ವಿದೇಶಿ ಬಂಡವಾಳ ಹೂಡಿಕೆಯಲ್ಲಿ ಚೀನಾವನ್ನು ಹಿಂದಿಕ್ಕಿದ ಭಾರತ, ಎಫ್ ಡಿಐ ವರದಿಯಲ್ಲೇನಿದೆ ಗೊತ್ತಾ?

ಡಿಜಿಟಲ್ ಕನ್ನಡ ಟೀಮ್

ಚೀನಾ ಅಭಿವೃದ್ಧಿ ಹೊಂದಿದ ಹಾಗೂ ವಿಶ್ವದ ಪ್ರಬಲ ರಾಷ್ಟ್ರ. ಈಗ ಚೀನಾಗೆ ಹಲವು ವಿಷಯಗಳಲ್ಲಿಭಾರತ ತೀವ್ರ ಪೈಪೋಟಿ ನೀಡುತ್ತಿದೆ. ಕಳೆದ ಕೆಲ ವರ್ಷಗಳಲ್ಲಿ ವಿದೇಶಿ ಬಂಡವಾಳ ಹೂಡಿಕೆದಾರರನ್ನು ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾಗಿರೋ ಭಾರತ, ಎಫ್ ಡಿಐನಲ್ಲಿ ಚೀನಾವನ್ನು ಹಿಂದಿಕ್ಕಿದೆ.

ಕಳೆದ ಒಂದು ದಶಕದಲ್ಲಿ ವಿದೇಶಿ ಬಂಡವಾಳ ಹೂಡಿಕೆಯಲ್ಲಿ ಪ್ರಭುತ್ವ ಸ್ಥಾಪಿಸಿದ್ದ ಚೀನಾಗೆ ಭಾರತ ಪ್ರತಿಸ್ಪರ್ಧಿಯಾಗಿ ಹೊರಹೊಮ್ಮಿದೆ. ಸದ್ಯದಲ್ಲೇ ಹೊರಬರಲಿರುವ ಎಫ್ ಡಿಐ ಇಂಟಲಿಜೆನ್ಸ್ ವರದಿಯಲ್ಲಿ ಈ ಅಂಶ ತಿಳಿಸಲಾಗಿದೆ.

ಕಳೆದ ವರ್ಷ 63 ಬಿಲಿಯನ್ ಅಮೆರಿಕನ್ ಡಾಲರ್ ಎಫ್ ಡಿಐ ಮೂಲಕ ಪಡೆದಿದ್ದ ಭಾರತ, ಅತಿ ಹೆಚ್ಚು ಬಂಡವಾಳ ಹೂಡಿಕೆ ಸಂಗ್ರಹಿಸಿದ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿತ್ತು. ಹಲವು ಬೃಹತ್ ಯೋಜನೆಗಳ ಘೋಷಣೆ, ವಿದೇಶಿ ಬಂಡವಾಳ ಹೂಡಿಕೆಗಾರರಿಗೆ ಚೀನಾಗಿಂತ ಭಾರತ ಉತ್ತಮ ಆಯ್ಕೆಯಾಗಿ ಪರಿಣಮಿಸಿದೆ. ಈ ನಿಟ್ಟಿನಲ್ಲಿ ಭಾರತದಲ್ಲಿ ಹೆಚ್ಚು ಬಂಡವಾಳ ಹಾಕಲು ಹೂಡಿಕೆದಾರರು ಮುಗಿಬೀಳುತ್ತಿದ್ದಾರೆ.

ಪ್ರಸ್ತುತ ಚೀನಾದಲ್ಲಿ ಶೇ.23ರಷ್ಟು ಬಂಡವಾಳ ಹೂಡಿಕೆ ಇಳಿಮುಖವಾಗಿದ್ದು, ವಿದೇಶಿ ಬಂಡವಾಳ ಹೂಡಿಕೆ ಯೋಜನೆಗಳಲ್ಲಿ ಶೇ.16ರಷ್ಟು ಕುಸಿತ ಕಂಡಿದೆ. ಚೀನಾದ ಈ ಇಳಿಕೆ ಪ್ರಸ್ತುತ ಭಾರತ ವಿಶ್ವದ ಅತ್ಯುತ್ತಮ ಬೆಳವಣಿಗೆಯ ವೇದಿಕೆಯಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಈ ಬೆಳವಣಿಗೆಯನ್ನು ಇದೇ ರೀತಿ ಮುಂದುವರಿಸಿಕೊಂಡು ಹೋಗಬೇಕಿರುವುದು ಪ್ರಧಾನಿ ನರೇಂದ್ರ ಮೋದಿಯವರ ಮುಂದಿನ ಸವಾಲಾಗಲಿದೆ. ಮುಂದಿನ ದಿನಗಳಲ್ಲಿ ಸುದೀರ್ಘ ಅವಧಿಯ ಸವಾಲುಗಳಾದ ಮೂಲಭೂತ ಸೌಕರ್ಯಗಳ ಅಭಿವೃದ್ಧಿ, ಅಧಿಕಾರಶಾಹಿ ನಿಯಂತ್ರಣ ಮತ್ತು ಅಸಮಾನತೆ ನಿಭಾಯಿಸುವುದು ಪ್ರಮುಖ ಅಂಶಗಳಾಗಿವೆ. ಇವುಗಳನ್ನು ಸಮರ್ಥವಾಗಿ ಎದುರಿಸಿದರೆ, ಭವಿಷ್ಯ ಉಜ್ವಲವಾಗಲಿದೆ ಎಂಬುದು ಎಫ್ ಡಿಐ ಮ್ಯಾಗಜೀನ್ ನ ಪ್ರಧಾನ ಸಂಪಾದಕ ಕರ್ಟ್ನಿ ಫಿಂಗರ್ ಅಭಿಮತ.

ಇನ್ನು ವಿಶ್ವದ ಪರಿಸ್ಥಿತಿ ಗಮನಿಸೋದಾದ್ರೆ, ಗ್ರೀನ್ ಫೀಲ್ಡ್ ನ ಬಂಡವಾಳ ಹೂಡಿಕೆ ಚೇತರಿಕೆಯ ಹಂತದಲ್ಲಿದೆ. ಈ ಚೇತರಿಕೆ ಹೇಳಿಕೊಳ್ಳುವ ಮಟ್ಟದಲ್ಲಿಲ್ಲವಾದರೂ, 2015ರಲ್ಲಿ ಬಂಡವಾಳ ಹೂಡಿಕೆ ಪ್ರಮಾಣ ಶೇ.9 (713 ಬಿಲಿಯನ್ ಅಮೆರಿಕನ್ ಡಾಲರ್)ರಷ್ಟಿದೆ. ಇನ್ನು ಜಾಗತಿಕ ಮಟ್ಟದಲ್ಲಿ ಉದ್ಯೋಗ ಸೃಷ್ಟಿಯಲ್ಲಿ ಕೇವಲ ಶೇ.1ರಷ್ಟು (18.9 ಲಕ್ಷ) ಹೆಚ್ಚಾಗಿದೆ.

ಟಿಪ್ಪಣಿ- ಜಿಡಿಪಿ, ಬಂಡವಾಳ ಹೂಡಿಕೆ ಹೀಗೆ ಹಲವು ಅಂಶಗಳಲ್ಲಿ ಭಾರತವು ಚೀನಾವನ್ನು ಮೀರಿಸುತ್ತಿದೆ ಎಂಬ ಸುದ್ದಿಗಳನ್ನು ಹೇಗೆ ಅರ್ಥಮಾಡಿಕೊಳ್ಳಬೇಕು ಎಂಬುದು ಮುಖ್ಯ. ಈ ಅಂಕಿಅಂಶಗಳ ಅರ್ಥ ನಾವು ಚೀನಾವನ್ನು ಮೀರಿಸಿಬಿಟ್ಟಿದ್ದೇವೆ ಎಂಬುದಲ್ಲ. ಚೀನಾ ಅದಾಗಲೇ ಹಲವು ಸುತ್ತುಗಳ ಓಟದಲ್ಲಿ ಮುಂದಿದೆ. ಕಂಪನಿಯೊಂದರಲ್ಲಿ 20 ಸಾವಿರ ಸಂಬಳ ತೆಗೆದುಕೊಳ್ಳುವವನಿಗೆ ಈ ವರ್ಷ ಹತ್ತು ಪರ್ಸೆಂಟ್ ಸಂಬಳ ಹೆಚ್ಚಾಗಿ, ಒಂದು ಲಕ್ಷ ತೆಗೆದುಕೊಳ್ಳುತ್ತಿದ್ದವನಿಗೆ ಎಂಟು ಪರ್ಸೆಂಟ್ ಮಾತ್ರ ಹೆಚ್ಚಾದರೆ, ಆತನನ್ನು ಮೊದಲಿನವ ಮೀರಿಸಿಬಿಟ್ಟ ಎನ್ನಲಾಗುವುದಿಲ್ಲವಲ್ಲ…

ಈ ಅರ್ಥದಲ್ಲಿ ತೆಗೆದುಕೊಂಡಾಗ ಭಾರತದ ಪಾಲಿಗೆ ಶುಭಾರಂಭವಾಗಿದೆ. ಆದರೆ ನಿರಂತರ ಇದೇ ತುರುಸು, ಮೇಲ್ಮೈ ಕಾಪಾಡಿಕೊಂಡರೆ ಕೆಲವು ವರ್ಷಗಳ ನಂತರ ಚೀನಾ ಸೇರಿದಂತೆ ಬಲಾಢ್ಯರ ಸಮನಾಗಬಹುದು ಎನ್ನೋದೇ ವಾಸ್ತವ.

Leave a Reply