ಸುದ್ದಿಸಂತೆ: ಯಡಿಯೂರಪ್ಪ ಪ್ರಕರಣಗಳ ಮೇಲ್ಮನವಿಗೆ ರಾಜ್ಯ ಸರ್ಕಾರದ ನಿರ್ಧಾರ, ಕಾಮಗಾರಿಗಳಲ್ಲಿ ಎಸ್ಸಿ, ಎಸ್ಟಿ ಮೀಸಲು-ರಾಜ್ಯವೇ ಮೊದಲು, ಹಿಮಾಚಲದಲ್ಲಿ ಮಂಗಗಳೇಕೆ ಕೀಟಗಳು?, ನೀವು ಓದಬೇಕಾದ 10 ಸುದ್ದಿಗಳು

ಅಂತೂ ಶುರುವಾಗಿದೆ ಪಿಯು ಮೌಲ್ಯಮಾಪನ

 

ಯಡಿಯೂರಪ್ಪ ವಿರುದ್ಧ ಸುಪ್ರೀಂ ಕೋರ್ಟ್ ಗೆ ರಾಜ್ಯ ಸರ್ಕಾರ ಮೇಲ್ಮನವಿ

ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ವಿರುದ್ಧ ಡಿನೋಟಿಫಿಕೇಷನ್ ಪ್ರಕರಣಗಳಿಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಲು ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ.

ಬಿಜೆಪಿ ರಾಜ್ಯಾಧ್ಯಕ್ಷರಾಗಿ ಯಡಿಯೂರಪ್ಪ ರಾಜ್ಯ ರಾಜಕಾರಣಕ್ಕೆ ಮರಳಿದಂತೆ ಆಡಳಿತ ಕಾಂಗ್ರೆಸ್ ನಲ್ಲಿ ಸಂಚಲನವುಂಟಾಗಿ ಅವರ ವೇಗಕ್ಕೆ ಕಡಿವಾಣ ಹಾಕಿ ಬಿಜೆಪಿಯ ಬೆಳವಣಿಗೆ ನಿಯಂತ್ರಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಬುಧವಾರ ಈ ನಿರ್ಧಾರ ಕೈಗೊಂಡಂತಿದೆ

ಕಳೆದ ಫೆಬ್ರವರಿಯಲ್ಲೇ ಯಡಿಯೂರಪ್ಪ ವಿರುದ್ಧದ ಪ್ರಕರಣಗಳ ಕುರಿತು ಮೇಲ್ಮನವಿ ಸಲ್ಲಿಸಲು ನಿರ್ಧರಿಸಿತ್ತು. ರಾಜ್ಯ ಸರ್ಕಾರದ ಪರ ಸುಪ್ರೀಂಕೋರ್ಟ್‍ನಲ್ಲಿ ಸಮರ್ಥವಾಗಿ ವಾದ ಮಾಡಲು ಹಿರಿಯ ವಕೀಲರ ತಂಡವನ್ನೇ ನೇಮಕ ಮಾಡಲು ಸಂಪುಟ ಒಪ್ಪಿಗೆ ನೀಡಿದೆ.

 

50 ಲಕ್ಷಕ್ಕೂ ಕಡಿಮೆ ಗುತ್ತಿಯಲ್ಲಿ ಎಸ್ ಸಿ, ಎಸ್ ಟಿಗೆ ಮೀಸಲಾತಿ, ಇನ್ಮುಂದೆ ನೇರ ಗುತ್ತಿಗೆ

ಇತ್ತೀಚೆಗೆ ಜಾತಿ ಗಣತಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಎಂಬ ಮಾಹಿತಿ ಸೋರಿಕೆಯಾಗಿತ್ತಷ್ಟೆ. ಇದರ ಜಾಡನ್ನೇ ಅನುಸರಿಸಿಯೋ ಎಂಬಂತೆ ರಾಜ್ಯ ಸರ್ಕಾರ ಈಗ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಅದೇನಪ್ಪಾ ಅಂದ್ರೆ, ರಾಜ್ಯಾದ್ಯಂತ ಸರ್ಕಾರಿ ಇಲಾಖೆಗಳ ವ್ಯಾಪ್ತಿಯಲ್ಲಿ ನಡೆಯುವ 50 ಲಕ್ಷ ರು.ವರೆಗಿನ ಎಲ್ಲಾ ಕಾಮಗಾರಿಗಳಲ್ಲಿ ಎಸ್ ಸಿ ಹಾಗೂ ಎಸ್ ಟಿ ಸಮುದಾಯದ ಗುತ್ತಿಗೆದಾರರಿಗೆ ಮೀಸಲಾತಿ ನೀಡಲು ನಿರ್ಧರಿಸಿದೆ.

‘ಪರಿಶಿಷ್ಟ ಜಾತಿಯವರಿಗೆ ಶೇಕಡಾ 17.15 ಹಾಗೂ ಪರಿಶಿಷ್ಟ ಪಂಗಡದವರಿಗೆ ಶೇಕಡಾ 6.95 ರಷ್ಟು ಮೀಸಲಾತಿಯನ್ನು ನಿಗದಿಪಡಿಸಲಾಗಿದೆ. ಜನಸಂಖ್ಯಾ ಆಧಾರದ ಮೇಲೆ ಈ ಮೀಸಲಾತಿ ನಿಗದಿಪಡಿಸಿದ್ದು, ಇನ್ನು ಮುಂದೆ ಸರ್ಕಾರದ ಯಾವುದೇ ಇಲಾಖೆಯಲ್ಲಿ 50 ಲಕ್ಷ ರೂ.ವರೆಗಿನ ಗುತ್ತಿಗೆಯನ್ನು ಈ ಸಮುದಾಯದವರಿಗೆ ನೇರವಾಗಿ ನೀಡಬಹುದಾಗಿದೆ. ‘ ಎಂದಿದ್ದಾರೆ ಕಾನೂನು ಮತ್ತು ಸಂಸದೀಯ ಸಚಿವ ಟಿ.ಬಿ. ಜಯಚಂದ್ರ.

 

ಬರ ಜಿಲ್ಲೆಗಳಲ್ಲಿ ಕುಡಿಯುವ ನೀರಿಗಾಗಿ 100 ಕೋಟಿ

ಉತ್ತರ ಕರ್ನಾಟಕದ ಬರ ಪೀಡಿತ ಜಿಲ್ಲೆಗಳಿಗೆ ಮೊದಲ ಹಂತದ ಪ್ರವಾಸ ಮುಗಿಸಿ ಹಿಂತಿರುಗಿದ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಈ ಜಿಲ್ಲೆಗಳಲ್ಲಿ ಕುಡಿಯುವ ನೀರು ಪೂರೈಕೆಗಾಗಿ 100 ಕೋಟಿ ಹಣ ಬಿಡುಗಡೆ ಮಾಡಿದ್ದಾರೆ. ಇದೇ ವೇಳೆ ಹಲವು ಪ್ರಮುಖ ನಿರ್ಣಯ ಕೈಗೊಂಡಿದ್ದಾರೆ. ಆ ಪೈಕಿ ಪ್ರಮುಖ ನಿರ್ಧಾರಗಳು ಹೀಗಿವೆ.

– ಬರ ಪೀಡಿತ ಜಿಲ್ಲೆಗಳಿಂದ ಜನರು ಗುಳೇ ಹೋಗದಂತೆ ತಡೆಯಲು 800 ಕೋಟಿ ರು. ಬಿಡುಗಡೆ.

– ಈ ಮಧ್ಯೆ ಬರಗಾಲ ಅಧ್ಯಯನಕ್ಕೆ ರಚಿಸಲಾದ ನಾಲ್ಕು ಸಂಪುಟ ಉಪಸಮಿತಿಗಳಿಂದ ನಾಳೆಯಿಂದ  ರಾಜ್ಯ ಪ್ರವಾಸ. ತಿಂಗಳಾಂತ್ಯದೊಳಗೆ ವಸ್ತುಸ್ಥಿತಿಯ ವರದಿ ಸಲ್ಲಿಕೆ.

– ಜಾನುವಾರುಗಳ ರಕ್ಷಣೆಗೆ ಗೋಶಾಲೆಗಳ ನಿರ್ಮಾಣಕ್ಕೆ 15 ಕೋಟಿ ನೆರವು.

– ಉಗ್ರಾಣ ನಿಗಮದ ವತಿಯಿಂದ ರಾಜ್ಯದ ಎಪ್ಪತ್ತೆರಡು ಕಡೆ 16.25 ಲಕ್ಷ ಮೆಟ್ರಿಕ್ ಟನ್ ಸಾಮರ್ಥ್ಯದ ಉಗ್ರಾಣಗಳನ್ನು ನಿರ್ಮಿಸಲು 663 ಎಕರೆ ಭೂಮಿಯನ್ನು ಒದಗಿಸಲು ಅನುಮೋದನೆ.

– ಕರ್ನಾಟಕ ಕಟ್ಟಡ ಕಾರ್ಮಿಕರ ಸಂಘಕ್ಕಾಗಿ 346 ಕೋಟಿ ರೂ ವೆಚ್ಚದಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ಅಕಾಡೆಮಿಯನ್ನು ನಿರ್ಮಾಣ.

– ರಾಜ್ಯದಲ್ಲಿ ಗ್ರಾಮೀಣಾಭಿವೃದ್ದಿ ಹಾಗೂ ಪಂಚಾಯತ್ ರಾಜ್ ವಿಶ್ವವಿದ್ಯಾನಿಲಯವನ್ನು ಕಟ್ಟಲು ರೂಪಿಸಲಾದ ಕಾಯ್ದೆಗೆ ವಿಧಾನಸಭೆಯಲ್ಲಿ ಅಂಗೀಕಾರ ನೀಡಿದ್ದರೂ, ವಿಧಾನಪರಿಷತ್ ಅಂಗೀಕಾರ ನೀಡಿರಲಿಲ್ಲ. ಹಾಗಾಗಿ ಸುಗ್ರೀವಾಜ್ಞೆ ಹೊರಡಿಸಿ ಈ ವಿಶ್ವವಿದ್ಯಾನಿಲಯವನ್ನು ಸ್ಥಾಪಿಸಲು ತೀರ್ಮಾನ.

– ಬೆಂಗಳೂರು ವ್ಯಾಪ್ತಿಯಲ್ಲಿ ಅಂತರ್ಜಲವನ್ನು ಸಂಗ್ರಹಿಸಲು ಇದುವರೆಗೆ 40×60 ಹಾಗೂ 30×40 ವ್ಯಾಪ್ತಿಯ ಕಟ್ಟಡಗಳನ್ನು ಮಾತ್ರ ಪರಿಗಣಿಸಲಾಗಿತ್ತು. ಇನ್ನು ಮುಂದೆ ಇದಕ್ಕೂ ಕಡಿಮೆ ಅಳತೆಯ ಕಟ್ಟಡಗಳಲ್ಲೂ ಅಂತರ್ಜಲ ಸಂಗ್ರಹಿಸಲು ಕಾಯ್ದೆಗೆ ತಿದ್ದುಪಡಿ ತರಲಾಗಿದೆ.

– ಬೆಂಗಳೂರು – ಮೈಸೂರು ಉದ್ದೇಶಿತ ರಾಷ್ಟ್ರೀಯ ಹೆದ್ದಾರಿ ಸಮೀಪವೇ 250 ಹಾಸಿಗೆಗಳ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಆರಂಭಕ್ಕೆ ತೀರ್ಮಾನ. ಆಸ್ಪತ್ರೆಯ ಜೊತೆಗೆ ವಿಶ್ವವಿದ್ಯಾಲಯದಡಿಯಲ್ಲೇ ವೈದ್ಯಕೀಯ, ದಂತ ವೈದ್ಯಕೀಯ ಕಾಲೇಜುಗಳನ್ನು ತೆರೆಯಲು ಸಮ್ಮತಿ ನಿಡಲಾಗಿದೆ ಎಂದು ಕಾನೂನು ಮತ್ತು ಸಂಸದೀಯ ಸಚಿವ ಟಿ.ಬಿ. ಜಯಚಂದ್ರ ತಿಳಿಸಿದ್ದಾರೆ.

 

ಪಿಯು ಉಪನ್ಯಾಸಕರ ಮುಷ್ಕರ ಅಂತ್ಯ

ಕಳೆದ 18 ದಿನಗಳಿಂದ ನಡೆಯುತ್ತಿದ್ದ ಪಿಯು ಉಪನ್ಯಾಸಕರ ಮುಷ್ಕರಕ್ಕೆ ಮಂಗಳವಾರ ತೆರೆ ಬಿದ್ದಿದೆ. ಜಿ.ಕುಮಾರ್ ನಾಯಕ್ ಸಮಿತಿ ವರದಿಯನ್ನು ಜಾರಿಗೊಳಿಸಬೇಕು ಎಂಬ ಬೇಡಿಕೆಯನ್ನು ಮುಂದಿಟ್ಟುಕೊಂಡು ಪ್ರತಿಭಟನೆಗೆ ಮುಂದಾಗಿದ್ದ ಪಿಯು ಶಿಕ್ಷಕರು ಸರ್ಕಾರದ ಒಂದು ಬಾರಿಯ ವೇತನ ಬಡ್ತಿಗೆ ಒಪ್ಪದೇ ರಾಜಿಗೂ ಮುಂದಾಗಿರಲಿಲ್ಲ. ನಂತರ ಸರ್ಕಾರ ಪಿಯು ಪರೀಕ್ಷೆ ಮೌಲ್ಯ ಮಾಪನವನ್ನು ಖಾಸಗಿ ಕಾಲೇಜು ಶಿಕ್ಷಕರಿಂದ ನಡೆಸಲು ಮುಂದಾಗಿ ತಿರುಗೇಟು ನೀಡಿತ್ತು. ಆ ಮೂಲಕ ಪಿಯು ಶಿಕ್ಷಕರ ಹೋರಾಟ ಯಾವುದೇ ಪ್ರಯೋಜನವಿಲ್ಲದೇ ಅಂತ್ಯವಾಗಿದೆ.

 

ಜಲ ಸಂರಕ್ಷಣೆಗೆ ಯುವಶಕ್ತಿ ಬೆಸೆಯುವ ಯತ್ನದಲ್ಲಿ ಮೋದಿ

ಬೇಸಿಗೆಯಲ್ಲಿ ನಿಂತು ನಾವೆಲ್ಲ ಬರದ ಬಗ್ಗೆ ಮಾತಾಡುತ್ತೇವೆ, ಸರ್ಕಾರಗಳನ್ನು ಶಪಿಸುತ್ತೇವೆ. ಆದರೆ ಮಳೆ ಬಂದಾಗ ಎಲ್ಲ ಮರೆಯುತ್ತೇವೆ. ಆಗ ನೀರು ಕೂಡಿಡುವ ಯೋಚನೆ ಬರುವುದಿಲ್ಲ.

ಮುಂಬರುವ ತಿಂಗಳಲ್ಲಿ ಎಂಎನ್ಆರ್ಇಜಿಎ ಯೋಜನೆಯಡಿ ನೀರಿನ ಸಂರಕ್ಷಣೆ ಮತ್ತು ಶೇಖರಣೆಗೆ ಯಾಂತ್ರಿಕ ವ್ಯವಸ್ಥೆ ನಿರ್ಮಿಸುವ ದೊಡ್ಡ ಪ್ರಮಾಣದ ಪ್ರಯತ್ನಕ್ಕೆ ಪ್ರಧಾನಿ ಮೋದಿ ಮುಂದಾಗಿದ್ದಾರೆ. ಅಲ್ಲದೆ ಈ ಕಾರ್ಯದಲ್ಲಿ ಎನ್ ಸಿಸಿ ನಂತಹ ಯುವ ಸಂಘಟನೆಗಳು ಕಾರ್ಯೋನ್ಮುಖವಾಗಬೇಕು ಎಂದು ಕರೆ ನೀಡಿದ್ದಾರೆ.

ಪ್ರಸ್ತುತ ಎದುರಾಗಿರುವ ಸವಾಲುಗಳನ್ನು ನಿಭಾಯಿಸುವಲ್ಲಿ ಈ ಸಂಘಟನೆಗಳ ಪಾತ್ರ ಮಹತ್ವದ್ದಾಗಿದೆ. ಎನ್ ಸಿಸಿ ಜತೆಗೆ ಎನ್ಎಸ್ಎಸ್, ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್, ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಮತ್ತು ಎನ್ ವೈಕೆಎಸ್ ನಂತಹ ಸಂಘಟನೆಗಳು ಪರಸ್ಪರ ಹೊಂದಾಣಿಕೆಯಿಂದ ಕಾರ್ಯ ನಿರ್ವಹಿಸಲು ಒತ್ತು ನೀಡುವುದು ಇದರ ಮತ್ತೊಂದು ಉದ್ದೇಶ ಎಂದು ಪ್ರಧಾನಮಂತ್ರಿ ಕಾರ್ಯಾಲಯದ ಹೇಳಿಕೆ ಸಾರುತ್ತಿದೆ.

 

ಉತ್ತರಾಖಂಡದ ಪೊಲೀಸ್ ಕುದುರೆ ಶಕ್ತಿಮಾನ್ ಇನ್ನಿಲ್ಲ

ಕಳೆದ ತಿಂಗಳು ಡೆಹ್ರಾಡೂನ್ ನಲ್ಲಿ ನಡೆದ ಪ್ರತಿಭಟನೆ ವೇಳೆ ಬಿಜೆಪಿ ಶಾಸಕ ಗಣೇಶ್ ಜೋಷಿ ಅವರಿಂದ ಹಲ್ಲೆಗೊಳಗಾಗಿ ಚಿಕಿತ್ಸೆ ಪಡೆಯುತ್ತಿದ್ದ ಪೊಲೀಸ್ ಇಲಾಖೆಯ ಕುದುರೆ ಶಕ್ತಿಮಾನ್ ಬುಧವಾರ ಮೃತಪಟ್ಟಿದೆ. ನಂತರ ಶಕ್ತಿಮಾನ್ ಗೆ ಚಿಕಿತ್ಸೆ ನೀಡಲಾಗುತಿತ್ತು. ಕಳೆದ ಎರಡು ದಿನಗಳ ಹಿಂದಷ್ಟೇ ಶಕ್ತಿಮಾನ್ ಚೇತರಿಸಿಕೊಳ್ಳುತ್ತಿದ್ದು, ಅಮೆರಿಕದ ಪ್ರಾಣಿ ಪ್ರೇಮಿ ಜೇಮಿ ವಾಗನ್ ಅವರು ನೀಡಿದ್ದ ಪ್ರಾಸ್ಥಟಿಕ್ ಕಾಲಿನ ನೆರವಿನಿಂದ ನಡೆಯಲಾರಂಭಿಸಿದೆ ಎಂಬ ವರದಿಗಳು ಬಂದಿದ್ದವು.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ ಮುಖಂಡ ಅಜಯ್ ಭಟ್, ತಮ್ಮ ಶಾಸಕನ ಕೃತ್ಯ ಮರೆತು ಕಾಂಗ್ರೆಸ್ ಸರ್ಕಾರದ ಮೇಲೆ ಗೂಬೆ ಕೂರಿಸಿದ್ದಾರೆ. ‘ರಾಜ್ಯ ಸರ್ಕಾರ ಶಕ್ತಿಮಾನ್ ಗೆ ಸರಿಯಾದ ಚಿಕಿತ್ಸೆ ನೀಡದ ಹಿನ್ನೆಲೆಯಲ್ಲಿ ಅಮಾಯಕ ಪ್ರಾಣಿ ಮೃತಪಟ್ಟಿದೆ’ ಎಂದು ಟೀಕಿಸಿದ್ದಾರೆ.

 

ಇಶ್ರತ್ ಎನ್ ಕೌಂಟರ್: ಚಿದಂಬರಂ ವಿಚಾರದಲ್ಲಿ ಕಾಂಗ್ರೆಸ್ ಮೌನ ಪ್ರಶ್ನಿಸಿದ ಸಚಿವ ಪ್ರಕಾಶ್ 

ಉಗ್ರ ಸಂಘಟನೆಯ ಸಂಪರ್ಕ ಹೊಂದಿದ್ದ ಆರೋಪದ ಹಿನ್ನೆಲೆಯಲ್ಲಿ ಗುಜರಾತ್ ಪೊಲೀಸರ ಎನ್ ಕೌಂಟರ್ ಗೆ ಬಲಿಯಾದ ಇಶ್ರತ್ ಜಹಾನ್ ಪ್ರಕರಣದಲ್ಲಿ ಮಾಜಿ ಗೃಹ ಮಂತ್ರಿ ಪಿ ಚಿದಂಬರಂ ಸಹಿಮಾಡಿದ ಮೊದಲ ಪ್ರಮಾಣ ಪತ್ರದ ಬಗ್ಗೆ ಕಾಂಗ್ರೆಸ್ ಪಕ್ಷ ಮೌನವಹಿಸಿರುವುದನ್ನು ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣಾ ಇಲಾಖಾ ಸಚಿವ ಪ್ರಕಾಶ್ ಜಾವಡೇಕರ್ ಪ್ರಶ್ನಿಸಿದ್ದಾರೆ.

ಯುಪಿಎ ತನ್ನ ಅಧಿಕಾರವಧಿಯಲ್ಲಿ ತನಿಖಾ ಸಂಸ್ಥೆಗಳನ್ನು ರಾಜಕೀಯ ಉದ್ದೇಶಗಳಿಗಾಗಿ ಬಳಸಿಕೊಂಡಿದ್ದು ಸ್ಪಷ್ಟವಾಗಿದೆ. ಏಕೆಂದರೆ, ಇದೀಗ ರಾಷ್ಟ್ರೀಯ ತನಿಖಾದಳ ಇಶ್ರತ್ ಜಹಾನ್ ಪ್ರಕರಣದಲ್ಲಿ ನಡೆಸುತ್ತಿರುವ ತನಿಖೆಯ ಅಂಶಗಳು ಕಾಂಗ್ರೆಸಿನ ಸಂಚನ್ನು ಬಯಲು ಮಾಡುತ್ತಿವೆ ಎಂದು ಕಿಡಿಕಾರಿದ್ದಾರೆ. ಕಾಂಗ್ರೆಸ್ ತನ್ನ ರಾಜಕೀಯ ಲಾಭಕ್ಕಾಗಿ ಇಶ್ರತ್ ಜಹಾನ್ ಪ್ರಕರಣ ಮತ್ತು ಮಾಲೆಗಾಂವ್ ಸ್ಫೋಟದ ತನಿಖೆ ಎರಡನ್ನೂ ತಿರುಚಿದೆ ಎಂಬುದು ಜಾವಡೇಕರ್ ಆರೋಪ.

 

ಭಾರತ-ಚೀನಾ ಗಡಿ ವಿವಾದದ ಚರ್ಚೆ:ಜಿತ್ ದೊವಲ್ ಭಾಗಿ

ಭಾರತ ಮತ್ತು ಚೀನಾ ದೇಶಗಳ ನಡುವಿನ ಜಟಿಲವಾಗಿರುವ ಗಡಿ ವಿವಾದ ಬಗೆಹರಿಸಲು ಉಭಯ ರಾಷ್ಟ್ರಗಳು ಬುಧವಾರ 19 ನೇ ಸುತ್ತಿನ ಸಭೆ ಸೇರಿವೆ. ಎರಡು ರಾಷ್ಟ್ರಗಳ ಭದ್ರತಾ ಸಲಹೆಗಾರರಾದ ಅಜಿತ್ ದೊವಲ್ ಮತ್ತು ಯಾಂಗ್ ಜೀಚಿರವರು ಈ ವಾರ್ಷಿಕ ಸಭೆಯಲ್ಲಿ ಭಾಗವಹಿಸಿದ್ದಾರೆ. ಉಭಯ ರಾಷ್ಟ್ರಗಳ ನಡುವಿನ ವಿವಾದಗಳನ್ನು ಬಗೆಹರಿಸಲು ಮತ್ತು ಹಳಸಿದ ಸಂಬಂಧವನ್ನು ಮರು ಸ್ಥಾಪಿಸಲು ಈ ಸಭೆ ಪೂರಕವಾಗಿದೆ. ಎರಡು ದೇಶಗಳ ನಡುವಿನ ಗಡಿ ವಿಚಾರಗಳ ಬಗ್ಗೆ ಚರ್ಚಿಸಲು ಪ್ರತ್ಯೇಕ ವಿಶೇಷ ಪ್ರತಿನಿಧಿಗಳನ್ನು ನೇಮಿಸಿದ್ದು, ಪ್ರಾದೇಶಿಕ ಮತ್ತು ವಿದೇಶಿ ಸಮಸ್ಯೆಗಳ ಬಗ್ಗೆ ದ್ವಿಪಕ್ಷಿಯ ಮಾತುಕತೆ ಮಾಡುವುದಾಗಿ ತಿಳಿಸಿದ್ದಾರೆ.

 

 ಹಿಮಾಚಲದಲ್ಲಿ ಕೋತಿಗಳೆಂದರೆ ಕೀಟಗಳು! ಎಂಥದಿದು ಅಂತ ಪ್ರಶ್ನಿಸಿದೆ ಹೈಕೋರ್ಟು

ಶಿಮ್ಲಾ ಮುನಿಸಿಪಲ್ ಕಾರ್ಪೊರೇಷನ್ ನ ವ್ಯಾಪ್ತಿಯಲ್ಲಿ ಮಂಗಗಳನ್ನು ಮುಂದಿನ 6 ತಿಂಗಳವರೆಗೆ ಕ್ರಿಮಿಕೀಟದ ಜಾತಿ ಎಂದು ಘೋಷಿಸಿರುವ ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಹಿಮಾಚಲ ಪ್ರದೇಶ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ.

ಇದೇಕೆ ಇಂಥ ವರ್ಗೀಕರಣ ಎಂಬ ಪ್ರಶ್ನೆ ಸಹಜ. ನಗರದ ವ್ಯಾಪ್ತಿಯಲ್ಲಿ ಹಾಗೂ ಸುತ್ತಲಿನ ಹಳ್ಳಿಗಳಲ್ಲಿ ಮಂಗಗಳ ಹಾವಳಿ ಮಿತಿಮೀರಿದ್ದು, ಇವು ಮನುಷ್ಯರಿಗೆ ಮತ್ತು ಕೃಷಿಗೆ ಮಾರಕವಾಗಿ ಪರಿಣಮಿಸಿವೆ. ಇವುಗಳನ್ನು ಕೊಲ್ಲುವುದಕ್ಕೆ ಕಾನೂನು ಅಡ್ಡಬರುತ್ತದಲ್ಲವೇ? ಹೀಗಾಗಿ ಇವುಗಳನ್ನು ಪ್ರಾಣಿಗಳ ಪ್ರಬೇಧದಿಂದ ಬೇರ್ಪಡಿಸಿ ಕ್ರಿಮಿ ಕೀಟಗಳ ಸಾಲಿಗೆ ಸೇರಿಸಲಾಗಿದೆ. ಕೀಟಗಳನ್ನು ಕೊಲ್ಲಲು ಕಾನೂನಿನ ನಿಬಂಧನೆ ಇಲ್ಲವಲ್ಲ?

ಇದನ್ನು ಪ್ರಶ್ನಿಸಿ ರಾಜೇಶ್ವರ್ ಸಿಂಗ್ ಎಂಬ ಪ್ರಾಣಿದಯಾ ಹೋರಾಟಗಾರರು ಅರ್ಜಿ ಸಲ್ಲಿಸಿದ್ದರು. ಇದರ ವಿಚಾರಣೆ ಕೈಗೆತ್ತಿಕೊಂಡಿರುವ ಹಿಮಾಚಲ ಹೈಕೋರ್ಟ್ ಪೀಠ, ಕೇಂದ್ರದ ಪರಿಸರ, ಅರಣ್ಯ ಮತ್ತು ಹವಮಾನ ಬದಲಾವಣಾ ಸಚಿವಾಲಯದ ಕಾರ್ಯದರ್ಶಿ, ಹಿಮಾಚಲ ಸರ್ಕಾರದ ಮುಖ್ಯ ಕಾರ್ಯದರ್ಶಿ ಮತ್ತು ರಾಷ್ಟ್ರೀಯ ವನ್ಯಜೀವಿ ಮಂಡಳಿಯ ಕಾರ್ಯದರ್ಶಿಗೆ ಅವರಿಗೆ ನಿರ್ದೇಶನ ನೀಡಿದ್ದು, ಈ ಬಗ್ಗೆ 6 ವಾರಗಳಲ್ಲಿ ಉತ್ತರಿಸುವಂತೆ ಸೂಚಿಸಿದೆ.

 

ರಾಜೀವ್ ಹಂತಕರ ಬಿಡುಗಡೆ: ಕೇಂದ್ರದ ನಿರ್ಧಾರವಿಲ್ಲ

ರಾಜೀವ್ ಗಾಂಧಿ ಹತ್ಯೆ ಪ್ರಕರಣದ 7 ಅಪರಾಧಿಗಳನ್ನು ಬಿಡುಗಡೆಗೊಳಿಸುವಂತೆ ಕೋರಿ ಕೇಂದ್ರ ಸರ್ಕಾರಕ್ಕೆ ತಮಿಳುನಾಡು ಸರ್ಕಾರ ಸಲ್ಲಿಸಿದ್ದ ಪತ್ರವನ್ನು ತಿರಸ್ಕತಗೊಂಡಿದೆ ಎಂಬ ಮಾಧ್ಯಮ ವರದಿಯನ್ನು ಕೇಂದ್ರ ಅಲ್ಲಗೆಳೆದಿದೆ. ಈ ವಿಚಾರದಲ್ಲಿ ಕೇಂದ್ರ ಯಾವುದೇ ರೀತಿಯ ನಿರ್ಣಯ ತೆಗೆದುಕೊಂಡಿಲ್ಲ. ಕಾನೂನು ಸಚಿವಾಲಯದ ಅಡಿಯಲ್ಲಿ ಪ್ರಕರಣ ಮುಂದುವರಿಯುತ್ತಿದೆ. ಪ್ರಕರಣವು ನ್ಯಾಯಾಲಯದಲ್ಲಿ ಇರುವುದರಿಂದ ಕೇಂದ್ರ ಸರ್ಕಾರ ಯಾವುದೇ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದು ಸರ್ಕಾರದ ಉನ್ನತ ಮೂಲಗಳು ಸ್ಪಷ್ಟಪಡಿಸಿವೆ ಎಂದು ಸಿಎನ್ಎನ್ಐಬಿಎನ್ ವರದಿ ಮಾಡಿದೆ.

Leave a Reply