ನೀರನ್ನರಸುತ್ತ ಜೀವಪಸೆಯೇ ಆರುತಿದೆ… ಬರ ಭಾರತ ನಲುಗುತಿದೆ

ಡಿಜಿಟಲ್ ಕನ್ನಡ ಟೀಮ್

ಈ ಬಾರಿಯ ಭೀಕರ ಬರಗಾಲಕ್ಕೆ ದೇಶವೇ ತತ್ತರಿಸಿದೆ. ಅದರಲ್ಲೂ ರೈತನ ಪರಿಸ್ಥಿತಿ ನರಕಕ್ಕಿಂತ ಕಡಿಮೆ ಇಲ್ಲ. ಕೈಯಲ್ಲಿ ಕಾಸಿಲ್ಲ, ಬೆಳೆ ಬೆಳೆಯಲು ನೀರಿಲ್ಲ, ಸರ್ಕಾರ ನೀಡೋ ವಿದ್ಯುತ್ ಕಣ್ಣಾ ಮುಚ್ಚಾಲೆ ಆಟ, ಪಶುಗಳ ಸಾಕಲು ಮೇವಿಲ್ಲ, ಕುಡಿಯಲು ನೀರಿಲ್ಲ. ಬಿರು ಬಿಸಿಲಿನಿಂದ ಉಷ್ಣಗಾಳಿ ತೀವ್ರತೆ ಹೆಚ್ಚಾಗುತ್ತಿದ್ದು ಬರಕ್ಕೆ ಸಿಲುಕಿದ ಹಳ್ಳಿಗಳಲ್ಲಿ ಬದುಕು ದುಸ್ತರವಾಗಿದೆ. ಹಾಗಾಗಿ ಬೇಸತ್ತಿರುವ ರೈತರಲ್ಲಿ ಕೆಲವರು ಗುಳೇ ಹೊರಟರೆ, ಮತ್ತೆ ಕೆಲವರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ.

ಬರದ ಕೆಲವು ಬಿಂಬಗಳನ್ನು ನಾವು ಎದೆಗಿಳಿಸಿಕೊಳ್ಳಬೇಕಿದೆ. ಈ ಕ್ಷಣದಲ್ಲಿ ನಾವೇನೂ ಮಾಡಲಾಗದ ಹತಾಶೆಯೇ ಕಾಡಬಹುದು. ಆದರೆ ಈಗ ಕಾಡುತ್ತಿರುವ ಬಿಸಿಯು ಮಳೆ ಬಂದ ಕಾಲಕ್ಕಾದರೂ ನೀರು ಸಂಗ್ರಹಣೆಯತ್ತ ಪ್ರೇರೇಪಿಸುವಂತಾದರೆ, ಹವಾಮಾನ ಹೀಗೆ ಹದಗೆಡಲು ಕಾರಣವಾದ ಪರಿಸರ ನಾಶದ ಬಗ್ಗೆ ಎಚ್ಚೆತ್ತುಕೊಳ್ಳುವಂತಾದರೆ ಸಾಕಷ್ಟೆ.

  • ಕಲ್ಬುರ್ಗಿ 44.3 ಸೆಲ್ಶಿಯಸ್, ವಿಜಯಪುರ 44, ಯಾದಗಿರಿ 43.6, ಬಳ್ಳಾರಿ 43.8, ಗದಗ 43.2, ಶಿವಮೊಗ್ಗ 40.5… ಹೀಗೆ ಬುಧವಾರದ ಉಷ್ಣ ಪ್ರಮಾಣದ ಅಂಕಿಅಂಶ ಉದಾಹರಣೆಗೆ ಮಾತ್ರ. ಒಂದು ಒಂದು ದಿನದ ಕತೆಯಲ್ಲ. ಯಾವ ಜಿಲ್ಲೆ ತಡಕಿದರೂ 40 ಡಿಗ್ರಿ ಸೆಲ್ಶಿಯಸ್ ಗಿಂತ ಕಡಿಮೆ ಉಷ್ಣತೆ ಕಾಣದು. ತಂಪು ವಾತಾವರಣ ಎನ್ನುವ ಚಿಕ್ಕಮಗಳೂರು ಮತ್ತು ಕೊಡಗಿನಲ್ಲೂ ನಲ್ವತ್ತಕ್ಕೆ ತಾಗಿದೆ ಉಷ್ಣಾಂಶ. ಟ್ಯಾಂಕರ್ ನೀರಿಗೆ ಒಂಬೈನೂರು ತೆತ್ತು ಉದ್ಯಮ ನಡೆಸಲಾಗದೇ ಉತ್ತರ ಕರ್ನಾಟಕದ ಚಿಕ್ಕ-ಪುಟ್ಟ ಹೋಟೆಲುಗಳೆಲ್ಲ ಬಾಗಿಲು ಮುಚ್ಚುತ್ತಿವೆ. ಕೃಷ್ಣೆ- ತುಂಗಭದ್ರೆಗಳು ಬತ್ತಿವೆ.
  • ಬರಕ್ಕೆ ಅತಿ ತತ್ತರಿಸಿರುವ ರಾಜ್ಯ ಮಹಾರಾಷ್ಟ್ರ. ಇಲ್ಲಿನ ಗ್ರಾಮೀಣ ಪ್ರದೇಶದ ಜನ ಗುಳೇ ಹೊರಟು ಮುಂಬೈ ತೆಕ್ಕೆಗೆ ಸೇರುತ್ತಿದ್ದಾರೆ. ಗ್ರಾಮಗಳಿಂದ ವಲಸೆ ಬಂದವರು ನಿರಾಶ್ರಿತರಾಗಿ, ಅಲ್ಲಲ್ಲಿ ಟೆಂಟ್ ನಿರ್ಮಿಸಿಕೊಂಡಿದ್ದಾರೆ. ಅವರು ತಮ್ಮ ಟೆಂಟ್ ನಲ್ಲೆ ಆಹಾರ ಬೇಯಿಸಿಕೊಳ್ಳುತ್ತಿರುವ ದೃಶ್ಯ ಸಾಮಾನ್ಯವಾಗಿದೆ.
  • ಬರಪೀಡಿತ ಪ್ರದೇಶಗಳಲ್ಲಿ ಮಾನವನ ಬದುಕೆಂದರೆ ಪ್ರಾಣಿಗಳಿಗೆ ಸಮ. ಹೇಗೆ ಪಶು- ಪಕ್ಷಿಗಳು ಅವತ್ತಿನ ಆಹಾರ- ನೀರಿಗಾಗಿಯೇ ಎಲ್ಲ ಸಮಯ ವ್ಯಯಿಸುತ್ತವೆಯೋ, ಹಾಗೆಯೇ ನೀರು ಹುಡುಕಿ ತರುವುದರಲ್ಲೇ ಸಮಯವೆಲ್ಲ ತಗುಲಿಬಿಡುತ್ತದೆ. ಹೀಗಾಗಿ ಮಕ್ಕಳು ಶಾಲೆ ಬಿಡುತ್ತಾರೆ, ಬದುಕಿನ ಘನತೆ ಕುಸಿಯುತ್ತದೆ. ಇವನ್ನೆಲ್ಲ ನಮಗೆ ಕಣ್ಣಿಗೆ ಕಟ್ಟುವಂತೆ ವಿವರಿಸುತ್ತಿದೆ ಮಹಾರಾಷ್ಟ್ರದ 12ರ ಪ್ರಾಯದ ಹುಡುಗಿಯ ಸಾವು. ನೀರು ಹುಡುಕುತ್ತ ಆಕೆಯ ಪ್ರಾಣಪಸೆಯೇ ಆರಿತು. ಬೀಡ್ ಜಿಲ್ಲೆಯ ಸಾಬ್ಲಾಖಾದ್ ಹಳ್ಳಿಯ 5 ನೇ ತರಗತಿ ವಿದ್ಯಾರ್ಥಿನಿ ಯೋಗಿತ ಅಶೋಕ್ ದೇಸಾಯಿ ಎಂಬ ಬಾಲಕಿ ತನ್ನ ಮನೆಗೆ ಅರ್ಧ ಕಿ.ಮೀ ದೂರದಿಂದ ನೀರು ತರಲು ಹೋಗಿ ಸಾವನಪ್ಪಿದ್ದಾಳೆ. ಕೆಲವು ದಿನಗಳಿಂದ ಬೇಧಿ ಕಾಯಿಲೆಯಿಂದ ಬಳಲುತ್ತಿದ್ದ ಈಕೆ ಹಳ್ಳಿಯಲ್ಲಿ ನೀರಿನ ಸಮಸ್ಯೆ ಬಿಗಡಾಯಿಸಿದಾಗ 500 ಮೀಟರ್ ದೂರದ ನೀರಿನ ಕೈ ಪಂಪ್ ನಿಂದ ಮನೆಗೆ ನೀರು ತುಂಬಿಸುತ್ತಿದ್ದಳು. ಇದು ಮೊನ್ನೆ ಮಂಗಳವಾರವೂ ಸಹ ಮುಂದುವರೆದಿದ್ದು, ನಾಲ್ಕು ಬಾರಿ ತಂದ ನೀರನ್ನು ಮನೆಗೆ ತುಂಬಿಸಿ, ಐದನೇ ಬಾರಿಗೆ ನೀರು ತರಲು ಹೋದಾಗ ನೀರಿನ ಪಂಪ್ ಬಳಿ ಕುಸಿದು ಬಿದ್ದಳು. ತಕ್ಷಣವೇ ಸ್ಥಳೀಯ ವೈದ್ಯರ ಬಳಿಗೆ ಕರೆದು ಕೊಂಡು ಹೋದಾಗ ಹೃದಯಾಘಾತದಿಂದ ಸಾವಪ್ಪಿರುವುದಾಗಿ ದೃಢಪಟ್ಟಿದೆ. ಜೊತೆಗೆ ಬಾಲಕಿ ನಿರ್ಜಲೀಕರಣ (ದೇಹದಲ್ಲಿ ನೀರಿನ ಪ್ರಮಾಣದ ಕೊರತೆ) ದಿಂದ ಬಳಲುತ್ತಿದ್ದಳು ಎಂಬುದು ಕೂಡ ಸಾವಿಗೆ ಕಾರಣ ಎಂದಿದ್ದಾರೆ ವೈದ್ಯರು.
  • ಆಂಧ್ರ ಪ್ರದೇಶದ ರಾಜಪೇಟೆ ನಾಲ್ಗೊಂಡಾ ಪ್ರದೇಶದ ರೈತ ಕನಕಯ್ಯ. ಕನಕಯ್ಯನ ಪರಿಸ್ಥಿತಿ ಬರಪೀಡಿತ ಪ್ರದೇಶದಲ್ಲಿ ರೈತರ ಪರಿಸ್ಥಿತಿಗೆ ಹಿಡಿದ ಕೈಗನ್ನಡಿಯಾಗಲಿದೆ. ಕಳೆದ ಮೂರು ವರ್ಷಗಳಿಂದ ಇಲ್ಲಿ ಸರಿಯಾದ ಮಳೆ ಇಲ್ಲದೆ ಬರದ ಪರಿಸ್ಥಿತಿ. ನೀರಿಗಾಗಿ ನಾಲ್ಕು ಬಾರಿ ಬೋರ್ ವೆಲ್ ಕೊರೆಸಿದರೂ ಯಾವುದರಲ್ಲೂ ಒಂದು ತೊಟ್ಟು ನೀರು ಜಿನುಗಲಿಲ್ಲ. ತನ್ನ ಬಳಿಯಿದ್ದ ಮೂರು ಎಮ್ಮೆಗಳು ನೀರು ಮತ್ತು ಮೇವಿನ ಕೊರತೆಯಿಂದ ಮೃತಪಟ್ಟವು. ತನ್ನ ಇಬ್ಬರು ಮಕ್ಕಳನ್ನು ಸಾಕಲು ಸಾಧ್ಯವಾಗದ ಮಟ್ಟಿನ ಕಠಿಣ ಪರಿಸ್ಥಿತಿ ಎದುರಿಸಲಾಗದೇ ಆತ್ಮಹತ್ಯೆಗೆ ಶರಣಾದ ಕನಕಯ್ಯ.

ಕಳೆದೊಂದು ತಿಂಗಳಲ್ಲಿ ಸೂರ್ಯನ ಬಿರು ಬಿಸಿಲಿಗೆ 110 ಮಂದಿ ಸಾವನಪ್ಪಿದ್ದಾರೆ. ಇದರ ನಡುವೆ ಬಿಸಿಲು ಹೆಚ್ಚಿದಂತೆಲ್ಲ ಭೂಮಿಯಲ್ಲಿನ ಅಂತರ್ಜಲ ಮಟ್ಟ ಪಾತಾಳಕ್ಕೆ ಇಳಿಯುತ್ತಿದೆ. ಇನ್ನೂ ಮಹಾರಾಷ್ಟ್ರದ ಜಲಾಶಯಗಳಲ್ಲಿ ಕೇವಲ ಶೇಕಡಾ 19 ರಷ್ಟು ಪ್ರಮಾಣ ಮಾತ್ರ ನೀರು ಲಭ್ಯವಿದೆ. ಆಘಾತಕಾರಿ ವಿಷಯವೆಂದರೆ ಬಾಲಕಿ ಸಾವನ್ನಪ್ಪಿರುವ ಮರಾಠಾವಾಡ ಪ್ರಾಂತ್ಯದ ಜಲಾಶಯಗಳಲ್ಲಿ ಕೇವಲ ಶೇ.3 ರಷ್ಟು ಪ್ರಮಾಣ ನೀರಿದ್ದು, ಮುಂದಿನ ದಿನಗಳಲ್ಲಿ ಎದುರಾಗುವ ಸಮಸ್ಯೆಗಳ ಬಗ್ಗೆ ಈಗಲೇ ಚಿಂತಾಕ್ರಾಂತರಾಗಿದ್ದಾರೆ. ಕಳೆದ 100 ವರ್ಷಗಳ ಇತಿಹಾಸದಲ್ಲಿ ಈ ಬಾರಿ ಅತಿ ಹೆಚ್ಚು ಉಷ್ಣಾಂಶವಿದೆ. ಭಾರತೀಯ ಹವಾಮಾನ ಇಲಾಖೆ ಬುಧವಾರ ಒಡಿಶಾದಲ್ಲಿ ಉಷ್ಣಗಾಳಿಯ ತೀವ್ರತೆ ಬಗ್ಗೆ ಎಚ್ಚರಿಕೆ ನೀಡಿದೆ. ಮುಂಬರುವ ದಿನಗಳಲ್ಲಿ 45 ಡಿಗ್ರಿಯಷ್ಟು ಏರಿಕೆಯಾಗಲಿದೆ ಎಂದು ಸೂಚಿಸಿದೆ.

Leave a Reply