ಎರಡು ಮಕ್ಕಳ ಮಿತಿಯೆಂಬ ಗಿರಿರಾಜ್ ಸಿಂಗ್ ಪ್ರತಿಪಾದನೆಯಲ್ಲಿ ವಿವಾದವಾಗಿಸುವ ಪ್ರಮಾದವೇನಿದೆ?

ಪ್ರವೀಣ್ ಕುಮಾರ್

ವಿಚಾರ ವಿರೋಧಿಗಳನ್ನೆಲ್ಲ ಪಾಕಿಸ್ತಾನಕ್ಕೆ ಹೋಗಿ ಅಂತ ಅವಾಜು ಹಾಕುವ ಬಿಜೆಪಿಯ ಸಚಿವ ಗಿರಿರಾಜ್ ಸಿಂಗ್ ವಿವಾದಾತ್ಮಕ ವ್ಯಕ್ತಿ ಎಂಬುದೇನೋ ನಿಜ. ಹಾಗಂತ ಅವರು ಹೇಳಿದ್ದೆಲ್ಲ ವಿವಾದವೇ ಆಗಬೇಕಿಲ್ಲ, ವಿವಾದ ಮಾಡಲೂ ಬೇಕಿಲ್ಲ.

ಇದೀಗ ಗಿರಿರಾಜ ಸಿಂಗ್ ಅವರ ವಿವಾದಾತ್ಮಕ ಮಾತು ಅಂತ ಮಾಧ್ಯಮವು ಚರ್ಚಿಸುತ್ತಿರುವ ಅವರ ಭಾಷಣದ ಸಾರ ಹೀಗಿದೆ- ‘ಭಾರತದಲ್ಲಿ ಎಲ್ಲಾ ಧರ್ಮಗಳಿಗೂ ಅನ್ವಯವಾಗುವಂತೆ ಗರಿಷ್ಟ ಇಬ್ಬರು ಮಕ್ಕಳನ್ನು ಮಾತ್ರ ಹೊಂದುವ ಕಾನೂನು ಜಾರಿಗೊಳಿಸುವ ಅವಶ್ಯಕತೆ ಇದೆ. ಮುಸ್ಲಿಮರ ರೀತಿಯಲ್ಲಿ ಹಿಂದುಗಳು ಕಡ್ಡಾಯವಾಗಿ ಇಬ್ಬರು ಗಂಡು ಮಕ್ಕಳನ್ನು ಹೊಂದಬೇಕು. ಇಲ್ಲವಾದರೆ ಬಿಹಾರದ ಏಳು ಜಿಲ್ಲೆಗಳಲ್ಲಿ ನಮ್ಮ ಜನಸಂಖ್ಯೆ ಕುಸಿದಂತೆ ಎಲ್ಲೆಡೆಯೂ ಆಗಲಿದೆ. ಮೊದಲು ನಮ್ಮ ಹೆಣ್ಮು ಮಕ್ಕಳನ್ನು ರಕ್ಷಿಸಬೇಕು. ಇಲ್ಲವಾದರೆ ಪಾಕಿಸ್ತಾನ ರೀತಿಯಲ್ಲಿ ನಮ್ಮ ಹೆಣ್ಣು ಮಕ್ಕಳಿಗೂ ಪರದೆ ಹಾಕಿಸಿ ಸುರಕ್ಷಿತಗೊಳಿಸುವ ಪರಿಸ್ಥಿತಿ ಎದುರಿಸಬೇಕಾಗುತ್ತದೆ’ ಎಂದಿದ್ದಾರೆ.

ಜನಸಂಖ್ಯಾ ನಿಯಂತ್ರಣ ಕಾನೂನು ಕಡ್ಡಾಯವಾಗಿ ಜಾರಿಯಾಗಬೇಕಾದರೆ ಒಂದು ಅಥವಾ ಎರಡು ಮಕ್ಕಳು ಮಾತ್ರ ಇರಬೇಕು. ಈ ಕಾನೂನನ್ನು ಮೀರಿದರೆ ಅಂತಹವರಿಗೆ ಮತ ಚಲಾಯಿಸುವ ಹಕ್ಕನ್ನು ಹಿಂಪಡೆಯಬೇಕು ಎಂದೂ ಹೇಳಿರುವುದಾಗಿ ಎ ಎನ್ ಐ ಸುದ್ದಿಸಂಸ್ಥೆ ವರದಿ ಮಾಡಿದೆ.

ಈ ಮೇಲಿನ ಮಾತುಗಳಲ್ಲಿ ಗಿರಿರಾಜ್ ವಿರುದ್ಧ ಆಕ್ಷೇಪಿಸಬಹುದಾದ ಅಂಶ ಎಂದರೆ ಮುಸ್ಲಿಮರ ವಿರುದ್ಧ ಹಿಂದುಗಳಲ್ಲಿ ಆತಂಕ ಹುಟ್ಟಿಸುತ್ತಿದ್ದಾರೆ ಅನ್ನೋದು. ಆದರೆ ಲಿಬರಲ್ ಗಳು ಎಂದುಕೊಳ್ಳುವವರು ಈ ಅಂಶವನ್ನು ಹಿಡಿದು ಜಗ್ಗುವುದಕ್ಕಿಂತ ಮೊದಲು ಜನಸಂಖ್ಯಾ ನೀತಿಯ ಬಗ್ಗೆ ಸ್ಪಷ್ಟ ನಿಲುವು ತಾಳಬೇಕು. ನೂರಿಪ್ಪತ್ತೈದು ಕೋಟಿ ಜನರ ಭಾರತದಲ್ಲಿ ಎಲ್ಲ ಸಮುದಾಯಗಳೂ ಎರಡೇ ಮಕ್ಕಳಿಗೆ ತಮ್ಮ ಸಂತಾನ ನಿಯಂತ್ರಿಸಿಕೊಳ್ಳಲಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದರೆ ಅಲ್ಲಿ ತಪ್ಪೇನಿದೆ? ಮೂರನೇ ಮಗು ಹಡೆದರೆ ಕೊಂದುಬಿಡಿ ಎಂದೇನೂ ಹೇಳುತ್ತಿಲ್ಲವಲ್ಲ? ಮತ ಹಕ್ಕು ಕಡಿತಗೊಳಿಸಿ ಎನ್ನುತ್ತಿದ್ದಾರೆ. ಇದೊಂದು ತರ್ಕವೇ ಹೊರತು ಪ್ರಚೋದನೆಯ ಮಾತು ಎಲ್ಲಿಂದ ಬಂತು?

ಇವತ್ತು ಸರ್ಕಾರವನ್ನು ಬಗ್ಗಿಸುವ ಅಸ್ತ್ರವೇ ಬಹುಮತ ಮತ್ತು ಸಂಖ್ಯೆಗಳು. ನಮ್ಮ ಸಮುದಾಯದವರು ಇಷ್ಟಿದ್ದಾರೆ, ಇದಕ್ಕೆ ತಕ್ಕಂತೆ ಅನುಕೂಲ ಕೊಡಿ ಎಂದು ಕೇಳುವುದು ಸರಿ ಎನಿಸುತ್ತದೆ ಎಂದಾದರೆ, ನಮ್ಮ ಸಮುದಾಯವನ್ನು ಪ್ರತಿನಿಧಿಸುವುದಕ್ಕೆ ಮುಖ್ಯಮಂತ್ರಿ ಹುದ್ದೆ ಬೇಕು, ಪ್ರಧಾನಿ ಹುದ್ದೆ ಬೇಕು ಎಂಬ ಒತ್ತಾಯಗಳು ನ್ಯಾಯಯುತ ಎನ್ನುವುದಾದರೆ, ಅದಕ್ಕೆ ತಕ್ಕಂತೆ ಕರ್ತವ್ಯ ನಿಭಾವಣೆಯೂ ಆಗಬೇಕಲ್ಲ. ಜನಸಂಖ್ಯೆ ಹೆಚ್ಚಳ ಎನ್ನುವುದು ದೇಶದ ಸಂಪನ್ಮೂಲ ವಿತರಣೆಯ ಮೇಲೆ ಪ್ರಭಾವ ಬೀರುತ್ತದೆ. ಈ ಸಂಪನ್ಮೂಲ ವಿತರಣೆಯನ್ನು ನಾವೆಲ್ಲ ಜಾತಿಗಳ, ಮತಗಳ ಜನಸಂಖ್ಯೆ ಆಧಾರದಲ್ಲೇ ಕೇಳುತ್ತಿದ್ದೇವೆ. ಹಾಗೆಂದಮೇಲೆ ಜನಸಂಖ್ಯೆ ವೃದ್ಧಿಯ ನಿಯಂತ್ರಣಕ್ಕೊಂದು ಖಡಕ್ ನೀತಿ ಇರಬೇಕು ಹಾಗೂ ಅದು ಭಾರತೀಯರೆಲ್ಲರನ್ನೂ ಒಳಗೊಂಡಿರಬೇಕು ಅಂತ ಹೇಳುವುದರಲ್ಲಿ ತಪ್ಪೇನಿದೆ. ಅದಿಲ್ಲ ಎಂದಾದರೆ ಇನ್ಯಾವುದೇ ಅನ್ವೇಷಣೆ, ಕೌಶಲ, ಶ್ರಮ ಇಂಥ ಯಾವ ಪರಿಕಲ್ಪನೆಗಳೂ ಮಾನವ ಸಂಪನ್ಮೂಲದೊಳಗೆ ಸೇರದೇ ಮಕ್ಕಳನ್ನು ಹೆಚ್ಚೆಚ್ಚು ಹಡೆದವರೇ ಮಹಾಶೂರರು ಎಂದಾಗುತ್ತದಲ್ಲವೇ?

ಇನ್ನು ಮುಸ್ಲಿಂ ಜನಸಂಖ್ಯೆ ಹೆಚ್ಚಳದ ಭಯ ತೋರಿಸಿ ಗಿರಿರಾಜ್ ಸಿಂಗ್ ಆಡಿರುವ- ‘ಹಿಂದುಗಳು ಕಡ್ಡಾಯ ಎರಡು ಮಕ್ಕಳನ್ನು ಮಾಡಿಕೊಳ್ಳಬೇಕು’ ಎಂಬ ಮಾತು. ಇರಲಿ ಬಿಡಿ, ಹೌದೆನಿಸುವವರು ಎರಡು ಮಾಡಿಕೊಳ್ಳಲಿ- ನಮಗೆ ಅದು ಆರ್ಥಿಕವಾಗಿ ಅಥವಾ ಇನ್ಯಾವುದೇ ಕಾರಣದಿಂದ ಕಷ್ಟವಾದಲ್ಲಿ ಬಿಡೋಣ. ಗಿರಿರಾಜ್ ಸಿಂಗ್ ಆಗಲೀ ಅಥವಾ ಇನ್ಯಾವುದೇ ಹಿಂದು ಪರ ಮಾತುಗಾರನಾಗಲೀ- ‘ಹಿಂದುಗಳೆಲ್ಲ ಆದಷ್ಟೂ ಹೆಚ್ಚು ಮಕ್ಕಳನ್ನು ಮಾಡಿಕೊಳ್ಳಬೇಕು’ ಎಂದಿದ್ದೇ ಆದಲ್ಲಿ ಖಂಡಿತ ವಿರೋಧಿಸುವುದಕ್ಕೆ ಕಾರಣವಿದೆ. ಮಹಿಳೆಯನ್ನು ಹೆರುವ ಯಂತ್ರವಾಗಿಸಬೇಕಾ, ಹೀಗೆ ಪೈಪೋಟಿಗೆ ಬಿದ್ದರೆ ದೇಶದ ಕತೆ ಏನು ಅಂತೆಲ್ಲ ವಿರೋಧಿಸುವುದು ಸೂಕ್ತವೇ ಆಗಿತ್ತು. ಆದರೆ, ಗಿರಿರಾಜ್ ಸಿಂಗ್ ಎರಡು ಮಕ್ಕಳ ಮಿತಿಯನ್ನು ಮೊದಲು ಹೇಳಿ, ಹಿಂದುಗಳು ಈ ಮಿತಿಯನ್ನು ಸರಿಯಾಗಿ ಬಳಸಿಕೊಳ್ಳಲಿ ಅಂತ ಕರೆ ನೀಡಿದ್ದಾರೆ. ಇದನ್ನು ವಿವಾದ ಅಂತ ಜಗ್ಗುವುದರಲ್ಲಿ ಅರ್ಥವಿಲ್ಲ.

ಹಾಗೆ ನೋಡಿದರೆ ಉದಾರ ಚಿಂತಕರು, ಸ್ತ್ರೀವಾದಿಗಳೆಲ್ಲ ಇದನ್ನು ಸ್ವಾಗತಿಸಬೇಕು. ಎರಡಕ್ಕಿಂತ ಹೆಚ್ಚಿನ ಮಕ್ಕಳಾದವರಿಗೆ ಮತಹಕ್ಕು ಇಲ್ಲವೆಂದೋ ಅಥವಾ ಇನ್ಯಾವುದೇ ರೀತಿಯ ಕಡಿವಾಣಗಳು ಬಿದ್ದಾಗ, ಅಷ್ಟರಮಟ್ಟಿಗೆ ಯಾವುದೇ ಸಮುದಾಯದಲ್ಲಿ ಹೆಣ್ಣು ಹೆರಿಗೆ ಯಂತ್ರವಾಗೋದು ತಪ್ಪುತ್ತಲ್ಲ?

Leave a Reply