ಸುದ್ದಿ ಸಂತೆ: ಮಂಡಕಳ್ಳಿ ವಿಮಾನ ನಿಲ್ದಾಣ ಬಂದ್, ಉತ್ತರಾಖಂಡದಲ್ಲಿ ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ತಡೆ, ಕಮಲ ಹಾಸನ್ ಚರ್ಚುಗಳ ಬಗ್ಗೆ ಏನಂದ್ರು?, ಅರುಣಾಚಲದಲ್ಲಿ ಮಳೆಯಬ್ಬರಕ್ಕೆ 16 ಸಾವು..

ಇಂದು ಮಧ್ಯರಾತ್ರಿಯ ಕರಗ ಉತ್ಸವಕ್ಕೆ ಸಜ್ಜಾಗಿರುವ ಒಂದು ಬಿಂಬ. ಕರಗದ ಆಸಕ್ತಿದಾಯಕ ಅಂಶಗಳನ್ನು ನೀವೀ ಲೇಖನದಲ್ಲಿ ಓದಬಹುದು.

ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣ ಮುಚ್ಚುವ ನಿರ್ಧಾರ

ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣವನ್ನು ಅನುಪಯೋಗಿ ಪಟ್ಟಿಗೆ ಸೇರಿಸಲು ಕೇಂದ್ರ ವಿಮಾನಯಾನ ಖಾತೆ ತೀರ್ಮಾನಿಸಿದೆ. ವಿಮಾನ ನಿಲ್ದಾಣ ಆರಂಭಗೊಂಡು ಕಳೆದ ಮೂರು ವರ್ಷಗಳಿಂದ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರಕ್ಕೆ 37.69 ಕೋಟಿ ರೂ.ಗಳಷ್ಟು ನಷ್ಟವಾಗಿವೆ.

ಮಂಡಕಳ್ಳಿ ವಿಮಾನ ನಿಲ್ದಾಣದಿಂದ ವಿಮಾನ ಹಾರಾಟಕ್ಕೆ ಅನುವು ಮಾಡಿದ ನಂತರ ಕಿಂಗ್ ಫಿಷರ್ ನಂತರ ಸ್ಪೈಸ್ ಜೆಟ್ ಇದಾದ ಮೇಲೆ ಏರ್‍ಇಂಡಿಯಾ ಬೆಂಗಳೂರಿನಿಂದ ಮೈಸೂರಿಗೆ ವಿಮಾನಯಾನ ಸೇವೆ ನೀಡಿದ್ದವು. ಆದರೆ ಪ್ರಯಾಣಿಕರ ಸಂಖ್ಯೆ ಎರಡಂಕಿ ಮುಟ್ಟಿದ್ದೇ ವಿರಳ. ಮೈಸೂರು- ಬೆಂಗಳೂರು ರೈಲು ಮತ್ತು ರಸ್ತೆ ಮಾರ್ಗಗಳು ಇರುವುದರಿಂದ ಹಾಗೂ ವಿಮಾನಯಾನದ ಮೂಲಕ ಇವಕ್ಕೆ ಹೋಲಿಸಿದಲ್ಲಿ ಭಾರೀ ಸಮಯದ ಉಳಿತಾಯವೇನೂ ಆಗುತ್ತಿಲ್ಲವೆಂಬ ಅಂಶ ಗಮನದಲ್ಲಿರಿಸಿದಾಗ ಭವಿಷ್ಯದಲ್ಲಿಯೂ ಏಳ್ಗೆ ಕಷ್ಟವಿದೆಯಾದ್ದರಿಂದ ಸ್ಥಗಿತ ನಿರ್ಧಾರ ಹೊರಬಿದ್ದಿದೆ.

ಕಾಲೇಜು ಪ್ರಾಧ್ಯಾಪಕರ ನೇಮಕ

ಸರ್ಕಾರಿ ಪದವಿ ಕಾಲೇಜುಗಳಿಗೆ 2160 ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಕಾರ್ಯ ಮಾಸಾಂತ್ಯಕ್ಕೆ ಪೂರ್ಣಗೊಳ್ಳಲಿದೆ ಎಂದು ಉನ್ನತ ಶಿಕ್ಷಣ ಸಚಿವ ಟಿ.ಬಿ.ಜಯಚಂದ್ರ ತಿಳಿಸಿದ್ದಾರೆ.

ನೇಮಕಾತಿ ಸಂದರ್ಭದಲ್ಲಿ ಅತಿಥಿ ಉಪನ್ಯಾಸಕರಿಗೆ ಆದ್ಯತೆ ನೀಡಿ, ಅವರ ವಯೋಮಿತಿಯನ್ನೂ ಸಡಿಲಿಸಲಾಗಿದೆ. ಆದರೆ ನೇಮಕಾತಿಯಲ್ಲಿ ಗುಣಮಟ್ಟ ಕಾಪಾಡುವ ಉದ್ದೇಶದಿಂದ ಅತಿಥಿ ಉಪನ್ಯಾಸಕರು ಪ್ರವೇಶ ಪರೀಕ್ಷೆ ಬರೆಯುವುದು ಕಡ್ಡಾಯವಾಗಿದೆ.

ಮಾಗಡಿಯ ಆಯಿಲ್ ಕಾರ್ಖಾನೆಗೆ ಬೆಂಕಿ, ಮಹಿಳೆ ಸಜೀವ ದಹನ

ಆಯಿಲ್ ಕಾರ್ಖಾನೆಗೆ ಬೆಂಕಿ ಬಿದ್ದು, ಮಹಿಳೆಯೊಬ್ಬರು ಸಜೀವ ದಹನವಾಗಿ ನಾಲ್ವರು ಗಾಯಗೊಂಡಿರುವ ದುರ್ಘಟನೆ ಬೆಂಗಳೂರಿನ ಮಾಗಡಿ ರಸ್ತೆಯ ಸಿಗೇಹಳ್ಳಿ ಗೇಟ್ ಬಳಿ ನಡೆದಿದೆ. ಮಾಲಿಕನ ಕರೆಯ ಮೇರೆಗೆ ಮನೆಯ ಪಕ್ಕದಲ್ಲೇ ಇದ್ದ ಕಾರ್ಖಾನೆಗೆ ಇಂದೇ ಮೊದಲ ಸಲ ಕೆಲಸಕ್ಕೆ ಹೋಗಿದ್ದ 22 ವರ್ಷದ ಗಾಯಿತ್ರಿ ಎಂಬಾಕೆಯೇ ಮೃತ ಪಟ್ಟ ದುರ್ದೈವಿ. ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಇತರ ನಾಲ್ವರು ಗಾಯಗೊಂಡು ಆಸ್ವತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಾರ್ಖಾನೆಯಲ್ಲಿ ಆಯಿಲ್ ಬ್ಯಾರಲ್ ಗಳು ಹೆಚ್ಚಿದ್ದ ಕಾರಣ ಬೆಂಕಿ ಬಹು ಬೇಗ ಹರಡಲು ಕಾರಣವಾಗಿದೆ. ಸುಮಾರು 6 ಗಂಟೆಗಳ ಕಾಲ 10 ಅಗ್ನಿ ಶಾಮಕದಳ ವಾಹನಗಳು ಮತ್ತು ಸಿಬ್ಬಂದಿ ಬೆಂಕಿಯನ್ನು ನಂದಿಸಲು ಹರಸಾಹಸ ಪಟ್ಟಿದ್ದಾರೆ. ಘಟನೆಗೆ ನಿಖರ ಕಾರಣ ತಿಳಿದಿಲ್ಲ. ತಾವರೆಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹೈಕೋರ್ಟ್ ತೀರ್ಪಿಗೆ ಸುಪ್ರೀಂ ತಡೆ, ಉತ್ತರಾಖಂಡದಲ್ಲಿ ಮತ್ತೆ ರಾಷ್ಟ್ರಪತಿ ಆಳ್ವಿಕೆ

ಕಳೆದ ತಿಂಗಳು ಉತ್ತರಾಖಂಡದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿ ಮಾಡಿದ್ದ ಕೇಂದ್ರ ಸರ್ಕಾರದ ನಿರ್ಧಾರವನ್ನು ತೆರವುಗೊಳಿಸಿದ್ದ ರಾಜ್ಯ ಹೈಕೋರ್ಟ್ ನಿರ್ಧಾರವನ್ನು ಶುಕ್ರವಾರ ಸುಪ್ರೀಂ ಕೋರ್ಟ್ ತಡೆ ಹಿಡಿದಿದೆ. ಆ ಮೂಲಕ ಉತ್ತರಾಖಂಡ ಕಾಂಗ್ರೆಸ್ ಗೆ ಹಿನ್ನಡೆಯಾಗಿದೆ. ಗುರುವಾರ ನೀಡಿದ ತೀರ್ಪಿನಲ್ಲಿ ಹೈಕೋರ್ಟ್ ಕೇಂದ್ರ ಸರ್ಕಾರದ ನಿರ್ಧಾರವನ್ನು ಕಟುವಾಗಿ ಟೀಕಿಸಿತ್ತು. ಕಾಂಗ್ರೆಸ್ ಶಾಸಕಾಂಗ ಪಕ್ಷದ ಮುಖಂಡ ಹರೀಶ್ ರಾವತ್ ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರಿಯುವಂತೆ ಸೂಚಿಸಿತ್ತು. ಅಲ್ಲದೇ ಏ.29ರಂದು ಬಹುಮತ ಸಾಬೀತುಪಡಿಸಲು ನಿರ್ಧರಿಸಿತ್ತು.

ಶುಕ್ರವಾರ ಕೇಂದ್ರ ಸರ್ಕಾರ ಹೈಕೋರ್ಟ್ ತೀರ್ಪಿನ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ಈ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಹೈಕೋರ್ಟ್ ನಿರ್ಧಾರಕ್ಕೆ ತಡೆ ನೀಡಿದೆ. ಏ.26ರ ಒಳಗಾಗಿ ತೀರ್ಪಿನ ಪ್ರತಿ ನೀಡುವಂತೆ ಹೈಕೋರ್ಟ್ ಗೆ ಸೂಚನೆ ನೀಡಿದ್ದು, ಮುಂದಿನ ವಿಚಾರಣೆಯನ್ನು ಏ.27ಕ್ಕೆ ಮುಂದೂಡಿದೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಹರೀಶ್ ರಾವತ್, ‘ಸುಪ್ರೀಂ ಕೋರ್ಟ್ ಬಳಿ ಹೈಕೋರ್ಟ್ ತೀರ್ಪಿನ ಪ್ರತಿ ಇಲ್ಲದ ಕಾರಣ ತಡೆಯಾಜ್ಞೆ ನೀಡಿದೆ. ಇದು ಕೇವಲ ಏ.27ರವರೆಗೆ ಮಾತ್ರ’ ಎಂದು ತಿಳಿಸಿದ್ದಾರೆ.

ಐದು ಕೋಟಿ ಬಿಪಿಎಲ್ ಕುಟುಂಬಕ್ಕೆ ಉಚಿತ ಎಲ್ ಪಿಜಿ ಸಂಪರ್ಕ ಯೋಜನೆಗೆ ಮೇ 1ರಂದು ಚಾಲನೆ

ಪ್ರಧಾನ ಮಂತ್ರಿ ಉಜ್ವಲ ಯೋಜನೆ ಮೂಲಕ ₹8 ಸಾವಿರ ಕೋಟಿ ವೆಚ್ಚದಲ್ಲಿ 5 ಕೋಟಿ ಬಡ ಕುಟುಂಬಗಳಿಗೆ ಉಚಿತ ಎಲ್ ಪಿಜಿ ಪೂರೈಸುವ ಹೊಸ ಯೋಜನೆಯನ್ನು ಮೇ 1ರಂದು ಪ್ರಧಾನಿ ಉದ್ಘಾಟಿಸಲಿದ್ದಾರೆ. ಇನ್ನು‘ಗಿವ್ ಇಟ್ ಅಪ್’ ಆಂದೋಲನದ ಮೂಲಕ ದೇಶದ 1.13 ಕೋಟಿ ಅಡುಗೆ ಅನಿಲ ಬಳಕೆದಾರರು ಕೇಂದ್ರ ಸರ್ಕಾರದ ಸಬ್ಸಿಡಿ ವಿನಾಯಿತಿಯನ್ನು ವಾಪಸ್ ನೀಡಿದ್ದಾರೆ. ‘ಮಹಾರಾಷ್ಟ್ರದಲ್ಲಿ 16.44 ಲಕ್ಷ, ಉತ್ತರ ಪ್ರದೇಶದಲ್ಲಿ ಸುಮಾರು 13 ಲಕ್ಷ, ದೆಹಲಿಯಲ್ಲಿ 7.26 ಲಕ್ಷ ಮಂದಿ ಈ ಸಬ್ಸಿಡಿಯನ್ನು ಬಿಟ್ಟಿದ್ದರು. ಈ ಮೂರು ರಾಜ್ಯಗಳು ಸೇರಿದಂತೆ ಕರ್ನಾಟಕ ಮತ್ತು ತಮಿಳುನಾಡಿನ ಅರ್ಧಕ್ಕರ್ದದಷ್ಟು ಮಂದಿ ಈ ಸಬ್ಸಿಡಿಯನ್ನು ವಾಪಸ್ ಮಾಡಿದ್ದಾರೆ. ಈ ಹಣದಲ್ಲಿ ಬಡ ಕುಟುಂಬಗಳಿಗೆ ಅಡುಗೆ ಅನಿಲ ಪೂರೈಕೆ ಈ ಯೋಜನೆಯ ಉದ್ದೇಶವಾಗಿದೆ’ ಎಂದು ಅನಿಲ ಸಚಿವ ಧರ್ಮೇಂದ್ರ ಪ್ರಧಾನ್ ತಿಳಿಸಿದ್ದಾರೆ..

ಸಿಯಾಚಿನ್ ಯೋಧರ ನೆರವಿಗೆ ಇಸ್ರೋ ವಿಜ್ಞಾನಿಗಳು

ದೇಶದ ಅತ್ಯಂತ ಭಯಾನಕ ಗಡಿ ಪ್ರದೇಶವಾಗಿರುವ ಸಿಯಾಚಿನ್ ನಲ್ಲಿ ಕಾರ್ಯನಿರ್ವಹಿಸುತ್ತಿರುವ ಯೋಧರ ನೆರವಿಗೆ ಇಸ್ರೋ ವಿಜ್ಞಾನಿಗಳು ಹೊಸ ಅನ್ವೇಷಣೆಗೆ ಮುಂದಾಗಿದ್ದಾರೆ. ಮಾರಣಾಂತಿಕ ಚಳಿಯ ವಾತಾವರಣದಲ್ಲಿ ಭಾರತೀಯ ಯೋಧರಿಗೆ ನೆರವಾಗುವಂತೆ ಉಷ್ಣಾಂಶ ಹೆಚ್ಚಿಸುವ ನಿಟ್ಟಿನಲ್ಲಿ ವಿಜ್ಞಾನಿಗಳು ಸಿಲಿಕ ಏರೋಜೆಲ್ ಅನ್ವೇಷಣೆ ಮಾಡಿದ್ದಾರೆ. ಭೂಮಿಯ ಮೇಲಿರುವ ಅತ್ಯಂತ ಹಗುರ ವಸ್ತು ಇದಾಗಿದ್ದು, ಇದನ್ನು ಬ್ಲೂ ಏರ್ ಅಥವಾ ಫ್ರೋಜನ್ ಸ್ಮೋಕ್ ಅಂತಲೂ ಕರೆಯುತ್ತಾರೆ.

ಚರ್ಚ್ ಗಳು ತಪ್ಪಿಗೆ ಕ್ಷಮೆ ಕೇಳಲು 300-400 ವರ್ಷ ತೆಗೆದುಕೊಂಡವು: ಕಮಲ್ ಕಿಡಿ

ವಿಶ್ವದ ಇತಿಹಾಸದಲ್ಲಿ ಚರ್ಚ್ ಗಳು ಧರ್ಮದ ಹೆಸರಿನಲ್ಲಿ ಜನರನ್ನು ಹತ್ಯೆ ಮಾಡಿದ ತಪ್ಪಿಗೆ ಕ್ಷಮೆ ಕೇಳಲು 300- 400 ವರ್ಷ ತೆಗೆದುಕೊಂಡಿದೆ ಎಂದು ಭಾರತ ಚಿತ್ರರಂಗದ ಖ್ಯಾತ ನಟ ಕಮಲ ಹಾಸನ್ ಕಿಡಿ ಕಾರಿದ್ದಾರೆ.  ಶುಕ್ರವಾರ ಮಹಿಳಾ ಕ್ರಿಶ್ಚಿಯನ್ ಕಾಲೇಜಿನಲ್ಲಿ ರೆವ್ ಮಾರ್ಟೀನ್ ಲೂಥರ್ ಕಿಂಗ್ ಜೂ. ಸ್ಮಾರಕ ಭಾಷಣದಲ್ಲಿ ಮಾತನಾಡಿದ ಕಮಲ ಹಾಸನ್, ಚರ್ಚ್ ಗಳ ಧೋರಣೆಯನ್ನು ಟೀಕಿಸಿದರು. ಇದೇ ವೇಳೆ ಅಮೆರಿಕದಲ್ಲಿ ಕರಿಯ ಅಧ್ಯಕ್ಷನನ್ನು ಆಯ್ಕೆ ಮಾಡಿದ್ದಕ್ಕೆ ಶ್ಲಾಘಿಸಿದರು. ಇನ್ನು ಯುದ್ಧದಿಂದ ಹೊರಬರಲು ವಿಫಲವಾಗಿರೋ ರಾಷ್ಟ್ರಗಳ ವಿರುದ್ಧವೂ ಕಮಲ್ ಬೇಸರ ವ್ಯಕ್ತಪಡಿಸಿದರು.

ಮಹಾರಾಷ್ಟ್ರ, ಕರ್ನಾಟಕದ ನಂತರ ಹೈದರಾಬಾದ್ ನಲ್ಲಿ ನೀರು ಅನಗತ್ಯ ಪೋಲು

ಆಂಧ್ರ ಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಸಾರ್ವಜನಿಕವಾಗಿ ನೀರನ್ನು ಮಿತವಾಗಿ ಬಳಸಿ, ಸಂರಕ್ಷಿಸಿ ಎಂದು ಕರೆ ನೀಡಿದ್ದಾರೆ. ಆದರೆ, ಅನಂತರಪುರಕ್ಕೆ ಮುಖ್ಯಮಂತ್ರಿ ಭೇಟಿ ಸಂದರ್ಭದಲ್ಲಿ ಹೆಲಿಪ್ಯಾಡ್ ಸಿದ್ಧತೆಗಾಗಿ ಸಾವಿರಾರು ಲೀಟರ್ ವೆಚ್ಚಮಾಡಲಾಗಿದೆ. ಕನಿಷ್ಠ 5 ಸಾವಿರ ಲೀಟರ್ ಸಾಮರ್ಥ್ಯದ ನಾಲ್ಕು ಟ್ಯಾಂಕರ್ ಗಳನ್ನು ಇಲ್ಲಿ ಬಳಸಲಾಗಿದೆ. ಒಟ್ಟಿನಲ್ಲಿ ಜನಸಾಮಾನ್ಯರು ಯಾವುದೇ ಪರಿಸ್ಥಿತಿಯಲ್ಲಿದ್ದರೂ ನಾಯಕರುಗಳು ಮಾತ್ರ ತಮಗೆ ಹೇಗೆ ಬೇಕೋ ಹಾಗೇ ಇರುತ್ತಾರೆ ಎಂಬುದು ಮತ್ತೊಮ್ಮೆ ಸ್ಪಷ್ಟವಾಗಿದೆ. ಈ ಹಿಂದೆ ಮಹಾರಾಷ್ಟ್ರ ಶಾಸಕರ ಬರವೀಕ್ಷಣೆಗೆ ಹೆಲಿಪ್ಯಾಡ್ ಸಜ್ಜುಗೊಳಿಸಲು ಹೀಗೆಯೇ ನೀರನ್ನು ವ್ಯಯಿಸಲಾಗಿತ್ತು. ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬರ ಪರಿಹಾರ ವೀಕ್ಷಣೆಗೆ ಸಾಗಬೇಕಿದ್ದ ಹಾದಿಯಲ್ಲಿ ದೂಳು ಹಾರಬಾರದೆಂದು ಟ್ಯಾಂಕರ್ ನಲ್ಲಿ ನೀರು ಚಿಮುಕಿಸಲಾಗಿತ್ತು. ಇಂಥ ಎಲ್ಲ ವಿರೋಧಾಭಾಸ- ಅಪಸವ್ಯಗಳ ಸಾಲಿಗೆ ಚಂದ್ರಬಾಬು ನಾಯ್ಡು ಬರವೀಕ್ಷಣೆ ಸಹ ಸೇರಿಕೊಂಡಿದೆ.

ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಎಂಸಿಎ

ಮಹಾರಾಷ್ಟ್ರದಲ್ಲಿ ನೀರಿನ ಅಭಾವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ನಡೆಯಬೇಕಿದ್ದ ಐಪಿಎಲ್ ಪಂದ್ಯಗಳ ಸ್ಥಳಾಂತರ ಮಾಡಬೇಕು ಎಂಬ ಬಾಂಬೆ ಹೈಕೋರ್ಟ್ ನಿರ್ಧಾರ ವಿರುದ್ಧ ಮುಂಬೈ ಕ್ರಿಕೆಟ್ ಸಂಸ್ಥೆ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ. ಎಂಸಿಎ ಪರ ಕಪಿಲ್ ಸಿಬಲ್ ವಾದ ಮಂಡಿಸಲಿದ್ದು, ಐಪಿಎಲ್ ಪಂದ್ಯಗಳು ಜನತೆಯ ವಿರುದ್ಧವಾಗಿಲ್ಲ ಎಂದು ತಿಳಿಸಿದೆ. ಪಿಚ್ ನಿರ್ವಹಣೆಗೆ ಬಳಕೆಯಾದ ನೀರನ್ನು ಬಳಸುವುದಾಗಿ ತಿಳಿಸಿದೆ.

ವಿದೇಶದಲ್ಲಿ ಆಸ್ತಿ ಎಷ್ಟಿದ್ದರೇನು ಅಂದ ಮಲ್ಯ ನೀಡಿರೋದು 6868 ಕೋಟಿಯ ಮತ್ತೊಂದು ಆಫರ್ ಉದ್ದೇಶಿತ ಸುಸ್ತಿದಾರ ವಿಜಯ್ ಮಲ್ಯ ಪರಿಸ್ಥಿತಿ ತುಂಬ ಬಿಗಡಾಯಿಸಿದ್ದು, ಬ್ಯಾಂಕುಗಳಿಂದ ಪಡೆದ ಸಾಲವನ್ನು ಮರು ಪಾವತಿಸುವಂತೆ ಒತ್ತಡ ಹೆಚ್ಚಾಗುತ್ತಿದೆ. ಇದಕ್ಕೆ ಪೂರಕವೆಂಬಂತೆ ಸುಪ್ರಿಂ ಕೋರ್ಟ್ ಸಹ ಪಾಸ್ ಪೋರ್ಟ್ ಜಪ್ತಿ, ಬಂಧನ ರಹಿತ ವಾರೆಂಟ್ ನಂತಹ ಕಠಿಣ ಆದೇಶಗಳನ್ನು ನೀಡಿತ್ತು. ಈ ಮಧ್ಯೆ ಮಲ್ಯ ಕೋರ್ಟಿಗೆ ಪ್ರಮಾಣಪತ್ರ ಸಲ್ಲಿಸಿ ಅನಿವಾಸಿ ಭಾರತೀಯರು ಹೊಂದಿರುವ ಆಸ್ತಿಗಳ ವಿವರಗಳನ್ನು ಬಹಿರಂಗ ಪಡಿಸುವ ಅವಶ್ಯಕತೆ ಇಲ್ಲ. ಜೊತೆಗೆ ಬ್ಯಾಂಕುಗಳಿಗೂ ವಿದೇಶಗಳ ಸ್ಥಿರ ಮತ್ತು ಚರ ಆಸ್ತಿಗಳನ್ನು ಜಪ್ತಿಮಾಡುವ ಹಕ್ಕು ಇಲ್ಲ ಎಂದಿದ್ದಾರೆ. ಇದರ ನಡುವೆಯೆ ಮತ್ತೆ ಬ್ಯಾಂಕುಗಳಿಗೆ ₹ 6868 ಕೋಟಿ ಸಾಲವನ್ನು ಮರುಪಾವತಿ ಮಾಡುವುದಾಗಿ ಆಫರ್ ನೀಡಿದ್ದಾರೆ.

ದೇಶದ ಆದಾಯ ತೆರಿಗೆ ಪ್ರಾಧಿಕಾರದ ಅಧಿಕಾರಿಗಳು ಸಹ ಸಾಗರೋತ್ತರ ಆಸ್ತಿಗಳ ವಿವರಗಳನ್ನು ಸಾರ್ವಜನಿಕಗೊಳಿಸಬೇಕು ಎಂದು ನಿರ್ಬಂಧ ಹೇರುವಂತಿಲ್ಲ ಎಂದಿದ್ದಾರೆ ಮಲ್ಯ. ಜೊತೆಗೆ ಜೂನ್ 26 ರ ನಂತರ ಸಾಗರೋತ್ತರದ ಆಸ್ತಿಯ ವಿವರಗಳನ್ನು ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಲು ಅನುಮತಿ ನೀಡುವಂತೆ ಮನವಿ ಮಾಡಿದ್ದಾರೆ.

ಮಲ್ಯ ಅವರು ಕೋರ್ಟಿ ಸಲ್ಲಿಸಿರುವ ದಾಖಲೆಗಳ ಪ್ರಕಾರ ಮೂರು ಮಕ್ಕಳು ಮತ್ತು ದೂರವಾಗಿರುವ ಪತ್ನಿಯನ್ನು ಹೊಂದಿದ್ದು ಇದು ಖಾಸಗಿ ವಿಷಯ ಎಂದು ತಿಳಿಸಿರುವುದಾಗಿ ದ ಇಂಡಿಯನ್ ಎಕ್ಸಪ್ರೆಸ್ ವರದಿ ಮಾಡಿದೆ. ಇನ್ನೂ ಈ ಹಿಂದೆ ₹4400 ಕೋಟಿ ಸಾಲವನ್ನು ಮಾತ್ರ ಪಾವತಿಸುತ್ತೇನೆ ಎಂದು ಬ್ಯಾಂಕುಗಳಿಗೆ ಆಫರ್ ನೀಡಿದ್ದರು. ಆದರೆ ಇದನ್ನು ಬ್ಯಾಂಕುಗಳು ತಿರಸ್ಕರಿಸಿದ್ದವು. ಈಗ ಸಾಲ ಪಾವತಿಯ ₹2468 ಕೋಟಿ ಮೊತ್ತವನ್ನು ಏರಿಕೆ ಮಾಡಿ ₹6868 ಕೋಟಿಗಳನ್ನು ಕೊಡುತ್ತೇನೆ ಎಂದು ಬ್ಯಾಂಕುಗಳಿಗೆ ಮತ್ತೊಂದು ಆಫರ್ ನೀಡಿದ್ದಾರೆ. ಆದರೆ ಮಲ್ಯ 17 ಬ್ಯಾಂಕುಗಳಿಂದ 9 ಸಾವಿರ ಕೋಟಿಯಷ್ಟು ಸಾಲ ಪಡೆದಿದ್ದು, ₹6868 ಕೋಟಿ ಸಾಲ ಮರುಪಾವತಿಸಿದರೆ ಉಳಿದ 2132 ಕೋಟಿ ಬಾಕಿ ಮೊತ್ತದ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ.

ಅರುಣಾಚಲ ಪ್ರದೇಶದಲ್ಲಿ ಭಾರಿ ಮಳೆ, ದಿಬ್ಬ ಕುಸಿದು 16 ಸಾವು

ಅರುಣಾಚಲ ಪ್ರದೇಶದ ತವಾಗ್ ಜಿಲ್ಲೆಯಲ್ಲಿ ಕೆಲ ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಗೆ ಶುಕ್ರವಾರ ಮಣ್ಣು ದಿಬ್ಬಗಳು ಕುಸಿದು 16 ಕ್ಕೂ ಹೆಚ್ಚು ಮಂದಿ ಮೃತರಾಗಿದ್ದಾರೆ. ಸುಮಾರು 3 ಸಾವಿರ ಮೀಟರ್ (7 ಸಾವಿರ ಅಡಿ) ಗಳ ಮೇಲಿನ ಗುಡ್ಡಗಳು ಕುಸಿದಿದ್ದು, ನಿರ್ಮಾಣ ಕಾಮಗಾರಿಯ ಕೆಲಸಗಾರರು ತಂಗಿದ್ದ ಕ್ಯಾಂಪ್ ಮೇಲೆ ಬಿದ್ದ ಪರಿಣಾಮ ಹಲವರು ಪ್ರಾಣ ಕಳೆದುಕೊಂಡಿದ್ದಾರೆ. ಎನ್ ಡಿ ಆರ್ ಎಫ್ ತಂಡ ರಕ್ಷಣಾ ಕಾರ್ಯ ಕೈಗೊಂಡು ಮಣ್ಣಿನಡಿ ಸಿಲುಕಿ ಮೃತಪಟ್ಟವರನ್ನು ಹೊರತೆಗೆದಿದ್ದಾರೆ.

ನ್ಯೂ ಲ್ಯಾಬ್ ರಾಂಗ್ ಮತ್ತು ಸರ್ಕಾರಿ ಶಾಲೆಯ ನಡುವೆ ದಿಬ್ಬ ಕುಸಿತದಿಂದ ಪಿ ಡಬ್ಲೂ ಡಿ ರಸ್ತೆ ಸಂಪೂರ್ಣ ಮುಚ್ಚಿಹೋಗಿದೆ. ಜೊತೆಗೆ ಹಲವು ಕಟ್ಟಡಗಳು ಹಾನಿಗೀಡಾಗಿವೆ. ಕಿಟ್ಪೀ 1 ನೇ ಹಂತ ಮತ್ತು ಎರಡನೇ ಹಂತದ ಜಲ ವಿದ್ಯುತ್ ಯೋಜನೆಗಳಿಗೂ ಹಾನಿಯಾಗಿದ್ದು, ವಿದ್ಯುತ್ ಉತ್ಪಾದನೆ ಸ್ಥಗಿತಗೊಂಡಿದೆ. ಮಳೆಯಿಂದ ತೀವ್ರ ಪ್ರವಾಹ ಉಂಟಾಗಿ ಹಲವು ಕಾರುಗಳು, ದ್ವಿಚಕ್ರ ವಾಹನಗಳು ಕೊಚ್ಚಿಕೊಂಡು ಹೋಗಿವೆ.

Leave a Reply