂ ಕೇವಲ 25 ಕಾಲೇಜುಗಳು 100ಕ್ಕೂ ಹೆಚ್ಚು ಸಂಶೋಧನಾ ಅಧ್ಯಯನ ನಡೆಸಿವೆ. ಆದರೆ, 332 ಸಂಸ್ಥೆಗಳು ಒಂದೇ ಒಂದು ಅಧ್ಯಯನವನ್ನು ನಡೆಸಿಲ್ಲ ಎಂಬುದು ನಿಜಕ್ಕೂ ಆಘಾತಕಾರಿ ಅಂಶ. ಕರ್ನಾಟಕದಲ್ಲಿರುವ 41 ವೈದ್ಯಕೀಯ ಕಾಲೇಜುಗಳ ಪೈಕಿ 17 ಕಾಲೇಜುಗಳು ಈ ಪಟ್ಟಿಯಲ್ಲಿವೆ. ಉಳಿದಂತೆ ಕೇರಳದ 17 (23ರ ಪೈಕಿ), ತಮಿಳುನಾಡಿನ 23 (33), ಮಹಾರಾಷ್ಟ್ರದ 25 (43) ಸಂಸ್ಥೆಗಳು ಯಾವುದೇ ಸಂಶೋಧನಾ ಅಧ್ಯಯನ ನಡೆಸಿಲ್ಲ.

ಈ ವಿಶ್ಲೇಷಣೆ ವೇಳೆ ಅತಿಯಾದ ರೋಗಿಗಳ ಸಂಖ್ಯೆಯಿಂದ ಈ ಸಂಸ್ಥೆಗಳಿಗೆ ಸಂಶೋಧನಾ ಅಧ್ಯಯನ ನಡೆಸಲು ಸಾಧ್ಯವಾಗಿಲ್ಲ ಎಂಬ ಕಾರಣವನ್ನು ಈ ವೈದ್ಯರ ತಂಡ ಪಡೆದಿದೆ. ಇನ್ನು ಕೆಲವು ಕಾಲೇಜುಗಳ ನೀಡಿರುವ ಥಿಸೀಸ್ ಗಳಲ್ಲಿ ಯಾವುದೇ ಸಂಶೋಧನೆಯ ಅಂಶಗಳೇ ಕಂಡುಬಂದಿಲ್ಲ. ಈ ಸಂಸ್ಥೆಗಳು ಕಾಟಾಚಾರಕ್ಕಾಗಿ ಮಾಡಲೇಬೇಕಲ್ಲ ಎಂಬ ಒತ್ತಾಯಕ್ಕೆ ಮಾಡಿದಂತಿವೆ ಎಂದು ಸಮೀರನ್ ವಿವರಿಸಿದ್ದಾರೆ.

ಇನ್ನು ಯುಕೆ ಹಾಗೂ ಯುಎಸ್ ಗಳಲ್ಲಿ ದಶಕಗಳ ಕಾಲ ಸಂಶೋಧನಾ ಅಧ್ಯಯನ ನಡೆಸದೇ ಇರುವ ಒಂದೇ ಒಂದು ಸಂಸ್ಥೆಗಳ ಉದಾಹರಣೆಯೂ ಸಿಗುವುದಿಲ್ಲ. ಅದಕ್ಕೆ ಹೋಲಿಸಿಕೊಂಡರೆ ಭಾರತದ ಪರಿಸ್ಥಿತಿ ಸಂಪೂರ್ಣ ಭಿನ್ನವಾಗಿದೆ.

ಶಿಕ್ಷಣ ಕ್ಷೇತ್ರದಲ್ಲಿ ಸಂಶೋಧನಾ ಅಧ್ಯಯನಗಳು ನಡೆಯದಿದ್ದರೆ, ಹೊಸ ಕಲಿಕೆಗೆ ಅವಕಾಶವೇ ಇರುವುದಿಲ್ಲ. ಇಷ್ಟು ದೊಡ್ಡ ಪ್ರಮಾಣದಲ್ಲಿ ವೈದ್ಯಕೀಯ ಕಾಲೇಜುಗಳು ನೀರಸವಾಗಿರುವುದು, ಈ ಸಂಸ್ಥೆಗಳು ಶಿಕ್ಷಣವನ್ನು ವ್ಯಾಪಾರವನ್ನಾಗಿ ಪರಿಗಣಿಸಿರುವುದಕ್ಕೆ ತಕ್ಕ ಉದಾಹರಣೆಯಾಗಿದೆ. ಅಷ್ಟೇ ಅಲ್ಲ, ಸಂಶೋಧನಾ ಅಧ್ಯಯನ ನಡೆಸಲು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುವವರ ಮತ್ತು ತಜ್ಞರ ಕೊರತೆಯು ಇದಕ್ಕೆ ಪ್ರಮುಖ ಕಾರಣವಾಗಿದೆ. ಈ ಎಲ್ಲ ಅಂಶಗಳು ನಮ್ಮ ದೇಶದಲ್ಲಿ ವಿದ್ಯಾರ್ಥಿಗಳಿಗೆ ಯಾವ ಗುಣಮಟ್ಟದ ವೈದ್ಯಕೀಯ ಶಿಕ್ಷಣ ನೀಡಲಾಗುತ್ತಿದೆ ಎಂಬುದನ್ನು ಎತ್ತಿ ತೋರುತ್ತದೆ.

Leave a Reply