ಅಧಿಕಾರಿಗಳ ಸಂಧಾನದ ಫಲವಾಗಿ ಸಿಗರನಹಳ್ಳಿ ದೇಗುಲ ವಿವಾದ ಸುಖಾಂತ್ಯ, ದಲಿತರು, ಸವರ್ಣೀಯರಿಂದ ಒಟ್ಟಿಗೆ ಪೂಜೆ!

ಡಿಜಿಟಲ್ ಕನ್ನಡ ಟೀಮ್

ಇದೊಂದು ಸಂತಸದ ವಿಚಾರ…

ಸ್ವಾರ್ಥ ರಾಜಕಾರಣಿಗಳ ಕುತಂತ್ರದಿಂದ ಜಾತಿ ಸಂಘರ್ಷಕ್ಕೆ ಕಾರಣವಾಗಿದ್ದ ಹಾಸನ ಜಿಲ್ಲೆ ಹೊಳೆನರಸೀಪುರ ತಾಲೂಕಿನ ಸಿಗರನಹಳ್ಳಿ ಬಸವೇಶ್ವರ ದೇಗುಲ ವಿವಾದ ಕೊನೆಗೂ ಸುಖಾಂತ್ಯ ಕಂಡಿದೆ. ಅಧಿಕಾರಿಗಳ ಸಂಧಾನದ ಫಲವಾಗಿ ದಲಿತರು ಮತ್ತು ಸವರ್ಣೀಯರು ದೇಗುಲದಲ್ಲಿ ಶನಿವಾರ ಸಂಜೆ ಪೂಜೆ ಸಲ್ಲಿಸುವ ಮೂಲಕ ಸಿಗರನಹಳ್ಳಿಗೆ ಹಿಡಿದಿದ್ದ ಜಾತಿಭೂತ ನಿವಾರಣೆ ಆದಂತಾಗಿದೆ.

‘ಹಾಸನದ ಸಿಗರನಹಳ್ಳಿ ತನ್ನ ಪಾಡಿಗೆ ತಾನಿತ್ತು, ಆದ್ರೆ ಇವ್ರೆಲ್ಲ ಸೇರ್ಕೊಂಡು ಅದರ ನೆಮ್ಮದಿಗೇ ಕೊಳ್ಳಿ
ಇಟ್ರು!’ ಎಂಬ ಶೀರ್ಷಿಕೆ ಆಡಿ ‘ಡಿಜಿಟಲ್ ಕನ್ನಡ’ ವಿವಾದದ ಬಗ್ಗೆ ಶುಕ್ರವಾರ ರಾತ್ರಿ ವಿಶ್ಲೇಷಣೆ ಪ್ರಕಟಿಸಿತ್ತು. ಸಂಘರ್ಷದಿಂದ ವಿವಾದಕ್ಕೆ ಪರಿಹಾರ ಇಲ್ಲ, ಸಾಮರಸ್ಯದಿಂದ ಮಾತ್ರ ಸಮಸ್ಯೆ ಜಯಿಸಲು ಸಾಧ್ಯ ಎಂಬುದು ಲೇಖನದ ಆಶಯವಾಗಿತ್ತು. ಅದರ ಬೆನ್ನಲ್ಲೇ ವಿವಾದ ಹೂವಿನಂತೆ ಬಗೆಹರಿದಿರುವುದು ಖುಷಿಯ ಸಂಗತಿ.

ಹಾಸನ ಜಿಲ್ಲೆ ಸಹಾಯಕ ಪೊಲೀಸ್ ಸೂಪರಿಂಟೆಂಡೆಂಟ್ (ಎಎಸ್ಪಿ) ಡೆಕ್ಕಾ ರಾಜಕುಮಾರ್ ಮಾಜಿ ಸಚಿವ, ಸ್ಥಳೀಯ ಶಾಸಕ ರೇವಣ್ಣ ಅವರ ಜತೆ ಶನಿವಾರ ಸಂಜೆ ಬಸವೇಶ್ವರ ದೇಗುಲ ವಿವಾದ ಪರಿಹಾರ ಸಂಬಂಧ ಮಾತುಕತೆ ನಡೆಸಿ, ಸಮಸ್ಯೆ ಬಗೆಹರಿಸಲು ಸಹಕಾರ ಕೋರಿದರು. ರೇವಣ್ಣ ಅದಕ್ಕೆ ಸಮ್ಮತಿಸಿದರು. ನಂತರ ರಾಜಕುಮಾರ್ ಅವರು ಜಿಲ್ಲಾಧಿಕಾರಿ ಉಮೇಶ್ ಕುಸ್ಗಲ್, ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ರಾಹುಲ್ ಕುಮಾರ್ ಶಹನಾಪೂರ್ ಹಾಗೂ ತಹಶೀಲ್ದಾರ್ ವೈ.ಎಂ. ರೇಣುಕುಮಾರ್ ಅವರಿಗೆ ಮಾಹಿತಿ ರವಾನಿಸಿದರು. ತದನಂತರ ಈ ಮೂವರು ಅಧಿಕಾರಿಗಳು ಸಿಗರನಹಳ್ಳಿಗೆ ತೆರಳಿ ಸವರ್ಣೀಯರು ಮತ್ತು ದಲಿತರ ಜತೆ ಸಂಧಾನ ಮಾತುಕತೆ ನಡೆಸಿದರು. ಸಮಸ್ಯೆ ಬಗೆಹರಿದರೆ ಸಾಕೆಂದಿದ್ದ ಗ್ರಾಮಸ್ಥರು ದಲಿತರು ದೇಗುಲ ಪ್ರವೇಶಿಸಲು ಮತ್ತು ಪೂಜೆ ಸಲ್ಲಿಸಲು ಒಪ್ಪಿದರು. ಕೆಲವೇ ಕ್ಷಣದಲ್ಲಿ ದಲಿತರು ಹಾಗೂ ಸವರ್ಣೀಯರು ದೇಗುಲಕ್ಕೆ ತೆರಳಿ, ಪೂಜೆ ಸಲ್ಲಿಸುವುದರೊಂದಿಗೆ ಸಮಸ್ಯೆ ಬಗೆಹರಿದು ಹೋಯಿತು. ಇಷ್ಟೆಲ್ಲ ಆದದ್ದು ಕೇವಲ ಒಂದೇ ಒಂದು ತಾಸಿನೊಳಗೇ!

ಹೌದು, ಸಿಗರನಹಳ್ಳಿ ಗ್ರಾಮಸ್ಥರ ಜತೆ ಮಾತುಕತೆ ನಡೆಸುವ ಸಂದರ್ಭದಲ್ಲಾಗಲಿ, ಉಭಯ ಸಮುದಾಯದವರು ಪೂಜೆ ಸಲ್ಲಿಸುವ ಸಮಯದಲ್ಲಾಗಲಿ ಯಾವುದೇ ರಾಜಕಾರಣಿ, ಸಂಘಟನೆಗಳ ಮುಖಂಡರು ಅಲ್ಲಿರದಂತೆ ಅಧಿಕಾರಿಗಳು ಮುನ್ನೆಚ್ಚರಿಗೆ ವಹಿಸಿದರು. ಹಾಸನದ ಕನ್ಹಯ್ಯಕುಮಾರ್ ಎಂದು ಹೇಳಿಕೊಂಡು ತಿರುಗುತ್ತಿರುವವರೂ ಅಲ್ಲಿರಲಿಲ್ಲ. ಸುದ್ದಿಮಾಧ್ಯಮದವರಿಗೂ ಮಾಹಿತಿ ಕೊಟ್ಟಿರಲಿಲ್ಲ. ಪೂಜೆ ಮುಗಿದ ನಂತರವಷ್ಟೇ ವಿಷಯ ಬಹಿರಂಗವಾದದ್ದು!

ಸಿಗರನಹಳ್ಳಿ ಬಸವೇಶ್ವರ ದೇಗುಲಕ್ಕೆ ದಲಿತರ ಪ್ರವೇಶ ಹಾಗೂ ಪೂಜೆಗೆ ಅವಕಾಶ ಕೊಡಬೇಕು ಎಂದು ಇತ್ತೀಚೆಗೆ ಬೇಡಿಕೆ ಬಂದಿತ್ತು. ಕಳೆದ ಏಪ್ರಿಲ್ 1 ರಂದು ಬಸವೇಶ್ವರ ದೇಗುಲದ ಉತ್ಸವ ಮೂರ್ತಿ ಉಡಿಸಲಮ್ಮ ಜಾತ್ರೆ ಸಂದರ್ಭ ದಲಿತರಿಗೆ ಪೂಜೆ ಅವಕಾಶ ಸಂಬಂಧ ಗಲಾಟೆ ಸೃಷ್ಟಿಯಾಗಿ ಕಲ್ಲು ತೂರಾಟ ನಡೆದಿತ್ತು. ಪೊಲೀಸರು ಬಾಲಕಿ ಸೇರಿದಂತೆ 30 ಮಂದಿಯನ್ನು ಬಂಧಿಸಿದ್ದರು. ಜನ ಗಲಾಟೆ ಮಾಡಿದ್ದಕ್ಕೆ ಬಾಲಕಿಯನ್ನು ವಾಪಸು ಕಳುಹಿಸಲಾಗಿತ್ತು. ನಂತರ ಬಂಧಿತರು ಜಾಮೀನನ ಮೇಲೆ ಬಿಡುಗಡೆ ಆಗಿದ್ದರು. ಯಾವಾಗ ಏನು ಬೇಕಾದರು ಆಗಬಹುದು ಎನ್ನುವ ಉದ್ವಿಗ್ನ ವಾತಾವರಣ ಹಳ್ಳಿಯಲ್ಲಿತ್ತು. ಅದೀಗ ನಿವಾರಣೆ ಆದಂತಾಗಿದೆ.

Leave a Reply