ಬೆಂಗಳೂರು ಕರಗ ನಮ್ಮ ಸಂಸ್ಕೃತಿಯ ಬಹುತ್ವ- ಅಂತಃಸತ್ವ ಸಾರುತ್ತೆ.. ಹೇಗೆ ಗೊತ್ತಾ?

ಡಿಜಿಟಲ್ ಕನ್ನಡ ಟೀಮ್

‘ಬೆಂಗಳೂರು ಕರಗ’ ಅಥವಾ ‘ಧರ್ಮರಾಯಸ್ವಾಮಿ ಕರಗ’ ಇದು ನಗರದಲ್ಲಿ ನಡೆಯುವ ಪ್ರಮುಖ ಐತಿಹಾಸಿಕ ಹಬ್ಬ. ಹಸಿ ಹೂವಿನ ಕರಗದೊಂದಿಗೆ ಇಂದು ಮಧ್ಯರಾತ್ರಿ ಸಮಾರೋಪ ರೂಪದ ಮೆರವಣಿಗೆ ಸಂಭ್ರಮ. ಏಪ್ರಿಲ್ 14ರಿಂದಲೇ ಕರಗ ಆಚರಣೆ ಶುರುವಾಗಿ ಪೂಜಾಕಾರ್ಯಗಳೆಲ್ಲ ನಡೆಯುತ್ತಿದ್ದರೂ ಇದುವೇ ಪ್ರಮುಖ ಆಕರ್ಷಣೆ.

ಭಾರತದ ಪರಂಪರೆ, ವೈಭವಗಳನ್ನೆಲ್ಲ ಯಾವುದೋ ಒಂದು ವಿಪ್ರ ಸಮಾಜ ಗುತ್ತಿಗೆ ಪಡೆದುಕೊಂಡಿದೆ ಎಂಬಂಥ ಬುದ್ಧಿಜೀವಿ ವ್ಯಾಖ್ಯಾನಗಳು ಬಿರುಸಾಗಿ ಕೇಳಿಬರುತ್ತಿರುವ ದಿನಗಳಲ್ಲಿ ಇಂಥ ಆಚರಣೆಗಳು ಸಾರುತ್ತಿರುವ ಸಂದೇಶ ಬಹಳ ಮುಖ್ಯವಾಗುತ್ತದೆ.

ಪರಂಪರಾಗತವಾಗಿ ಕರಗ ಆಚರಣೆ ನಡೆಸಿಕೊಂಡು ಬರುತ್ತಿರೋದು ತಿಗಳ ಸಮುದಾಯ. ಮಹಾಭಾರತದಲ್ಲಿ ಕೊನೆಯ ಅಸುರನ ವಿರುದ್ಧ ಹೋರಾಡಲು ದ್ರೌಪದಿ ವೀರಕುಮಾರರನ್ನು (ಸೈನಿಕರನ್ನು) ಸೃಷ್ಟಿಸಿದಳು. ಈ ಕಾರಣಕ್ಕೆ ದ್ರೌಪದಿ ದೇವಿಯ ಕರಗ ಉತ್ಸವ ನಡೆಯುತ್ತದೆ. ಅರ್ಥಾತ್ ಭಾರತದಲ್ಲಿ ಪರಂಪರೆ- ಮಹಾಕಥನಗಳ ವಾರಸುದಾರಿಕೆ ಅನ್ನೋದು ಯಾರೊಬ್ಬರ ಸ್ವತ್ತಲ್ಲ. ಉಳಿದೆಲ್ಲ ಧಾರ್ಮಿಕ ಉತ್ಸವಗಳಲ್ಲಿ ಪಾಲುಗೊಳ್ಳುವ ಸಂಭ್ರಮವನ್ನೇ ಬೆಂಗಳೂರಿಗರು ಇದರಲ್ಲೂ ತೋರಿಸುತ್ತ ಬಂದಿದ್ದಾರಲ್ಲ… ಇದೇ ಸಂಸ್ಕೃತಿಯ ನಿಜವಾದ ಅಂತಃಸತ್ವ!

ಈ ಹಿಂದೆ ಪ್ರಮುಖವಾಗಿ ನಗರದ ಪೇಟೆ ಭಾಗದಲ್ಲಿ ಮಾತ್ರ ನಡೆಯುತ್ತಿದ್ದ ಕರಗ ಮಹೋತ್ಸವ ನಗರಿಕರಣವಾದಂತೆಲ್ಲವಿಸ್ತರಿಸಿತು. ಈಗ ಬೆಂಗಳೂರು ಸೇರಿದಂತೆ ಕೋಲಾರ, ಹೊಸಕೋಟೆ, ಆನೇಕಲ್, ಕನಕಪುರ, ಜಕ್ಕಸಂದ್ರ ಹಾಗೂ ತಿಗಳರು ಹೆಚ್ಚಿರುವ ಪ್ರದೇಶಗಳಲ್ಲಿಆಚರಣೆಯಾಗುತ್ತಿದೆ. ಆದರೂ ಸಹ ಧರ್ಮರಾಯಸ್ವಾಮಿ ದೇವಸ್ಥಾನದ ಇತಿಹಾಸ ಪ್ರಸಿದ್ಧ ಬೆಂಗಳೂರು ಕರಗವೇ ಶ್ರೇಷ್ಠವಾಗಿದ್ದು, ಇದಕ್ಕೆ ಹೆಚ್ಚಿನ ಪ್ರಾಮುಖ್ಯ.

ತಿಗಳ ಸಮುದಾಯ ಮೂಲತಃ ತಮಿಳುನಾಡು ಮತ್ತು ಕರ್ನಾಟಕದ ಗಡಿ ಭಾಗದವರಾಗಿದ್ದು, ನಂತರದಲ್ಲಿ ಬೆಂಗಳೂರು ವಾಸಿಗಳಾದರು. ಇವರು ಕನ್ನಡ ಮತ್ತು ತಮಿಳು ಮಿಶ್ರಣದ ‘ತಿಗಳರಿ’ ಭಾಷೆಯನ್ನು ಮಾತನಾಡುತ್ತಾರೆ. ತರಕಾರಿ ಮತ್ತು ಹೂವುಗಳನ್ನು ಬೆಳೆಯುವುದು ಇವರ ಪ್ರಮುಖ ಕಸುಬು. ನಗರದ ಹಳೆ ಪೇಟೆ ಸುತ್ತಮುತ್ತ ಸುಮಾರು 90 ಹಳ್ಳಿಗಳಲ್ಲಿ ಪ್ರಬಲರಾಗಿದ್ದ ಇವರು ಕಾಲಾಂತರದಲ್ಲಿ ಚದುರಿಹೋಗಿದ್ದಾರೆ. ಹೆಬ್ಬಾಳ, ಅಕ್ಕಿತಿಮ್ಮನಹಳ್ಳಿ, ಅಗರ ಮತ್ತು ಚೋಳನಾಯಕನಹಳ್ಳಿ ಸೇರಿದಂತೆ ಇತರ ಹಲವು ಹಳ್ಳಿಗಳಲ್ಲಿ ಪ್ರಬಲರಾಗಿದ್ದರು. ಹಳ್ಳಿಗಳು ನಗರಕ್ಕೆ ಸೇರ್ಪಡೆಯಾದಂತೆಲ್ಲ ಈ ಸಮುದಾಯದವರು ವಲಸೆ ಹೋಗಲು ಪ್ರಾರಂಭಿಸಿದರು. ಇದರ ಪರಿಣಾಮ ‘ಬೆಂಗಳೂರು ಕರಗ’ ಉತ್ಸವದಲ್ಲಿ ಭಾಗವಹಿಸುವವರ ಸಂಖ್ಯೆ ದಿನೇ ದಿನೆ ಕ್ಷೀಣಿಸುತ್ತ ಬಂತು. ಈಗ ಇವರನೆಲ್ಲ ಒಟ್ಟುಗೂಡಿಸುವುದು ಸವಾಲಿನ ಕೆಲಸಕ್ಕೆ ಸಮಿತಿ ಮುಂದಾಗಿದೆ. ಆ ನಿಟ್ಟಿನಲ್ಲಿಜಾಗೃತಿ ಮೂಡಿಸುವ ಕೆಲಸಗಳೂ ಆಗುತ್ತಿವೆ. ಇದಕ್ಕಾಗಿ ವೆಬ್ ಸೈಟ್ ಸಹ ಹೊಂದಲಾಗಿದೆ.

ಈ ಬಾರಿಯ ಮತ್ತೊಂದು ವಿಶೇಷವೆಂದರೆ ಪಟಾಕಿ ರಹಿತ ಕರಗ ಉತ್ಸವ ನಡೆಯುತ್ತಿರುವುದು. ಕೇರಳದ ಕೊಲ್ಲಂ ದುರಂತದ ಹಿನ್ನೆಲೆಯಲ್ಲಿ ಸಮಿತಿ ಈ ನಿರ್ಧಾರ ತೆಗೆದುಕೊಂಡಿದೆ.

Leave a Reply