ಅಜ್ಜಿ ಕಥೆ ಎಂದು ಅಲ್ಲಗಳೆಯಬೇಡಿ, ಹಿಗ್ಗುತ್ತಿತ್ತಿಲ್ಲಿ ಭಾವಕೋಶದ ಪರಿಧಿ

author-shamaರಜೆಯಲ್ಲಿ ಊರಿಗೆ ಬಂದಾಗ ಫೋನ್ ಸಿಗ್ನಲ್ ಇಲ್ಲದ ಖುಷಿ. ಒಂದಷ್ಟು ದಿನ ವೇಗದ ಆಧುನಿಕ ಜಗತ್ತಿನಿಂದ ದೂರಾಗಿ ಹಳ್ಳಿಯ ಸ್ವರ್ಗದಲ್ಲಿರುವ ಆನಂದ. ಮಕ್ಕಳ ಜತೆ ಆಡೋಕೆ ಬಂದ ಪಕ್ಕದ ಮನೆ ಪುಟಾಣಿ ಕೇಳಿದ್ದಳು “ಆಂಟಿ ಬೆಂಗಳೂರು ಚಂದ ಅಲ್ವಾ? ತುಂಬಾ ದೊಡ್ಡ ಇದೆಯಂತೆ. ಅದನ್ನು ಬಿಟ್ಟು ನೀವು ರಜೆಗೆ ಇಲ್ಯಾಕೆ ಬರ್ತೀರಿ?” ಮಕ್ಕಳ ಮನೋಲೋಕದ ಬಗ್ಗೆ ಯಾವತ್ತೂ ವಿಶೇಷ ಕುತೂಹಲವನ್ನು ಜಾರಿಯಲ್ಲಿಟ್ಟಿರುವ ನಾನು ಪ್ರಶ್ನೆ ಎಸೆದಿದ್ದೆ- “ಇಲ್ಲಿ ಸುತ್ತೆಲ್ಲ ಹಸಿರು, ಬೆಂಗಳೂರಿನ ಥರ ವಾಹನಗಳ ಗದ್ದಲ, ಹೊಗೆ ಎರಡೂ ಇಲ್ಲದ ವಾತಾವರಣ ಬಂಗಾರಿ”. ಥಟ್ಟನೇ ಹೇಳಿದ್ದಳು ಮಗು, “ಏನೋ ಆಂಟಿ ನನಗಂತೂ ಇಲ್ಲಿ ಬೇಜಾರು. ಆಟಕ್ಕೂ ಮಕ್ಕಳೂ ಇಲ್ಲ, ಮಾತಾಡೋಕೂ ಯಾರಿಲ್ಲ. ಮುಂದಿನ ರಜದಲ್ಲಿ ಸಮ್ಮರ್ ಕ್ಯಾಂಪ್ ಸೇರ್ತೀನಿ”. ಮಾತು ಮುಂದುವರೆಸಿ “ಅಜ್ಜಿ ಮನೆಗೆ ಹೋಗು ಅಲ್ಲಿ ಅಜ್ಜಿ ಆಟ ಆಡಿಸ್ತಾರೆ, ಕಥೆ ಹೇಳ್ತಾರೆ” ಅಂದರೆ, ಮೂರನೇ ಕ್ಲಾಸಿನ ಕೂಸು “ಓ ಅದೆಲ್ಲ ಇಲ್ಲ ಆಂಟಿ, ತಾತ ಹೊರಗಡೆ ಹೋಗ್ತಾರೆ, ಅಜ್ಜಿ ಟಿ.ವಿ ಸೀರಿಯಲ್ಸ್ ನೊಡ್ತಾರೆ” ಹೇಳಿದಾಗ ಯಾಕೋ ಪಿಚ್ಚೆನಿಸಿತ್ತು.

ನಮ್ಮ ಬಾಲ್ಯದಲ್ಲಿ ಅಜ್ಜಿ ಮನೆಯೇ ಸಮ್ಮರ್ ಕ್ಯಾಂಪ್. ಹಗಲೆಲ್ಲ ಮಾವು, ಗೇರು, ಕುಂಟಾಲ ಹೀಗೆ ಗುಡ್ಡ ಸುತ್ತುತ್ತ ತರಹೇವಾರಿ ಹಣ್ಣುಗಳನ್ನೆಲ್ಲ ಲೂಟಿ ಮಾಡಿ ಮೈ ಕೈ ಬಣ್ಣ ಬರಿಸಿಕೊಳ್ಳುವ ಕೆಲಸ. ಸಂಜೆ ಆಗುತ್ತಿದ್ದ ಹಾಗೆ ಸ್ನಾನ ಮುಗಿಸಿ ಅಜ್ಜ ಅಜ್ಜಿಯೆಂಬ ಅಚ್ಚರಿಯ ಮುಂದೆ ಕೂತರೆ ಸ್ತೋತ್ರ ಹೇಳುವಲ್ಲಿಂದ ಶುರುವಾದ್ದು ರೋಚಕ (ಆ ವಯಸ್ಸಿಗೆ) ಕಥೆಯಲ್ಲಿ ‘ಶುಭಂ’ ಗೊಳ್ಳುತ್ತಿತ್ತು ದಿನಗಳು. ಇವತ್ತು ಸೀರಿಯಲ್ ಕಥೆಗಳಲ್ಲಿ ಮುಳುಗೇಳುವ ಅವರು, ಸಮ್ಮರ್ ಕ್ಯಾಂಪ್ ಜಪದಲ್ಲಿ ಇವರು!

ಅಜ್ಜಿ ಕಥೆಯೆಂಬುದು ಸುಮ್ಮನೇ ಮಾತಲ್ಲ. ಎಳೆಯ ವಯಸ್ಸಿನಲ್ಲಿ ಕಥೆ ಹೇಳುವುದರಿಂದ ಸಾಕಷ್ಟು ಉಪಯೋಗಗಳೂ ಇದ್ದಾವೆ. ಇದನ್ನು ನಮ್ಮ ಹಿರಿಯರು ಆವಾಗಲೇ ಮನಗಂಡಿದ್ದರು. ಇಂದು ಸಾವಿರ ಸಂಖ್ಯೆಯಲ್ಲಿ ಸಿ.ಡಿಗಳು ಕಥೆ ಹೇಳುತ್ತವೆಯಾದರೂ ಅಲ್ಲಿ ಮಾತು ಕಥೆಗೆ ಅವಕಾಶವಿಲ್ಲ. ಅದೇನಿದ್ದರೂ one way communication. ನೀವು ಹೇಳಿದ್ದು, ನಾವು ಕೇಳಿದ್ದು ಅಂದ ಹಾಗೆ. ಮಕ್ಕಳನ್ನು ಎಂಗೇಜ್ ಮಾಡಿಡಲು ಸಾಧ್ಯವೇ ಹೊರತು ಅರಳಿಸಲು ಸಾಧ್ಯವಿಲ್ಲ.

ಮನೆಯ ಹಿರಿಯರ ಜೋಳಿಗೆಯಲ್ಲಿ ಕಥೆಗಳ ಭಂಡಾರವೇ ತೂಗುತ್ತಿತ್ತು. ಅದು ಅವರವರ ಧರ್ಮ ಗ್ರಂಥಗಳದಿರಬಹುದು, ಈಸೋಪನದೋ, ವಿಕ್ರಮ ಬೇತಾಳನೋ, ಆಲಿ ಬಾಬನೋ ಯಾವುದೇ ಆದರೂ ಸರಿ. ಒಂದೊಂದರಲ್ಲೂ ಒಂದೊಂದು ತೆರನಾದ ಜೀವನ ಪಾಠಗಳಿದ್ದವು. ಇವತ್ತು ಶಾಲೆಗಳಲ್ಲಿ ಹೇಳುವಂತೆ “ಮಾರಲ್ ಆಫ್ ದ ಸ್ಟೋರಿ ಈಸ್….” ಯಾರೂ ಅನ್ನದೆಯೇ ನಮ್ಮೊಳಗೆ ನೆಲೆಯಾಗಿರುತ್ತಿತ್ತು. ಕಥಾ ಕಾಲದಲ್ಲಿ ಅದರೊಂದಿಗೇ ಬೆಳೆಯುವ ಸಂಬಂಧಗಳ ಬೆಸುಗೆ, ಹೊಂದಿಕೊಳ್ಳುವ ಗುಣ, ಹಂಚಿ ತಿನ್ನುವ ಔದಾರ್ಯ ಇವೆಲ್ಲ ಕಥೆಯ ಜತೆಗೆ ಫ್ರೀ ಆಫರ್^ಗಳು!

ಆಲಿಸುವ ಕಲೆ ಕಲಿಸುತ್ತದೆ: ಒಂದಕ್ಷರವೂ ಮಿಸ್ ಆಗದ ಹಾಗೆ ಕಥೆ ಕೇಳಿಸಿಕೊಳ್ಳುವ ಹುಮ್ಮಸ್ಸಿನಲ್ಲಿ ಮಕ್ಕಳ ಕಿವಿಗಳು ಮೊಲದ ಕಿವಿಯಂತಾಗುತ್ತಿದ್ದವು. ಇಂದಿನ ಸಾಫ್ಟ್ ಸ್ಕಿಲ್ ಜಗತ್ತಿನಲ್ಲಿ ಬಹಳ ಮುಖ್ಯವೆನಿಸಿದ ಇದನ್ನು ಕಥೆಗಳು ಅರಿವಿಲ್ಲದ ಹಾಗೆ ಬಿತ್ತುತ್ತಿದ್ದವು. ಕೊನೆಗೆ ಕೇಳುವ ಪ್ರಶ್ನೆಗೆ ಉತ್ತರಿಸಿ ‘ಬೆಲ್ಲ’ದ ಬಹುಮಾನ ಪಡೆವ ಹಂಬಲ ಎಲ್ಲರಲ್ಲೂ.

ಹೊಸ ಶಬ್ದಗಳ ಕಲಿಕೆ: ಪ್ರತಿ ಕಥೆಯೂ ಬೇರೆ ಬೇರೆ ಥರದವಾಗಿದ್ದರಿಂದ ಹೊಸ ಶಬ್ದಗಳು ಬೇಕಾದಷ್ಟು ಸಿಗುತ್ತಿದ್ದವು. ಅರ್ಥವಾಗದ್ದನ್ನು ಕೇಳುವುದೂ ಬೇಕಿರಲಿಲ್ಲ. ಪಿಳಿ ಪಿಳಿ ಕಣ್ಣು ನೋಡಿಯೇ ಅಜ್ಜಿಗದು ಗೊತ್ತಾಗಿ ಸಮಗ್ರ ವಿವರಣೆ ಬರುತ್ತಿತ್ತು. ರಜೆ ಖಾಲಿಯಾಗುವ ಹೊತ್ತಿಗೆ ಶಬ್ದ ಭಂಡಾರ ತುಂಬಿರುತ್ತಿತ್ತು. ಏನೇ ಬರೆಯುವುದಕ್ಕೂ ಶಬ್ದಗಳಿಲ್ಲದೇ ಗೂಗಲ್ ಮಾಡುವ ಅಗತ್ಯ ಕಿಂಚಿತ್ತು ಇರಲಿಲ್ಲ. ಇವತ್ತು ಹೀಗೆ ಕೂತು ನಾಲ್ಕಕ್ಷರ ಬರೆಯಬಲ್ಲ ನನ್ನ ಆತ್ಮ ವಿಶ್ವಾಸದ ಬೇರುಗಳಿರುವುದು ಇಂಥ ಬಾಲ್ಯ ಕಳೆದ ಮಣ್ಣಿನಲ್ಲಿ.

ಸಂಸ್ಕೃತಿಯ ಹಿನ್ನೆಲೆ ಅನಾವರಣ: ಕಥೆ ಹೇಳುತ್ತಲೇ “ಚೌತಿ ದಿನ ಚಂದ್ರನ ನೋಡಿದ ಕೃಷ್ಣನಿಗೆ ಸ್ಯಮಂತಕ ಮಣಿ ಕದ್ದ ಅಪವಾದ ಬಂದು, ಕೊನೆಗೆ ಜಾಮಬವಂತನ ಜತೆ ಯುದ್ಧ ಮಾಡೋ ಥರ ಆಗಿ…” ಎಂಬ ಕೇಳಿದ ಮೇಲೆ ಗಣಪತಿ ಹಬ್ಬದ ದಿನ ನಾವ್ಯಾರೂ ಸಾಯಂಕಾಲದಿಂದಲೇ ಆಕಾಶ ನೋಡುತ್ತಿರಲಿಲ್ಲ. ಹಬ್ಬಗಳ ಹಿನ್ನೆಲೆ, ಆಚರಣೆಗಳ ಹಿಂದಿನ ಅರ್ಥ, ಅದರಿಂದಾಗುವ ಉಪಯೋಗ ಎಲ್ಲವೂ ಕಥೆಯಾಗಿ ಹರಿದು ಬಂದಾಗ ಅರ್ಥವಾಗುವುದು ಕಷ್ಟವೆನಿಸುತ್ತಿರಲಿಲ್ಲ. ಜತೆಗೇ ಅಮವಾಸ್ಯೆ, ಹುಣ್ಣಿಮೆಗಳು, ಏಕಾದಶಿ, ಸಂಕಷ್ಟಿಗಳು ಹೇಳುತ್ತ ಹೇಳುತ್ತ ಋತುಮಾನಗಳು ತಾನಾಗಿ ತಲೆಗೆ ಹೋಗುತ್ತಿತ್ತು.

ಕಲ್ಪನೆಯ ಹಕ್ಕಿಗೆ ಹೊಸ ರೆಕ್ಕೆ: ಸಿಂಡ್ರೆಲ್ಲಾ ಕಥೆ ಕೇಳುವ ಹೊತ್ತಿಗೆ ಪ್ರತಿ ಹುಡುಗಿಯೂ ರಾಜಕುಮಾರಿ, ಅಷ್ಟೂ ಗಂಡು ಮಕ್ಕಳೂ ರಾಜ ಕುಮಾರರೇ! ಬಣ್ಣ ಬಣ್ಣದ ರೆಕ್ಕೆಗಳು ಹುಟ್ಟಿದ ಅವೆಷ್ಟೋ ರಾಜ್ಯಗಳಲ್ಲಿ ಹಾರಾಡುತ್ತಿದ್ದ ಕನಸಿನ ಹಕ್ಕಿ ಮರಳಿ ಮನೆಗೆ ಬರುತ್ತಿದ್ದುದು “ಏಳಿ ಮಕ್ಕಳೇ ಸೂರ್ಯ ನೆತ್ತಿಗೆ ಬಂದಾಯ್ತು” ಎಂಬ ಬೆಳಗಿನ ಸುಪ್ರಭಾತ ಕೇಳಿದಾಗಷ್ಟೇ. ಜತೆಗೇ ಕೆಡುಕು ಮಾಡಿದವರಿಗೂ ಒಳ್ಳೆಯದೇ ಬಯಸಿದರೆ ಕೊನೆಗೆ ನಮಗೂ ಒಳಿತಾಗುತ್ತದೆ. ಕಾಯುವ ತಾಳ್ಮೆಯ ಪಾಠವನ್ನೂ ಸಿಂಡ್ರೆಲ್ಲಾ ಹೇಳುತ್ತಿದ್ದಳು.

ನೆನಪಿನ ಶಕ್ತಿಗೆ ಸಾಣೆಕಲ್ಲು: ನಿನ್ನೆಯೋ ಮೊನ್ನೆಯೋ ಹೇಳಿದ ಕಥೆಯನ್ನು ಥಟ್ಟನೊಂದು ದಿನ ಕೇಳಿ ನೆನಪಿನ ಶಕ್ತಿಗೆ ಸವಾಲೆಸೆದು ತಬ್ಬಿಬ್ಬು ಮಾಡುವ ಮೂಲಕ ನೆನಪನ್ನು ಚುರುಕುಗೊಳಿಸುತ್ತಿದ್ದುದೂ ಇದೇ ಪ್ರಕ್ರಿಯೆ. ಜತೆಗೇ ರಜೆ ಮುಗಿದು ಶಾಲೆ ಶುರುವಾದ ಮೇಲೆ ಆ ಕಥೆಗಳನ್ನೆಲ್ಲ ಸಹಪಾಠಿಗಳ ಮುಂದೆ ಹೇಳಿ ಜಂಭ ಕೊಚ್ಚಿಕೊಳ್ಳುವ ಉಮೇದು ಕೂಡ ಕಡಿಮೆಯದಲ್ಲ. ಕತೆ ಮರೆತು ಹೋದರೆ ತಕ್ಷಣ ಕೇಳುವುದಕ್ಕೆ ಫೋನು, ವಾಟ್ಸಾಪ್ ಯಾವುದೂ ಇರದ ಕಾಲದಲ್ಲಿ ಸ್ವಂತ ತಲೆಯಷ್ಟೇ ಆಕರವಾಗಿರಬೇಕಿತ್ತು. ಈ ಎಲ್ಲ ಕಸರತ್ತುಗಳಲ್ಲಿ ಮೆದುಳು ತಂತಾನೇ ಚುರುಕುಗೊಳ್ಳುತ್ತಿತ್ತು.

ವಾಕ್ಚಾತುರ್ಯಕ್ಕೆ ಹೊಸ ಹುಟ್ಟು: ಭಾಷೆಯ ಬಹು ಸಾಧ್ಯತೆಗಳು ತೆರೆದುಕೊಂಡ ನಂತರ ಮಾತೆಂಬುದು ಮಲ್ಲಿಗೆಯಂತೆ ಅರಳುತ್ತದೆ. ಆತ್ಮ ವಿಶ್ವಾಸ, ಶಬ್ದಕೋಶ ಎರಡೂ ತುಂಬಿದ್ದಾಗ ಎಂಥ ಸಂದರ್ಭದಲ್ಲಿ ಎಲ್ಲಿ ಮಾತಿಗೆ ನಿಂತರೂ ಆಶು ಭಾಷಣ ಒಡ್ಡಿಲ್ಲದೆ ಹರಿವ ನದಿ. ಇಂಥವುಗಳು ವ್ಯಕ್ತಿತ್ವಕ್ಕೆ ತಂದು ಕೊಡುವ ಮೆರುಗೇ ವಿಶಿಷ್ಟ ರೀತಿಯದು. ಇಂದು ಲಕ್ಷಗಟ್ಟಲೇ ಖರ್ಚು ಮಾಡಿ ಕಲಿಸುವ ‘ಕಮ್ಯುನಿಕೇಷನ್ ಸ್ಕಿಲ್’ನ್ನು ಯಾವ ಗೌಜು ಗದ್ದಲವಿಲ್ಲದೇ ಕಲಿಸಬಲ್ಲ ತಾಕತ್ತು ಕಥಾಕಾಲಕ್ಕಿದೆ. ಮಾತಿನ ಚಾತುರ್ಯ ಗೆಲುವಿಗೆ ರಾಜಮಾರ್ಗವೂ ಹೌದು.

ಬಹುತೇಕ ಸಣ್ಣ ಕುಟುಂಬಗಳಿರುವ, ಅಜ್ಜಿ ಮನೆಯಲ್ಲೂ ಅವರಿಲ್ಲದಿರುವ ಕಾಲದಲ್ಲಿ ಮಕ್ಕಳು ಅಲ್ಲಿಗೇ ಹೋಗುವುದು ಸಾದ್ಯವೋ ಇಲ್ಲವೋ ಮನೆಯಲ್ಲಿಯೇ ನಮ್ಮ ಪರಿಮಿತಿಯಲ್ಲಿ ಕಥೆ ಹೇಳಲೇ ಬೇಕಿದೆ. “ನಮಗೇ ಕತೆಗಳು ಗೊತ್ತಿಲ್ಲ” ಅನ್ನುವವರು ಕೂಡ ಕಥೆ ಪುಸ್ತಕಗಳನ್ನು ತಂದು ಓದಿಯಾದರೂ ಮಕ್ಕಳಿಗೆ ಕೇಳಿಸಬೇಕು. ಯಾವುದೋ ತರಬೇತಿಗಳಿಗೆ ಕಳಿಸಿ ಮಕ್ಕಳ ‘ಪರ್ಸನಾಲಿಟಿ ಡೆವಲಪ್^ಮೆಂಟ್’ ಮಾಡುವ ಬದಲು ಪರ್ಸನಲ್ ಕೇರ್ ತೆಗೆದುಕೊಂಡರೆ ಇಬ್ಬರೂ ಡೆವಲಪ್ ಆಗಬಹುದು.

1 COMMENT

  1. ನಮ್ಮ ಜೀವನದಲ್ಲಿ ಕಂಡುಕೊಂಡ ಅನುಭವಗಳನ್ನು ಮತ್ತೊಬ್ಬರು ಗುರುತಿಸಿ ತೆಗೆದಿರಿಸಿದ್ದಾರೆ ಅಂದರೆ ಆಗುವ ಸಂತೋಷ ಅಷ್ಟಿಷ್ಟಲ್ಲ. ಅಂತಹ ಸಂತಸ ನಿಮ್ಮೀ ಬರಹ ಕಂಡು ಒದಗಿಬಂತು.

    ನಮ್ಮ ಕಾಲದಲ್ಲಿ ಅಜ್ಜಿ ಮನೆ ಎಂಬ ಬೇಸಿಗೆ ಕಾಲದ ವಿಹಾರ ಅವಿಸ್ಮರಣೀಯ. ನಮ್ಮ ನಂತರದ ತಲೆಮಾರಿನವರಾದ ನಿಮ್ಮ ಬದುಕಲ್ಲೂ ಇಂತಹದ್ದು ಕಂಡಿದ್ದೀರಿ ಎಂಬುದು ಸಂತಸದ ವಿಚಾರ. ಅಜ್ಜಿ ಮನೆಯ ಮೂಲಕ ನಮಗೆ ಸಿಗುತ್ತಿದ್ದ ಹಳ್ಳಿಯ ಜೀವನ, ಸಂಸ್ಕೃತಿ, ಸಾಂಸ್ಕೃತಿಕ ಉತ್ಸವಗಳು, ಆಚಾರ ವಿಚಾರ, ವಿಹಾರ, ಆಹಾರ ಪದ್ಧತಿಗಳು, ಬದುಕಿನ ರೂಢಿಗಳು ಮತ್ತು ಇಲ್ಲಿ ತಾವು ವಿಶೇಷವಾಗಿ ಪ್ರಸ್ತಾಪಿಸಿರುವ ಕಥೆಗಳ ಆಲಿಕೆ ಇಂತವೆಲ್ಲಾ ನಮ್ಮನ್ನು ಸಂವೆದಿಸಿರುವ ರೀತಿ ಅದು ನಮ್ಮೊಳಗೆ ಒಂದು ಭಾವವಾಗಿ ಬೆರೆತಿರುವ ರೀತಿ ಮರೆಯಲಾಗದ್ದು.

    ಮತ್ತೊಂದು ರೀತಿಯ ಕ್ಲಾಸ್ ರೂಂ ಅನ್ನು ಸಮ್ಮರ್ ಕ್ಯಾಂಪ್ ಎಂದು ಹೆಸರಿಸಿ ಇಂದು ನಡೆಯುತ್ತಿರುವ ಆಟಾಟೋಪಗಳು (ಕೆಲವೊಂದು ಕಡೆ ಹೊರತುಪಡಿಸಿ) ಸಂವೇದನಾ ರಾಹಿತ್ಯವಾಗಿದ್ದು ಮಕ್ಕಳನ್ನು ಯಾವುದಕ್ಕೂ ಪ್ರೇರೇಪಿಸುವುದಕ್ಕೆ ಬಹುತೇಕವಾಗಿ ವಿಫಲವಾಗುತ್ತಿವೆ.

    ಇಂದು ಹಳ್ಳಿಗಳಲ್ಲಿ ಅಜ್ಜಿಯರು ಕೂಡಾ ಕಥೆ ಹೇಳುವ ಪರಿಪಾಠ ಬಿಟ್ಟು ಟೆಲಿವಿಶನ್ ಮುಂದೆ ಕೂತು ನಗರದವರು ಹೇಳುವ ಅಸ್ವಾಭಾವಿಕ ಕಥೆಗಳನ್ನು ಕೇಳಲು ಮೊರೆ ಹೋಗಿರುವುದು ನಮ್ಮ ಸಾಂಸ್ಕೃತಿಕ ಬದುಕಿಗಾಗಿರುವ ಬಹುದೊಡ್ಡ ಆಘಾತ. ಈ ವಿಚಾರಗಳನ್ನು ಅತ್ಯಂತ ನಾಜೂಕಾಗಿ ತಾವು ಇಲ್ಲಿ ಪ್ರಸ್ತಾಪಿಸಿದ್ದೀರಿ.

    ಪುನಃ ನಾವು ಅಜ್ಜಿ ಮನೆಗಳನ್ನು ಸೃಷ್ಟಿಸಲು ಎಷ್ಟು ಸಾಧ್ಯವಾಗುತ್ತದೋ ಅರಿಯೆ, ಆದರೆ ಅಂತಹ ವಾತಾವರಣವನ್ನು ಸಾಂಘಿಕವಾಗಿ ಸೃಷ್ಟಿಸಲು ಸಾಧ್ಯವಿದೆ ಎಂದು ನನಗನ್ನಿಸುತ್ತದೆ. ತಮ್ಮಂತಹ ಕಾಳಜಿ ಉಳ್ಳವರ ಈ ಚಿಂತನೆಗಳು ಸಮಾಜವನ್ನು ಈ ನಿಟ್ಟಿನಲ್ಲಿ ಹೆಚ್ಚು ಪ್ರೇರೇಪಿಸುವಂತಾಗಲಿ ಎಂದು ಆಶಿಸುತ್ತೇನೆ. ಇಂತಹ ಚಿಂತನೆಗಳನ್ನು ಸಮಾಜ ಯೋಚಿಸುವತ್ತ ಪ್ರಯತ್ನಿಸಿರುವ ಈ ನಿಮ್ಮ ಲೇಖನವನ್ನು ಹೃತ್ಪೂರ್ವಕವಾಗಿ ಶ್ಲಾಗ್ಹಿಸುತ್ತಿದ್ದೇನೆ.

Leave a Reply