ಸುದ್ದಿಸಂತೆ: ಉತ್ತರಾಖಂಡದಲ್ಲಿ ಬಿಜೆಪಿಗೆ ಮುಖಭಂಗ, ಕೆಪಿಸಿಸಿಗೆ ದಲಿತನಾಗಿ ನನ್ನನ್ನೇ ಅಧ್ಯಕ್ಷನನ್ನಾಗಿಸಿ ಅಂದ್ರು ಮುನಿಯಪ್ಪ.. ನೀವ್ ತಿಳಿಬೇಕಾದ 8 ಸುದ್ದಿಗಳು

ರಾಷ್ಟ್ರೀಯ ನಾಟಕಶಾಲೆ, ಬೆಂಗಳೂರು ಕೇಂದ್ರದ ವತಿಯಿಂದ ಗುರುನಾನಕ ಭವನದಲ್ಲಿ ಏಪ್ರಿಲ್ 29ರವರೆಗೆ ದಕ್ಷಿಣ ಭಾರತ ರಂಗೋತ್ಸವ ನಡೀತಿದೆ. ಆ ವೇದಿಕೆಯ ನಾಟಕವೊಂದರ ಬಿಂಬ.

ಡಿಜಿಟಲ್ ಕನ್ನಡ ಟೀಮ್

ಉತ್ತರಾಖಂಡದಲ್ಲಿ ರಾಷ್ಟ್ರಪತಿ ಆಳ್ವಿಕೆ ತೆರವು, ಕೇಂದ್ರಕ್ಕೆ ಮುಖಭಂಗ

ಕಳೆದ ತಿಂಗಳು ಉತ್ತರಾಖಂಡದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಗೊಳಿಸಿದ್ದ ಕೇಂದ್ರ ಸರ್ಕಾರ ಈಗ ತೀವ್ರ ಮುಜುಗರಕ್ಕೆ ಒಳಗಾಗಿದೆ. ಕೇಂದ್ರದ ನಿರ್ಧಾರವನ್ನು ರಾಜ್ಯ ಹೈಕೋರ್ಟ್ ಗುರುವಾರ ತಿರಸ್ಕರಿಸಿದೆ. ಇದೇ ವೇಳೆ ಮುಖ್ಯಮಂತ್ರಿ ಹರೀಶ್ ರಾವತ್ ಅವರನ್ನು ಮುಖ್ಯಮಂತ್ರಿಯಾಗಿ ಮುಂದುವರಿಯಲು ತಿಳಿಸಿದ್ದು, ಏ.29ರಂದು ಬಹುಮತ ಸಾಬೀತುಪಡಿಸಲು ಸೂಚಿಸಿದೆ.

ಕಾಂಗ್ರೆಸ್ ಸರ್ಕಾರದ 9 ಶಾಸಕರು ಮುಖ್ಯಮಂತ್ರಿ ವಿರುದ್ಧ ಬಂಡಾಯ ಬಾವುಟ ಬೀಸಿದ ನಂತರ, ಅವರ ಸದಸ್ಯತ್ವವನ್ನು ಅನರ್ಹಗೊಳಿಸಲಾಯಿತು. ಈ ಬೆಳವಣಿಗೆಯ ನಂತರ ಬಹುಮತ ಸಾಬೀತು ಪಡಿಸುವ ಮುನ್ನಾ ದಿನ ಅಂದರೆ, ಮಾ.27ರಂದು ಕೇಂದ್ರ ಸರ್ಕಾರ ಅನುಚ್ಛೇದ 356ರ ಅನ್ವಯ ಉತ್ತರಾಖಂಡದಲ್ಲಿ ರಾಷ್ಟ್ರಪತಿ ಆಳ್ವಿಕೆಗೆ ಶಿಫಾರಸ್ಸು ನೀಡಿತ್ತು. ಇದಕ್ಕೆ ರಾಷ್ಟ್ರಪತಿಯವರೂ ಒಪ್ಪಿಗೆ ನೀಡಿದ್ದರು. ಕೇಂದ್ರದ ಈ ಧೋರಣೆ ವಿರುದ್ಧ ಮುಖ್ಯಮಂತ್ರಿ ಹರೀಶ್ ರಾವತ್ ನ್ಯಾಯಾಲಯದ ಮೆಟ್ಟಿಲೇರಿದ್ದರು.

ತೀರ್ಪಿನ ವೇಳೆ ಹಲವು ಅಂಶಗಳನ್ನು ಪ್ರಸ್ತಾಪಿಸಿದ ನ್ಯಾಯಾಲಯ, ‘ಉತ್ತರಾಖಂಡದಲ್ಲಿ ರಾಷ್ಟ್ರಪತಿ ಆಳ್ವಿಕೆಯನ್ನು ತಪ್ಪಾಗಿ ಹೇರಲಾಗಿದೆ. ರಾಷ್ಟ್ರಪತಿ ಆಳ್ವಿಕೆ ಅವಕಾಶವನ್ನು ಅಂತಿಮ ಪರಿಹಾರವಾಗಿ ಬಳಸಿಕೊಳ್ಳಬೇಕು. ಈ ರೀತಿಯಾಗಿ ಚುನಾಯಿತ ಸರ್ಕಾರವನ್ನು ವಜಾಗೊಳಿಸಿದರೆ, ಜನರ ಮನಸಲ್ಲಿ ನಂಬಿಕೆ ಕಳೆದುಕೊಳ್ಳುವಂತೆ ಮಾಡುತ್ತದೆ’ ಎಂದು ನ್ಯಾಯಾಲಯ ತಿಳಿಸಿದೆ.

‘ಈಗ ರಾಷ್ಟ್ರಪತಿ ಆಳ್ವಿಕೆ ಜಾರಿ ಮಾಡಿದ ನಂತರ 10-15 ದಿನಗಳ ನಂತರ ನಿಮಗೆ ಅನುಕೂಲವಾಗುವಂತೆ ಬೇರೊಬ್ಬರು ಅಧಿಕಾರಕ್ಕೆ ಬರಲು ಅವಕಾಶ ನೀಡುವುದಿಲ್ಲ ಎಂಬುದಕ್ಕೆ ಖಾತರಿ ಇಲ್ಲ. ಒಂದುವೇಳೆ ಇದಕ್ಕೆ ಅವಕಾಶ ನೀಡಿದರೆ, ಎಲ್ಲ ರಾಜ್ಯಗಳಲ್ಲೂ ಈ ಪದ್ಧತಿ ಜಾರಿಗೆ ಬರುತ್ತದೆ. ದೇಶದ ಅತ್ಯಂತ ಉನ್ನತ ಅಧಿಕಾರಿಯಾಗಿ ಭಾರತ ಸರ್ಕಾರ ಈ ರೀತಿಯಾಗಿ ವರ್ತಿಸಿರುವುದು ಕೋಪಕ್ಕಿಂತ ಹೆಚ್ಚು ಬೇಸರ ತಂದಿದೆ. ನ್ಯಾಯಾಲಯದ ಜತೆ ಈ ರೀತಿ ಆಟವಾಡಿದ್ದಾದರೂ ಏಕೆ’ ಎಂದು ನ್ಯಾಯಾಲಯ ಕೇಂದ್ರವನ್ನು ತರಾಟೆಗೆ ತೆಗೆದುಕೊಂಡಿದೆ.

ಹೈಕೋರ್ಟ್ ತೀರ್ಪಿಗೆ ಸಂತಸ ವ್ಯಕ್ತಪಡಿಸಿರುವ ಹರೀಶ್ ರಾವತ್, ಇದು ಪ್ರಜಾಪ್ರಭುತ್ವಕ್ಕೆ ಸಿಕ್ಕ ಗೆಲವು ಎಂದಿದ್ದಾರೆ. ಮತ್ತೊಂದೆಡೆ ಈ ತೀರ್ಪನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಲು ಕೇಂದ್ರ ನಿರ್ಧರಿಸಿದೆ.

ಈ ಬೆಳವಣಿಗೆ ನಂತರ ಟ್ವಿಟರ್ ಮೂಲಕ ಪ್ರತಿಕ್ರಿಯೆ ನೀಡಿರುವ ಬಿಜೆಪಿ ನಾಯಕ ಸುಬ್ರಮಣ್ಯಂ ಸ್ವಾಮಿ, ಸರ್ಕಾರದ ಎಜಿ ಮತ್ತು ಎಸ್ ಜಿಗಳ ವಿರುದ್ಧ ಕಿಡಿಕಾರಿದ್ದಾರೆ. ‘ಕೇಂದ್ರ ಸರ್ಕಾರ ಹೊಸ ಅಟಾರ್ನಿ ಜನರಲ್ ಮತ್ತು ಸೊಲಿಸಿಟರ್ ಜನರಲ್ ನೇಮಕ ಮಾಡುವ ಕಾಲ ಬಂದಿದೆ’ ಎಂದಿದ್ದಾರೆ.

ಇನ್ನು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಸಹ ಕೇಂದ್ರದ ವಿರುದ್ಧ ಹರಿಹಾಯ್ದಿದ್ದು, ‘ಮೋದಿ ಸರ್ಕಾರಕ್ಕೆ ಇದೊಂದು ದೊಡ್ಡ ಅವಮಾನ. ಕೇಂದ್ರ ಸರ್ಕಾರ ಪ್ರಜಾಪ್ರಭುತ್ವವನ್ನು ಗೌರವಿಸಿ, ರಾಜ್ಯ ಸರ್ಕಾರದ ವಿಷಯದಲ್ಲಿ ಹಸ್ತಕ್ಷೇಪ ಮಾಡುವುದನ್ನು ನಿಲ್ಲಿಸಬೇಕು’ ಎಂದು ಟ್ವೀಟ್ ಮಾಡಿದ್ದಾರೆ.

ದಲಿತರಿಗೆ ಕೆಪಿಸಿಸಿ ಅಧ್ಯಕ್ಷ ಪಟ್ಟದ ಕೂಗು

ಸದ್ಯ ಕರ್ನಾಟಕದಲ್ಲಿ ದಲಿತ ನಾಯಕರಿಗೆ ಮುಖ್ಯಮಂತ್ರಿ ಪಟ್ಟ ಕಟ್ಟಬೇಕು ಎಂಬ ಕೂಗು ಕೇಳಿಬರುತ್ತಿತ್ತು. ಈಗ ದಲಿತ ನಾಯಕ ಪರಮೇಶ್ವರ್ ಅವರು ತೆರವು ಮಾಡಲಿರುವ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೂ ದಲಿತರನ್ನೇ ಆಯ್ಕೆ ಮಾಡಬೇಕು ಎಂಬ ಮಾತು ಕೇಳಿ ಬಂದಿದೆ. ದಲಿತ ಸಮುದಾಯದ ತಮ್ಮನ್ನು ಈ ಸ್ಥಾನಕ್ಕೆ ನೇಮಕ ಮಾಡಬೇಕು ಎಂದು ಕೇಂದ್ರದ ಮಾಜಿ ಸಚಿವ ಕೆ.ಹೆಚ್.ಮುನಿಯಪ್ಪ ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ ಅವರಿಗೆ ಮನವಿ ಮಾಡಿಕೊಂಡಿದ್ದಾರೆ.

ದೆಹಲಿಯಲ್ಲಿ ಗುರುವಾರ ಪಕ್ಷದ ಅಧಿನಾಯಕಿಯನ್ನು ಭೇಟಿ ಮಾಡಿದ ಮುನಿಯಪ್ಪ ಅವರು, ಕರ್ನಾಟಕದಲ್ಲಿ ದಲಿತ ಸಮುದಾಯವೇ ಮೊದಲ ಸಾಲಿನಲ್ಲಿದೆ. ಈ ಸಮುದಾಯದವರಿಗೆ ಅಧಿಕಾರ ನೀಡಿದರೆ, ಪಕ್ಷಕ್ಕೆ ಬಲ ಬರುತ್ತದೆ. ಹಾಗಾಗಿ ರಾಜ್ಯ ನಾಯಕತ್ವ ಹೊಣೆಗಾರಿಕೆ ವಹಿಸಿದರೆ 2018ರ ವಿಧಾನ ಸಭಾ ಚುನಾವಣೆಯಲ್ಲಿ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುತ್ತೇನೆ ಎಂಬ ಭರವಸೆ ನೀಡಿದ್ದಾರೆ.

ಕಾರ್ಮಿಕರ ಪ್ರತಿಭಟನೆ ವೇಳೆ ಗಲಾಟೆ, ಸರ್ಕಾರದ ಕೃತ್ಯವಲ್ಲ: ಪರಮೇಶ್ವರ್

ಇತ್ತೀಚೆಗೆ ಬೆಂಗಳೂರಿನಲ್ಲಿ ಕೇಂದ್ರದ ಭವಿಷ್ಯ ನಿಧಿ ನೀತಿಯನ್ನು ವಿರೋಧಿಸಿ ಕಾರ್ಮಿಕರು ನಡೆಸಿದ ಹೋರಾಟದ ವೇಳೆ ನಡೆದ ಹಿಂಸಾಚಾರಕ್ಕೆ ಪೊಲೀಸ್ ಗುಪ್ತದಳ ಲೋಪ ಕಾರಣವಲ್ಲ,. ಸರ್ಕಾರಿ ಪ್ರಾಯೋಜಿತವೂ ಅಲ್ಲ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಗುರುವಾರ ಸ್ಪಷ್ಟನೆ ನೀಡಿದ್ದಾರೆ.

‘ಇದೊಂದು ಕಿಡಿಗೇಡಿಗಳು ಮತ್ತು ಸಮಾಜ ಘಾತುಕ ಶಕ್ತಿಗಳು ವ್ಯವಸ್ಥಿತವಾಗಿ ನಡೆಸುತ್ತಿರುವ ಸಂಚು. ಈ ಸಂಚು ಬಯಲು ಮಾಡುತ್ತೇವೆ ಎಂದು ಹೇಳಿದ್ದಾರೆ.

ಏಕಾಏಕಿ 2 ಲಕ್ಷ ಕಾರ್ಮಿಕರು ಬೀದಿಗಳಿದು ಹೋರಾಟ ನಡೆಸಿದ್ದಾರೆ. ಇಂತಹ ಸಂದರ್ಭದಲ್ಲಿ ದೊಡ್ಡ ಮಟ್ಟದ ಹಿಂಸಾಚಾರ ಹತ್ತಿಕ್ಕುವಲ್ಲಿ ಅತ್ಯಲ್ಪ ಪೊಲೀಸರು ಯಶಸ್ವಿಯಾಗಿದ್ದಾರೆ.

ಶಾಂತಿಯುತವಾಗಿ ನಡೆಯುತ್ತಿದ್ದ ಚಳವಳಿ  ಪ್ರಚೋದನಕಾರಿ ಹಾಗೂ ಹಿಂಸಾಚಾರಕ್ಕೆ ತಿರುಗಿಸಿದ ಘಟನೆ ಹಿಂದೆ ಸಮಾಜ ಘಾತುಕ ಶಕ್ತಿಗಳ ಕೈವಾಡ ಇದೆ. ಘಟನೆಯ ಸಂದರ್ಭದಲ್ಲಿ ಪೊಲೀಸರು ಮತ್ತು ಮಾಧ್ಯಮದವರು ತೆಗೆದಿರುವ ಛಾಯಾಚಿತ್ರಗಳನ್ನು ಆಧರಿಸಿ 249 ಮಂದಿಯನ್ನು ಬಂಧಿಸಲಾಗಿದೆ. ಮಾಧ್ಯಮದವರ ಮೇಲೆ ಹಲ್ಲೆ ಮಾಡಿದ ಪೊಲೀಸರ ಮೇಲೂ ಕ್ರಮ ಕೈಗೊಳ್ಳುತ್ತೇವೆ ಎಂದು ಗೃಹ ಸಚಿವರು ಭರವಸೆ ನೀಡಿದರು.

ಸಿದ್ದರಾಮಯ್ಯ ದ್ವೇಷದ ರಾಜಕಾರಣ: ಯಡಿಯೂರಪ್ಪ

ಅಧಿಕಾರದ ಆಸೆಯಿಂದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ದ್ವೇಷ ರಾಜಕಾರಣಕ್ಕೆ ಮುಂದಾಗಿದ್ದಾರೆಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಗುರುವಾರ ಕಿಡಿಕಾರಿದ್ದಾರೆ.

ರಾಚೇನಹಳ್ಳಿ ಡಿನೋಟಿಫಿಕೇಷನ್ ಪ್ರಕರಣವೂ ಸೇರಿದಂತೆ ಹದಿನೈದರಷ್ಟು ಪ್ರಕರಣಗಳನ್ನು ಹೈಕೋರ್ಟ್ ಈಗಾಗಲೇ ರದ್ದುಗೊಳಿಸಿ, ರಾಜ್ಯ ಹೈ ಕೋರ್ಟ್ ತೀರ್ಪು ನೀಡಿದ್ದರೂ, ಸರ್ಕಾರ ಅವುಗಳಿಗೆ ಜೀವ ತುಂಬಲು ಯತ್ನಿಸುತ್ತಿದೆ. ಈ ಮೂಲಕ ಕಾಂಗ್ರೆಸ್ ಸರ್ಕಾರ ದ್ವೇಷದ ಕೃತ್ಯ ನಡೆಸುತ್ತಿದೆ ಎಂದು ಹೇಳಿದ್ದಾರೆ.

ಹಳೇ ಪ್ರಕರಣಗಳಿಗೆ ಮರುಜೀವ ತುಂಬುವ ಮೂಲಕ ನನ್ನನ್ನು ಮುಗಿಸುವುದಾಗಿ ಅವರು ಭಾವಿಸಿದ್ದರೆ, ಅದು ಅವರ ಭ್ರಮೆ. ಈ ಪ್ರಕರಣಗಳನ್ನು ಅದು ಸುಪ್ರೀಂ ಕೋರ್ಟ್‍ನಲ್ಲಿ ಪ್ರಶ್ನಿಸಿದರೂ ಫಲಿತಾಂಶ ಏನೂ ಭಿನ್ನವಾಗಿರುವುದಿಲ್ಲ. ಹೀಗಿದ್ದರೂ ತಮ್ಮನ್ನು ಧೃತಿಗೆಡಿಸಲು ಈ ಪ್ರಯತ್ನ ಮಾಡುತ್ತಿದ್ದಾರೆ ಎಂದು ಯಡಿಯೂರಪ್ಪ ವ್ಯಂಗ್ಯವಾಡಿದರು.

ನ್ಯೂಯಾರ್ಕ್ ನಲ್ಲಿ ಮಲ್ಯ ಗೌಪ್ಯ ಆಸ್ತಿ ಪತ್ತೆ

ಉದ್ದೇಶಿತ ಸುಸ್ಥಿದಾರನ ಹಣೆಪಟ್ಟಿ ಹೊತ್ತು ದೇಶ ತೊರೆದಿರುವ ಉದ್ಯಮಿ ವಿಜಯ್ ಮಲ್ಯ ಸಮಯ ಪೂರ್ಣ ಪ್ರಮಾಣದಲ್ಲಿ ಹದಗೆಟ್ಟಿದೆ. ಇತ್ತೀಚೆಗಷ್ಟೇ ಮಲ್ಯ ವಿರುದ್ದ ಬಂಧನ ವಾರೆಂಟ್ ಜಾರಿಯಾಗಿತ್ತು. ಇದೀಗ ನ್ಯೂಯಾರ್ಕ್ ನ ಟ್ರಂಪ್ ಅಪಾರ್ಟ್ ಮೆಂಟ್ ನಲ್ಲಿ ಮೂರು ಐಶಾರಾಮಿ ಫ್ಲ್ಯಾಟ್ ಗಳನ್ನು ಮಲ್ಯ ಗೌಪ್ಯವಾಗಿ ಹೊಂದಿರುವುದು ಬೆಳಕಿಗೆ ಬಂದಿದೆ. ಭಾರತದಲ್ಲಿ ನೀಡಿದ್ದ ಆಸ್ತಿಗಳ ವಿವರದಲ್ಲಿ ಈ ಬಗ್ಗೆ ಯಾವುದೇ ಮಾಹಿತಿಯನ್ನು ನೀಡಿರಲಿಲ್ಲ ಎಂದು ಇಂಡಿಯಾ ಟುಡೇ ವರದಿ ಮಾಡಿದೆ.

ತ್ರಿಂಬಕೇಶ್ವರ ಗರ್ಭಗುಡಿ ಪ್ರವೇಶಿಸಿದ ಮಹಿಳಿಯರು

ತ್ರಿಂಬಕೇಶ್ವರ ದೇವಾಲಯದ ಗರ್ಭಗುಡಿಯನ್ನು ಮಹಿಳೆಯರು ಪ್ರವೇಶಿಸುವುದರ ಮೂಲಕ ಅನಾದಿ ಕಾಲದ ಅಪನಂಬಿಕೆಯೊಂದಕ್ಕೆ ಅಂತ್ಯ ಹಾಡಿದ್ದಾರೆ. ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ 12 ಜ್ಯೋರ್ತಿಲಿಂಗಗಳಲ್ಲಿ ಒಂದಾದ ಪುರಾತನ ತ್ರಿಂಬಕೇಶ್ವರ ದೇವಾಲಯದಲ್ಲಿ ಸುಮಾರು 500 ವರ್ಷಗಳಿಂದ ಮಹಿಳೆಯರಿಗೆ ಗರ್ಭಗುಡಿ ಪ್ರವೇಶ ನಿರ್ಬಂಧಿಸಿದ್ದರು. ಆದರೆ ಸ್ವರಾಜ್ಯ ಮಹಿಳಾ ಸಂಘಟನೆಯ ಕಾರ್ಯಕರ್ತರಾದ ವನಿತಾ ಗುಟ್ಟೆ, ಮಯೂರಿ ದೇಶಮಾನೆ ಮತ್ತು ಹೇಮ ಝಾ ಎಂಬುವರು ಗುರುವಾರ ಶಿವನ ಗರ್ಭಗುಡಿ ಪ್ರವೇಶಿಸಿ ಪೂಜೆ ಸಲ್ಲಿಸಿದ್ದಾರೆ.

ಮಹಿಳಾ ಹಕ್ಕುಗಳ ಹೊರಾಟಗಾರ್ತಿ ವನಿತಾ ಗುಟ್ಟೆ ಸೇರಿ ಇನ್ನಿಬ್ಬರು ಬೆಂಬಲಿಗರ ಮೇಲೆ ಬುಧವಾರ ಹಳ್ಳಿಯವರು ದಾಳಿ ನಡೆಸಿದ್ದರು. ಆನಂತರ ದೇವಸ್ಥಾನದ ಬಳಿ ಇವರನ್ನು ತಡೆದು ಗರ್ಭಗುಡಿ ಪ್ರವೇಶಕ್ಕೆ ತಡೆ ಒಡ್ಡಿದ್ದರು. ಈ ಹಿನ್ನೆಲೆಯಲ್ಲಿ ಗುಟ್ಟೆ ಅವರು ಸ್ಥಳಿಯ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಇದರ ಆಧಾರದಲ್ಲಿ ಇಲ್ಲಿನ ನಾಲ್ಕು ಮೇಯರ್ ಗಳು ಮತ್ತು 200 ಜನ ಹಳ್ಳಿಯವರ ವಿರುದ್ಧ ಎಫ್ ಐ ಆರ್ ದಾಖಲಾಗಿದೆ. ಹಳ್ಳಿಗರ ಮತ್ತು ಗರ್ಭಗುಡಿ ಪ್ರವೇಶಕ್ಕೆ ಯತ್ನಿಸಿದ ಮಹಿಳಾ ಭಕ್ತರ ನಡುವಿನ ವಾದ ವಿವಾದ ನಂತರ, ಬೆಳಗ್ಗೆ 6 ರಿಂದ 7 ರವೆಗೆ ಮಾತ್ರ ಗರ್ಭಗುಡಿ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಯಿತು. ಆದರೆ ಮಹಿಳಾ ಭಕ್ತರು ಪೊಲೀಸರ ಬಂದೊಬಸ್ತಿನಲ್ಲಿ ಬೆಳಗ್ಗೆ 5.30 ಪ್ರವೇಶಿಸಲು ಪ್ರಯತ್ನಿಸಿದಾಗ ಮತ್ತೆ ಗಲಾಟೆ ಪ್ರಾರಂಭವಾಯಿತು. ಈ ಸುದ್ದಿ ಹಳ್ಳಿಗೆಲ್ಲ ಹರಡುತ್ತಿದ್ದಂತೆ ಪ್ರತಿಭಟನೆ ಪ್ರಾರಂಭವಾಗಿ, ತ್ರಿಂಬಕೇಶ್ವರ ಬಂದ್ ಗೆ ಕರೆ ನೀಡಿದ್ದರು.

2018 ಕ್ಕೆ ಇ ತ್ಯಾಜ್ಯ 30 ಲಕ್ಷ ಮೆಟ್ರಿಕ್ ಟನ್ ಗೆ ಏರಿಕೆ: ಬೆಂಗಳೂರಿಗೆ 3 ನೇ ಸ್ಥಾನ!

ದೇಶದಲ್ಲಿ ಎಲೆಕ್ಟ್ರಾನಿಕ್ ವಸ್ತುಗಳ ಇ ತ್ಯಾಜ್ಯ ಉತ್ಪಾದನಾ ಪ್ರಮಾಣ ಪ್ರತಿ ವರ್ಷ 18.5 ಮೆಟ್ರಿಕ್ ಲಕ್ಷ ಟನ್! ಇದರಲ್ಲಿ ಮುಂಬೈ ಮತ್ತು ರಾಷ್ಟ್ರದ ರಾಜಧಾನಿ ದೆಹಲಿಯದ್ದೇ ದೊಡ್ಡ ಪ್ರಮಾಣದ ಕೊಡುಗೆ ಇದ್ದು, ಐಟಿ ನಗರ ಬೆಂಗಳೂರು 3ನೇ ಸ್ಥಾನದಲ್ಲಿದೆ ಎಂದು ಅಸೋಚೋಮ್ ಮತ್ತು ಫ್ರೋಸ್ಟ್ ಮತ್ತು ಸುಲ್ಲುವನ್ ಸಂಸ್ಥೆಗಳ ಜಂಟಿ ಅಧ್ಯಯನ ಬಹಿರಂಗ ಪಡಿಸಿದೆ. ಮತ್ತೊಂದು ಆಘಾತಕಾರಿ ವಿಷಯವೆಂದರೆ 2018 ರ ವೇಳೆಗೆ ಇದರ ಪ್ರಮಾಣ 30 ಲಕ್ಷ ಮೆಟ್ರಿಕ್ ಟನ್ ತಲುಪಲಿದೆ ಎಂಬ ಅಂದಾಜೂ ಹೊರಬಿದ್ದಿದೆ. ಮುಂಬೈ 1.20 ಲಕ್ಷ ಮೆಟ್ರಿಕ್ ಟನ್ ಇ ತ್ಯಾಜ್ಯ ಉತ್ಪಾದಿಸಿ ಮೊದಲ ಸ್ಥಾನ ಪಡೆದರೆ ನಂತರದಲ್ಲಿ ದೆಹಲಿ-ಎನ್ ಸಿ ಆರ್ 98 ಸಾವಿರ, ಬೆಂಗಳೂರು 92 ಸಾವಿರ, ಚೆನೈ 67 ಸಾವಿರ, ಕೊಲ್ಕತ್ತಾ 55 ಸಾವಿರ, ಅಹಮದಾಬಾದ್ 36 ಸಾವಿರ, ಹೈದರಾಬಾದ್ 32 ಸಾವಿರ, ಪುಣೆ 26 ಸಾವಿರ ಮೆಟ್ರಿಕ್ ಟನ್ ಇ ತ್ಯಾಜ್ಯ ಉತ್ಪಾದಿಸುವ ಟಾಪ್ ನಗರಗಳಾಗಿವೆ.

ಇನ್ನುಳಿದಂತೆ ನೀವು ತಿಳಿಯಬೇಕಿರೋ ಪ್ರಮುಖ ಸುದ್ದಿ ಸಾಲುಗಳು..

  • ಫ್ರಾನ್ಸ್ ಜತೆಗಿನ ರಾಫೆಲ್ ಒಪ್ಪಂದ 8.8 ಬಿಲಿಯನ್ ಡಾಲರ್ (₹ 59,000 ಕೋಟಿ) ಅಂತಿಮವಾಗಿದ್ದು, ಮೋದಿ ಸರ್ಕಾರ ₹ 21 ಸಾವಿರ ಕೋಟಿ ಉಳಿಸಿದೆ ಎಂದು ಬಿಜೆಪಿ ಬುಧವಾರ ಟ್ವೀಟ್ ಮಾಡಿತ್ತು. ಇದರ ಬೆನ್ನಲ್ಲೇ ಕೇಂದ್ರ ರಕ್ಷಣಾ ಸಚಿವ ಮನೋಹರ್ ಪರಿಕರ್ ಗುರುವಾರ ಸ್ಪಷ್ಟನೆ ನೀಡಿ, ಈ ಒಪ್ಪಂದ ಉತ್ತಮ ಹಂತದಲ್ಲಿದ್ದು, ಇನ್ನು ಅಂತಿಮವಾಗಿಲ್ಲ ಎಂದು ಟ್ವೀಟ್ ಮೂಲಕ ತಿಳಿಸಿದ್ದಾರೆ.
  • ವೆಸ್ಟ್ ಇಂಡೀಸ್ ಖ್ಯಾತ ಕ್ರಿಕೆಟಿಗ ಕ್ರಿಸ್ ಗೇಲ್ ದಂಪತಿಗೆ ಹೆಣ್ಣು ಮಗು ಜನಿಸಿದ್ದು, ಈ ಮಗುವಿಗೆ ‘ಬ್ಲಷ್’ ಎಂದು ಹೆಸರಿಡಲಾಗಿದೆ. ಇದೇ ವರ್ಷ ಆಸ್ಟ್ರೇಲಿಯಾದ ಬಿಗ್ ಬ್ಯಾಷ್ ಟಿ20 ಲೀಗ್ ನಲ್ಲಿ ನಿರೂಪಕಿ ಜತೆ ಅಸಭ್ಯ ವರ್ತನೆಯಿಂದ ವಿವಾದಕ್ಕೆ ಸಿಲುಕಿದ್ದರು ಕ್ರಿಸ್ ಗೇಲ್. ಈ ವಿವಾದಕ್ಕೆ ಕಾರಣವಾಗಿದ್ದ ‘ಡೊಂಟ್ ಬ್ಲಷ್ ಬೇಬಿ’ ಎಂಬ ಮಾತನ್ನೇ ಆಧರಿಸಿ, ಗೇಲ್ ತನ್ನ ಮಗುವಿಗೆ ಹೆಸರಿಟ್ಟಿದ್ದಾರೆ.
  • ಇದೇ ವರ್ಷ ಭಾರತ ಕ್ರಿಕೆಟ್ ತಂಡ ನ್ಯೂಜಿಲೆಂಡ್ ವಿರುದ್ಧ ಹೊನಲು ಬೆಳಕಿನ ಟೆಸ್ಟ್ ಪಂದ್ಯವನ್ನಾಡಲು ನಿರ್ಧರಿಸಿರುವುದಾಗಿ ಬಿಸಿಸಿಐ ಕಾರ್ಯದರ್ಶಿ ಅನುರಾಗ್ ಠಾಕೂರ್ ತಿಳಿಸಿದ್ದಾರೆ. ಇದೇ ಮೊದಲ ಬಾರಿಗೆ ಭಾರತ ಹೊನಲು ಬೆಳಕಿನ ಪಂದ್ಯವನ್ನಾಡಲಿದ್ದು, ಈ ಪಂದ್ಯದಲ್ಲೂ ಪಿಂಕ್ ಬಣ್ಣದ ಚೆಂಡನ್ನು ಬಳಸುವುದಾಗಿ ತಿಳಿಸಿದ್ದಾರೆ.

Leave a Reply