ವೈರುಧ್ಯ ನೋಡಿ.. ಪ್ರೇಮವೇ ನಮ್ಮ ಜಾತಿ ಅಂತಾರೆ, ಆದರೆ ಮದುವೆಗೆ ಹುಡುಗನ ಧರ್ಮ ಆಶ್ರಯಿಸುತ್ತಾರೆ!

author-geetha“ಅಂತರ್ಜಾತೀಯ, ಅಂತರ್ ಧರ್ಮೀಯ ವಿವಾಹಗಳು ಆಗಬೇಕು. ಹೆಚ್ಚೆಚ್ಚು ಆಗಬೇಕು ಆಗಲೇ ಜಾತೀಯತೆ ಮಾಯವಾಗುತ್ತದೆ. ಸಹಿಷ್ಣುತೆ ಹೆಚ್ಚುತ್ತದೆ. ಧರ್ಮಗಳ ನಡುವೆ ಸಂಬಂಧ ಏರ್ಪಟ್ಟಾಗ ಮೈತ್ರಿ ಮೂಡಿ ಸಮಾಜದಲ್ಲಿ ಸುಧಾರಣೆಯಾಗುತ್ತದೆ, ಶಾಂತಿ ನೆಲಸುತ್ತದೆ” – ಭಾಷಣದ ತುಣುಕು.

ಸಂತೋಷ, ಆಗಲಿ ಶಾಂತಿಯುತ ಸಮಾಜ ಯಾರಿಗೆ ಬೇಡ?.. ವಿವಾಹವೇ ಆಗಬೇಕೆಂದಿಲ್ಲ, ಅನ್ಯಧರ್ಮೀಯರು ಸ್ನೇಹದಿಂದ ಇದ್ದರೂ ಶಾಂತಿ ಇರುತ್ತದೆ ಸಮಾಜದಲ್ಲಿ. ಅಲ್ಲವೇ..?

ವಿವಾಹದ ವಿಷಯಕ್ಕೆ ಬಂದರೆ ಗಂಡು ಹೆಣ್ಣು ಸಮಾನರಲ್ಲ. ಹೆಣ್ಣಿನ ತಂದೆ ಹೆಣ್ಣನ್ನು ಕೊಡುತ್ತಾನೆ. ಗಂಡು ಹೆಣ್ಣನ್ನು ಸ್ವೀಕರಿಸುತ್ತಾನೆ. ಅವಳು ಅವನ ಕುಟುಂಬಕ್ಕೆ ಸೇರಿದವಳಾಗುತ್ತಾಳೆ. ತಂದೆಯ ಗೋತ್ರದಿಂದ ಗಂಡನ ಗೋತ್ರಕ್ಕೆ ಶಿಫ್ಟ್ ಆಗುತ್ತಾಳೆ. ಹಲವು ಕಡೆ ಅವಳ ಹೆಸರನ್ನೂ ಬದಲಿಸುತ್ತಾರೆ. ಮಿಸ್ ಇಂದ ಮಿಸೆಸ್ ಆಗುವುದರಲ್ಲಿ ಅವಳು ಕಳೆದುಕೊಂಡಿದ್ದೇನು? ಪಡೆದುಕೊಂಡಿದ್ದೇನು? ಎಂಬ ಅರಿವೇ ಅವಳಿಗಿರುವುದಿಲ್ಲ. ಇದು ಹಿಂದು ಧರ್ಮದಲ್ಲಿ ಅಷ್ಟೇ ಅಲ್ಲ.. ಎಲ್ಲಾ ಧರ್ಮದಲ್ಲಿಯೂ ಇರುವ ವಾಸ್ತವ. ಇಸ್ಲಾಂ ಧರ್ಮ, ಕ್ರಿಶ್ಚಿಯಾನಿಟಿ.. ಎಲ್ಲಾ ಪಿತೃ ಪ್ರಧಾನ ಸಮಾಜದಲ್ಲಿ ವಾಸ್ತವಾಂಶ ಇದೇ.

ಸಮಾನತೆಗಾಗಿ ಹೆಣ್ಣು ಹೋರಾಡುತ್ತಲೇ ಇದ್ದಾಳೆ. ಗಂಡಿನ ಸಮಕ್ಕೆ ನಿಂತು ವಿದ್ಯೆ ಗಳಿಸುತ್ತಾಳೆ. ಯಾವುದೇ ಮೀಸಲಾತಿ ಇಲ್ಲದೆ ಉದ್ಯೋಗ ಗಳಿಸಿಕೊಳ್ಳುತ್ತಾಳೆ. ವೇತನದಲ್ಲಿ ತಾರತಮ್ಯವಿಲ್ಲದಂತೆ ಹೋರಾಡಿ ನೋಡಿಕೊಳ್ಳುತ್ತಾಳೆ. (IT, BT sector at least)

ಹಿರಿಯರು ನೋಡಿ ಮಾಡಿದ ವಿವಾಹವೋ ಅಥವಾ ಪ್ರೇಮ ವಿವಾಹವೋ.. ವ್ಯತ್ಯಾಸವಿಲ್ಲ. ವಿವಾಹದ ವಿಚಾರ ಬಂದ ತಕ್ಷಣ ಅವಳು ಎರಡನೇ ದರ್ಜೆಯವಳಾಗಿಬೀಡುತ್ತಾಳೆ.

ಧಾರೆ ಎರೆದು ಕೊಡುವುದೋ, ಗಿವಿಂಗ್ ಅವೇ ದ ಬ್ರೈಡ್ ಇರಲಿ, ಲಡ್ಕಿ ದೇನಾ ಕ ಬಾತ್ ಇರಲಿ ಯಾವುದೇ ಪದ್ಧತಿಯಿರಲಿ.. ಹುಡುಗಿ ಒಂದು ವಸ್ತುವಾಗಿ ಬಿಡುತ್ತಾಳೆ.

ಅನ್ಯ ಪಂಗಡ, ಜಾತಿ, ಧರ್ಮವಾದರಂತೂ ಹುಡುಗಿಯ ಜಾತಿ ಬದಲಾಗುತ್ತದೆ. ಹುಡುಗನ ಧರ್ಮಕ್ಕೆ ಅವಳು ಸೇರ್ಪಡೆಯಾಗುತ್ತಾಳೆ. ನಂತರವೇ ವಿವಾಹ. ಪ್ರೇಮ ವಿಚಾರದಲ್ಲಿ ಪ್ರೇಮವಿದ್ದರೂ ಹುಡುಗ, ಹುಡುಗಿ ಇಬ್ಬರೂ ಪ್ರೇಮಿಸಿದರೂ, ಇಬ್ಬರಿಗೂ ಅವರ ಜಾತಿ, ಧರ್ಮದಲ್ಲಿ  ನಂಬಿಕೆ ಇಲ್ಲದಿದ್ದರೂ “ಪ್ರೇಮವೇ ನಮ್ಮ ಜಾತಿ” ಎಂಬ ತಲೆತಿರುಗುವಂಥ ಹೇಳಿಕೆ ಕೊಟ್ಟರೂ ವಿವಾಹವಾಗಲು ಹುಡುಗನ ಧರ್ಮವನ್ನು ಆಶ್ರಯಿಸುತ್ತಾರೆ. ಆ ಪದ್ಧತಿಯನ್ನು ಅನುಸರಿಸುತ್ತಾರೆ.

ಸಮಾಜದ ಅತೀ ಶ್ರೀಮಂತರು, ರಾಜಕಾರಿಣಿಗಳು (ಅವರು ಅತಿ ಶ್ರೀಮಂತರೇ ಬಿಡಿ!) ಸಿನಿ ಸ್ಟಾರ್ ಗಳು ಈ ಗೊಂದಲದಿಂದ, ತಾಪತ್ರಯದಿಂದ ಮುಕ್ತರು. ಅವರನ್ನು ಈ ಲೇಖನದಲ್ಲಿ exceptioonaly lucky and exclusive group ಎಂದು ಪರಿಗಣಿಸಿ ಕೈಬಿಡಲಾಗಿದೆ.

ನಮ್ಮ ಸಂವಿಧಾನದಲ್ಲಿ ಅಂತಹ ಅಂತರ್ ಜಾತಿ ಹಾಗೂ ಅಂತರ್ ಧರ್ಮದ ವಿವಾಹಗಳನ್ನು ನೋಂದಣಿಸಲು ‘ಸ್ಪೆಷಲ್ ಮ್ಯಾರೇಜ್ಸ್ ಆಕ್ಟ್’ ಇದೆ. ಇಬ್ಬರೂ ಅವರವರ ಧರ್ಮದಲ್ಲಿಯೇ ಇದ್ದು ವಿವಾಹವಾಗಬಹುದು. ಆದರೂ ಅದರಡಿ ಮದುವೆಯಾಗದೆ ಹುಡುಗಿಯ ಮತಾಂತರವಾಗುತ್ತದೆ.

ಫೆಮಿನಿಸ್ಟ್ ಎಂದು ಗುಂಪು ಕಟ್ಟಿಕೊಂಡು, ನಾಮಫಲಕ ಹೊತ್ತುಕೊಂಡವರೂ ಕೂಡ ಈ ವಿಷಯವಾಗಿ ಹೆಚ್ಚು ಚರ್ಚೆ ಮಾಡದೆ, ವಿರೋಧಿಸದೆ ಕೈ ಚೆಲ್ಲುತ್ತಾರೆ. ಒಪ್ಪಿಕೊಂಡು ಬಿಡುತ್ತಾರೆ.

ಸದ್ಯಕ್ಕೆ ಬಹು ಚರ್ಚಿತವಾಗುತ್ತಿರುವುದು ಹಿಂದು ಹುಡುಗಿ ಹಾಗೂ ಮುಸ್ಲಿಂ ಯುವಕನ ಮದುವೆಯಾದ್ದರಿಂದ ಅದನ್ನೇ ಉದಾಹರಣೆಯಾಗಿ ತೆಗೆದುಕೊಂಡು ಮುಂದುವರೆಯುತ್ತೇನೆ. ( ಮದುವೆಯಾದ ಅವರಿಬ್ಬರು ಒಬ್ಬರನ್ನೊಬ್ಬರು ಅರಿತುಕೊಂಡು ಸದಾ ಸಂತಸದಿಂದ ಇರಲಿ)

ಅಂತಹ ಮದುವೆಯಲ್ಲಿ ಬಿರುಕು ಉಂಟಾದರೆ ಹುಟ್ಟಿನಿಂದ ಹಿಂದು ಆದರೂ ಕೂಡ ಹಿಂದು ಮ್ಯಾರೇಜ್ ಆಕ್ಟ್ ಅಡಿ ಅವಳಿಗೆ ಪ್ರೊಟೆಕ್ಷನ್ ಸಿಗುವುದಿಲ್ಲ. ನಮ್ಮ ದೇಶದ ಕಾನೂನಿಗೆ ಒಳಪಡದ ಇಸ್ಲಾಂ ಧರ್ಮದ ಕಾನೂನು ಏನು ಹೇಳುತ್ತದೋ ಅದೇ ನಡೆಯುತ್ತದೆ.

ಸಂಬಂಧ ಹಳಸಿದ್ದರೂ ಮದುವೆಯನ್ನು ಮುರಿಯದೆ (ಹೊರಬರದೆ) ಕುಳಿತಿರುವ ನನ್ನ ಕಿರಿಯ ಸ್ನೇಹಿತೆಗೆ ಅವಳ ಗಂಡ ಹಾಗೂ ಅವನ ಮನೆಯವರು, ಮೂರು ವರ್ಷದ ಮಗನನ್ನು ಬಿಟ್ಟು ಹೋಗಬೇಕು ಎಂದು ಹೇಳಿದ್ದಾರೆ. ನಮ್ಮ ಧರ್ಮದ ಪ್ರಕಾರ ಮಗು ತಂದೆಗೆ ಸೇರುತ್ತದೆ.. ನೀನು ಬೇಕಾದರೆ ಹೋಗು ಎಂದು ಕೈ ಚೆಲ್ಲಿದ್ದಾರೆ. ಮಗುವನ್ನು ಬಿಟ್ಟು ಬರಲಾರದೆ, ಬೇರೆ ಯಾರನ್ನು ಕೇಳಬೇಕು ಎಂದು ತಿಳಿಯದೆ, ತಾಯಿ ಕದ್ದು ಮುಚ್ಚಿ ಕಳಿಸುವ ದುಡ್ಡಿನಲ್ಲಿ ಜೀವನ ಸಾಗಿಸುತ್ತಿದ್ದಾಳೆ.

ಹೆಣ್ಣನ್ನು ಕೊಡುವವರು ಕಳೆದುಕೊಳ್ಳುತ್ತಾರೆ, ಪಡೆದು ಕೊಳ್ಳುವವರು ಬೀಗುತ್ತಾರೆ ಎಂಬ ಮನೋಭಾವ ಇರುವುದರಿಂದ ವಿರೋಧ ಉಂಟಾಗುತ್ತದೆ. ಅನ್ಯಧರ್ಮೀಯರು ಮತಾಂತರ ಮಾಡಲು ಇದು ಒಂದು ಕ್ರಮ ಅನುಸರಿಸುತ್ತಾರೆ ಎಂದು ಪ್ರೇಮವನ್ನು ವ್ಯವಹಾರಿಕವಾಗಿ ನೋಡುವುದರಿಂದ ಕೂಡ ವಿರೋಧ ಉಂಟಾಗುತ್ತದೆ.

ವಿವಾಹಕ್ಕಾಗಿ ಮತಾಂತರಗೊಂಡವರ ಸಂಖ್ಯೆ ಕೂಡ ಏರುತ್ತಿದೆ. ಎರಡನೇ, ಮೂರನೇ ಮದುವೆಯಾಗಲು ಗಂಡಸರು ಕೂಡ ಮತಾಂತರ ಹೊಂದುತ್ತಾರೆ.

ಇಲ್ಲಿ ನಂಬಿಕೆ, ವಿಚಾರಧಾರೆ, ತಿಳಿವು, ಓದು ಏನೂ ಇಲ್ಲ. ಬರೀ ವಿವಾಹವಾಗಬೇಕು ಎಂಬ ಸ್ವಾರ್ಥ ಅಷ್ಟೇ.

ನಮ್ಮ ವಾಹಿನಿಗಳಲ್ಲಿ, ಪತ್ರಿಕೆಗಳಲ್ಲಿ, ಫೇಸ್ ಬುಕ್ಕಿನಲ್ಲಿ ಚರ್ಚೆಗೆ, ಲೇಖನಗಳಿಗೆ, ಜಗಳಗಳಿಗೆ ಕಾರಣವಾದ ಮಂಡ್ಯಾದ ಮದುವೆಯ ವಿಚಾರದ ಬಗ್ಗೆ ನನ್ನ ಅನುಮಾನ ಅಥವಾ ಒಳಸುಳಿ(!) ಏನಿರಬಹುದು ಎಂಬ ನನ್ನ ವಿಚಾರ ಹೇಳಿ ಈ ಲೇಖನ ಮುಗಿಸುತ್ತೇನೆ.

ಹುಡುಗಿಯ ಅಪ್ಪ ಕಾಂಗ್ರೆಸ್ ಪಕ್ಷಕ್ಕೆ ಸೇರಿದವರು. ಹುಡುಗನ ಅಪ್ಪ ಅವರ ಸ್ನೇಹಿತರು. ಹುಡುಗ ಹುಡುಗಿ ಇಬ್ಬರದು  ಹತ್ತು ಹನ್ನೆರಡು ವರ್ಷದ ಸ್ನೇಹ, ಪ್ರೇಮ. ಓಡಿ ಹೋಗಿ ಮದುವೆಯಾಗುವ ಅವಶ್ಯಕತೆ ಏನೂ ಇಲ್ಲ, ಏಕೆಂದರೆ ಈ ಮದುವೆಗೆ ಎರಡೂ ಕುಟುಂಬಕ್ಕೂ ಸಮ್ಮತವಿದೆ, ಜೊತೆಗೆ ಹುಡುಗಿ ಚಿಕ್ಕವಳೇನು ಅಲ್ಲ. ಈ ವಿವಾಹವನ್ನು ಬಿಜೆಪಿ, ಆರೆಸ್ಸಸ್.. ವಿರೋಧಿಸಲು ಕಾರಣವೇ ಇಲ್ಲ.. ಏಕೆಂದರೆ ಆ ಪಕ್ಷದ ಹಲವು ಹಿರಿಯರ ಮನೆಗಳಲ್ಲಿ ಈ ಬಗೆಯ ಅಂತರ್ ಧರ್ಮೀಯ ಮದುವೆಗಳಾಗಿವೆ.

ಹುಡುಗಿಯ ಮನೆ ಮುಂದೆ ವಿರೋಧಿಸಿದ ಹುಡುಗರನ್ನು ಸರಿಯಾಗಿ ವಿಚಾರಿಸಬೇಕು.. ಅವರಲ್ಲೊಬ್ಬ ಭಗ್ನ ಪ್ರೇಮಿಯಿರಬಹುದು ಅಥವಾ ರಾಜಕಾರಣಿಯಾದ ಅವಳ ಅಪ್ಪ ಪಬ್ಲಿಸಿಟಿಗಾಗಿ ಹೂಡಿದ ಒಂದು ಚಿಕ್ಕ ನಾಟಕ ಇದಾಗಿರಬಹುದು. ಪತ್ರಿಕೆಯೊಂದರಲ್ಲಿ ಓದಿದ ಹುಡುಗಿಯ ಸಂದರ್ಶನ ಕೂಡ ಪ್ಲಾಂಟೆಡ್ ಅನ್ನಿಸುತ್ತದೆ.

ನಮ್ಮ ರಾಜಕೀಯ ಪಕ್ಷಗಳ ಭಂಡತನ ಹಾಗೂ ಮೀಡಿಯಾಗಳ ಸದಾ ಹಸಿವಿನ ಹಾಹಾಕಾರ ನಮ್ಮಲ್ಲಿ ಸಿನಿಕತನ ಮೂಡಿಸುತ್ತದೆ. ಕಂಡದನ್ನು ಕಂಡ ಹಾಗೆ ಒಪ್ಪಿಕೊಳ್ಳಲು ಮನಸ್ಸು ನಿರಾಕರಿಸುತ್ತದೆ.

‘ಸರ್ವೇ ಜನಾಃ ಸುಖಿನೋ ಭವಂತು.’

1 COMMENT

 1. ಒಮ್ಮೊಮ್ಮೆ ನಗು ಬರುತ್ತದೆ. ಯಾರೋ ಯಾರನ್ನೋ ಮದುವೆಯಾದರೆ ಅದು ಚರ್ಚೆಗೆ ಯಾಕೆ ಒಳಪಡಬೇಕು? ನಮ್ಮ ಯಾವುದೋ ಒಂದು ಕ್ರಿಯೆ ನಮ್ಮ ಸುತ್ತಲಿನ ಸಮಾಜಕ್ಕೆ ಒಂದು ಅವಘಡ ಅಥವಾ ಅಪಾಯವನ್ನು ತರುತ್ತಿದ್ದರೆ, ಅಂಥದೊಂದು ಕ್ರಿಯೆ ನಿಕಷಕ್ಕೆ, ಮಂಥನಕ್ಕೆ ಒಳಪಡಬೇಕು. ಆದರೆ ಹುಡುಗ, ಹುಡುಗಿಯರಿಬ್ಬರೂ ಪರಸ್ಪರ ಇಷ್ಟಪಟ್ಟು ಆಗುವ ಮದುವೆಯಂಥ ಖಾಸಗಿ ವಿಷಯಗಳೂ ಕೂಡ ಚರ್ಚೆಯ ವಸ್ತುಗಳಾಗುತ್ತಿರುವದು ನಮ್ಮ ನಿರುದ್ಯೋಗದ ಸಂಕೇತವಾಗಿರಲಿಕ್ಕೂ ಸಾಕು.
  ಸದರಿ ಮಂಡ್ಯದ ಮದುವೆಯಲ್ಲಿ ಹುಡುಗಿ ಮುಸ್ಲಿಂ ಧರ್ಮಕ್ಕೆ ಮತಾಂತರವಾದಳು. ಅದು ಅವಳ ಇಷ್ಟ. ಬಹುಶಃ ಅವಳಿಗೆ ತನ್ನ ಮೂಲಧರ್ಮಕ್ಕಿಂತ ತಾನು ಮೆಚ್ಚಿದ ಹುಡುಗನೇ ಹೆಚ್ಚಾಗಿ ಕಂಡಿದ್ದರೆ ಅಥವಾ ಭಾವಿಸಿದ್ದರೆ, ಅದರಲ್ಲಿ ಹೋರಾಟ ಮಾಡುವಂಥದ್ದು ಏನಿದೆ?
  ನಿಜವಾದ ಪ್ರೀತಿ ಅನ್ನುವದು ಇಬ್ಬರಲ್ಲೂ ಇದ್ದಿದ್ದರೆ ಆ ಹುಡುಗಿಯನ್ನು ಆ ಹುಡುಗ ಅವಳ ಮೂಲಧರ್ಮದಲ್ಲೇ ಒಪ್ಪಬಹುದಿತ್ತು ಅಂತೆಲ್ಲ ಅನ್ನುವದೂ, ಸದರಿ ಹುಡುಗಿ ಮುಸ್ಲಿಂ ಧರ್ಮವನ್ನು ಸ್ವೀಕರಿಸುವದರೊಂದಿಗೆ ತನ್ನ ಅಸ್ಮಿತೆಯನ್ನು ಕಳೆದುಕೊಂಡಳು ಅಂತೆಲ್ಲ ಹಳಹಳಿಸುವದೂ- ಕೇವಲ ಚೌಕಟ್ಟಿನಾಚೆ ಇರುವವರ ಗೊಂದಲಗಳಷ್ಟೇ.
  ಇವತ್ತೇನೋ ಪ್ರೀತಿಯಲ್ಲಿ ಆಕೆ ಶರಣಾಗತಳಾಗಿದ್ದಾಳೆ. ಇದೇ ಪ್ರೀತಿ ಬದುಕಿನುದ್ದಕ್ಕೂ ಅವರಿಬ್ಬರಲ್ಲೂ ಉಳಿದುಕೊಂಡರೆ ಅದುವೇ ಪ್ರೀತಿಯ ಬೆಂಚ್ ಮಾರ್ಕ್. ಎಲ್ಲೋ ಹೆಚ್ಚುಕಮ್ಮಿ ಆದರೆ ಅನುಭವಿಸುವವರು ಅವರೇ ಅಲ್ಲವೇ? ಇಷ್ಟಕ್ಕೂ ಇಲ್ಲಿ ವರದಕ್ಷಿಣೆ, ಶೋಷಣೆ, ಪೋಷಣೆ ಅನ್ನುವಂಥದ್ದೇನೂ ಇಲ್ಲವೆಂದಾದಲ್ಲಿ ಇಲ್ಲಿ ನಮ್ಮದೇನು ಪಾತ್ರ?
  ಕೊನೆಯದಾಗಿ, ಅವಳು ಮಾಡಿದ್ದು ತಪ್ಪೇ ಅನ್ನುವದಾದರೆ ಈ ಲೋಕದಲ್ಲಿ ಎಲ್ಲರಿಗೂ ತಪ್ಪುಗಳನ್ನು ಮಾಡುವ ಅವಕಾಶಗಳಿರಬೇಕು. ತಪ್ಪು ಸರಿಪಡಿಸಿಕೊಳ್ಳುವ ಅವಕಾಶಗಳಿರಬೇಕು. ಮುಖ್ಯವಾಗಿ, ಮಾಡುವ ತಪ್ಪು ನಮ್ಮ ಸ್ವಂತದ್ದೇ ಆಗಿರಬೇಕು!
  -Rj

Leave a Reply