ಇಂದು ಭೂದಿನ: ಕ್ಷಮಯಾ ಧರಿತ್ರೀ ಎಂದು ಹೊಗಳಿದ್ದು ಸಾಕು, ಪಾಪ ತೊಳೆಯಲು ಒಂದಾದರೂ ಗಿಡ ನೆಡಬೇಕು

author-ananthramuಸಾಲು ಮರದ ತಿಮ್ಮಕ್ಕನ ನೆನಪಾಗುತ್ತಿದೆ. ನಿಜ, ಆಕೆಗೆ ಕಾರ್ಬನ್ ಡೈ ಆಕ್ಸೈಡ್ ಎಂದರೆ ಗೊತ್ತಿಲ್ಲ. ಆಕ್ಸಿಜನ್ ಗೊತ್ತಿಲ್ಲ, ಆಕ್ಸಿಜನ್ ಮತ್ತು ಹೈಡ್ರೋಜನ್ ಸೇರಿ ನೀರಾಗುತ್ತದೆ ಎಂಬುದೂ ಗೊತ್ತಿಲ್ಲ. ಏನಂತೆ, ಮಾಗಡಿ ತಾಲ್ಲೂಕಿನ ಹುಲಿಕಲ್-ಕುದೂರು ನಡುವೆ ನಾಲ್ಕು ಕಿಲೋ ಮೀಟರ್ ಉದ್ದಕ್ಕೂ ಆಲದ ಮರ ಬೆಳೆಸಿದಳು, ಅವೇ ನನ್ನ ಮಕ್ಕಳು ಎಂದಳು. ಯಾಕೆ ತಾಯಿ ಮರ ಬೆಳೆಸಿದೆ ಎಂದರೆ ನೆರಳು ಬೇಡವೇ? ಎಂದು ಮರುಪ್ರಶ್ನಿಸುತ್ತಾಳೆ. ನಾಡೋಜ ಪ್ರಶಸ್ತಿಯೂ ಸೇರಿದಂತೆ ಅನೇಕ ಪ್ರಶಸ್ತಿಗಳು ಆಕೆಯ ಮುಡಿಗೇರಿವೆ. ಗಿಡ ನೆಟ್ಟರೆ ಒಳಿತು ಎನ್ನುವುದನ್ನು ಫಿಸಿಕ್ಸ್, ಕೆಮಿಸ್ಟ್ರಿ, ಬಯಾಲಜಿ ಓದಿಯೇ ತಿಳಿಯಬೇಕಾಗಿಲ್ಲ. ಆಕೆ ನೆಟ್ಟಿದ್ದು ಬರೋಬ್ಬರಿ 384 ಆಲದ ಸಸಿಗಳು. ಈಗ ಅವಕ್ಕೆಲ್ಲ ಬಿಳಿಲಿನ ರೂಪದಲ್ಲಿ ಮೀಸೆ ಬಂದಿವೆ, ದೊಡ್ಡವಾಗಿವೆ. ಬದುಕಿದ್ದಾಗಲೇ ದಂತಕಥೆಯಾದ ಪುಣ್ಯಾತ್‍ಗಿತ್ತಿ ತಿಮ್ಮಕ್ಕ.

ಒಂದು ಸರಳ ಲೆಕ್ಕಾಚಾರ. ನಾವೀಗ ಕರ್ನಾಟಕದಲ್ಲಿ ಆರು ಕೋಟಿ ದಾಟಿದ್ದೇವೆ. ಕೊನೆಯ ಪಕ್ಷ ಸಾಲು ಮರದ ತಿಮ್ಮಕ್ಕನನ್ನು ಸನ್ಮಾನಿಸಿದ ಸಂಘ-ಸಂಸ್ಥೆಗಳ ಸದಸ್ಯರುಗಳು ಕೈಜೋಡಿಸಿ, ಆಕೆ ನೆಟ್ಟಷ್ಟೇ ಗಿಡಗಳನ್ನು ಒಂದೊಂದು ಸಂಸ್ಥೆಯ ಸದಸ್ಯರೂ ನೆಟ್ಟಿದ್ದರೆ ಇಡೀ ರಾಜ್ಯವೇ ನಂದನವನವಾಗುತ್ತಿತ್ತು. ಈ ಲೆಕ್ಕವನ್ನು ಗುನುಗುನಿಸಲು ಕಾರಣವಿದೆ. ಇಂದು ಶುಕ್ರವಾರ, ಏಪ್ರಿಲ್ 22 ಇದು ಯಾರ ಹುಟ್ಟುಹಬ್ಬವಾದರೂ ಆಗಿರಬಹುದು. (ಕಮ್ಯೂನಿಸ್ಟರ ಲೆಕ್ಕಾಚಾರದಲ್ಲಿ ಲೆನಿನ್ ಹುಟ್ಟಿದ ಹಬ್ಬ) ಅಥವಾ ಯಾರ ದಿವಸವಾದರೂ ಆಗಿರಬಹುದು. ಇಲ್ಲ ಪಂಚಾಂಗ ತೆರೆದಾಗ ಚಿತ್ರಾ ಪೌರ್ಣಮಿ ಎಂದು ಸಂಪ್ರದಾಯಸ್ಥರು ಬೊಟ್ಟು ಮಾಡಬಹುದು. ಕ್ಯಾಲೆಂಡರ್ ತೆಗೆದರೆ ಬೆಂಗಳೂರು ಕರಗ ಎಂದು ಸಂಭ್ರಮಿಸಬಹುದು. ಇದೆಲ್ಲಾ’ಅವರವರ ಭಕುತಿಗೆ, ಅವರವರ ಭಾವಕ್ಕೆ’. ಆದರೆ ಇದು ಜಗತ್ತು ಲಗುಬಗೆಯಿಂದ ಕಾರ್ಯಪ್ರವೃತ್ತವಾಗುವ ದಿನವೂ ಹೌದು. ರೋಗಗ್ರಸ್ತ ಭೂಮಿಯನ್ನು ಏನಾದರೂ ಮಾಡಿ ಉಳಿಸಿಕೊಳ್ಳಬೇಕೆಂದು ಟೊಂಕಕಟ್ಟಿದ ದಿನ. ಏಕೆಂದರೆ ಭೂಮಿ ಸಾವಿನಂಚಿನಿಂದ ಎದ್ದು ಬಂದಿದೆ.

‘ಕ್ಷಮಯಾ ಧರಿತ್ರೀ’ ಎಂದು ಗಿಲೀಟು ಮಾತುಗಳನ್ನು ಹೇಳುತ್ತ ಅವಳ ಹೊಟ್ಟೆ ಬಗೆದು ಲೋಹಭಂಡಾರವನ್ನು ಬಾಚಿದ್ದೇವೆ. ‘ಬಹುರತ್ನಾ ವಸುಂಧರಾ’ ಎಂದು ಕೊಂಡಾಡಿದ್ದೇವೆ. ವನದೇವತೆ ಎಂದು ನೇವರಿಸುತ್ತ ತಲೆ ಬೋಳಿಸಿದ್ದೇವೆ. ಅದರ ಫಲವೇ ಈಗ ಬಿಸಿಬಿಸಿ ಸೂರ್ಯನ ಕೆಂಗಣ್ಣು ನಮ್ಮ ಮೇಲೆ ಬಿದ್ದಿದೆ. ನದಿ, ಗಿಡ, ಮರ, ಭೂಸಂಪತ್ತು ಎಲ್ಲವೂ ನಮ್ಮವೇ. ಶಿಲಾಯುಗದಿಂದ ಇಂದಿನವರೆಗೂ ಎಗ್ಗಿಲ್ಲದೆ ಲೂಟಿಮಾಡುತ್ತಿದ್ದೇವೆ. ಈಗ ಭೂಮಿ ತಿರುಗಿ ಬಿದ್ದಿದೆ. ನಾವು ರಿಪೇರಿ ಕೆಲಸ ಮಾಡಲೇಬೇಕು. ಯಾರೋ ಒಬ್ಬ ಹುಟ್ಟುತ್ತಾನೆ, ತನ್ನ ಸ್ವಂತದ್ದನ್ನೆಲ್ಲ ಬದಿಗಿಟ್ಟು ಜಗತ್ತಿನ ಬಗ್ಗೆ ಚಿಂತಿಸುತ್ತ ಭೂಮಿಯ ಆರೋಗ್ಯವನ್ನು ಸುಧಾರಿಸಲು ಯತ್ನಿಸುತ್ತಾನೆ. ಜನ ‘ಹೌದಲ್ಲ’ ಎಂದು ಕಣ್ಣುಬಿಡುತ್ತಾರೆ. ನಮ್ಮ ಪಾಪ ಕೂಪಗಳು ತುಂಬಿತುಳುಕಿದ್ದು ಗೊತ್ತಾಗಲೇ ಇಲ್ಲವಲ್ಲ ಎಂದು ಹಲುಬುತ್ತಾರೆ. ಚುರುಕಾಗುತ್ತಾರೆ, ಏಕೆಂದರೆ ಭೂಮಿ ಉಳಿದರೆ ತಾನೇ ನಾವು ಬಚಾವು?

ಇಂಥ ವ್ರತಕ್ಕೆ ಪಣ ತೊಟ್ಟ ದಿನ ಏಪ್ರಿಲ್ 22. ಅಮೆರಿಕದ ವಿಸ್ಕಾನ್‍ಸಿನ್ ಪ್ರಾಂತ್ಯದಿಂದ ಸೆನೆಟರಾಗಿ ಗೆದ್ದ ಗೇ ಲಾರ್ಡ್ ನೆಲ್ಸನ್ ಹೋರಾಟಕ್ಕಿಳಿದ ದಿನ. ಆಗತಾನೇ ವಿಯೆಟ್ನಾಂ ಯುದ್ಧ ಅಮೆರಿಕನ್ನರಿಗೆ ವಾಂತಿ ಬರುವಷ್ಟು ಬೇಸರ ತಂದಿತ್ತು. ಕ್ಯಾಲಿಫೋರ್ನಿಯಾದ ಸಾಂತಾ ಬರ್ಬರಾದ ತೀರದಲ್ಲಿ ತೈಲಮಾಲಿನ್ಯ, ಎಲ್ಲಿ ನೋಡಿದರಲ್ಲಿ ವಿಷಯುಕ್ತ ತ್ಯಾಜ್ಯ, ಬೆಳೆಗಳಿಗೆ ಬೇಕಾಬಿಟ್ಟಿ ಸುರಿದ ಕೀಟನಾಶಕದ ಮಹಾಮಸ್ತಕಾಭಿಷೇಕ. ಕಾಡು ಬಲುಬೇಗ ನಾಡಾಗುತ್ತಿದ್ದ ದೃಶ್ಯ, ಜನಕ್ಕೆ ಇವೆಲ್ಲ ಬೇಸರ ತರಿಸಿತ್ತು. 1970ರ ಏಪ್ರಿಲ್ 22 ಗೇ ಲಾರ್ಡ್ ನೆಲ್ಸನ್ ಅಮೆರಿಕನ್ನರಿಗೆ ಮೊರೆಯಿಟ್ಟ. ಭೂದಿನ ಶುರುವಾದದ್ದು ಆಗ. ಪಾರ್ಕು, ಕಚೇರಿ, ಸಭಾಂಗಣ, ಎಲ್ಲಿ ನೋಡಿದರೂ ಕೂತಲ್ಲಿ, ನಿಂತಲ್ಲಿ ಭೂದಿನದ್ದೇ ಮಾತು. 20 ದಶಲಕ್ಷ ಅಮೆರಿಕನ್ನರು ಕೈಜೋಡಿಸಿದರು. ವೈದ್ಯರು, ವಿದ್ಯಾರ್ಥಿಗಳು, ರೈತರು, ವಕೀಲರು, ವ್ಯಾಪಾರಿಗಳು ಭೂಮಿಯನ್ನುಳಿಸಲು ಪಣತೊಟ್ಟರು. ವಿದ್ಯಾರ್ಥಿಗಳಿಗೊ ಪರೀಕ್ಷೆ ಮುಗಿದು ರಜೆ. ಕ್ರಾಂತಿಗೆ ಕಾಲ ಪಕ್ಕಾಗಿತ್ತು. ಮೊದಲ ಬಾಲಲ್ಲೇ ಗೇ ಲಾರ್ಡ್ ನೆಲ್ಸನ್ ಸಿಕ್ಸರ್ ಹೊಡೆದಿದ್ದ. ಜಗತ್ತು ಅವನನ್ನು ಬೆಂಬಲಿಸಿತ್ತು. ಮುಂದಿನ ಹತ್ತು ವರ್ಷದಲ್ಲಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದವರ ಸಂಖ್ಯೆ ಇನ್ನೂರು ಮಿಲಿಯನ್. ಇದೀಗ ಅರ್ಥ್ ಡೇ ನೆಟ್‍ವರ್ಕ್, 193 ದೇಶಗಳನ್ನು ಒಗ್ಗೂಡಿಸಿದೆ. ಶತಕೋಟಿ ಜನ ಇದರಲ್ಲಿ ಭಾಗವಹಿಸುತ್ತಿದ್ದಾರೆ. ಜಗತ್ತಿನ ಏಳನೆ ಒಂದು ಭಾಗ ಜನ ಭೂಮಿಯ ಪರವಾಗಿದ್ದಾರೆ. ನಿಮ್ಮ ಸ್ಥಳೀಯ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಿ, ಅದೇ ನಿಮ್ಮ ಭೂದಿನದ ಆಚರಣೆ ಎನ್ನುತ್ತಿದೆ ಅರ್ಥ್ ಡೇ ನೆಟ್‍ವರ್ಕ್. ಈ ಬಾರಿಯ ಘೋಷ ವಾಕ್ಯ ‘ಭೂಮಿಗೆ ಗಿಡ’ ಮುಂದಿನ ನಾಲ್ಕು ವರ್ಷಗಳಲ್ಲಿ ಇನ್ನೇನು ಐವತ್ತರ ಸಂಭ್ರಮಾಚರಣೆ ವಿಶ್ವದಾದ್ಯಂತ. ಆ ಹೊತ್ತಿಗೆ 7.8 ಶತಕೋಟಿ ಗಿಡ ನೆಡುವ ಕಾರ್ಯಕ್ರಮ ಹಮ್ಮಿಕೊಂಡಿದೆ-ನೀವೂ ಕೈಜೋಡಿಸಿದರೆ. ನೆನಪಡಿ-ಒಂದು ಎಕರೆ ಭರ್ಜರಿಯಾಗಿ ಬೆಳೆದ ಮರಗಳು 41,000 ಕಿ.ಮೀ. ಪ್ರಯಾಣಿಸುವ ಕಾರು ಎಷ್ಟು ಕಾರ್ಬನ್ ಡೈ ಆಕ್ಸೈಡ್ ಕಕ್ಕುತ್ತದೋ ಅಷ್ಟನ್ನು ಒಂದೇ ವರ್ಷದಲ್ಲಿ ಹೀರಿಕೊಳ್ಳುತ್ತದೆ ಎನ್ನುತ್ತಾರೆ ಅರ್ಥ್ ಡೇ ಕಾರ್ಯಕರ್ತರು. ಅದು ಸರಿ. ಬೆಂಗಳೂರು ಮೆಟ್ರೋದ ಮೊದಲ ಹಂತ ಪೂರ್ಣಗೊಳ್ಳುವ ಹೊತ್ತಿಗೆ 2,500 ಮರಗಳು ನೆಲ ಕಚ್ಚಿದ್ದವಲ್ಲ. ಇದಕ್ಕೆ ಉತ್ತರಿಸುವುದು ಸುಲಭವಲ್ಲ. ಅಭಿವೃದ್ಧಿ ವರ್ಸಸ್ ಪರಿಸರ ಎನ್ನುವಾಗ ರಾಜಿ ಎನ್ನುವುದು ಸದಾ ಮೇಲ್ಗೈ ಪಡೆಯುತ್ತದೆ.

ಪರಿಸರದ ವಿಚಾರ ಬಂದಾಗ ಒಂದು ಎಚ್ಚರಿಕೆಯ ಮಾತು ಆಗಾಗ ಮೊಳಗುತ್ತದೆ ‘ಥಿಂಕ್ ಗ್ಲೋಬಲಿ-ಆಕ್ಟ್ ಲೋಕಲಿ’ -ಹೌದು. ಜಾಗತಿಕ ಮಟ್ಟದಲ್ಲಿ ಚಿಂತಿಸಬೇಕು, ಸ್ಥಳೀಯ ಮಟ್ಟದಲ್ಲಿ ಕಾರ್ಯಪ್ರವೃತ್ತರಾಗಬೇಕು. ನಾವು ಮಾಡಿಕೊಂಡಿರುವ ರೇಜಿಗೆ ನೋಡಿದರೆ ಯಾವುದಕ್ಕೂ ಅಂತ್ಯವೇ ಇಲ್ಲವೇನೋ ಎಂಬ ಜಿಜ್ಞಾಸೆ ಮೂಡುತ್ತದೆ. ಪ್ರತಿದಿನ ಬೆಂಗಳೂರು ಒಂದರಲ್ಲೇ 3,500 ಟನ್ನು ಕಸ ಉತ್ಪತ್ತಿಯಾಗುತ್ತಿದೆ. ಲಿಂಗಭೂತನಹಳ್ಳಿ, ದೊಡ್ಡಬಿದರಕಲ್ಲು, ಚಿನ್ನನಾಗಮಂಗಲ, ಸುಬ್ಬರಾಯನಹಳ್ಳಿ ಇಲ್ಲೆಲ್ಲ ನಮ್ಮ ಕಸ ಭರ್ತಿಯಾಗಿದೆ. ಹಳ್ಳಿಯವರು ಗರಂ ಆಗಿದ್ದಾರೆ. ಇಡೀ ಬೆಂಗಳೂರಿನ ಪಾಪವನ್ನು ನಾವು ಯಾಕೆ ಹೊರಬೇಕು ಎಂದು ಕೇಳುತ್ತಿದ್ದಾರೆ. ಅತ್ತ ಉತ್ತರ ಕರ್ನಾಟಕ ಬರದಿಂದ ನಲುಗಿಹೋಗಿದೆ, ಕುಡಿಯುವ ನೀರಿಗೂ ತತ್ವಾರ. ಸದ್ದಿಲ್ಲದೆ ಬೆಂಗಳೂರಿನ ಕೆರೆಗಳು ಸತ್ತಿವೆ. ಭೂಮಿಯ ಕಾವು ಏರುತ್ತಿದೆ, ಇದು ಸ್ಥಳೀಯ ಸಮಸ್ಯೆಯಂತೂ ಅಲ್ಲ. ವಿಶ್ವಸಂಸ್ಥೆಯೇ ಎಚ್ಚರಿಕೆ ಕೊಟ್ಟಿದೆ. ಜಾಗತಿಕ ಸರಾಸರಿ ಉಷ್ಣತೆ ಈಗಿರುವುದಕ್ಕಿಂತ 0.5 ಡಿಗ್ರಿ ಸೆಂ. ಹೆಚ್ಚಿದರೂ ಸಾಕು, ಭೂಮಿಯಲ್ಲಿ ಜೀವಿಸಂಕುಲ ಅಪಾಯದ ಅಂಚಿಗೆ ತಲಪುತ್ತದೆ. ಕಾರ್ಬನ್ ಡೈ ಆಕ್ಸೈಡ್‍ಗೆ ಲಗಾಮು ಹಾಕಲು ಯಾರೂ ತಯಾರಿಲ್ಲ. ಎಷ್ಟೋ ಶೃಂಗಸಭೆಗಳು ವೀರಾವೇಶದಲ್ಲೇ ಕೊನೆಗೊಂಡಿವೆ.

ಇದುವರೆಗೆ ಅರಣ್ಯೀಕರಣ ಎಂದರೆ ಗಿಡ ನೆಡುವುದು ಎಂಬ ಕಲ್ಪನೆ ಅಷ್ಟೇ ಇತ್ತು. ಇಂಥವೇ ಗಿಡ ಎಂದು ಯಾರೂ ಹೇಳಿರಲಿಲ್ಲ. ಹೀಗಾಗಿ ಹಸುರು ತೋಪು ಬರುವ ಕಡೆ ನೀಲಗಿರಿ ಮರಗಳು ನಲಿದಾಡಿದವು. ಇದೋ ಪರದೇಸಿ ಗಿಡ, ಆಸ್ಟ್ರೇಲಿಯದ ಬಳುವಳಿ. ಕೊನೆಗೆ ಕರ್ನಾಟಕದಲ್ಲಿ ಅರಣ್ಯ ಇಲಾಖೆಗೆ 2011ರಲ್ಲಿ ಸರ್ಕಾರದಿಂದ ಸಂದೇಶ ಬಂತು, ಮುಂದೆ ನೀಲಗಿರಿ ತೋಪು ಬೆಳೆಸುವಂತಿಲ್ಲ. ಆದದ್ದಿಷ್ಟೇ ಇವು ಸಖತ್ ನೀರು ಕುಡಿಯುತ್ತವೆ. ಬಹುಬೇಗ ಸಖತ್ತಾಗಿ ಬೆಳೆಯುತ್ತವೆ, ಕೊಯ್ಲಿಗೆ ಬರುತ್ತವೆ. ಕಮರ್ಷಿಯಲ್ ಗಿಡ. ಪರಿಸ್ಥಿತಿ ಹೀಗೆಲ್ಲ ಇರುವಾಗ ನಮ್ಮಂಥ ಸಾಮಾನ್ಯರು ಏನು ಮಾಡಬಹುದು ಎಂಬುದರತ್ತಲೂ ನಾವು ಯೋಚಿಸುವ ಸಮಯ ಇದು. ಕೊನೆಯಪಕ್ಷ ಬುಡ್ಡಿ ಬಲ್ಬ್ ಗಳ ಬದಲು ಎಲ್.ಇ.ಡಿ. ಬಲ್ಬ್ ಬಳಸಬಹುದಲ್ಲ. ಕರೆಂಟ್ ಉಳಿತಾಯವಾಗುತ್ತಲ್ಲ. ಮಳೆನೀರು ಕೊಯ್ಲನ್ನು ನಮ್ಮ ಮನೆಯ ಗಿಡಗಳಿಗೆ ಹಾಕಬಹುದಲ್ಲ. ಸೌರಶಕ್ತಿಯನ್ನು ಬಳಸಿ ಬಿಸಿನೀರಿನ ಸ್ನಾನ ಮಾಡಬಹುದಲ್ಲ. ಮಕ್ಕಳಿಗೂ ಹೇಳಬಹುದು. ಹಿಪ್ಪೆ ಗಿಡ ನಾನ್ನೂರು ವರ್ಷ ಬದುಕಿರುತ್ತದೆ. ನೀನು ಬೆಳೆಸಿದರೆ ಅಷ್ಟು ಕಾಲ ನಿನ್ನ ಹೆಸರು ಇರುತ್ತದೆ ಎಂಬ ಸತ್ಯವನ್ನು. ಮರುಶುದ್ಧೀಕರಿಸಿದ ನೀರನ್ನು ಬಳಸಬಹುದು ಎಂಬ ಇನ್ನೊಂದು ಸತ್ಯವನ್ನೂ ಮನಗಾಣಿಸಬಹುದು. ಸಾಧ್ಯತೆಗಳು ನೂರಾರಿವೆ. ಬೇಕಾದರೆ ಪ್ಲಾಸ್ಟಿಕ್ ಬಳಕೆಯ ಬಹಿಷ್ಕಾರದಿಂದಲೇ ಪ್ರಾರಂಭಿಸಿ, ಭೂಮಿಯನ್ನು ಅಷ್ಟರಮಟ್ಟಿಗೆ ಸ್ವಚ್ಛವಾಗಿಡಬಹುದು.

ನಮ್ಮ ಪ್ರಾಚೀನರು ಭೂಮಿ ಕುರಿತು ಭಾವಿಸಿದ್ದ ಈ ಸಾಲುಗಳನ್ನು ಒಮ್ಮೆ ನಾವೆಲ್ಲರೂ ಕಣ್ಣಮುಂದೆ ತಂದುಕೊಳ್ಳಬೇಕು:

‘ಏಳುವಾಗ, ಕುಳಿತುಕೊಳ್ಳುವಾಗ, ನಿಂತಾಗ, ನಡೆಯುವಾಗ ಹಾಗೂ ಎಡ ಅಥವಾ ಬಲಕಾಲುಗಳನ್ನು ಊರುವಾಗ, ಭೂಮಿಯಗೆ  ದುಃಖ (ನೋವುs) ಆಗದಿರಲಿ’

(ಅಥರ್ವ ವೇದ, 12ನೇ ಕಾಂಡ, 1ನೇ ಸೂಕ್ತ, 28ನೇ ಮಂತ್ರ)

1 COMMENT

  1. ಅನಂತರಾಮು ಅವರೆ, ಅರಣ್ಯ ನಾಶದ ಬಗ್ಗೆ ದಶಕ ದಶಕಗಳಿಂದ ಕೊರೆಯುತ್ತಲೇ ಇದ್ದೇವೆ. ರಾಜಕೀಯ ಇಚ್ಛಾಶಕ್ತಿ ಇಲ್ಲದಿರುವಾಗ ನಿಮ್ಮಂತಹವರ ಎಚ್ಚರಿಕೆ ಮಾತುಗಳು ಬರಿ ಶಬ್ದಗಳಾಗಿ ಬಿಡುತ್ತವೆ. ನೈಜ ಆಸಕ್ತಿ ಇರುವ ಪ್ರಜಾಪ್ರತಿನಿಧಿಗಳು ಇದ್ದಿದ್ದರೆ ಇಷ್ಟು ಹೊತ್ತಿಗೆ ನಿಮಗೆ ಇಂತಹ ಲೇಖನ ಲೇಖನ ಬರೆಯುವ ಅವಶ್ಯಕತೆಯೇ ಇರುತ್ತಿರಲಿಲ್ಲ. ಕಪಟಿಗಳು ರಾಜಕಾರಣಿಗಳು. ಅವರಿಗೆ ಹವಾಲ ಮೇಲೆ ಇರುವಷ್ಟು ಪ್ರೀತಿ ಹವಾ ಮೇಲೆ ಇಲ್ಲ. ಇದರಲ್ಲೂ ಹವಾಲ ಇದೆ ಎಂದರೆ ಹಮಾಲರ ತರಹ ಕೆಲಸ ಮಾಡುತ್ತಾರೆ. ಇಲ್ಲವಾದರೆ ಇಲ್ಲ. ನಮ್ಮ ದೇಶ ಸುಧಾರಿಸ ಬೇಕಾದರೆ ತೀರಾ ಅಪರೂಪವಾಗಿರುವ ಪ್ರಾಮಾಣಿಕತೆ ಎಂಬುದು ಎಲ್ಲಿದ್ದರೂ ಪ್ರತ್ಯಕ್ಷವಾಗ ಬೇಕು. ಸ್ವಲ್ಪ ಸ್ವಲ್ಪ ಬಂದರೂ ಸಾಕು. ದೇಶ, ಎಷ್ಟೋ ಸುಧಾರಿಸುತ್ತದೆ.
    ಈಗಂತೂ ಹಸಿರು ತುಂಬುವುದು ಸುಲಭ. ಉಪಗ್ರಹ ಬಳಸಿ ನೆಲದ ಸರ್ವೆ ಮಾಡಿಸಿ ಮಳೆ ಕುಯ್ಲು ಮಾಡಲು ಸಣ್ಣ ಸಣ್ಣ ಕಟ್ಟೆ ಕೆರೆ ದೊಡ್ಡ ಗುಂಡಿಗಳನ್ನು ತೋಡಿಸುವುದು, ಕೃಷಿಗೆ ಬಳಕೆಯಾಗದ ಭೂಮಿಯಲ್ಲಿ ಮರಗಳನ್ನು ನೆಡಸುವುದು ಸುಲಭ. ಊರೂರುಗಳನ್ನು ಗುಂಪಿಸಿ ಅವರಿಗೆ ಅದರ ನಿರ್ವಹಣೆ ವಹಿಸಬಹುದು. ಕೃಷಿ ಚಟುವಟಿಕೆಗಳಲ್ಲೂ ಮರಗಳನ್ನು ಬೆಳಸಲು ನಮ್ಮ ಪ್ರಧಾನಿಗಳು ಕರೆ ಕೊಟ್ಟಿದ್ದಾರೆ. ಆದರೆ ಮೋದಿಯವರ ಯೋಜನೆಗಳಲ್ಲಿ ಇರುವ ” ಅತಿ ಮುಖ್ಯ ದೋಷ ” ಅಂದರೆ ಪುಢಾರಿಗಳಿಗೆ, ಮಧ್ಯವರ್ತಿಗಳಿಗೆ ಹಣ ಮಾಡಿಕೊಳ್ಳುವ ಅವಕಾಶ ಇಲ್ಲದಂತೆ ಮಾಡಿರುವುದು!!. ಜಾಮ್ ಅಂದರೆ ಜನಧನ ಯೋಜನೆ, ಆಧಾರ್, ಮತ್ತು ಮೊಬೈಲ್ ಮೂರೂ ಕೂಡಿದ್ದು.ಇದರಿಂದಾಗಿ ಅವರ ಪಕ್ಷದವರೇ ಅವರ ಯೋಜನೆಗಳ ಅನುಷ್ಠಾನದಲ್ಲಿ ಆಸಕ್ತಿ ತೋರುತ್ತಿಲ್ಲ.ಜನಹಿತ ರಾಷ್ಟ್ರ ಹಿತ ಭೂಹಿತ ಇವೆಲ್ಲಾ ಸ್ವಹಿತದ ಮುಂದೆ ಏನೂ ಅಲ್ಲ !!. ಯಾವಾಗ ನಾವು ಸುಧಾರಿಸುವೆವೋ? ! ಇನ್ನೂ ಇಂತಹ ಎಷ್ಟು ಬರಗಳು ಬಂದು ಬರೆ ಎಳೆಯಬೇಕೊ !!??

Leave a Reply