ಹೆಚ್ಚುತ್ತಿರುವ ದಲಿತ ಮುಖ್ಯಮಂತ್ರಿ ಬೇಡಿಕೆ, ಅದನ್ನು ಹತ್ತಿಕ್ಕುವುದಕ್ಕೆ ನಡೆಯುತಿದೆ ಏನೆಲ್ಲ ತಂತ್ರಗಾರಿಕೆ!

ಡಿಜಿಟಲ್ ಕನ್ನಡ ವಿಶೇಷ

ಕರ್ನಾಟಕದ ಜನಸಂಖ್ಯೆಯಲ್ಲಿ ಪರಿಶಿಷ್ಟ ಸಮುದಾಯ ನಂಬರ್ ವನ್ ಎಂಬ ಜಾತಿಗಣತಿ ವರದಿ ಬೆನ್ನಲ್ಲೇ ನಿರಂತರ ಪ್ರತಿಧ್ವನಿಸುತ್ತಿರುವ ‘ದಲಿತ ಮುಖ್ಯಮಂತ್ರಿ’ ಕೂಗಿನಲ್ಲಿ ಸಿದ್ದರಾಮಯ್ಯ ಪದವಿ ಪಲ್ಲಟದ ರಾಗ ಹೊಮ್ಮುತ್ತಿದೆ.

ಸಾಕಷ್ಟು ವಿವಾದಗಳ ಜತೆಗೆ ಹೈಕಮಾಂಡ್ ವಕ್ರದೃಷ್ಟಿಯನ್ನೂ ಮೈಗೆ ಸುತ್ತಿಕೊಂಡಿರುವ ಸಿದ್ದರಾಮಯ್ಯ ಅವರನ್ನು ಹಣಿಯಲು ಇದೇ ಸಕಾಲವೆಂದು ರಾಜ್ಯದ ಮೂಲ ಕಾಂಗ್ರೆಸ್ ನಾಯಕರು ಭಾವಿಸಿರುವುದು, ಅವರು ಸರದಿ ಪ್ರಕಾರ ನೀಡುತ್ತಿರುವ ದಲಿತ ಮುಖ್ಯಮಂತ್ರಿ ಪರ ಹೇಳಿಕೆಯಲ್ಲಿ ಬಿಂಬಿತವಾಗುತ್ತಿದೆ. ಬರೀ ದಲಿತ ಮುಖಂಡರಷ್ಟೇ ಅಲ್ಲದೇ ಅನ್ಯ ವರ್ಗದ ನಾಯಕರೂ ಈ ‘ಧ್ವನಿ ಸಂಯೋಜನೆ’ಯಲ್ಲಿ ಒಗ್ಗೂಡಿರುವುದು ಗಮನಾರ್ಹ ಬೆಳವಣಿಗೆ.

ಹಾಗೆಂದು ಸಿದ್ದರಾಮಯ್ಯನವರೇನೂ ಸುಮ್ಮನೆ ಕುಳಿತಿಲ್ಲ. ತಮ್ಮ ಮೇಲೆ ನಿತ್ಯಪೂಜೆ ಮಾದರಿಯಲ್ಲಿ ಬರುತ್ತಿರುವ ಆಪಾದನೆಗಳಿಗೆ ತಿರುಮಂತ್ರ ಹೇಳುವ ತಂತ್ರಗಾರಿಕೆಯಲ್ಲಿ ಅವರೂ ನಿರತರಗಿದ್ದು, ಕಾಂಗ್ರೆಸ್ ಒಳಗುದಿ ರಾಜಕೀಯ ಪಡಸಾಲೆಯ ನಾನಾ ಕೋನದ ಚರ್ಚಾ ವಸ್ತುವಾಗಿದೆ.

ಸಿದ್ದರಾಮಯ್ಯ ಪುತ್ರ ಡಾ. ಯತೀಂದ್ರ ಲ್ಯಾಬ್ ವಿವಾದ ಕುರಿತು ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ವರದಿ ಕೊಟ್ಟು ಮರಳುತ್ತಿದ್ದಂತೆ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಡಾ. ಜಿ. ಪರಮೇಶ್ವರ ಅವರು ‘ದಲಿತರೇಕೆ ಸಿಎಂ ಆಗಬಾರದು’ ಎಂದು ಪ್ರಶ್ನೆ ಮಾಡಿದ್ದಕ್ಕೂ ಜಾತಿ ಗಣತಿಯಲ್ಲಿ ಪರಿಶಿಷ್ಟರು ಮೇಲ್ತುದಿಗೆ ಏರಿರುವುದಕ್ಕೂ ಕಾಕತಾಳೀಯ ಮೀರಿದ ಸಂಬಂಧವಿದೆ. ಅದರಲ್ಲಿ ರಾಜಕೀಯ ಲೆಕ್ಕಾಚಾರವಿದೆ.  ಏಕೆಂದರೆ ಪರಮೇಶ್ವರ್ ಊದಿದ ದಲಿತ ಸಿಎಂ ಪುಂಗಿಯಲ್ಲಿ ಉಳಿದ ನಾಯಕರ ಸ್ವರವೂ ಸೇರಿಕೊಂಡಿರುವುದರಿಂದ ಸಿದ್ದರಾಮಯ್ಯನವರ ಗಾದಿಯೇ ಹಾವಿನ ಹೆಡೆಯಂತಾಡುತ್ತಿದೆ.

ಯಾವುದೇ ಸರಕಾರವಿರಲಿ, ಯಾವುದೇ ಮುಖ್ಯಮಂತ್ರಿ ಇರಲಿ ಕಾರ್ಯವೈಖರಿ ನಿಗಾಕ್ಕೊಂದು ಕಾಲಮಿತಿಯ ಚೌಕಟ್ಟಿರುತ್ತದೆ. ಅಧಿಕಾರದ ಆರಂಭದಿಂದ ಈ ಚೌಕಟ್ಟಿನ ಅವಧಿಯವರೆಗೆ ಆಡಳಿತದಲ್ಲಿ ಕಂಡುಬರುವ ಲೋಪದೋಷಗಳಿಗೆ ರಿಯಾಯಿತಿ, ವಿನಾಯಿತಿ, ಸಮರ್ಥನೆ ಹಾಗೂ ಕಾದುನೋಡುವ ಅವಕಾಶವಿರುತ್ತದೆ. ‘ಈಗಿನ್ನೂ ಆಳ್ವಿಕೆ ಶುರುವಾಗಿದೆ, ಇನ್ನು ಸ್ವಲ್ಪ ದಿನ ನೋಡೋಣ.. ಇವತ್ತು ಸರಿಯಾಗಬಹುದು, ನಾಳೆ ಸರಿ ಹೋಗಬಹುದು’ ಎಂಬ ಸಹಜ ತಾಳ್ಮೆ ಈ ಅವಕಾಶದ ಪರಿಧಿಯನ್ನಾಳುತ್ತದೆ. ಆದರೆ ಒಮ್ಮೆ ಈ ಅವಧಿ ಮುಗಿದ ನಂತರ ಒಂದೊಂದು ಸಣ್ಣಪುಟ್ಟ ಲೋಪವೂ ಹಿಂದೆ ಮಾಡಿದ್ದ ತಪ್ಪುಗಳೆಲ್ಲವನ್ನೂ ಜಗ್ಗಿಸೆಳೆದು ಸರದಿಯಲ್ಲಿ ನಿಲ್ಲಿಸಿಕೊಂಡು ಅಧಿಕಾರ ಎಂಬುದನ್ನು ಪತನದ ಕೂಪದತ್ತ ದೂಡುತ್ತದೆ. ಈಗ ಮೂರು ವರ್ಷ ಅಧಿಕಾರ ಪೂರೈಸುತ್ತಿರುವ ಸಿದ್ದರಾಮಯ್ಯನವರ ವಿಚಾರದಲ್ಲಿ ಆಗುತ್ತಿರುವುದೂ ಇದೇ.

ಹೆಬ್ಬಾಳ ಮರುಚುನಾವಣೆ ಸಂದರ್ಭ ಸಿದ್ದರಾಮಯ್ಯನವರು ಮುನ್ನಲೆಗೆ ತಂದಿದ್ದ ಅಭ್ಯರ್ಥಿಯನ್ನು ಹೈಕಮಾಂಡ್ ನಿಷ್ಕರುಣೆಯಿಂದ ಬದಲಿಸಿದಾಗಲೇ ರಿಯಾಯಿತಿಯ ಕಾಲಮಿತಿ ಮೀರಿದೆ ಎಂಬುದನ್ನು ಶೃತಪಡಿಸಿತ್ತು. ಉಡುಗೊರೆ ವಾಚು ಸಿದ್ದರಾಮಯ್ಯನವರ ಕೈಜಾರಿ ಸಂಪುಟ ಸಭಾಂಗಣದ ಶೋಕೇಸ್ ಸೇರಿದಾಗ ಅದು ಮತ್ತಷ್ಟು ದೃಢಪಟ್ಟಿತ್ತು. ಇದೀಗ ಹೈಕಮಾಂಡ್ ಸೂಚನೆಗೆ ಮಣಿದು ಮುಖ್ಯಮಂತ್ರಿ ಪುತ್ರ ಡಾ. ಯತೀಂದ್ರ ಮ್ಯಾಟ್ರಿಕ್ಸ್ ಇಮೇಜಿಂಗ್ ಸಂಸ್ಥೆ ನಿರ್ದೇಶಕ ಸ್ಥಾನಕ್ಕೆ ರಾಜೀನಾಮೆ ಕೊಡಬೇಕಾಗಿ ಬಂದದ್ದೂ ಸಿದ್ದರಾಮಯ್ಯ ಪಕ್ಷದ ಆರಾಮ ವಲಯದಿಂದ ಹೊರಗೆ ನಿಂತಿದ್ದಾರೆ ಎಂಬುದರ ಧ್ಯೋತಕ. ಇದೆಲ್ಲವನ್ನೂ ಅಳೆದು-ತೂಗಿ ನೋಡಿದ ನಂತರವೇ ದಲಿತ ಮುಖ್ಯಮಂತ್ರಿ ಬೇಡಿಕೆ ರೈಲ್ವೆ ಬೋಗಿಗಳಂತೆ ಸರದಿಯಲ್ಲಿ ಬರುತ್ತಿವೆ.

ಹೌದು ಜಾತಿ ಗಣತಿ ವರದಿ ಸೋರಿಕೆ ಮರುದಿನವೇ ದಲಿತರು ಸಿಎಂ ಆಗಲು ಕಾಲ ಕೂಡಿ ಬಂದಿದೆ ಎಂದು ಕೇಂದ್ರದ ಮಾಜಿ ಸಚಿವ ಕೆ.ಎಚ್. ಮುನಿಯಪ್ಪ ಹೇಳಿದ್ದಕ್ಕೆ ಪರೋಕ್ಷ ಧ್ವನಿಗೂಡಿಸಿದ್ದ ಪರಮೇಶ್ವರ, ನಂತರ ಅಂಬೇಡ್ಕರ್ ಜನ್ಮ ದಿನಾಚರಣೆಯಲ್ಲಿ ದಲಿತರೇಕೆ ಸಿಎಂ ಆಗಬಾರದು ಎಂದು ನೇರವಾಗಿ ಪ್ರಶ್ನಿಸಿದ್ದರು. ಅದಾದ ನಂತರ ಸಚಿವರಾದ ಶ್ರೀನಿವಾಸ ಪ್ರಸಾದ್, ದಿನೇಶ್ ಗುಂಡುರಾವ್, ಹಿರಿ ತಲೆಗಳಾದ ಆಸ್ಕರ್ ಫರ್ನಾಂಡಿಸ್, ಜನಾರ್ದನ ಪೂಜಾರಿ, ಎಂ.ವಿ ರಾಜಶೇಖರನ್, ಧರ್ಮಸಿಂಗ್ ಕೂಡ ಇದಕ್ಕೆ ಒತ್ತಾಸೆ ನೀಡಿದ್ದಾರೆ. ಎಂ.ವಿ. ರಾಜಶೇಖರನ್ ಅವರಂತೂ ಮಲ್ಲಿಕಾರ್ಜುನ ಖರ್ಗೆ ಹಾಗೂ ಪರಮೇಶ್ವರ್ ಯಾವತ್ತೋ ಸಿಎಂ ಆಗಬೇಕಿತ್ತು ಎಂದು ಹೆಸರೇಳಿಯೇ ಬಾಂಬ್ ಸಿಡಿಸಿದ್ದಾರೆ. ಹೀಗೆ ಹೇಳುತ್ತಿರುವವರೆಲ್ಲರೂ ಕಾಂಗ್ರೆಸ್ಸಿನ ಮೂಲ ನಿವಾಸಿಗಳು. ಸಿದ್ದರಾಮಯ್ಯನವರು ಸಿಎಂ ಆದಾಗಿನಿಂದಲೂ ತಿರಸ್ಕಾರಕ್ಕೆ ಒಳಗಾದ ಮನೋಭಾವದಿಂದ ಬಳಲುತ್ತಿರುವವರು. ಇವರೆಲ್ಲರ ಬೇಡಿಕೆ ಹಿಂದೆ ಮುಖ್ಯಮಂತ್ರಿ ಬದಲಾಗಬೇಕು ಎಂಬುದು ಧ್ವನಿತವಾಗುತ್ತಿದೆ. ಅದೇ ಕಾಲಕ್ಕೆ ಲೋಕಸಭೆಯಲ್ಲಿ ಪಕ್ಷದ ನಾಯಕರಾಗಿರುವ ಮಲ್ಲಿಕಾರ್ಜುನ ಖರ್ಗೆ ಅವರನ್ನು ಈ ಜಾಗದಲ್ಲಿ ಪ್ರತಿಷ್ಠಾಪನೆ ಮಾಡಲು ಪ್ರೇರೇಪಿಸಬೇಕು ಎಂಬ ಆಶಯವಿದೆ. ಏಕೆಂದರೆ ಆ ಪದವಿಗೆ ತೂಗುವ ದಲಿತ ಸಮುದಾಯದ ಸಮರ್ಥ ನಾಯಕ ಸದ್ಯಕ್ಕೆ ಅವರೊಬ್ಬರೇ. ಈ ಬೇಡಿಕೆ ಹಿಂದೆ ಸ್ವಪ್ರೇರಣೆ ಇದೆಯೋ ಅಥವಾ ಅನ್ಯಪ್ರೇರಣೆ ಕೆಲಸ ಮಾಡುತ್ತಿದೆಯೋ ಕೌತುಕದ ವಿಚಾರ. ದೇಶದಲ್ಲಿ ಕಾಂಗ್ರೆಸ್ ಅಧಿಕಾರ ಉಳಿಸಿಕೊಂಡಿರುವ ಕೇವಲ ಮೂರು ರಾಜ್ಯಗಳ ಪೈಕಿ ಕರ್ನಾಟಕವೂ ಒಂದು. ಇಂಥ ಹೇಳಿಕೆಗಳಿಂದ ಪಕ್ಷದಲ್ಲಿ ಗೊಂದಲ ಉಂಟಾಗುತ್ತದೆ, ವರ್ಚಸ್ಸಿನ ಮೇಲೆ ಪರಿಣಾಮ ಬೀರುತ್ತದೆ, ವರಿಷ್ಠರ ಕೆಂಗಣ್ಣಿಗೆ ಗುರಿ ಆಗಬೇಕಾಗುತ್ತದೆ ಎಂಬುದು ಅವರಿಗೆ ತಿಳಿಯದ ವಿಷಯವೇನಲ್ಲ. ಹೀಗಿದ್ದರೂ ಇವೆರಲ್ಲ ಬಹಿರಂಗವಾಗಿಯೇ ಸಿಎಂ ಬದಲಾವಣೆ ಅರ್ಥದ ಹೇಳಿಕೆ ನೀಡುತ್ತಿದ್ದಾರೆಂದರೇ, ಇದರ ಹಿಂದೆ ಬೇರೇನೋ ತಂತ್ರ ಇರಬೇಕು, ಆ ತಂತ್ರ ಹಿಂದೆ ಇನ್ಯಾರದೋ ಕೈವಾಡ ಇರಬೇಕು ಎಂದೇ ಅರ್ಥ. ಅದು ಇಲ್ಲಿಯದೋ, ದಿಲ್ಲಿಯದೋ ಎಂಬುದು ಕಾಲ ಬಹಿರಂಗಪಡಿಸಬೇಕಾದ ಗುಟ್ಟು.

ಇಲ್ಲಿ ಇನ್ನೊಂದು ವಿಚಾರವಿದೆ. ತಂತ್ರಕ್ಕೆ ಪ್ರತಿತಂತ್ರ ರಾಜಕೀಯದ ಸಹಜ ಧರ್ಮ. ನಿರಂತರ ದಲಿತ ಸಿಎಂ ಕೂಗಿಗೂ, ಗಾರ್ಮೆಂಟ್ಸ್ ಕಾರ್ಮಿಕರ ದಿಢೀರ್ ಪ್ರತಿಭಟನೆಗೂ ತಳಕು ಹಾಕಲಾಗುತ್ತಿದೆ. ಪಿಎಫ್ ಸಂಬಂಧ ಕೇಂದ್ರ ಸರಕಾರದ ಅದೇಶ ಹೊರಬಿದ್ದ ಎರಡು ತಿಂಗಳ ನಂತರ ಅದೂ ಕರ್ನಾಟಕದಲ್ಲಿ ಮಾತ್ರ ಇದ್ದಕ್ಕಿದ್ದಂತೆ ಹಿಂಸಾತ್ಮಕ ಪ್ರತಿಭಟನೆ ಮೈದಳೆದುದರ ಹಿಂದೆ ಎರಡು ಕಾರ್ಮಿಕ ಸಂಘಟನೆಗಳ ನಡುವಣ ಸಂಘರ್ಷ ಮೀರಿಸಿದ ರಾಜಕೀಯ ಹುನ್ನಾರ ಅಡಗಿದೆ. ದಲಿತ ಸಿಎಂ ಕೂಗು ಕೇಂದ್ರೀಕರಿಸುತ್ತಿರುವ ಜನರ ಗಮನ ಬೇರೆಡೆ ಸೆಳೆಯಲು, ರಾಜಕೀಯ ವಿಷಯಾಂತರ ನಿಮಿತ್ತ ಈ ಹಠಾತ್ ಪ್ರತಿಭಟನೆ ಪ್ರಾಯೋಜಿಸಲಾಗಿದೆ. ಒಂದೆಡೆ ಕೇಂದ್ರ ಸರಕಾರದ ವಿರುದ್ಧ ಹೋರಾಟ ಸಂಘಟಿಸಿದ ಸಂದೇಶವನ್ನು ಹೈಕಮಾಂಡ್ ಗೆ ರವಾನಿಸಿದಂತೆಯೂ ಆಯಿತು, ಇನ್ನೊಂದೆಡೆ ದಲಿತ ಸಿಎಂ ವಾದ ಪ್ರತಿಪಾದಿಸುತ್ತಿರುವ ಗೃಹ ಸಚಿವ ಜಿ. ಪರಮೇಶ್ವರ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವಲ್ಲಿ ಅಸಮರ್ಥರಿದ್ದಾರೆ ಎಂಬ ಟಾಂಗ್ ನೀಡಿದಂತೆಯೂ ಆಯಿತು. ಒಂದೇ ಕಲ್ಲಿನಲ್ಲಿ ಎರಡು ಹಕ್ಕಿಗಳನ್ನು ಹೊಡೆದುರುಳಿಸುವ ತಂತ್ರಗಾರಿಕೆ ಇಲ್ಲಿದೆ ಎಂಬ ಮಾತುಗಳೂ ಕೇಳಿಬಂದಿವೆ. ರಾಜಕೀಯದಲ್ಲಿ ಇವೆಲ್ಲ ಇದ್ದದ್ದೇ. ಒಂದು ನಡೆಗೆ ಮತ್ತೊಂದು ನಡೆಯ ತಡೆ.

ದಲಿತ ಸಿಎಂ ಕೂಗಿಗೆ ಮತ್ತೊಂದು ಅಸ್ತ್ರವನ್ನು ಸಿದ್ದರಾಮಯ್ಯ ಪ್ರಯೋಗಿಸಿದ್ದಾರೆ. ಲೋಕೋಪಯೋಗಿ, ಪಂಚಾಯಿತಿರಾಜ್ ಸೇರಿದಂತೆ ಎಲ್ಲ ಇಲಾಖೆಗಳಲ್ಲಿ 50 ಲಕ್ಷ ರುಪಾಯಿವರೆಗಿನ ಕಾಮಗಾರಿ ಗುತ್ತಿಗೆಯನ್ನು ದಲಿತ ಸಮುದಾಯದವರಿಗೆ ಟೆಂಡರ್ ರಹಿತವಾಗಿ ನೀಡುವ ಮಹತ್ವದ ನಿರ್ಧಾರವನ್ನು ಸಂಪುಟಸಭೆ ನಿನ್ನೆಯಷ್ಟೇ ಕೈಗೊಂಡಿದೆ. ದಲಿತರಿಗೆ ಟೆಂಡರ್ ಮೀಸಲು ಭಾಗ್ಯ ಯೋಜನೆ ಹಿಂದೆ ಸರಕಾರ ದಲಿತರ ಪರವಾಗಿದೆ ಎಂಬ ಸಂದೇಶ ರವಾನೆ ತಂತ್ರ ಅಡಗಿದೆ. ಮೊದಲ ಬಜೆಟ್ ನಲ್ಲೇ ಈ ಬಗ್ಗೆ ಭರವಸೆ ನೀಡಲಾಗಿತ್ತಾದರೂ ಮೂರು ವರ್ಷಗಳ ನಂತರ ಕೈಗೊಂಡಿರುವ ನಿರ್ಧಾರದ ಹಿಂದೆ ‘ರಾಜಕೀಯ ಸಮಯ ಸಾಧನೆ’ ಢಾಳಾಗಿ ಗೋಚರಿಸುತ್ತಿದೆ.

Leave a Reply