ಹಾಸನದ ಸಿಗರನಹಳ್ಳಿ ತನ್ನ ಪಾಡಿಗೆ ತಾನಿತ್ತು, ಆದ್ರೆ ಇವ್ರೆಲ್ಲ ಸೇರ್ಕೊಂಡು ಅದರ ನೆಮ್ಮದಿಗೇ ಕೊಳ್ಳಿ ಇಟ್ರು!

ಡಿಜಿಟಲ್ ಕನ್ನಡ ವಿಶೇಷ

ತಮ್ಮ ಪಾಡಿಗೆ ತಾವು ನೆಮ್ಮದಿಯಾಗಿ ಜೀವನ ಮಾಡುತ್ತಿದ್ದ ಮುಗ್ಧಜನ ಈ ಸ್ವಾರ್ಥ ರಾಜಕಾರಣಿಗಳ ಪ್ರತಿಷ್ಠೆ ಜಗಳಕ್ಕೆ ಸಿಕ್ಕಿ ಹೇಗೆ ಹಣ್ಣುಗಾಯಿ-ನೀರುಗಾಯಿ ಆಗುತ್ತಾರೆಂಬುದಕ್ಕೆ ಸಿಗರನಹಳ್ಳಿ ದೇಗುಲ ವಿವಾದ ಇಡೀ ಹಾಸನ ಜಿಲ್ಲೆಯ ನೆಮ್ಮದಿಯನ್ನು ಬಲಿ ತೆಗೆದುಕೊಂಡಿರುವುದೇ ಒಂದು ಜ್ವಲಂತ ಸಾಕ್ಷಿ.

ಇಲ್ಲಿ ಕೆಲವರು ನಾಯಕರಾಗಿ ಹೊರಹೊಮ್ಮಬೇಕೆಂಬ ಹಂಬಲಕ್ಕೆ ಜಾತಿ ಸಂಘರ್ಷ ಹುಟ್ಟುಹಾಕಿದ್ದಾರೆ. ಈಗಾಗಲೇ ನಾಯಕರಾಗಿರುವವರು ಈ ಜಾತಿ ಸಂಘರ್ಷದ ಎಳೆ ಹಿಡಿದುಕೊಂಡೇ ಸಮಾಜದ ಶಾಂತಿಗೆ ಕೊಳ್ಳಿಯಿಟ್ಟು, ಅದರಲ್ಲಿ ತಮ್ಮ ದವಲತ್ತಿನ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ. ಈ ಎರಡು ಬಗೆಯ ಸ್ವಾರ್ಥ ಸಂಘರ್ಷದ ದಾಳಗಳಾದ ಜನ ತಮ್ಮದಲ್ಲದ ತಪ್ಪಿಗೆ ಊರು ಬಿಟ್ಟೋಡಿದ್ದಾರೆ.

ಈ ಸಂಘರ್ಷದ ಹಿನ್ನೆಲೆ-ಮುನ್ನಲೆ ಕೆದಕಿದಾಗ ಮನದಟ್ಟಾಗಿದ್ದು ಏನೆಂದರೇ..,

ಹೊಳೆನರಸೀಪುರದಿಂದ 5 ಕಿ.ಮಿ. ದೂರದ ಸಿಗರನಹಳ್ಳಿಯಲ್ಲಿ ಬಸವೇಶ್ವರ (ನಂದಿ) ದೇಗುಲವಿದ್ದು, ಹಿಂದಿನಿಂದಲೂ ಲಿಂಗಾಯತ ಸಮುದಾಯದ ಐನೋರು ಪೂಜೆ-ಪುನಸ್ಕಾರ ಮಾಡಿಕೊಂಡು ಬಂದಿದ್ದಾರೆ. ದಲಿತರಿಗೆ ದೇಗುಲ ಪ್ರವೇಶ ಇರಲಿಲ್ಲ. ಇಂತಿರುವಾಗ ದಲಿತ ಸಮುದಾಯದವರಿಗೂ ದೇಗುಲ ಗರ್ಭಗುಡಿ ಪ್ರವೇಶಕ್ಕೆ ಅವಕಾಶ ನೀಡಬೇಕು ಎಂಬ ಕೂಗು ಇತ್ತೀಚೆಗೆ ಕೇಳಿ ಬಂದಿತ್ತು. ಅಲ್ಲದೇ, ರಾಜ್ಯ ಮಟ್ಟದ ಕನ್ನಡ ಪತ್ರಿಕೆಯೊಂದರ ವರದಿಗಾರರಾಗಿದ್ದ ವಿಜಯ ಕುಮಾರ್ ಆ ಕೂಗಿನ ನೇತೃತ್ವ ವಹಿಸಿದ್ದರು. ನಾಲ್ಕೈದು ತಿಂಗಳ ಹಿಂದೆ ಜಿಲ್ಲಾಧಿಕಾರಿ ಉಮೇಶ್ ಹುಸ್ಗಲ್ ಅವರಿಗೆ ಈ ಬಗ್ಗೆ ಮನವಿಯನ್ನೂ ಕೊಟ್ಟಿದ್ದರು.

ಸಿಗರನಹಳ್ಳಿಯಲ್ಲಿ ಮತ್ತೊಂದು ದೇವಾಲಯವಿದೆ. ಅದು ಉಡಿಸಲಮ್ಮ ದೇಗುಲ. ಆಕೆಯನ್ನು ದುರ್ಗಾಪರಮೇಶ್ವರಿ ಎಂದೂ ಕರೆಯುತ್ತಾರೆ. ಈ ದೇಗುಲವನ್ನು ಕೇಂದ್ರವಾಗಿಟ್ಟುಕೊಂಡ ಏಳೂರು ಉತ್ಸವ ಏ. 1 ರಂದು ನಡೆಯುವ ಹಿನ್ನೆಲೆಯಲ್ಲಿ ಆ ದೇವರ ಗುಡಿ ಪ್ರವೇಶಕ್ಕೂ ದಲಿತರಿಗೆ ಅವಕಾಶ ಮಾಡಿಕೊಡಬೇಕು ಎಂದು ಮತ್ತಿದೇ ವಿಜಯಕುಮಾರ್ ನೇತೃತ್ವದಲ್ಲಿ ಒಂದಷ್ಟು ದಲಿತ ಮುಖಂಡರು ಮಾರ್ಚ್ 30 ರಂದು ಹೊಳೆನರಸೀಪುರ ಗ್ರಾಮಾಂತರ ಠಾಣೆಗೆ ಅಹವಾಲು ಕೊಟ್ಟರು. ಬಸವೇಶ್ವರ ದೇಗುಲ ಪ್ರವೇಶ ಸಂಬಂಧ ಆರು ತಿಂಗಳಿಂದ ದಲಿತರು ಮತ್ತು ಅನ್ಯವರ್ಗದವರ ನಡುವೆ ತಿಕ್ಕಾಟ ನಡೆಯುತ್ತಲೇ ಇತ್ತು. ಇದು ಜಿಲ್ಲಾಡಳಿತಕ್ಕೂ ಗೊತ್ತಿತ್ತು. ಆದರೂ ಜಿಲ್ಲಾಧಿಕಾರಿಯಾಗಲಿ ಅಥವಾ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆಗಲಿ ಮುನ್ನೆಚ್ಚರಿಕೆ ಕ್ರಮವಾಗಿ ಮರುದಿನ ಅಂದರೆ ಮಾರ್ಚ್ 31 ರಂದು ಶಾಂತಿ ಸಭೆ ನಡೆಸಲಿಲ್ಲ. ಜನರ ಮನವೊಲಿಸುವ ಪ್ರಯತ್ನ ನಡೆಸಲಿಲ್ಲ. ಏ. 1 ರಂದು ದೇವರ ಉತ್ಸವ ಹೊರಡುವ ಸಿಗರನಹಳ್ಳಿಗೆ ವಿಭಾಗಾಧಿಕಾರಿ ವಿಜಯ ಹಾಗೂ ಎಎಸ್ಪಿ ಶೋಭಾರಾಣಿ ಬಂದರು. ಅವರ ಸಮ್ಮುಖದಲ್ಲೇ ಉಡಿಸಲಮ್ಮ ಮೂರ್ತಿಯನ್ನು ದೇಗುಲದ ಹೊರತಂದು ಜಗಲಿ ಮೇಲಿಟ್ಟು ಪೂಜೆ ಆರಂಭಿಸಲಾಯಿತು.

ಅಷ್ಟರಲ್ಲಿ ವಿಭಾಗಾಧಿಕಾರಿ ವಿಜಯ ಅವರ ಮೊಬೈಲ್ ಗೆ ಏಳೆಂಟು ಸತತ ಕರೆಗಳು ಬರುತ್ತವೆ. ಆ ಕರೆ ಮಾಡಿದವರಾರು, ಯಾಕಾಗಿ ಮಾಡಿದರು, ಏನು ಹೇಳಿದರು ಎಂಬುದು ಗೊತ್ತಿಲ್ಲ. ಆ ಸತತ ಕರೆಗಳ ಬೆನ್ನಲ್ಲೇ ವಿಜಯ ಅವರು ದೇವರ ಮೂರ್ತಿಯನ್ನು ದೇಗುಲದ ಒಳಗಿಡಲು ಸೂಚನೆ ಕೊಟ್ಟರು. ಒಳಗೆ ಇರಿಸಿಯೂ ಬಿಟ್ಟರು. ಅಲ್ಲಿಂದಾಚೆಗೆ ಶುರುವಾಯಿತು ‘ಜಟ್ಟಿಮೇಳ’. ಪೊಲೀಸರಿಗೆ ಅಹವಾಲು ಸಲ್ಲಿಸಿದ್ದವರು, ದೇವರ ಮೂರ್ತಿಯನ್ನು ಹೊರಗೆ ತನ್ನಿ, ನಾವು ಪೂಜೆ ಮಾಡಬೇಕು ಎಂದು ವರಾತ ತೆಗೆದರು. ಆದರೆ ಪೊಲೀಸರು ಅದಕ್ಕೆ ಆಸ್ಪದ ಕೊಡಲಿಲ್ಲ. ಪೂಜೆ ಮಾಡಬೇಕೆನ್ನುವವರ ಹಠವೂ ನಿಲ್ಲುವುದಿಲ್ಲ. ವಾದ-ವಿವಾದ ತಾರಕ್ಕಕ್ಕೇರಿ, ತಳ್ಳಾಟ, ಅದರ ಬೆನ್ನಲ್ಲೇ ಕಲ್ಲು ತೂರಾಟ ಶುರುವಾಗುತ್ತದೆ. ಎಸ್ಪಿ ರಾಹುಲ್ ಕುಮಾರ್ ಸೇರಿ ನಾಲ್ಕೈದು ಮಂದಿ ಪೊಲೀಸರು, ನಾಗರಿಕರಿಗೂ ಗಾಯವಾಗುತ್ತದೆ. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಹುಸ್ಗಲ್ ಸಾಹೇಬರು ಬೇಲೂರು ಹೊಯ್ಸಳ ಉತ್ಸವದಲ್ಲಿ ನೃತ್ಯ ನೋಡುತ್ತಾ ಕೂತಿರುತ್ತಾರೆ. ಎಸ್ಪಿ ವಿಷಯ ಗಮನಕ್ಕೆ ತಂದ ನಂತರ ಸೆಕ್ಷನ್ 144 ಪ್ರಕಾರ ನಿಷೇಧಾಜ್ಞೆ ಜಾರಿ ಆಗುತ್ತದೆ. ಯಾರೆಷ್ಟು ತಲೆ ಕೆಡಿಸಿಕೊಂಡರೂ ಎಸಿ ವಿಜಯ ಅವರು ದೇವರ ಮೂರ್ತಿ ಒಳಗಿಡಿಸಿದ್ದು ಏಕೆ ಎಂಬುದು ಮಾತ್ರ ಹೊಳೆದಿಲ್ಲ.

ಮರುದಿನ ಅಂದರೆ ಏ. 2 ರಂದು ಬೆಳಗ್ಗೆ 8.30 ರ ಸುಮಾರಿಗೆ ಜೆಡಿಎಸ್ ಮುಖಂಡ, ಮಾಜಿ ಸಚಿವ ಎಚ್.ಡಿ. ರೇವಣ್ಣನವರ ‘ರಂಗಪ್ರವೇಶ’ ಆಗುತ್ತದೆ. ಅನೇಕ ತಲೆಮಾರುಗಳಿಂದ ಪೂಜೆ ನಡೆದುಕೊಂಡು ಬಂದಿದೆ, ಅದಕ್ಕೆ ಅವಕಾಶ ಮಾಡಿಕೊಡಬೇಕು ಎಂದು ದಲಿತ ಮಹಿಳೆಯರು ಮಾಡಿಕೊಂಡ ಮನವಿ ಹಿನ್ನೆಲೆಯಲ್ಲಿ, ಮೂರ್ತಿಯನ್ನು ಹೊರಗೆ ತಂದು ಪೂಜೆ ಮಾಡಿಸಿ, ಉತ್ಸವ ಹೊರಡಿಸಲಾಗುತ್ತದೆ. ಪೂಜೆ-ಪುನಸ್ಕಾರಗಳು ಸಾಂಗೋಪಾಂಗವಾಗಿ ನಡೆಯುತ್ತವೆ.

ಇದು ದೇವೇಗೌಡರ ಪಾರಂಪರಿಕ ರಾಜಕೀಯ ಶತ್ರು, ಸಚಿವ ಎ. ಮಂಜು ಅವರ ಮೈಯಲ್ಲಿ ಏಕಕಾಲಕ್ಕೆ ಸಾವಿರ ಚೇಳು ಒಮ್ಮೆಲೆ ಕುಟುಕಿದ ಅನುಭವ ತರುತ್ತದೆ. ನಾನು ಸಚಿವನಿದ್ದೇನೆ, ಜತೆಗೆ ಹಾಸನದ ಉಸ್ತುವಾರಿ ಸಚಿವ ಬೇರೆ. ನನ್ನಣತಿ ಇಲ್ಲದೇ ದೇವರ ಉತ್ಸವ ಹೊರಡುವುದು ಅಂದರೆ ಏನು ಅಂತ ಕೆಂಡಮಂಡಲರಾದ ಮಂಜು ಮರುದಿನ ಅಂದರೆ ಏ. 3 ರಂದು ಹಾಸನ ಪ್ರವಾಸಿ ಮಂದಿರದಲ್ಲಿ ಡಿಸಿ, ಎಸ್ಪಿ ಮತ್ತಿತರ ಅಧಿಕಾರಿಗಳ ಸಭೆ ನಡೆಸುತ್ತಾರೆ. ನಿಷೇಧಾಜ್ಞೆ ಉಲ್ಲಂಘಿಸಿ ಪೂಜೆ ನಡೆಯುವಾಗ ಏನು ಮಾಡುತ್ತಿದ್ದೀರಿ, ಕಲ್ಲುತೂರಾಟ, ಗಲಭೆಗೆ ಸಂಬಂಧಪಟ್ಟಂತೆ ಇನ್ನೂ ಯಾರನ್ನು ಅರೆಸ್ಟ್ ಮಾಡಿಲ್ಲ ಯಾಕೆ ಅಂತ ಎಎಸ್ಪಿ ಶೋಭಾರಾಣಿ ಅವರಿಗೆ ದಮಕಿ ಹಾಕುತ್ತಾರೆ. ದಮಕಿ ಬಿದ್ದದ್ದೇ ತಡ ಪೊಲೀಸರು ಬೆಳಗ್ಗೆ 10.30 ರ ಸುಮಾರಿಗೆ ಸಿಗರಹಳ್ಳಿಗೆ ನುಗ್ಗಿ 11 ವರ್ಷದ ಬಾಲಕಿ, 22 ವರ್ಷದ ಯುವಕ ಮತ್ತು 28 ಮಹಿಳೆಯರನ್ನು ಅರೆಸ್ಟ್ ಮಾಡಿ, ಹಾಸನ ಜೈಲಿಗೆ ತಳ್ಳುತ್ತಾರೆ. ಇವರೆಲ್ಲ ಸವರ್ಣೀಯರು. ದಲಿತರು ಹಾಗೂ ಸವರ್ಣೀಯ ಮಹಿಳೆಯರು ಇಬ್ಬರೂ ಪೂಜೆ ಮಾಡಿದರು. ಆದರೆ ಅರೆಸ್ಟ್ ಆಗಿದ್ದು ಮಾತ್ರ ಸವರ್ಣೀಯರು. ಆಗಿದ್ದು ಕಲ್ಲುತೂರಾಟದಲ್ಲಿ ಎಸ್ಪಿ ಕಾಲಿಗೆ ಪುಟ್ಟ ಗಾಯ, ನಿಷೇಧಾಜ್ಞೆ ಉಲ್ಲಂಘನೆ. ಆದರೆ ಬಂಧಿತರ ಮೇಲೆ ಬಿದ್ದದ್ದು ಕೊಲೆಯತ್ನ, ಸುಲಿಗೆ, ಲೂಟಿ, ಡಕಾಯಿತಿ ಮತ್ತಿತರ ಕೇಸುಗಳು. ಎಲ್ಲ ಮಂಜು ಕೃಪೆ.

ಈ ಮಧ್ಯೆ, ಹೆದರಿಕೆಗೋ, ಒತ್ತಡಕ್ಕೋ ಅಥವಾ ಕಾಕತಾಳಿಯವೋ ಬಾಲಕಿ ಜೈಲಲ್ಲೇ ಋತುಮತಿ ಆಗುತ್ತಾಳೆ. ಅವಳನ್ನ ಪೊಲೀಸರು ಸಿಕ್ಕಾಪಟ್ಟೆ ಹೆದರಿಸಿಬಿಟ್ಟರು ಅಂತ ಸುದ್ದಿ ಹಬ್ಬುತ್ತದೆ. ರಾತ್ರಿ ಹೊತ್ತಿಗೆ ರೇವಣ್ಣ ಅಲ್ಲಿ ರೀಎಂಟ್ರಿ ಕೊಡುತ್ತಾರೆ. ಜನ ಗಲಾಟೆ ಮಾಡ್ತಾರೆ. ಕೆಲವೇ ಕ್ಷಣಗಳಲ್ಲಿ ಬಾಲಕಿ ಬಿಡುಗಡೆ ಆಗುತ್ತದೆ, ಬಂಧಿತರ ಸಂಖ್ಯೆ 29 ಕ್ಕೆ ಇಳಿಯುತ್ತದೆ. ಇನ್ನೊಂದೆಡೆ ಬಂಧಿತರ ಪೈಕಿ ಗಾಯಗಳಾಗಿದ್ದ ಯುವಕನ ಕೈಗೆ ಕೋಳ ಹಾಕಿ ಆಸ್ಪತ್ರೆಗೆ ಆಡ್ಮಿಟ್ ಮಾಡುತ್ತಾರೆ. ಈ ಎಲ್ಲ ವಿಷಯ ತರೇಹವಾರಿ ತಿರುವುಗಳನ್ನು ಪಡೆದು ಮರುದಿನ ಬೆಳಗ್ಗೆ ರೇವಣ್ಣ ನೇತೃತ್ವದಲ್ಲಿ ಮೂರ್ನಾಲ್ಕು ಸಾವಿರ ಮಂದಿ ಡಿಸಿ ಕಚೇರಿ ಎದಿರು ಪ್ರತಿಭಟನೆ ಶುರುಮಾಡುತ್ತಾರೆ. ಇದು ದಲಿತರು ಮತ್ತು ಪ್ರಗತಿಪರರ ಕೋಪಕ್ಕೆ ಕಾರಣವಾಗುತ್ತದೆ. ತಾವೇ ಮುಂದೆ ನಿಂತು ದಲಿತ ಮಹಿಳೆಯರಿಂದ ಪೂಜೆ ಮಾಡಿಸಿದ್ದರೂ ರೇವಣ್ಣ ಸವರ್ಣೀಯರ ಪರ ಹಾಗೂ ದಲಿತರ ವಿರುದ್ಧ ಪ್ರತಿಭಟನೆಗೆ ಇಳಿದಿದ್ದಾರೆ ಎಂಬ ಸುದ್ದಿಯನ್ನು ಪ್ರಗತಿಪರರು ಹಬ್ಬಿಸುತ್ತಾರೆ. ದಲಿತರು ರೊಚ್ಚಿಗೇಳುತ್ತಾರೆ. ಇದಾದ ನಂತರ ಸಚಿವ ಮಂಜು ಪ್ರತಿನಿಧಿಸುವ ಅರಕಲಗೂಡು ವಿಧಾನಸಭೆ ಕ್ಷೇತ್ರದ ರಾಗಿಮಂಜೂರು ಗ್ರಾಮದಲ್ಲಿ ಅಂಬೇಡ್ಕರ್ ಭಾವಚಿತ್ರ ಕಿತ್ತೆಸೆದು, ಅಪಮಾನ ಮಾಡಲಾಗುತ್ತದೆ. ಆದರೆ ಅದೃಷ್ಟವಶಾತ್ ಇದು ವಿವಾದ ಆಗಲಿಲ್ಲ. ಯಾರೊಬ್ಬರು ಹೇಳಿಕೆ ನೀಡಲಿಲ್ಲ. ಯಾರೊಬ್ಬರ ಅರೆಸ್ಟ್ ಕೂಡ ಆಗುವುದಿಲ್ಲ. ಇದು ರಾಜಕೀಯ ಆಶ್ಚರ್ಯ.

ಆರೆಸ್ಟ್ ಆದವರೆಲ್ಲ ಜಾಮೀನನ ಮೇಲೆ ಏ. 7 ರಂದು ಬಿಡುಗಡೆ ಆಗಿದ್ದಾರೆ. ಅವರ ಮೇಲೆ ಕೊಲೆ ಯತ್ನ ಕೇಸು ಹಾಕಿದ್ದು ತಮಗೆ ಗೊತ್ತೇ ಇಲ್ಲ ಅಂತ ಮಂಜು ಈಗ ತಾರಮ್ಮಯ್ಯ ಆಡುತ್ತಿದ್ದಾರೆ. ಸಿಗರನಹಳ್ಳಿಯಲ್ಲಿ ಸುಮಾರು 150 ಸವರ್ಣೀಯ, ಹತ್ತನ್ನೆರಡು ದಲಿತ ಕುಟುಂಬಗಳಿವೆ. ಸಂಭವನೀಯ ಪೊಲೀಸ್ ಅರೆಸ್ಟ್ ಗೆ ಹೆದರಿ ಗಂಡಸರು ಊರು ಬಿಟ್ಟಿದ್ದಾರೆ. ಹೆಗಲಲ್ಲಿ ದ್ವೇಷದ ಕೆಂಡ ಕಟ್ಟಿಕೊಂಡು. ಮುಂದೇನೋ ಎಂಬ ಆತಂಕ ಊರನ್ನು ಕಾಡುತ್ತಿದೆ.

hasana1

ಮಂತ್ರಿ ಆಗಲಿ, ರಾಜಕೀಯ ನಾಯಕರಾಗಲಿ, ಡಿಸಿ ಆಗಲಿ, ಎಸಿ ಆಗಲಿ, ಎಸ್ಪಿ ಆಗಲಿ ಗಲಾಟೆ ನಂತರ ಯಾರೊಬ್ಬರು ಸಿಗರನಹಳ್ಳಿಗೆ ಕಾಲಿಟ್ಟಿಲ್ಲ. ಶಾಂತಿ ಸಭೆ ನಡೆಸಿಲ್ಲ. ವಾತಾವರಣ ಬದಲಿಸಿಲ್ಲ. ಬದಲಿಗೆ ಅವರೆಲ್ಲ ಹಾಸನದಿಂದಲೇ ಪತ್ರಿಕಾಗೋಷ್ಠಿ, ಹೇಳಿಕೆಗಳ ಮೂಲಕ ಆರೋಪ-ಪ್ರತ್ಯಾರೋಪದಲ್ಲೇ ವಿವಾದದ ಬೆಂಕಿಗೆ ಟನ್ ಗಟ್ಟಲೆ ತುಪ್ಪ ಸುರಿಯುತ್ತಿದ್ದಾರೆ. ಪರಿಹಾರದ ಮನೋಭಾವ ಯಾರಿಗೂ ಇದ್ದಂತಿಲ್ಲ.

ಸಿಗರನಹಳ್ಳಿ ಉಡಿಸಲಮ್ಮ ದೇಗುಲದ ಬೀಗದ ಕೀಯನ್ನೇ ದಲಿತರ ಕೈಗೆ ಕೊಡಲಾಗಿದೆ. ಏನು ಬೇಕಾದರೂ ಮಾಡಿಕೊಳ್ಳಿ ಎಂದು. ಆದರೆ ಅವರ್ಯಾರೂ ಒಳಗೂ ಹೋಗಿಲ್ಲ, ಪೂಜೆಯನ್ನೂ ಮಾಡಿಲ್ಲ. ದೇಗುಲ ಪ್ರವೇಶ ವಿವಾದ ಶುರು ಆಗುವವರೆಗೂ ಸಿಗರನಹಳ್ಳಿ ಜನರೆಲ್ಲ ಅನ್ಯೋನ್ಯವಾಗಿಯೇ ಇದ್ದರು. ಈಗ ವಿವಾದ ಸೃಷ್ಟಿಸಿದವರು ಆರಾಮವಾಗಿದ್ದಾರೆ. ತಮ್ಮನ್ನು ಹಾಸನದ ಕನ್ಹಯ್ಯ ಎಂದು ಕರೆದುಕೊಂಡು ಓಡಾಡುತ್ತಿದ್ದಾರೆ. ಉಳಿದವರು ನೆಮ್ಮದಿ ಕಳೆದುಕೊಂಡಿದ್ದಾರೆ.

Leave a Reply