ನಮಗೆ ಬೇಕಿದ್ದ ಉಗ್ರನ ರಕ್ಷಣೆಗೆ ನಿಂತಿದ್ದ ಚೀನಾಕ್ಕೆ ಭಾರತದ ಭರ್ಜರಿ ಎದಿರೇಟು, ಚೀನಾದ ಉಗ್ರಪಟ್ಟಿಯಲ್ಲಿದ್ದವನಿಗೆ ವೀಸಾ ಕೊಟ್ಟು ಮುಯ್ಯಿಗೆ ಮುಯ್ಯಿ ಅಂತು!

ಡಿಜಿಟಲ್ ಕನ್ನಡ ಟೀಮ್

ಅಪ್ ಡೇಟೆಡ್- ಹೊಗಳಿಕೆಯೆಲ್ಲ ಹಳ್ಳ ಹಿಡೀತು, ಚೀನಾ ಒತ್ತಡಕ್ಕೆ ಮಣಿದ ಭಾರತ ಯುಗರ್ ಮುಖಂಡನ ವೀಸಾ ರದ್ದುಗೊಳಿಸಿತು!

ಭಾರತ ಜಾಗತಿಕ ಮಟ್ಟದಲ್ಲಿ ಹಿಂದೆಂದಿಗಿಂತಲೂ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿರೋದು ಹೌದು ಎನ್ನೋದಕ್ಕೆ ಚೀನಾಕ್ಕೆ ನೀಡಿರುವ ಪರೋಕ್ಷ ಹೊಡೆತವೇ ಸಾಕ್ಷಿ.

ಚೀನಾ ಯಾರನ್ನು ಭಯೋತ್ಪಾದಕರು ಎಂದು ಪರಿಗಣಿಸುತ್ತಿದೆಯೋ ಅಂಥ ನಾಲ್ಕು ಮಂದಿಗೆ ಭಾರತ ವೀಸಾ ನೀಡಿದೆ. ಅವರು ಮುಂದಿನ ವಾರ ದಲೈ ಲಾಮಾ ಭೇಟಿಗೆಂದು ಬರಲಿದ್ದಾರೆ.

ಪಾಕಿಸ್ತಾನದಲ್ಲಿರುವ ಉಗ್ರ ಮಸೂದ್ ಅಜರ್ ನನ್ನು ಅಂತಾರಾಷ್ಟ್ರೀಯ ಉಗ್ರ ಎಂದು ಘೋಷಿಸುವುದಕ್ಕೆ ಭಾರತವು ವಿಶ್ವಸಂಸ್ಥೆಗೆ ಅಹವಾಲು ಸಲ್ಲಿಸಿದ ಸಂದರ್ಭದಲ್ಲಿ, ಭದ್ರತಾ ಮಂಡಳಿಯ ಕಾಯಂ ಸದಸ್ಯನಾಗಿದ್ದುಕೊಂಡು ವಿಟೊ ಪವರ್ ಹೊಂದಿರುವ ಚೀನಾ ಇದಕ್ಕೆ ಅಡ್ಡಗಾಲು ಹಾಕಿತ್ತು. ನಮ್ಮ ಉಗ್ರವಾದದ ನೋವನ್ನು ಗುರುತಿಸದವರಿಗೆ ನಾವೇಕೆ ಸಂವೇದನೆ ತೋರಬೇಕು? ಹಾಗೆಂದೇ ಚೀನಾವು ತೀವ್ರವಾದಿಗಳೆಂದು ಗುರುತಿಸಿರುವವರಿಗೆ ಭಾರತವು ವೀಸಾ ನೀಡಿದೆ ಅಂತ ಈಗ ವ್ಯಾಖ್ಯಾನಿಸಲಾಗುತ್ತಿದೆ.

ಚೀನಾದಲ್ಲಿ ಯುಗರ್ ಎಂಬ ಪ್ರಾಂತ್ಯವೊಂದಿದೆ. ಇಲ್ಲಿ ಮುಸ್ಲಿಂ ಜನಸಂಖ್ಯೆ ಹೆಚ್ಚಿದೆ. ಅಲ್ಲಿ ಪ್ರತ್ಯೇಕತೆಗಾಗಿ ಒತ್ತಾಯಿಸಿ ದಶಕಗಳಿಂದ ಹಿಂಸಾತ್ಮಕ ಹೋರಾಟವೊಂದು ಜಾರಿಯಲ್ಲಿದೆ. ಬಹುಶಃ ಬೇರೆ ಯಾವುದಾದರೂ ದೇಶದಲ್ಲಿ ಇಂಥ ಪರಿಸ್ಥಿತಿ ಇದ್ದರೆ ಗಾಜಾಪಟ್ಟಿಯ ಹಿಂಸಾಚಾರ ಎಷ್ಟು ಚರ್ಚೆಯಾಗುತ್ತ ಬಂದಿದೆಯೋ ಅದೇ ಹಂತದಲ್ಲಿ ಈ ಪ್ರತ್ಯೇಕತಾವಾದಿ ಯುಗರ್ ಹೋರಾಟವೂ ಸುದ್ದಿಯಾಗ್ತಿತ್ತು.  ಆದರೆ ಚೀನಾದಲ್ಲಿ ಪತ್ರಿಕಾ ಸ್ವಾತಂತ್ರ್ಯದ ಕತೆ ಅಷ್ಟಕ್ಕಷ್ಟೆ. ಅಲ್ಲಿನ ಕಮ್ಯುನಿಸ್ಟ್ ಸರ್ಕಾರ ಬಯಸಿದ್ದು ಮಾತ್ರ ಪ್ರಚಾರವಾಗುತ್ತದೆ, ಇಲ್ಲದಿದ್ದರೆ ಸ್ವಲ್ಪ ಹೊಗೆಯಾಡಿದಂತಾಗಿ ನಂತರ ಮುಚ್ಚಿಹೋಗುತ್ತದೆ.

ಇದೀಗ ಭಾರತವು ಚೀನಾಕ್ಕೆ ಸಮ್ಮತವಿಲ್ಲದವರಿಗೆ ವೀಸಾ ನೀಡಿರುವ ವಿಚಾರವು, ಹಾಗೆ ವೀಸಾ ದೊರಕಿಸಿಕೊಂಡಿರುವವರಿಂದಲೇ ಹೊರಬಿದ್ದಿದೆ. ಚೀನಾದ ಕ್ಸಿನಿಯಾಂಗ್ ಪ್ರಾಂತ್ಯದ ಯುಗರ್ ಹೋರಾಟಕ್ಕೆ ಪೂರಕವಾಗಿ ‘ವರ್ಲ್ಡ್ ಯುಗರ್ ಕಾಂಗ್ರೆಸ್’ ಎಂಬ ಸಂಘಟನೆಯೊಂದಿದೆ. ಅದರ ಕಾರ್ಯಕಾರಿ ಸಮಿತಿಯ ಅಧ್ಯಕ್ಷನ ಹೆಸರು ದೊಲ್ಕುನ್ ಇಸಾ. ಚೀನಾದಿಂದ ಉಗ್ರವಾದಿ ಎಂಬ ಹಣೆಪಟ್ಟಿ ಹಾಕಿಸಿಕೊಂಡಿರುವ ಈತ ಈಗ ಜರ್ಮನಿಯಲ್ಲಿ ಆಶ್ರಯ ಪಡೆದಿದ್ದಾನೆ. ತನ್ನನ್ನೂ ಸೇರಿಸಿ ನಾಲ್ವರಿಗೆ ಭಾರತ ಭೇಟಿಗೆ ವೀಸಾ ದೊರಕಿದೆ ಅಂತ ಆತನೇ ಸ್ಪಷ್ಟಪಡಿಸಿದ್ದಾನೆ. ಈ ಬಗ್ಗೆ ಭಾರತದ ಅಧಿಕಾರಿ ವಲಯದಿಂದ ಈವರೆಗೆ ನಿರಾಕರಣೆಯಾಗಲಿ, ಹೊದೆಂಬ ಪ್ರತಿಕ್ರಿಯೆಯಾಗಲೀ ಬಂದಿಲ್ಲ.

ಇಷ್ಟೇ ಅಲ್ಲ… ಈತ ಬರುತ್ತೇನೆಂದು ಹೇಳಿಕೊಳ್ಳುತ್ತಿರೋದು ದಲೈ ಲಾಮಾ ಅವರ ಭೇಟಿಗೆ. ಟಿಬೆಟಿಯನ್ನರ ವಾಸಭೂಮಿ ಧರ್ಮಶಾಲಾಕ್ಕೆ. ತಾವು ಆಕ್ರಮಿಸಿದ್ದ ಟಿಬೆಟ್ ಧರ್ಮಗುರು ಭಾರತದಲ್ಲಿದ್ದುಕೊಂಡು ಟಿಬೆಟ್ ಸ್ವಾತಂತ್ರ್ಯದ ಆಸೆಯನ್ನು ಪೊರೆಯುತ್ತಿರುವುದಕ್ಕೆ ಚೀನಾಕ್ಕೆ ಮೊದಲೇ ಸಿಟ್ಟಿದೆ. ಅಂಥದ್ದರಲ್ಲಿ ಭಾರತದ ಈ ಕ್ರಮ ಚೀನಾಕ್ಕೆ ಎಷ್ಟು ಉರಿದಿರಬೇಡ?

ಭಾರತ ಇವೆಲ್ಲದರ ಮೂಲಕ ಚೀನಾಕ್ಕೆ ನೀಡುತ್ತಿರುವ ಸಂದೇಶ ಅತ್ಯಂತ ಸ್ಪಷ್ಟವಾಗಿದೆ. ಕಾಶ್ಮೀರ ಹಿಂಸಾಚಾರದಲ್ಲಿ ಜೈಲು ಸೇರಿ, ನಂತರ ಕಂದಹಾರ್ ವಿಮಾನ ಅಪಹರಣದ ಮೂಲಕ ಬಿಡುಗಡೆ ಕಂಡುಕೊಂಡ ಮಸೂದ್ ಅಜರ್ ನಿಮಗೆ ಉಗ್ರವಾದಿ ಎಂದೆನಿಸೋಲ್ಲವಾದರೆ, ನಿಮ್ಮ ಯಾವುದೋ ಪ್ರಾಂತ್ಯದಲ್ಲಿ ರಾಜಕೀಯ ಭಿನ್ನಾಭಿಪ್ರಾಯಗಳಿಗೆ ನಡೆಯುತ್ತಿರುವ ಹೋರಾಟದಲ್ಲಿ ನೀವ್ಯಾರಿಗೋ ಉಗ್ರ ಪಟ್ಟ ಕಟ್ಟಿದರೆ, ನಾವು ಆತನನ್ನು ಉಗ್ರನೆಂದು ಪರಿಗಣಿಸಬೇಕಿಲ್ಲ!

ಇಷ್ಟಾಗಿಯೂ ಏಪ್ರಿಲ್ 28ಕ್ಕೆ ನಿಗದಿಯಾಗಿರುವ ಭೇಟಿಗೆ ಯುಗರ್ ಹೋರಾಟದ ನಾಯಕ ಬಂದೇಬಿಡುತ್ತಾನೆಂಬ ಖಾತ್ರಿಯೇನಿಲ್ಲ. ಇಂಟರ್ಪೋಲ್ ತನ್ನ ವಿಚಾರದಲ್ಲಿ ರೆಡ್ ಕಾರ್ನರ್ ನೋಟೀಸ್ ಹೊರಡಿಸಿರೋದ್ರಿಂದ ಪ್ರವಾಸದ ಬಗ್ಗೆ ಇನ್ನೂ ಚಿಂತಿತನಾಗಿದ್ದೇನೆ ಎಂದಾತ ಹೇಳಿಕೊಂಡಿದ್ದಾನೆ.

ವಿದೇಶ ಪ್ರವಾಸಗಳ ಸಂದರ್ಭದಲ್ಲಿಪ್ರಧಾನಿ ನರೇಂದ್ರ ಮೋದಿ ಒಂದು ಮಾತು ಹೇಳಿದ್ದರು- ‘ಭಾರತ ಈಗ ಯಾವ ಹಂತದಲ್ಲಿದೆ ಎಂದರೆ ನಾವು ಇತರರನ್ನು ಕೀಳಾಗಿಯೂ ನೋಡೋಲ್ಲ, ಹಾಗಂತ ಅವರು ದೊಡ್ಡವರೆಂದು ನಾವು ದೃಷ್ಟಿ ತಗ್ಗಿಸೋದೂ ಇಲ್ಲ… ಕಣ್ಣಿಗೆ ಕಣ್ಣು ಕೊಟ್ಟು ಮಾತಾಡುವ ಸಮಬಲವನ್ನು ನಾವು ಅಪೇಕ್ಷಿಸುತ್ತೇವೆ.’

ವೀಸಾ ನೀಡಿಕೆ ಮೂಲಕ ಚೀನಾಕ್ಕೂ ಭಾರತ ನೀಡುತ್ತಿರುವ ಸಂದೇಶ ಇದೇ ಆಗಿದೆ. ಅವರೊಂದಿಗೆ ಸಂಘರ್ಷಕ್ಕಿಳಿಯುವ ಹಂತದಲ್ಲಿ ನಾವಿಲ್ಲವೆಂಬ ವಾಸ್ತವ ನಮಗೆ ಗೊತ್ತಿದೆ. ಹಾಗಂತ ಮಾಡಿದ ಅವಮಾನಗಳಿಗೆಲ್ಲ ಲೊಚಗುಟ್ಟಿಕೊಂಡು ಸುಮ್ಮನಾಗುವ ದಿನಗಳೂ ಮುಗಿದಿವೆ. ಜಮ್ಮು-ಕಾಶ್ಮೀರದವರು ಚೀನಾಕ್ಕೆ ಭೇಟಿ ಕೊಡುವಾಗ ಅವರಿಗೆ ವೀಸಾದ ಜತೆ ಇನ್ನೊಂದು ಕಾಗದ ಸುತ್ತಿ ಭಾರತದಿಂದ ಅವರು ಪ್ರತ್ಯೇಕ ಎಂಬಂತೆ ಬಿಂಬಿಸಿತ್ತಲ್ಲವೇ ಚೀನಾ, ಕಾನೂನಾತ್ಮಕವಾಗಿ ಭಾರತದ್ದಾಗಿರುವ ಪಾಕ್ ಆಕ್ರಮಿತ ಕಾಶ್ಮೀರದ ಎದೆಸೀಳಿ ಚೀನಾ-ಪಾಕ್ ಕಾರಿಡಾರ್ ನಿರ್ಮಾಣವಾಗುವ ಕನಸಿನ ನಕ್ಷೆ ಸಿದ್ಧವಾಗಿರುವಾಗ ಭಾರತದ ಅಭಿಪ್ರಾಯಕ್ಕೆ ಜಾಗವಿಲ್ಲ ಎಂಬಂತೆ ಬೀಗಿತ್ತಲ್ಲವೇ ಚೀನಾ?

ಜಿದ್ದಿಗಿಳಿದರೆ ನಿಮ್ಮಂತೆಯೇ ಸಾವಿರ ಚೇಷ್ಟೆಗಳನ್ನು ಮಾಡಿ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಸವಾಲು ಹಾಕುವುದು ನಮಗೂ ಗೊತ್ತು! ಟಿಟ್ ಫಾರ್ ಟ್ಯಾಟ್… ವೀಸಾ ವಿದ್ಯಮಾನದ ಮೂಲಕ ಬಲಿಷ್ಠ ಚೀನಾಕ್ಕೆ ಭಾರತ ಹೇಳ್ತಿರೋ ಮಾತಿದು.

Leave a Reply